ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಮೀಸಲು ಮರುಜಾರಿ

By Web DeskFirst Published Jan 31, 2019, 8:00 AM IST
Highlights

ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ  ‘ಬಡ್ತಿ ಮೀಸಲಾತಿ ಕಾಯ್ದೆ’ ಅನುಷ್ಠಾನಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರು :  ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಅಧಿಕಾರಿಗಳು ಹಾಗೂ ನೌಕರರ ಹಿತ ಕಾಯುವ ಉದ್ದೇಶದಿಂದ 2017ರ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾಗಿದ್ದ ‘ಬಡ್ತಿ ಮೀಸಲಾತಿ ಕಾಯ್ದೆ’ ಅನುಷ್ಠಾನಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಕಾಯ್ದೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವಾಗಲೇ ಅನುಷ್ಠಾನಕ್ಕೆ ಅಂಗೀಕಾರ ನೀಡಲಾಗಿದೆ. ಈ ಮೂಲಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಪಡೆದಿರುವ ಪರಿಶಿಷ್ಟಜಾತಿ, ಪಂಗಡದ ಸುಮಾರು 3900 ಅಧಿಕಾರಿಗಳು ಹಾಗೂ ನೌಕರರನ್ನು ಹಿಂಬಡ್ತಿಗೆ ಗುರಿ ಮಾಡುವುದಿಲ್ಲ. ನಿಯಮ ಬಾಹಿರವಾಗಿ ಬಡ್ತಿ ಪಡೆದಿರುವವರಿಗೆ ಸಂಖ್ಯಾಧಿಕ ಹುದ್ದೆ ಸೃಜಿಸಿ, ಅದೇ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಅಂತಿಮ ತೀರ್ಪಿಗೆ ಬದ್ಧವಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿಯೂ ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ- 2017’ರ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ.

ಇತ್ತೀಚೆಗೆ ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನ ಸಂಬಂಧ ಪರ-ವಿರೋಧ ಚರ್ಚೆ ತೀವ್ರಗೊಂಡಿತ್ತು. ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಕೀಲರಾದ ಮುಕುಲ್‌ ರೊಹಟಗಿ ಅವರು ನೀಡಿರುವ ಕಾನೂನು ಅಭಿಪ್ರಾಯದಂತೆ ಕಾಯ್ದೆ ಅನುಷ್ಠಾನಕ್ಕೆ ಬುಧವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಭಾರಿ ಪ್ರಮಾಣದಲ್ಲಿ ಎಸ್‌ಸಿ,ಎಸ್‌ಟಿ ಅಧಿಕಾರಿಗಳು ಹಾಗೂ ನೌಕರರು ಹಿಂಬಡ್ತಿಗೆ ಗುರಿಯಾಗುವ ಆತಂಕ ಎದುರಾಗಿತ್ತು. ಕಾಯ್ದೆ ಅನುಷ್ಠಾನದಿಂದ ಮೀಸಲಾತಿ​ಯ​ಡಿ​ಯಲ್ಲಿ ಬಡ್ತಿ ಹೊಂದಿರುವವರು ಹಿಂಬಡ್ತಿಗೆ ಗುರಿಯಾಗುವುದು ತಪ್ಪಲಿದೆ. ನಿಯಮ ಬಾಹಿರವಾಗಿ ಬಡ್ತಿ ನೀಡ​ಲಾ​ಗಿ​ದ್ದರೆ ಅಂತಹವರನ್ನು ಸೂಪರ್‌ ನ್ಯೂಮರರಿ (ಸಂಖ್ಯಾಧಿಕ) ಕೋಟಾದಡಿ ಅದೇ ಹುದ್ದೆಯಲ್ಲಿ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ.

ನ್ಯಾಯಾಂಗ ನಿಂದನೆ ಆಗಲ್ಲ- ಸಚಿವ:

ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಕಳೆದ ವರ್ಷದ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಿಳಿಸಿತ್ತು. 2019ರ ಜ.10 ರಂದು ನಡೆದ ವಿಚಾರಣೆಯಲ್ಲಿ ಈ ಮಾತು ಹೇಳಿಲ್ಲ. ಜತೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಕಾನೂನು ಪ್ರಕಾರ ಕಾಯ್ದೆ ಅನುಷ್ಠಾನ ಮುಂದುವರೆಸುತ್ತೇವೆ ಎಂದು ಮುಕುಲ್‌ ರೊಹಟಗಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ನಮ್ಮ ವಕೀಲರ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. ಹೀಗಾಗಿ ಅನುಷ್ಠಾನ ಮಾಡುತ್ತಿದ್ದು, ಎರಡೂ ವರ್ಗಗಳಿಗೂ ಅನ್ಯಾಯವಾಗದಂತೆ ಎಚ್ಚರವಹಿಸಲಾಗುವುದು. ಇದು ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪಿಗೆ ಒಳಪಟ್ಟಿರುವುದರಿಂದ ಯಾವುದೇ ಕಾರಣಕ್ಕೂ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಹೆಚ್ಚು ಹೊರೆಯಾಗಲ್ಲ:

