'ಜಾರಕಿಹೊಳಿ, ಸರ್ಕಾರದಿಂದ ಅಪಾಯ: ಹತ್ಯೆ ಆತಂಕ ಇದೆ'

By Kannadaprabha NewsFirst Published Mar 30, 2021, 7:44 AM IST
Highlights

ಜಾರಕಿಹೊಳಿ ನನ್ನನ್ನು ಕೊಲ್ಲಬಹುದು: ಲೇಡಿ| ಹೈಕೋರ್ಟ್‌ ಸಿಜೆಗೆ ಯುವತಿ ಪತ್ರ| ತನಿಖೆ ಮೇಲುಸ್ತುವಾರಿಗೆ ಮನವಿ| ರಕ್ಷಣೆ ನೀಡುವಂತೆಯೂ ಕೋರಿಕೆ

ಬೆಂಗಳೂರು(ಮಾ.30): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ವಿರುದ್ಧದ ಲೈಂಗಿಕ ಹಗರಣದ ತನಿಖೆಯನ್ನು ತಾವೇ ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸಬೇಕು ಹಾಗೂ ನನಗೆ ಸೂಕ್ತ ರಕ್ಷಣೆ ಒದಗಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಪ್ರಕರಣದ ದೂರುದಾರ ಯುವತಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ.

ಈ ಪ್ರಕರಣದಲ್ಲಿ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರ ರಮೇಶ್‌ ಜಾರಕಿಹೊಳಿ ಅವರ ರಕ್ಷಣೆಗೆ ನಿಂತಿವೆ ಎಂದು ಗಂಭೀರ ಆರೋಪ ಮಾಡಿರುವ ಆಕೆ, ತನ್ನನ್ನು ಕೊಲ್ಲಲು ಸಹ ಮಾಜಿ ಸಚಿವರು ಹಾಗೂ ಸರ್ಕಾರ ಹೇಸುವುದಿಲ್ಲ. ಯಾವ ಕ್ಷಣದಲ್ಲಾದರೂ ನನ್ನ ಹತ್ಯೆ ನಡೆಯಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾಳೆ.

ಸಿ.ಡಿ. ಸ್ಫೋಟದ ಬಳಿಕ ಅಜ್ಞಾತ ಸ್ಥಳದಿಂದಲೇ ಇದುವರೆಗೆ ವಿಡಿಯೋ ಹೇಳಿಕೆ ಮೂಲಕ ಸದ್ದು ಮಾಡುತ್ತಿದ್ದ ಯುವತಿ ಈಗ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗುವುದರೊಂದಿಗೆ ಲೈಂಗಿಕ ಹಗರಣದ ವಿವಾದಕ್ಕೆ ಮತ್ತೊಂದು ತಿರುವು ದೊರೆತಿದೆ.

ಪತ್ರದ ವಿವರ ಹೀಗಿದೆ:

- ನಾನೊಬ್ಬಳು ಅತ್ಯಾಚಾರ ಪ್ರಕರಣದ ಸಂತ್ರಸ್ತೆ. ಬೆಂಗಳೂರಿನ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ರಾಜ್ಯ ಸರ್ಕಾರದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಎಫ್‌ಐಆರ್‌ ನಂ.30-2021 ಮೂಲಕ ಐಪಿಸಿ ಸೆಕ್ಷನ್‌- 354 (ಲೈಂಗಿಕ ದೌರ್ಜನ್ಯ), 506 (ಜೀವ ಬೆದರಿಕೆ), 376 ಸಿ (ಅಧಿಕಾರ ಬಳಸಿಕೊಂಡು ಅತ್ಯಾಚಾರ) ಹಾಗೂ ಐಟಿ ಕಾಯ್ದೆಯ 67 (ಎ) ಅನ್ವಯ ದೂರು ದಾಖಲಿಸಿರುತ್ತೇನೆ.

- ರಮೇಶ್‌ ಜಾರಕಿಹೊಳಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ನಾನು ಅವರ ವಿರುದ್ಧ ಮಾಡಿರುವ ಆರೋಪಗಳನ್ನು ಹಿಂಪಡೆಯುವಂತೆ ಸಾರ್ವಜನಿಕವಾಗಿಯೇ ನನಗೆ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಅವರು ಮತ್ತು ಅವರ ಬೆಂಬಲಿಗರು ನಿರಂತರವಾಗಿ ಮಾಧ್ಯಮಗಳ ಮೂಲಕ ಬೆದರಿಕೆ ಹಾಕುತ್ತಿರುವ ಬಗ್ಗೆ ಹಲವು ಬಾರಿ ಆತಂಕ ತೋಡಿಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಎಸ್‌ಐಟಿಗೆ ವಿನಂತಿಸಿದರೂ ಕಿಂಚಿತ್ತೂ ಪ್ರಯೋಜನವಾಗಿಲ್ಲ.

- ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿಯೇ ರಮೇಶ್‌ ಜಾರಕಿಹೊಳಿ ಜತೆ ಶಾಮೀಲಾಗಿದೆ. ಪ್ರಕರಣದ ಸಂಬಂಧ ನ್ಯಾಯಾಧೀಶರ ಮುಂದೆ ಹಾಜರಾಗಿ ತಮ್ಮ ವಿರುದ್ಧ ನಾನು ಹೇಳಿಕೆ ನೀಡದಂತೆ ಎಸ್‌ಐಟಿ ಮೂಲಕ ತಡೆಯಲು ಯತ್ನಿಸುತ್ತಿದ್ದಾರೆ. ಹಾಗೆಯೇ ನನ್ನ ಕುಟುಂಬದವರಿಗೆ ಸಹ ಬೆದರಿಕೆ ಹಾಕುತ್ತಿರುವ ವಿಚಾರ ಮಾಧ್ಯಮಗಳ ಮೂಲಕ ನನಗೆ ಗೊತ್ತಾಗಿದೆ.

- ರಮೇಶ್‌ ಜಾರಕಿಹೊಳಿ ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ನಾಶಗೊಳಿಸಲು ಸಾಧ್ಯವಾದಷ್ಟುಮಟ್ಟಿಗೆ ಯತ್ನಿಸಿದ್ದಾರೆ. ಅಲ್ಲದೆ, ನಾನು ತನಿಖಾ ಸಂಸ್ಥೆಯನ್ನು ಸಂಪರ್ಕಿಸದಂತೆ ಹಾಗೂ ತಮ್ಮ ವಿರುದ್ಧ ಹೇಳಿಕೆ ದಾಖಲಿಸದಂತೆ ನಿರ್ಬಂಧಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧವಿರುವುದಾಗಿ ಬಹಿರಂಗವಾಗಿಯೇ ರಮೇಶ್‌ ಜಾರಕಿಹೊಳಿ ಧಮ್ಕಿ ಹಾಕಿದ್ದಾರೆ.

- ನಾನು ಮಾಡಿರುವ ಆಪಾದನೆ ರುಜುವಾತಾಗದಂತೆ ತಡೆಯಲು ನನ್ನನ್ನು ಯಾವ ಕ್ಷಣದಲ್ಲಾದರೂ, ಎಲ್ಲಿಯಾದರೂ ರಮೇಶ್‌ ಜಾರಕಿಹೊಳಿ ಹತ್ಯೆ ಮಾಡಬಹುದು. ಅವರ ತಾಳಕ್ಕೆ ತಕ್ಕಂತೆ ಎಸ್‌ಐಟಿ ಕುಣಿಯುತ್ತಿದೆ. ಹಾಗೆಯೇ ಮಾಜಿ ಸಚಿವರ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ. ಹೀಗಾಗಿ ನನಗೆ ರಾಜ್ಯ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳ ಮೇಲೆ ವಿಶ್ವಾಸವಿಲ್ಲ. ಜಾರಕಿಹೊಳಿ ಅವರ ರಕ್ಷಣೆ ಸಲುವಾಗಿ ನನ್ನನ್ನು ಸರ್ಕಾರವೇ ಕೊಲ್ಲಬಹುದು.

- ನಾನು ನ್ಯಾಯಕ್ಕಾಗಿ ಸ್ವಇಚ್ಛೆಯಿಂದ ಪ್ರಭಾವಿ ವ್ಯಕ್ತಿ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ನಾನೊಬ್ಬ ಶೋಷಿತೆಯಾಗಿದ್ದು, ನನ್ನ ಮಾನ ಮತ್ತು ಗೌರವ ಕಾಪಾಡಿಕೊಳ್ಳಲು, ಸ್ತ್ರೀ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದೇನೆ. ನನ್ನ ಪೋಷಕರು ನೀಡಿರುವ ಹೇಳಿಕೆಯಂತೆ ನನ್ನನ್ನು ಯಾರೂ ಅಪಹರಿಸಿಲ್ಲ. ಇದೊಂದು ಆಧಾರ ರಹಿತ ಹೇಳಿಕೆಯಾಗಿದೆ. ಆ ರೀತಿ ಹೇಳಿಕೆ ನೀಡುವಂತೆ ಪೋಷಕರ ಮೇಲೆ ರಮೇಶ್‌ ಜಾರಕಿಹೊಳಿ ಒತ್ತಡ ಹಾಕುತ್ತಿದ್ದಾರೆ. ಇದು ನನ್ನ ವೈಯಕ್ತಿಕ ಹೋರಾಟ.

- ನನ್ನ ಕುಟುಂಬವನ್ನು ರಮೇಶ್‌ ಜಾರಕಿಹೊಳಿ ಒತ್ತೆಯಾಗಿರಿಸಿಕೊಂಡಿದ್ದಾರೆ. ಡಿವೈಎಸ್ಪಿ ಕಟ್ಟಿಮನಿ ಅವರು ರಮೇಶ್‌ ಜಾರಕಿಹೊಳಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಕುಟುಂಬದ ಮೇಲೂ ಅವರು ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ನಾನು ಎದುರಿಸುತ್ತಿರುವ ಜೀವ ಭೀತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ವಿನಂತಿಸುತ್ತೇನೆ. ನನಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರಕ್ಕೆ ಸೂಚನೆ ಕೊಡಬೇಕು, ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆ ಅಡಿ ನಡೆಸಿ ನನಗೆ ನ್ಯಾಯ ಕೊಡಿಸಬೇಕು ಎಂದು ಬೇಡಿಕೊಳ್ಳುತ್ತಿದ್ದೇನೆ.

click me!