ವಿಶ್ವಕಪ್ ಜಯಿಸದ ಅನ್ ಲಕ್ಕಿ ಕ್ರಿಕೆಟಿಗರಿವರು..!

By Naveen KodaseFirst Published May 28, 2019, 4:02 PM IST
Highlights

12ನೇ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ವಿಶ್ವಕಪ್ ಗೆಲ್ಲದ ಟಾಪ್ 10 ನತದೃಷ್ಟ ಆಟಗಾರರನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ಈ ಆಟಗಾರರೆಲ್ಲಾ ಒಂದು ಕಾಲಘಟ್ಟದಲ್ಲಿ ದಿಗ್ಗಜ ಆಟಗಾರರಾಗಿದ್ದರೂ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ವಿಫಲರಾಗಿದ್ದು ಮಾತ್ರ ನಿಜಕ್ಕೂ ಅಚ್ಚರಿಯೇ ಸರಿ.

ವಿಶ್ವಕಪ್ ಗೆಲ್ಲುವುದು ಎಷ್ಟು ಕಷ್ಟ ಎನ್ನುವುದನ್ನು ಸಚಿನ್ ತೆಂಡುಲ್ಕರ್ ಕೇಳಿದರೆ ಗೊತ್ತಾಗುತ್ತದೆ. ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ವಿಶ್ವಕಪ್ ಎತ್ತಿಹಿಡಿಯಲು ಬರೋಬ್ಬರಿ ಆರು ವಿಶ್ವಕಪ್ ಆಡಬೇಕಾಯಿತು. ಕೊನೆಗೂ 2011ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಸಚಿನ್ ತೆಂಡುಲ್ಕರ್ ಕನಸು ನನಸು ಮಾಡುವಲ್ಲಿ ಯಶಸ್ವಿಯಾಯಿತು.

ಕ್ರಿಕೆಟ್ ಪಾಠ ಹೇಳಿಕೊಟ್ಟ ಇಂಗ್ಲೆಂಡ್ ತಂಡಕ್ಕೆ ಇದುವರೆಗೂ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂದರೆ ಯೋಚನೆ ಮಾಡಿ. ಅದರಲ್ಲೂ ಕೆಲವು ದಿಗ್ಗಜ ಕ್ರಿಕೆಟಿಗರ ಪಾಲಿಗೆ ವಿಶ್ವಕಪ್ ಎನ್ನುವುದು ಗಗನಕುಸುಮವಾಗಿಯೇ ಉಳಿದದ್ದು ಮಾತ್ರ ವಿಪರ್ಯಾಸ.

ಇದೀಗ 12ನೇ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ವಿಶ್ವಕಪ್ ಗೆಲ್ಲದ ಟಾಪ್ 10 ನತದೃಷ್ಟ ಆಟಗಾರರನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ಈ ಆಟಗಾರರೆಲ್ಲಾ ಒಂದು ಕಾಲಘಟ್ಟದಲ್ಲಿ ದಿಗ್ಗಜ ಆಟಗಾರರಾಗಿದ್ದರೂ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ವಿಫಲರಾಗಿದ್ದು ಮಾತ್ರ ನಿಜಕ್ಕೂ ಅಚ್ಚರಿಯೇ ಸರಿ.

1. ಗ್ರಹಾಂ ಗೂಚ್:  

ಇಂಗ್ಲೆಂಡ್ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಅತ್ಯದ್ಭುತ ಕ್ರಿಕೆಟಿಗ ಗ್ರಹಾಂ ಗೂಚ್. ಮೂರು ಬಾರಿ ವಿಶ್ವಕಪ್ ಫೈನಲ್ ಆಡಿದ್ದರೂ ಒಮ್ಮೆಯೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಸಫಲರಾಗಲಿಲ್ಲ. ಅದರಲ್ಲೂ 1992ರಲ್ಲಿ ಗೂಚ್ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿ ತಂಡವನ್ನು ಪ್ರಶಸ್ತಿ ಸುತ್ತಿಗೆ ಮುನ್ನಡೆಸಿದ್ದರಾದರೂ ಕಪ್ ಗೆಲ್ಲಲು ವಿಫಲರಾದರು. 1976ರಲ್ಲಿ ಮೊದಲ ಏಕದಿನ ಪಂದ್ಯವಾಡಿದ್ದ ಗೂಚ್, ಕೊನೆಯ ಏಕದಿನ ಅಂತರಾಷ್ಟ್ರೀಯ ಪಂದ್ಯವಾಡಿದ್ದು 1995ರಲ್ಲಿ..! ಇನ್ನು ಲಿಸ್ಟ್  'ಎ' ಕ್ರಿಕೆಟ್ ನಲ್ಲಿ ಬಾರಿಸಿದ್ದು ಬರೋಬ್ಬರಿ 22,221 ರನ್. ಇಷ್ಟೆಲ್ಲಾ ಸಾಧನೆಯ ಹೊರತಾಗಿಯೂ ವಿಶ್ವಕಪ್ ಕನಸು ಗೂಚ್ ಪಾಲಿಗೆ ಕನಸಾಗಿಯೇ ಉಳಿಯಿತು.