ಕಾಯ್ದೆ ಅನುಷ್ಠಾನಕ್ಕೆ ನಿರ್ಧರಿಸಿರುವುದರಿಂದ ತಕ್ಷಣದಿಂದಲೇ ಕಾಯ್ದೆ ಜಾರಿಯಲ್ಲಿರುತ್ತದೆ. ಈ ಸಂಬಂಧ ಕೆಲ ಕಾನೂನು ರೂಪಿಸಿ ಅನುಷ್ಠಾನಕ್ಕೆ ತರುತ್ತೇವೆ. ಜತೆಗೆ, ಜ್ಯೇಷ್ಠತಾ ಪಟ್ಟಿಸಿದ್ಧಪಡಿಸಿ ಹಿಂಬಡ್ತಿಗೆ ಗುರಿಯಾಗಿರುವವರಿಗೆ ನ್ಯಾಯ ಒದಗಿಸಲಾಗುವುದು. ಬಡ್ತಿ ಮೀಸಲಾತಿಯಿಂದ ಎಷ್ಟುಮಂದಿಗೆ ಅನುಕೂಲ, ಅನಾನುಕೂಲ ಆಗಲಿದೆ ಎಂಬುದು ಇನ್ನಷ್ಟೇ ಲೆಕ್ಕ ಸಿಗಬೇಕಿದೆ. ಈ ತಕ್ಷಣದಿಂದ ತಡೆ ಹಿಡಿದಿದ್ದ ಪಿಂಚಣಿಯನ್ನು ಬಿಡುಗಡೆ ಮಾಡಲು ಆದೇಶಿಸಲಾಗುವುದು. ಸೇವಾ ಹಿರಿತನದ ಜ್ಯೇಷ್ಠತಾ ಪಟ್ಟಿಸಿದ್ಧಪಡಿಸಲು ಯಾವುದೇ ಅಂತಿಮ ಗಡುವು ವಿಧಿಸಿಲ್ಲ. ಕಾಯ್ದೆ ಜಾರಿಯಿಂದ ಹೆಚ್ಚಿನ ಆರ್ಥಿಕ ಹೊರೆಯೂ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಏನಿದು ಬಡ್ತಿ ಮೀಸಲಾತಿ ವಿವಾದ?

ಜಾತಿ ಮೀಸಲಾತಿ ಆಧಾರದ ಮೇಲೆ ಬಡ್ತಿ ನೀಡುವ 2002ರ ಬಡ್ತಿ ಮೀಸಲಾತಿ ಕಾಯ್ದೆ ಪ್ರಶ್ನಿಸಿದ್ದ ಎಂ. ನಾಗರಾಜು ಹಾಗೂ ಬಿ.ಕೆ. ಪವಿ​ತ್ರಾ ಅವರ ಪ್ರಕರಣಗಳಲ್ಲಿ ಬಡ್ತಿ ಮೀಸಲಾತಿ ರದ್ದುಪಡಿಸಿ 2017ರ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಅಲ್ಲದೆ, ಬಡ್ತಿ ನೀಡುವ ವೇಳೆ ಪ್ರಾತಿನಿಧ್ಯ ಕೊರತೆ, ಕಾರ್ಯದಕ್ಷತೆ ಹಾಗೂ ಹಿಂದುಳಿದಿರುವಿಕೆಯ ಮೂರು ಅಂಶಗಳನ್ನು ಪರಿಗಣಿಸಬೇಕು. ಬಡ್ತಿ ಜ್ಯೇಷ್ಠತಾ ಪಟ್ಟಿಸಿದ್ಧಪಡಿಸುವ ವೇಳೆ ನೌಕರರ ಆಡಳಿತಾತ್ಮಕ ಸಾಮರ್ಥ್ಯ, ಹಿಂದುಳಿದಿರುವಿಕೆಯ ದತ್ತಾಂಶ ಅಗತ್ಯ ಎಂದು ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಮೀಸಲಾತಿ ಆಧಾರದ ಮೇಲಿನ ಬಡ್ತಿ ರದ್ದಾಗಿತ್ತು.

