ರಾಸಲೀಲೆ ಸಿಡಿ ಪ್ರಕರಣ: ಎಸ್‌ಐಟಿ ನಿಷ್ಪಪಾತ ತನಿಖೆ ನಡೆಸ್ತಿದೆ, ಪ್ರವೀಣ್‌ ಸೂದ್‌

By Kannadaprabha NewsFirst Published Apr 3, 2021, 8:07 AM IST
Highlights

ಆರೋಪಿ ಬಂಧನ ತನಿಖಾಧಿಕಾರಿಗೆ ಬಿಟ್ಟದ್ದು| ಎಸ್‌ಐಟಿ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ| ಎಸ್‌ಐಟಿ ತಂಡದ ಮೇಲೆ ಸಂಪೂರ್ಣವಾದ ಭರವಸೆ ಇದೆ| ಪ್ರಕರಣವನ್ನು ಆದಷ್ಟು ಬೇಗ ಭೇದಿಸಲಿದ್ದಾರೆ: ಪ್ರವೀಣ್‌ ಸೂದ್‌|

ಬೆಂಗಳೂರು(ಏ.03):  ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದು, ಎಸ್‌ಐಟಿ ಪೊಲೀಸರ ತನಿಖೆ ಮೇಲೆ ಯಾರೂ ಸಹ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಎಸ್‌ಐಟಿ ಅಧಿಕಾರಿಗಳು ತಮ್ಮ ಪಾಡಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ತನಿಖೆ ವೇಳೆ ಸಂಗ್ರಹವಾದ ಪುರಾವೆಗಳನ್ನು ಆಧರಿಸಿ ಯಾರನ್ನಾದರೂ ವಿಚಾರಣೆಗೆ ಕರೆಯುವ ಅಥವಾ ಬಂಧಿಸುವ ಅಧಿಕಾರವು ತನಿಖಾಧಿಕಾರಿಗಳಿಗೆ ಇದೆ. ಎಸ್‌ಐಟಿ ತನಿಖೆ ಸ್ವತಂತ್ರವಾಗಿ ನಡೆದಿದೆ ಎಂದು ಸಮರ್ಥಿಸಿದರು.

ವಿಚಾರಣೆಗೆ ಬರದ ರಮೇಶ್, ಜತೆಗಿದ್ದವರ ಬಗ್ಗೆ ಯುವತಿ ಕೊಟ್ಟ ಮಾಹಿತಿ!

ಅತ್ಯಾಚಾರದ ಪ್ರಕರಣ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳ ಮೇಲೆ ಯಾರೊಬ್ಬರೂ ಪ್ರಭಾವ ಬೀರುವುದಾಗಲಿ, ಒತ್ತಡ ಹೇರುವುದಾಗಲಿ ಸಾಧ್ಯವೇ ಇಲ್ಲ. ಅಧಿಕಾರಿಗಳಿಗೆ ಸರ್ಕಾರ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದೆ. ಹೀಗಾಗಿ ತನಿಖೆಗೆ ಮಧ್ಯಪ್ರವೇಶ ಎಂಬ ಮಾತೇ ಉದ್ಭವಿಸುವುದಿಲ್ಲ. ಪ್ರಕರಣದ ತನಿಖೆ ಮುಕ್ತಾಯವಾಗಿ ಆರೋಪಿತ ವ್ಯಕ್ತಿಗಳು ತಪ್ಪೆಸಗಿರುವುದು ದೃಢಪಟ್ಟಬಳಿಕವೂ ಬಂಧಿಸದೆ ಹೋದಾಗ ಏಕೆ ಬಂಧಿಸಿಲ್ಲವೆಂದು ಪೊಲೀಸರನ್ನು ಯಾರು ಬೇಕಾದರೂ ಪ್ರಶ್ನಿಸಬಹುದು. ಆದರೆ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಹೀಗೆ ತನಿಖೆ ನಡೆಸಿ ಎಂದು ಹೇಳುವುದು ಸರಿಯಲ್ಲ. ಕೃತ್ಯದ ಸಂಬಂಧ ಯಾರನ್ನಾದರೂ ಬಂಧಿಸುವುದು ಬಿಡುವುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟವಿಷಯವಾಗಿದೆ ಎಂದು ಹೇಳಿದರು.

ಎಸ್‌ಐಟಿಯಲ್ಲಿ ಹಿರಿಯ ಅಧಿಕಾರಿಗಳಿದ್ದಾರೆ. ಎಲ್ಲವನ್ನೂ ಕೂಲಂಕಷವಾಗಿ ತನಿಖೆ ನಡೆಸಿ ವಿಚಾರಣೆ ನಡೆಸುತ್ತಾರೆ. ಹಂತ ಹಂತವಾಗಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಬೇಕು. ಎಸ್‌ಐಟಿ ತಂಡದ ಮೇಲೆ ಸಂಪೂರ್ಣವಾದ ಭರವಸೆ ಇದೆ. ಪ್ರಕರಣವನ್ನು ಆದಷ್ಟು ಬೇಗ ಭೇದಿಸಲಿದ್ದಾರೆ ಎಂದು ಸೂದ್‌ ವಿಶ್ವಾಸ ವ್ಯಕ್ತಪಡಿಸಿದರು.
 

click me!