ಕಲ್ಲಡ್ಕ ಹತ್ಯೆಗೆ ಸಂಚು: ಬಂಧಿತರ ಸಂಖ್ಯೆ 3ಕ್ಕೇರಿಕೆ

By Web DeskFirst Published Jan 20, 2019, 10:27 AM IST
Highlights

ಕಲ್ಲಡ್ಕ ಹತ್ಯೆಗೆ ಸಂಚು: ಆಫ್ಘನ್‌ ವ್ಯಕ್ತಿ ಸೇರಿ ಮತ್ತಿಬ್ಬರ ಬಂಧನ| ಬಂಧಿತರ ಸಂಖ್ಯೆ 3ಕ್ಕೇರಿಕೆ| ಭೂಗತಲೋಕದ ನಂಟು

ನವದೆಹಲಿ[ಜ.20]: ದಕ್ಷಿಣ ಕನ್ನಡದ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಸೇರಿದಂತೆ ಕೆಲವು ಆರೆಸ್ಸೆಸ್‌ ನಾಯಕರ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ಇನ್ನೂ ಇಬ್ಬರನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಬಂಧಿತರಲ್ಲಿ ಓರ್ವ ಆಷ್ಘಾನಿಸ್ಥಾನದ ನಾಗರಿಕ ಕೂಡ ಇದ್ದಾನೆ. ಇವರಿಗೆ ಭೂಗತ ಲೋಕದ ಸಂಪರ್ಕ ಇದ್ದಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಇತ್ತೀಚೆಗೆ ಕೇರಳದ ಕಾಸರಗೋಡು ಮೂಲದ ಮುಹತಸಿಂ ಅಲಿಯಾಸ್‌ ತಾಸಿಂ (41) ಎಂಬುನವನ್ನು ಬಂಧಿಸಿದ್ದ ಪೊಲೀಸರು, ಆಷ್ಘಾನಿಸ್ತಾನ ಮೂಲದ ವಲಿ ಮೊಯಮ್ಮದ್‌ ಸೈಫಿ (45) ಹಾಗೂ ದಿಲ್ಲಿಯ ಮದನ್‌ಗೀರ್‌ ನಿವಾಸಿ ಶೇಖ್‌ ರಿಯಾಜುದ್ದೀನ್‌ ಅಲಿಯಾಸ್‌ ಅಲಾಮಿ (32) ಎಂಬುವರನ್ನೂ ಬಂಧಿಸಿದ್ದಾಗಿ ತಿಳಿಸಿದ್ದಾರೆ.

‘ಜನವರಿ 9ರಂದು ನಮಗೆ ಹತ್ಯೆ ಸಂಚಿನ ಬಗ್ಗೆ ಮಾಹಿತಿ ಲಭಿಸಿತು. ವಿದೇಶೀ ನಿಯಂತ್ರಕರ ಸೂಚನೆ ಮೇರೆಗೆ ದಕ್ಷಿಣ ಭಾರತದ ಮುಖಂಡರ ಹತ್ಯೆ ಸಂಚಿನ ಬಗ್ಗೆ ಸುಳಿವು ಸಿಕ್ಕಿತು. ಇದನ್ನು ಆಧರಿಸಿ ಜ.11ರಂದು ಮೊದಲು ವಲಿ ಹಾಗೂ ರಿಯಾಜುದ್ದೀನ್‌ರನ್ನು ದಿಲ್ಲಿಯಲ್ಲಿ ಬಂಧಿಸಲಾಯಿತು. ಇವರು ನೀಡಿದ ಸುಳಿವಿನ ಮೇರೆಗೆ ತಾಸಿಂನನ್ನೂ ಕೇರಳ ಪೊಲೀಸರ ಸಹಾಯದಿಂದ ಕಾಸರಗೋಡಿನಲ್ಲಿ ಬಂಧಿಸಲಾಯಿತು’ ಎಂದು ದಿಲ್ಲಿ ಉಪ ಪೊಲೀಸ್‌ ಆಯುಕ್ತ ಪ್ರಮೋದ್‌ ಸಿಂಗ್‌ ಕುಶ್ವಾಹಾ ತಿಳಿಸಿದ್ದಾರೆ.

‘ಈ ಮುಖಂಡರನ್ನು ಕೊಲ್ಲಲು ಮೊದಲು ಸಂಚು ರೂಪಿಸಿದ್ದು ತಾಸಿಂ. ದುಬೈನಲ್ಲಿ ವ್ಯಾಪಾರ ಮಾಡುವಾಗ ಇಬ್ಬರೂ ಈತನಿಗೆ ಸೈಫಿ ಪರಿಚಯವಾಗಿತ್ತು. ಮೊದಲು ಸೈಫಿ ಹಾಗೂ ನಂತರ ರಿಯಾಜುದ್ದೀನ್‌ರನ್ನು ಸೇರಿಸಿಕೊಂಡ ತಾಸಿಂ, ದಕ್ಷಿಣ ಭಾರತ ಮುಖಂಡರ ಹತ್ಯೆಗೆ ಸ್ಕೆಚ್‌ ಹಾಕಿದ್ದ’ ಎಂದು ಅವರು ಹೇಳಿದ್ದಾರೆ.

ಬಂಧಿತರಿಂದ 1 ಪಿಸ್ತೂಲು, 3 ಕಾಟ್ರ್ಜಿಡ್ಜ್‌ ವಶಪಡಿಸಿಕೊಳ್ಳಲಾಗಿದೆ.

click me!