ವಾಲ್ಮೀಕಿ ಸಮುದಾಯ ಅಭಿವೃದ್ದಿಗೆ ಬದ್ದ; ಸಿಎಂ ಬಿಎಸ್‌ವೈ ಅಭಯ

By Kannadaprabha NewsFirst Published Oct 31, 2020, 9:03 AM IST
Highlights

24 ಸಾವಿರ ಶ್ಲೋಕಗಳ ರಾಮಾಯಣ ಮಹಾಕಾವ್ಯ ರಚಿಸಿದ, ಭಗವಾನ್‌ ಶ್ರೀರಾಮಚಂದ್ರನ ಸುಪುತ್ರರಾದ ಲವ- ಕುಶರನ್ನು ಶಿಷ್ಯರನ್ನಾಗಿ ಪಡೆದು ರಾಮಾಯಣವನ್ನು ಜಗತ್ತಿಗೆ ಪಸರಿಸಿದ ಬ್ರಹ್ಮರ್ಷಿ ವಾಲ್ಮೀಕಿಯವರ ಜಯಂತ್ಯುತ್ಸವಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಭಕೋರಿದ್ದಾರೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್‌

ಕಾವ್ಯವೆಂಬ ಮರದ ಮೇಲೆ ಕುಳಿತು, ರಾಮ ರಾಮಾ ಎಂದು ಇಂಪಾದ ಧ್ವನಿಯಲ್ಲಿ ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ ಎಂಬರ್ಥ ಬರುವ ಬುಧ ಕೌಶಿಕ ಮುನಿ ರಚಿಸಿರುವ ಶ್ಲೋಕ ಶ್ರೀರಾಮ ರಕ್ಷಾಸ್ತೋತ್ರದಲ್ಲಿದೆ. ಪೂರ್ವಾಶ್ರಮದಲ್ಲಿ ರತ್ನಾಕರನೆಂಬ ದರೋಡೆಕೋರ ನಾರದ ಮುನಿಯ ಅನುಗ್ರಹದಿಂದ ಮತ್ತು ತನ್ನ ಅಚಲ ತಪಃಶಕ್ತಿಯಿಂದ ಆದಿ ಕವಿ ವಾಲ್ಮೀಕಿಯಾಗಿ ಭರತ ವರ್ಷದ ಸಾಂಸ್ಕೃತಿಕ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ.

ಯಾವತ್‌ ತಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ
ತಾವದ್ರಾಮಾಯಣ ಕಥಾ ಲೋಕೇಷು ಪ್ರಚರಿಷ್ಯತಿ

‘ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ, ಸಮುದ್ರ, ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ.’ ಆದ್ದರಿಂದ ಸೂರ್ಯಚಂದ್ರರಿರುವವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ. ಅಂತೆಯೇ ಮಹರ್ಷಿ ವಾಲ್ಮಿಕಿಯೂ ಸಹ ಅಮರ.

ಸಮಸ್ತರಿಗೂ, 24 ಸಾವಿರ ಶ್ಲೋಕಗಳ ರಾಮಾಯಣ ಮಹಾಕಾವ್ಯ ರಚಿಸಿದ, ಭಗವಾನ್‌ ಶ್ರೀರಾಮಚಂದ್ರನ ಸುಪುತ್ರರಾದ ಲವ- ಕುಶರನ್ನು ಶಿಷ್ಯರನ್ನಾಗಿ ಪಡೆದು ರಾಮಾಯಣವನ್ನು ಜಗತ್ತಿಗೆ ಪಸರಿಸಿದ ಬ್ರಹ್ಮರ್ಷಿ ವಾಲ್ಮೀಕಿಯವರ ಜಯಂತ್ಯುತ್ಸವದ ಶುಭಾಶಯಗಳು.

ಹಿಂದೂ ಧರ್ಮದ ಪುನರುತ್ಥಾನಗೈದ ವಿಜಯನಗರ ಸಾಮ್ರಾಜ್ಯದಲ್ಲಿನ ನಾಯಕರು ರಾಜಕೀಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹತ್ತರ ಹುದ್ದೆ ಹೊಂದಿದ್ದವರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ನಾಯಕರು ಸ್ವತಂತ್ರರಾಗಿ ತಮ್ಮ ಆಡಳಿತದ ಛಾಪು ಮೂಡಿಸಿದ್ದಾರೆ.