2 ಇಯಾನ್ ಬಾಥಮ್:


ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದ ಬಾಥಮ್ 1992ರ ವಿಶ್ವಕಪ್ ವೇಳೆ ವೃತ್ತಿಜೀವನದ ಉನ್ನತ ಫಾರ್ಮ್ ನಲ್ಲಿದ್ದರು. 1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಇನ್ನು ಬ್ಯಾಟಿಂಗ್ ನಲ್ಲೂ ತಂಡದ ಅಗತ್ಯಕ್ಕೆ ತಕ್ಕಂತೆ ಅಗ್ರ ಕ್ರಮಾಂಕದಿಂದ ಕೆಳಕ್ರಮಾಂಕದವರೆಗೆ ಯಾವಾಗ ಬೇಕಾದರೂ ಬ್ಯಾಟ್ ಬೀಸುತ್ತಿದ್ದರು. ಪ್ರಾಯಶಃ ಇಯಾನ್ ಬಾಥಮ್ ಈ ಕಾಲಘಟ್ಟದಲ್ಲಿ ಕ್ರಿಕೆಟ್ ಆಡುತ್ತಿದ್ದರೆ ಬ್ಯಾಟ್ಸ್ ಮನ್ ಗಳ ದಾಖಲೆ ನಿರ್ಮಿಸಲು ಹರಸಾಹಸ ಪಡಬೇಕಾಗುತ್ತಿತ್ತು.

3 ವಖಾರ್ ಯೂನಿಸ್:

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ವೇಗಿಗಳಲ್ಲಿ ಪಾಕಿಸ್ತಾನದ ವಖಾರ್ ಯೂನಿಸ್ ಕೂಡಾ ಒಬ್ಬರು. ಆದರೆ ವಖಾರ್ ವಿಶ್ವಕಪ್ ವಿಜೇತ ತಂಡದಲ್ಲಿ ಇರಲಿಲ್ಲ ಎನ್ನುವುದು  ಅಚ್ಚರಿಯಾದರೂ ಸತ್ಯ. ಯಾಕೆಂದರೆ 1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ ಆಗಿತ್ತಾದರೂ ಗಾಯದ ಸಮಸ್ಯೆಯಿಂದಾಗಿ ವಖಾರ್ ತಂಡದಿಂದ ಹೊರಬಿದ್ದಿದ್ದರು. ಆ ಟೂರ್ನಿಯಲ್ಲಿ ಪಾಕಿಸ್ತಾನದ ಮತ್ತೋರ್ವ ವೇಗಿ ವಾಸೀಂ ಅಕ್ರಂ ಗರಿಷ್ಠ ವಿಕೆಟ್ ಕಬಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು. ತಮ್ಮ ಕರಾರುವಕ್ಕಾದ ಯಾರ್ಕರ್ ಹಾಗೂ ರಿವರ್ಸ್ ಸ್ವಿಂಗ್ ಬೌಲಿಂಗ್ ಗೆ ಹೆಸರುವಾಸಿಯಾಗಿದ್ದ ವಖಾರ್ 1999ರ ವಿಶ್ವಕಪ್ ಟೂರ್ನಿಯಲ್ಲಿ ತಂಡ ಫೈನಲ್ ಗೇರಲು ಪ್ರಮುಖ ಪಾತ್ರವಹಿಸಿದ್ದರು. ಆದರೆ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸುವುದರೊಂದಿಗೆ ಪಾಕ್ ಹಾಗೂ ವಖಾರ್ ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು.

4. ಸೌರವ್ ಗಂಗೂಲಿ:

ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಕೋಲ್ಕತಾ ಯುವರಾಜ ಸೌರವ್ ಗಂಗೂಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. 1999ರಿಂದ 2007ರವರೆಗೆ ಮೂರು ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡರು ವಿಶ್ವಕಪ್ ಗೆಲ್ಲಲು ದಾದಾಗೆ ಸಾಧ್ಯವಾಗಲಿಲ್ಲ. ಇನ್ನು 2003ರ ಏಕದಿನ ವಿಶ್ವಕಪ್ ವೇಳೆ ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತಾದರೂ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ನಿರಾಸೆ ಅನುಭವಿಸಿತು. ಇನ್ನು 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಲೀಗ್ ಹಂತದಲ್ಲೇ ಹೊರಬೀಳುವುದರೊಂದಿಗೆ ದಾದಾ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. 1999ರ ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರು ಶತಕ ಸಿಡಿಸಿದ್ದ ಗಂಗೂಲಿ ಒಟ್ಟು ವಿಶ್ವಕಪ್ ಟೂರ್ನಿಯಲ್ಲಿ 22 ಪಂದ್ಯಗಳನ್ನಾಡಿ 55.88ರ ಸರಾಸರಿಯಲ್ಲಿ 1006 ರನ್ ಬಾರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದರು.

