
ನವದೆಹಲಿ(ಅ.24): ಸ್ವದೇಶಿ ಕೊರೋನಾ ಲಸಿಕೆ ‘ಕೋವ್ಯಾಕ್ಸಿನ್’ನ 3ನೇ ಹಾಗೂ ಕೊನೆಯ ಹಂತದ ಪ್ರಯೋಗಕ್ಕೆ ಅನುಮತಿ ಗಿಟ್ಟಿಸಿಕೊಂಡಿರುವ ‘ಭಾರತ್ ಬಯೋಟೆಕ್’, ಬೆಂಗಳೂರಿನ 2 ಸೇರಿ ದೇಶದ 19 ಸ್ಥಳಗಳಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಅಲ್ಲದೆ ಈ ಲಸಿಕೆ ಶೇ.60ರಷ್ಟುಪರಿಣಾಮಕಾರಿ ಆಗಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಗುರುವಾರ ರಾತ್ರಿ ಔಷಧ ಉತ್ಪಾದಕ ದೈತ್ಯ ಕಂಪನಿಯಾದ ‘ಭಾರತ್ ಬಯೋಟೆಕ್’ಗೆ ಔಷಧ ನಿಯಂತ್ರಣ ಪ್ರಾಧಿಕಾರ (ಡಿಜಿಸಿಐ) 3ನೇ ಹಂತದ ಪರೀಕ್ಷೆಗೆ ಅನುಮತಿ ನೀಡಿತ್ತು. ಲಸಿಕೆ ಪ್ರಯೋಗಕ್ಕೆ 14 ರಾಜ್ಯಗಳ 19 ಸ್ಥಳಗಳನ್ನು ಗುರುತಿಸಲಾಗಿದ್ದು, ಸುಮಾರು 26 ಸಾವಿರ ಜನರನ್ನು ಕಂಪನಿ ಆಯ್ಕೆ ಮಾಡಿಕೊಳ್ಳಲಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಮಲ್ಲೇಶ್ವರದ ವೇಗಸ್ ಆಸ್ಪತ್ರೆಗಳು ಪ್ರಯೋಗಕ್ಕೆ ಆಯ್ಕೆಯಾದ ಈ 19 ಸ್ಥಳಗಳಲ್ಲಿ ಸೇರಿವೆ. ಪ್ರತಿ ಆಸ್ಪತ್ರೆಯಲ್ಲಿ 2000 ಜನರ ಮೇಲೆ ಪ್ರಯೋಗ ನಡೆಸುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್‌ನಿಂದ ಪರೀಕ್ಷಾ ಪ್ರಯೋಗ ಆರಂಭವಾಗಲಿದ್ದು, ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ವೇಳೆಗೆ ಇದರ ಮಧ್ಯಂತರ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಲಸಿಕೆ ಶೇ.60ರಷ್ಟುಪರಿಣಾಮಕಾರಿ ಆಗಬಲ್ಲದು ಎಂದು ಭಾರತ್ ಬಯೋಟೆಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಾಯಿ ಪ್ರಸಾದ್ ಅವರು ಆಂಗ್ಲ ದೈನಿಕವೊಂದಕ್ಕೆ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಶೇ.50ರಷ್ಟುಪರಿಣಾಮಕಾರಿ ಆಗುವ ಲಸಿಕೆಗಳಿಗೆ ಅನುಮೋದನೆ ನೀಡುವ ಮಾರ್ಗಸೂಚಿ ಅಳವಡಿಸಿಕೊಂಡಿದೆ. ಹೀಗಾಗಿ ‘ಕೋವ್ಯಾಕ್ಸಿನ್’ ಲಸಿಕೆಗೆ ಒಪ್ಪಿಗೆ ದೊರಕುವ ವಿಶ್ವಾಸವಿದೆ.
3 ಹಂತಗಳು:
‘ಮೊದಲ ಹಂತದಲ್ಲಿ 375 ಜನರ ಮೇಲೆ ಹಾಗೂ 2ನೇ ಹಂತದಲ್ಲಿ 2400 ಜನರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಮೊದಲ ಹಂತದ ವರದಿಯನ್ನು ಡಿಜಿಸಿಐಗೆ ಸಲ್ಲಿಸಲಾಗಿದ್ದು, ಲಸಿಕೆ ಪ್ರಯೋಗಕ್ಕೆ ಒಳಗಾದವರ ಸುರಕ್ಷತೆಗೆ ಯಾವುದೇ ಭಂಗ ಬಂದಿಲ್ಲ. 2ನೇ ಹಂತದ ಪ್ರಯೋಗದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯ ಪರೀಕ್ಷೆ ನಡೆಸಲಾಗಿದ್ದು, ಆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ’ ಎಂದು ಸಾಯಿಪ್ರಸಾದ್ ಹೇಳಿದ್ದಾರೆ.
ಇನ್ನು 3ನೇ ಹಂತದಲ್ಲಿ 2 ಡೋಸ್ ಲಸಿಕೆಗಳನ್ನು ನೀಡುವ ಉದ್ದೇಶವಿದೆ.
ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮತ್ತು ಭಾರತ್ ಬಯೋಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿವೆ. 150 ದಶಲಕ್ಷ ಡೋಸ್‌ಗಳನ್ನು ಪ್ರತಿ ವರ್ಷ ಉತ್ಪಾದಿಸುವ ಸಾಮರ್ಥ್ಯ ಬಯೋಟೆಕ್‌ಗೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