ಉಪಚುನಾವಣೆ ನಂತರ ಸಂಪುಟ ವಿಸ್ತರಣೆ: ಸಿಎಂ ಬಿಎಸ್‌ವೈ ಸ್ಪಷ್ಟನೆ

ರಾಜ್ಯದ ಇತಿಹಾಸದಲ್ಲಿ ಚಿತ್ರದುರ್ಗದ ಮದಕರಿ ನಾಯಕರು, ಕೆಳದಿ ಸಂಸ್ಥಾನ ಮತ್ತು ಸುರಪುರ ನಾಯಕರು ತಮ್ಮ ಧೈರ್ಯ, ವರ್ಚಸ್ಸು ಮತ್ತು ನಾಯಕತ್ವದ ದಂತಕತೆಗಳಾಗಿದ್ದಾರೆ. ಹೈದರ್‌ ಅಲಿ ವಿರುದ್ಧ ಹೋರಾಡಿದ ಮದಕರಿ ನಾಯಕರು ವಾಲ್ಮೀಕಿ ಸಮುದಾಯದ ಆತ್ಮಾಭಿಮಾನದ ಸಂಕೇತ. ಅಷ್ಟೇ ಅಲ್ಲದೆ, ಇವರೆಲ್ಲರೂ ತಮ್ಮ ಜನಪರ ಕಾರ್ಯಗಳಿಗೆ ಹೆಸರಾದವರು. ಚಿತ್ರದುರ್ಗದ ಕೋಟೆ ನಾಯಕರು ಜನರ ರಕ್ಷಣೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ ಪರಿ ಅನನ್ಯ. ಅದಲ್ಲದೆ, ಉತ್ತರ ಮತ್ತು ಮಧ್ಯ ಭಾರತದಲ್ಲಿ ಬ್ರಿಟಿಷರ ವಿರುದ್ಧ ಎದೆಯೊಡ್ಡಿ ನಿಂತ ಸಂತಲ್, ಗೊಂಡ್‌, ಭಿಲ್, ಬಿರಸ ಮುಂಡರಂತಹ ಸ್ವಾಭಿಮಾನಿ ಯೋಧರು ಸಹ ಇದೇ ಸಮುದಾಯಕ್ಕೆ ಸೇರಿದವರು.

ನನ್ನ ಸರ್ಕಾರ ರಾಜ್ಯದಲ್ಲಿರುವ ಪರಿವಾರ (ರಾಜ ಪರಿವಾರ), ತಳವಾರ ಮತ್ತು ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಂಡಿದೆ. ಈ ಮೂರೂ ಸಮುದಾಯಗಳು ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಕ್ಕೆ ಕೊಡಮಾಡುವ ಸವಲತ್ತುಗಳನ್ನು ಪಡೆಯಬಹುದು. ಪರಿವಾರ ಮತ್ತು ತಳವಾರ ಸಮುದಾಯದ ದಶಕಗಳ ಬೇಡಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ತಾರ್ಕಿಕ ಅಂತ್ಯ ಕಂಡಿದ್ದು ನನಗೆ ಹರುಷ ತಂದಿದೆ.

ವಾಲ್ಮೀಕಿ ಜಯಂತಿಯ ಶುಭ ಸಂದರ್ಭದಲ್ಲಿ ನಾನು ಹೇಳುವುದೇನೆಂದರೆ, ಬೀದರ್‌ನಿಂದ ಚಾಮರಾಜನಗರದವರೆಗೂ ಇರುವ ಎಲ್ಲ ವಾಲ್ಮೀಕಿ ಸಮುದಾಯದ ಬಂಧುಗಳ ಅಭಿವೃದ್ಧಿಗೆ ನಾನು ಮತ್ತು ನನ್ನ ಸರ್ಕಾರ ಸದಾ ಸಿದ್ಧ.

