ಕೊರೋನಾ ನಿಗಾ ಸಮಿತಿ ಕಾರ್ಯ ವೈಖರಿಗೆ ಹೈಕೋರ್ಟ್‌ ಅಸಮಾಧಾನ

By Kannadaprabha NewsFirst Published Sep 30, 2020, 10:16 AM IST
Highlights

ಕಾರ್ಯಚಟುವಟಿಕೆಯ ಬಗ್ಗೆ ವರದಿಯನ್ನೇ ನೀಡದ ಬಿಬಿಎಂಪಿಯ ನಿಗಾ ಸಮಿತಿ| ಈ ಬಗ್ಗೆ ರಾಜ್ಯ ಸರ್ಕಾರ ವಿವರಣೆ ನೀಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ|ಕೋವಿಡ್‌ ಆಸ್ಪತ್ರೆಗಳ ನಿರಂತರ ನಿಗಾ ವ್ಯವಸ್ಥೆ ರೂಪಿಸಬೇಕು| 
 

ಬೆಂಗಳೂರು(ಸೆ.30): ನಗರದಲ್ಲಿ ಕೋವಿಡ್‌ ನಿಯಂತ್ರಣ ಹಾಗೂ ನಿರ್ವಹಣೆ ಸಂಬಂಧ ಸರ್ಕಾರ ಮತ್ತು ಬಿಬಿಎಂಪಿಗೆ ಅಗತ್ಯ ಸಲಹೆ ನೀಡಲು ರಚನೆಗೊಂಡಿರುವ ನಿಗಾ ಸಮಿತಿಯ ಕಾರ್ಯ ವೈಖರಿಗೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಸಂಬಂಧ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ರಾಜ್ಯ ಮಟ್ಟದ ನಿಗಾ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಆ ವರದಿಯಲ್ಲಿ ಬೆಂಗಳೂರು ನಗರದ ನಿಗಾ ಸಮಿತಿಯ ಕಾರ್ಯಚಟುವಟಿಕೆಗಳ ಕುರಿತ ಮಾಹಿತಿ ಇರಲಿಲ್ಲ. ನಗರ ನಿಗಾ ಸಮಿತಿ ಸಹ ಯಾವುದೇ ವರದಿಯೂ ಸಲ್ಲಿಸದ ಕಾರಣ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಪಿಪಿಇ ಕಿಟ್‌ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ: ಮಾಹಿತಿ ನೀಡಲು ಸೂಚನೆ

ಬೆಂಗಳೂರು ನಗರ ನಿಗಾ ಸಮಿತಿ ಜಿಲ್ಲೆಯ ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ ಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯ ಹಾಗೂ ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿಲ್ಲ. ಈ ಸಮಿತಿ ತನ್ನ ಕೆಲಸಗಳನ್ನೇ ಮಾಡಿಲ್ಲ ಹಾಗೂ ನ್ಯಾಯಾಲಯಕ್ಕೆ ವರದಿಯೂ ಸಲ್ಲಿಸಿಲ್ಲ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಕೊರೋನಾ ಪಾಸಿಟಿವ್‌ ಪ್ರಕರಣಗಳು ನಮೂದಾಗುತ್ತಿವೆ. ದಿನಕ್ಕೆ ನಾಲ್ಕು ಸಾವಿರದವರೆಗೂ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇಡೀ ದೇಶದಲ್ಲೇ ಕೊರೋನಾ ಹೆಚ್ಚಿರುವ ಪ್ರಕರಣದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಅತಿ ಹೆಚ್ಚು ಕೋವಿಡ್‌ ಕೇಸ್‌ಗಳು ದಾಖಲಾಗುತ್ತಿರುವ ನಗರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಈ ಪರಿಸ್ಥಿತಿ ಇರುವಾಗ ನಿಗಾ ಸಮಿತಿಯು ಕೆಲಸ ಮಾಡದೇ ಇರುವುದು ಎಷ್ಟುಸರಿ ಎಂದು ತೀಕ್ಷ$್ಣವಾಗಿ ಪ್ರಶ್ನಿಸಿತು.

ಅಲ್ಲದೆ, ವೈದ್ಯರು ಹಾಗೂ ಸಿಬ್ಬಂದಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಲು ಕಳೆದ ಆರು ತಿಂಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಇಲ್ಲವಾದರೆ ಅವರು ಹೇಗೆ ಚಿಕಿತ್ಸೆ ಕಲ್ಪಿಸಲು ಸಾಧ್ಯ? ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ ಅಲ್ಲಿರುವ ಸೌಲಭ್ಯವನ್ನು ನಿಗಾ ಸಮಿತಿ ಪರಿಶೀಲನ ನಡೆಸಬೇಕಲ್ಲವೇ? ಅತಿ ಹೆಚ್ಚು ಕೋವಿಡ್‌ ಆಸ್ಪತ್ರೆಗಳಿರುವ ಬೆಂಗಳೂರಿನಲ್ಲೇ ಸಮಿತಿಯೇ ಕೆಲಸ ಮಾಡಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿ, ಸರ್ಕಾರದ ವರದಿಯಲ್ಲಿ ಬೆಂಗಳೂರು ಸಮಿತಿ ನಿರ್ವಹಿಸಿದ ಕಾರ್ಯ ಚಟುವಟಿಕೆಗಳ ಬಗ್ಗೆ ಒಂದೇ ಪದವೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.

ಹಾಗೆಯೇ, ಕೂಡಲೇ ಸಮಿತಿ ತನ್ನ ಕಾರ್ಯಗಳನ್ನು ನಿರ್ವಹಿಸಲು ಮುಂದಾಗಬೇಕು. ಮುಂದಿನ ವಿಚಾರಣೆ ವೇಳೆ ಸಮಗ್ರವಾದ ವರದಿ ಸಲ್ಲಿಸಬೇಕು. ಕೋವಿಡ್‌ ಆಸ್ಪತ್ರೆಯಲ್ಲಿನ ರೋಗಿಗಳಿಗೆ ದೂರು ನೀಡಲು ರಾಜ್ಯ ಹಾಗೂ ನಗರ ಮಟ್ಟಕ್ಕೆ ಪ್ರತ್ಯೇಕ ಹೆಲ್ಪ್‌ ಲೈನ್‌ ರೂಪಿಸಬೇಕು. ಕೋವಿಡ್‌ ಆಸ್ಪತ್ರೆಗಳ ನಿರಂತರ ನಿಗಾ ವ್ಯವಸ್ಥೆ ರೂಪಿಸಬೇಕು ಎಂದು ನಿರ್ದೇಶಿಸಿತು.

ಆಮ್ಲಜನಕ ಪೂರೈಕೆ ಸಾಕಷ್ಟು ಇದೆಯೇ?

ಬೆಂಗಳೂರಿನ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆ ಸಾಕಷ್ಟಿದೆಯೇ, ಆಮ್ಲಜನಕದ ಬೆಲೆ ನಿಯಂತ್ರಣಕ್ಕೆ ಕೈಗೊಂಡ ಕ್ರಮವೇನು, ಕೇಂದ್ರ ಸರ್ಕಾರದ ಆದೇಶ ಜಾರಿಗೆ ಕ್ರಮ ಕೈಗೊಳ್ಳಲಾಗಿದೆಯೇ, ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೂ ಸಮರ್ಪಕ ಪೂರೈಕೆ ಆಗಿದೆಯೇ, ಎಂಬ ಬಗ್ಗೆ ರಾಜ್ಯ ಸರ್ಕಾರ ವಿವರಣೆ ನೀಡಿ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.
 

click me!