ಸಾಧಕರಿಗೆ ಸನ್ಮಾನ: ಕೊಹ್ಲಿ, ಚಾನುಗೆ ಖೇಲ್‌ ರತ್ನ ಪ್ರದಾನ

By Web DeskFirst Published Sep 26, 2018, 9:17 AM IST
Highlights

ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ, ಓಟಗಾರ್ತಿ ಹಿಮಾ ದಾಸ್‌ ಸೇರಿ 20 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. ಪ್ರತಿ ವರ್ಷ ಆ.29ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ ಈ ವರ್ಷ ಅದೇ ಸಮಯದಲ್ಲಿ ಏಷ್ಯನ್‌ ಗೇಮ್ಸ್‌ ನಡೆಯುತ್ತಿದ್ದ ಕಾರಣ, ಮಂಗಳವಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನವದೆಹಲಿ[ಸೆ.26]: ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ವೇಟ್‌ಲಿಫ್ಟಿಂಗ್‌ ವಿಶ್ವ ಚಾಂಪಿಯನ್‌ ಮೀರಾಬಾಯಿ ಚಾನುಗೆ ಮಂಗಳವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್‌ ಗಾಂಧಿ ಖೇಲ್‌ ರತ್ನ ನೀಡಿ ಗೌರವಿಸಿದರು.

ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ, ಓಟಗಾರ್ತಿ ಹಿಮಾ ದಾಸ್‌ ಸೇರಿ 20 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. ಪ್ರತಿ ವರ್ಷ ಆ.29ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ ಈ ವರ್ಷ ಅದೇ ಸಮಯದಲ್ಲಿ ಏಷ್ಯನ್‌ ಗೇಮ್ಸ್‌ ನಡೆಯುತ್ತಿದ್ದ ಕಾರಣ, ಮಂಗಳವಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕೊಹ್ಲಿ ಖೇಲ್‌ ರತ್ನ ಸ್ವೀಕರಿಸುವುದನ್ನು ನೋಡಲು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ, ತಾಯಿ ಸರೋಜ್‌ ಕೊಹ್ಲಿ ಹಾಗೂ ಅಣ್ಣ ವಿಕಾಸ್‌ ಕೊಹ್ಲಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದರು. ಸಚಿನ್‌ ತೆಂಡುಲ್ಕರ್‌ (1997-98) ಹಾಗೂ ಎಂ.ಎಸ್‌.ಧೋನಿ (2007) ಬಳಿಕ ಖೇಲ್‌ ರತ್ನ ಪಡೆದ 3ನೇ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ವಿರಾಟ್‌ ಈ ಮೊದಲು 2013ರಲ್ಲಿ ಅರ್ಜುನ ಹಾಗೂ ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಕಳೆದ ವರ್ಷ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನ 48 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಮೀರಾಬಾಯಿ ಸಹ, 2017ರಲ್ಲಿ ಪದ್ಮಶ್ರೀ ಪಡೆದಿದ್ದರು. ಈ ವರ್ಷ ಕಾಮನ್ವೆಲ್ತ್‌ ಗೇಮ್ಸ್‌ನಲ್ಲೂ ಅವರು ಚಿನ್ನದ ಸಾಧನೆ ಮಾಡಿದ್ದರು. ಖೇಲ್‌ ರತ್ನಕ್ಕೆ ರು 7.5 ಲಕ್ಷ, ಅರ್ಜುನ ಪ್ರಶಸ್ತಿಗೆ ರು 5 ಲಕ್ಷ ಬಹುಮಾನ, ಪ್ರಮಾಣ ಪತ್ರ ನೀಡಲಾಯಿತು.

ಬೋಪಣ್ಣ, ಸ್ಮೃತಿ ಗೈರು: ಚೀನಾದಲ್ಲಿ ಪಂದ್ಯಾವಳಿ ಆಡುತ್ತಿರುವ ಟೆನಿಸಗ ರೋಹನ್‌ ಬೋಪಣ್ಣ, ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟರ್‌ ಸ್ಮೃತಿ ಮಂಧನಾ, ಅರ್ಜುನ ಪ್ರಶಸ್ತಿ ಸ್ವೀಕರಿಸಲು ಆಗಮಿಸಿರಲಿಲ್ಲ.

ರಾಜ್ಯದ ಕೋಚ್‌ಗಳಿಗೆ ಪ್ರಶಸ್ತಿ: ಕರ್ನಾಟಕದ ಅಥ್ಲೆಟಿಕ್ಸ್‌ ಕೋಚ್‌ ವಿ.ಆರ್‌.ಬೀಡು ಹಾಗೂ ಬಾಕ್ಸಿಂಗ್‌ ಕೋಚ್‌ ಸಿ.ಎ ಕುಟ್ಟಪ್ಪಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ರಾಷ್ಟ್ರಪತಿಗಳು ಸನ್ಮಾನಿಸಿದರು. ಜತೆಗೆ ಜೀವಮಾನ ಶ್ರೇಷ್ಠ ಸಾಧನೆ, ಸಾಹಸ ಕ್ರೀಡೆಗಳಲ್ಲಿ ಮಿಂಚಿದ ಕ್ರೀಡಾಪಟುಗಳಿಗೂ ಪ್ರಶಸ್ತಿ ನೀಡಲಾಯಿತು. ಕ್ರೀಡೆಗೆ ಉನ್ನತ ಮಟ್ಟದಲ್ಲಿ ಪ್ರೋತ್ಸಾಹಿಸುತ್ತಿರುವ ಕ್ರೀಡಾ ಸಂಸ್ಥೆಗಳಿಗೂ ಪ್ರಶಸ್ತಿ ನೀಡಲಾಯಿತು.
 

click me!