ನನ್ನ ಸರ್ಕಾರ ವಾಲ್ಮೀಕಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಯಾವತ್ತೂ ಬದ್ಧ. ಕೊರೋನಾ ವೈರಾಣು ಸೋಂಕಿನ ಹಾವಳಿಯಲ್ಲಿ ಆರ್ಥಿಕ ಸಂಕಷ್ಟಕ್ಕೀಡಾದ ಸಮುದಾಯದ ಯುವಕರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ತಲಾ 50 ಸಾವಿರ ರುಪಾಯಿ (25 ಸಾವಿರ ರು. ಇಲಾಖೆಯಿಂದ ಮತ್ತು 25 ಸಾವಿರ ರು. ಸಾಲ) ಜುಲೈ ತಿಂಗಳಲ್ಲಿ ಘೋಷಿಸಲಾಗಿತ್ತು. ಸಹಾಯಧನದ ತ್ವರಿತ ವಿಲೇವಾರಿಗಾಗಿ ನಿಗಮ ಮತ್ತು ಮಂಡಳಿಗಳು ನೇತೃತ್ವ ವಹಿಸಿಕೊಂಡಿದ್ದವು. ಕೇಂದ್ರ ಸರ್ಕಾರವು ಸಹ ಈ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಸಹ ವಾಲ್ಮೀಕಿ ಸಮುದಾಯದ ಆರ್ಥಿಕ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿದೆ. ದೇಶದ ಉನ್ನತ ಕೈಗಾರಿಕಾ ಒಕ್ಕೂಟ ASSOCHAM ಕೇಂದ್ರ ಸರ್ಕಾರದ ಸಹಯೋಗದೊಂದಿಗೆ Centre of Excellence(CoE) Tribal Enterprenrurship Development ಎನ್ನುವ ಯೋಜನೆ ರೂಪಿಸಿದೆ. ಪರಿಶಿಷ್ಟಪಂಗಡದ ಯುವ ಪ್ರತಿಭೆಗಳ ಆರ್ಥಿಕ ಸಬಲೀಕರಣ ಇದರ ಉದ್ದೇಶ.

ದೇಶದ ಒಟ್ಟು ಶೇ.8ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಪಂಗಡ ಬಾಂಧವರು ಅಭಿವೃದ್ಧಿಯ ಮನದಂಡದಲ್ಲಿ ಸಾಮಾನ್ಯ ನಾಗರಿಕರಿಗಿಂತ 20 ವರ್ಷ ಹಿಂದೆ ಇರುವರು. ಆದ್ದರಿಂದ ಅವರ ಸಾಮರ್ಥ್ಯಗಳಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಅವರನ್ನು ಆರ್ಥಿಕ ಮತ್ತು ಸಾಮಾಜಿಕ ಮುಖ್ಯವಾಹಿನಿಗೆ ಬರುವಂತೆ ಮಾಡಲು ಕೈಗೊಳ್ಳುವ ಕಾರ್ಯಕ್ರಮಗಳು ‘ಆತ್ಮನಿರ್ಭರತೆಯ’ ದಿಸೆಯಲ್ಲಿ ಮಹತ್ತರ ಪಾತ್ರ ವಹಿಸಲಿವೆ. ವಾಲ್ಮೀಕಿ ಸಮುದಾಯದ ಯುವಕ ಯವತಿಯರು ಯೋಜನೆಗಳ ಲಾಭ ಪಡೆದು ದೇಶದ ಆರ್ಥಿಕ ಪ್ರಗತಿಗೆ ಕೈ ಜೋಡಿಸಬೇಕೆಂದು ಕೋರುತ್ತೇನೆ.

ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ 17 ಶಾಸಕರನ್ನು ಹೊಂದಿರುವ ವಾಲ್ಮೀಕಿ ಸಮುದಾಯವೂ ಸೇರಿದಂತೆ ರಾಜ್ಯದ 53 ಜಾತಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿವೆ. ವಾಲ್ಮೀಕಿ ಸಮುದಾಯದ ಸಂಘಟನೆಗಳು ಪರಿಶಿಷ್ಟ ಪಂಗಡದ ಮೀಸಲಾತಿ ಮಿತಿ ಹೆಚ್ಚಿಸುವಂತೆ ಬೇಡಿಕೆಗಳನ್ನು ಮುಂದಿಟ್ಟಿವೆ. ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗದ ವರದಿಯ ಅನುಸಾರ ಈಗಿರುವ ಶೇ.3ರ ಮೀಸಲಾತಿ ಮಿತಿಯನ್ನು ಶೇ.7.5ಕ್ಕೆ ಹೆಚ್ಚಿಸುವಂತೆ ಕೋರಿವೆ. ಅವರ ಬೇಡಿಕೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಿ ಸರ್ಕಾರವು ತನ್ನ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಬಯಸುತ್ತೇನೆ. ಸಮುದಾಯದ ಕಟ್ಟಕಡೆಯ ವ್ಯಕ್ತಿಯೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದಿಂದ ವಂಚಿತರಾಗಬಾರದು ಎಂಬುದು ನನ್ನ ಕಳಕಳಿ.
 

click me!