ಅಲ್ಲದೆ, ಪ್ರಕರಣದಲ್ಲಿ 2017ರ ಮೇ 1ರೊಳಗಾಗಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಸಿದ್ದಪಡಿಸಿ ಮೀಸಲಾತಿ ಆಧಾರದ ಮೇಲೆ ನಿಯಮ ಬಾಹಿರವಾಗಿ ಬಡ್ತಿ ಹೊಂದಿರುವರನ್ನು ಹಿಂಬಡ್ತಿಗೆ ಗುರಿ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದರಿಂದ ಹಿಂಬಡ್ತಿಗೆ ಗುರಿಯಾಗುವ ಭೀತಿ ಎದುರಿಸುತ್ತಿದ್ದ 3,900 ಮಂದಿ ಅಧಿಕಾರಿಗಳು ಸೇರಿದಂತೆ 8500 ನೌಕರರ ರಕ್ಷಣೆಗೆ ಮುಂದಾದ ಅಂದಿನ ರಾಜ್ಯ ಸರ್ಕಾರ 2017ರ ಆಗಸ್ಟ್‌ 7 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಡ್ತಿ ಮೀಸಲಾತಿ ಮುಂದುವರೆಸಲು ಸುಗ್ರೀವಾಜ್ಞೆ ಹೊರಡಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಆಗಸ್ಟ್‌ 8 ರಂದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ‘ಸುಗ್ರೀವಾಜ್ಞೆ ತರುವ ತುರ್ತು ಏನಿದೆ’ ಎಂದು ಪ್ರಶ್ನಿಸಿ ವಿಧಾನಮಂಡಲ ಅಧಿವೇಶನ ಕರೆದು ಎಲ್ಲರ ಸಮ್ಮತಿ ಪಡೆಯಿರಿ ಎಂದು ಹೇಳಿದ್ದರು. ಇದರಂತೆ 2017ರ ನವೆಂಬರ್‌ನಲ್ಲಿ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆದು, ಬಳಿಕ ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದಿದ್ದರು.

ಆದರೆ, ಬಡ್ತಿ ಮೀಸಲಾತಿ ರಕ್ಷಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆ ಪ್ರಶ್ನಿಸಿ ಒಂದು ಅರ್ಜಿ ಹಾಗೂ ಬಿ.ಕೆ. ಪವಿತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಅನುಷ್ಠಾನಗೊಳಿಸುವಂತೆ ತಲಾ ಒಂದೊಂದು ಅರ್ಜಿ ವಿಚಾರಣೆ ನಡೆಯುತ್ತಿದೆ. ಇದರ ಜತೆಗೆ ಎಸ್ಸಿ,ಎಸ್‌ಟಿ ನೌಕರರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಅನುಷ್ಠಾನಕ್ಕೆ ಅವಕಾಶ ನೀಡುವಂತೆ ಮತ್ತೊಂದು ಅರ್ಜಿ ಹಾಕಿದ್ದಾರೆ. ಮೂರೂ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಫೆಬ್ರುವರಿ 5,6 ಹಾಗೂ 7 ರಂದು ವಿಚಾರಣೆಗೆ ಬರಲಿವೆ. ಈ ಮೊದಲೇ ಸಚಿವ ಸಂಪುಟ ಸಭೆಯು ವಿಧೇಯಕ ಅಂಗೀಕರಿಸಿ ಆದೇಶಿಸಿದೆ.

ಕಾಯ್ದೆಗೆ ಸಂಪುಟ ಅನುಮೋದನೆ ದೊರೆತಿರುವುದರಿಂದ ತಕ್ಷಣ ಜ್ಯೇಷ್ಠತಾ ಪಟ್ಟಿಪರಿಷ್ಕರಣೆ ಮಾಡಲಾಗುವುದು. ಪಟ್ಟಿಆಧಾರದ ಮೇಲೆ ನಿಯಮಾನುಸಾರ ಹಿಂಬಡ್ತಿಗೆ ಗುರಿಯಾಗಿರುವವರಿಗೆ ಬಡ್ತಿ ನೀಡಲಾಗುವುದು. ನಿಯಮ ಬಾಹಿರವಾಗಿ ಬಡ್ತಿ ಪಡೆದಿದ್ದವರಿಗೆ ಸಂಖ್ಯಾಧಿಕ ಹುದ್ದೆ ಸೃಷ್ಟಿಸಿ ತತ್ಸಮಾನ ಹುದ್ದೆಯಲ್ಲಿ ಮುಂದುವರೆಸಲಾಗುವುದು. ಜ್ಯೇಷ್ಠತಾ ಪಟ್ಟಿಪರಿಷ್ಕರಣೆ ಬಳಿಕವಷ್ಟೇ ಈ ಕ್ರಮ ಕೈಗೊಳ್ಳಲಾಗುವುದು.

- ಟಿ.ಎಂ. ವಿಜಯಭಾಸ್ಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ

click me!