5 ಬ್ರಿಯಾನ್ ಲಾರಾ:

 
90ರ ದಶಕದ ಅತ್ಯದ್ಭುತ ಕ್ರಿಕೆಟಿಗ ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್ ನಲ್ಲಿ ವೈಯುಕ್ತಿಕ ಗರಿಷ್ಠ ರನ್(400*) ಬಾರಿಸಿದ ಏಕೈಕ ಕ್ರಿಕೆಟಿಗ ಎನ್ನುವುದು ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೂ ಗೊತ್ತು. ಅದೇ ರೀತಿ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲೂ ಲಾರಾ ಸಾವಿರಾರು ರನ್ ಗುಡ್ಡೆಹಾಕಿದ್ದರೂ ವಿಶ್ವಕಪ್ ಎನ್ನುವುದು ಕನ್ನಡಿಯೊಳಗಿನ ಗಂಟಾಗಿಯೇ ಉಳಿಯಿತು. ವೆಸ್ಟ್ ಇಂಡೀಸ್ ಪರ 299 ಪಂದ್ಯಗಳನ್ನಾಡಿದ ಲಾರಾ 10 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದರು. ಆರಂಭದ ಎರಡು ವಿಶ್ವಕಪ್ ಗೆದ್ದು ಕ್ರಿಕೆಟ್ ಸಾಮ್ರಾಟನಾಗಿ ಮೆರೆದಾಡಿದ್ದ ಕೆರಿಬಿಯನ್ ತಂಡಕ್ಕೆ ಸಚಿನ್ ತೆಂಡುಲ್ಕರ್ ರೀತಿ ಲಾರಾಗೆ ವಿಶ್ವಕಪ್ ಗೆಲುವಿನ ವಿದಾಯ ನೀಡಲು ಯಶಸ್ವಿಯಾಗಲಿಲ್ಲ.

6 ಲ್ಯಾನ್ಸ್ ಕ್ಲೂಸ್ನರ್: 


ದಕ್ಷಿಣ ಆಫ್ರಿಕಾ ಕಂಡ ಶ್ರೇಷ್ಠ ಆಲ್ರೌಂಡರ್ ಗಳಲ್ಲಿ ಲ್ಯಾನ್ಸ್ ಕ್ಲೂಸ್ನರ್ ಕೂಡಾ ಒಬ್ಬರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಕ್ಲೂಸ್ನರ್ 1999ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡ ಸೆಮಿಫೈನಲ್ ಗೇರುವಲ್ಲಿ ಕ್ಲೂಸ್ನರ್ ಪಾತ್ರ ಅನನ್ಯವಾದದ್ದು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರಾದರೂ ವಿಶ್ವಕಪ್ ಗೆದ್ದುಕೊಡಲು ಕ್ಲೂಸ್ನರ್ ಗೆ ಸಾಧ್ಯವಾಗಲಿಲ್ಲ.

7 ಜ್ಯಾಕ್ ಕಾಲೀಸ್: 


ಲ್ಯಾನ್ ಕ್ಲೂಸ್ನರ್ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಮತ್ತೋರ್ವ ಶ್ರೇಷ್ಠ ಆಲ್ರೌಂಡರ್ ಎಂದರೆ ಅದು ಜ್ಯಾಕ್ ಕಾಲೀಸ್ ಎಂದರೆ ಅತಿಶಯೋಕ್ತಿ ಆಗಲಾರದು. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಕಾಲೀಸ್ ಹರಿಣಗಳ ಪಡೆಗೆ ಹಲವು ಸ್ಮರಣೀಯ ಗೆಲುವು ತಂದಿತ್ತಿದ್ದಾರೆ. 273 ವಿಕೆಟ್ ಹಾಗೂ 11 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದ ಕಾಲೀಸ್ ಪಾಲಿಗೆ ವಿಶ್ವಕಪ್ ಗೆಲುವು ಕನಸಾಗಿಯೇ ಉಳಿಯಿತು. 17 ಶತಕ 86 ಅರ್ಧಶತಕಗಳು ಕಾಲೀಸ್ ವೈಯುಕ್ತಿಕ ದಾಖಲೆಗಳನ್ನು ಉತ್ತಮ ಪಡಿಸಿದವೇ ಹೊರತು, ದಿಗ್ಗಜ ಆಟಗಾರರನ್ನೊಳಗೊಂಡ ಆಫ್ರಿಕಾ ತಂಡ ಚೋಕರ್ಸ್ ಪಟ್ಟ ಅಳಿಸಿಹಾಕಲು ಸಾಧ್ಯವಾಗಲಿಲ್ಲ.

8 ಕುಮಾರ ಸಂಗಕ್ಕರ: 


ಶ್ರೀಲಂಕಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಮಾರ ಸಂಗಕ್ಕರ ಏಕದಿನ ಕ್ರಿಕೆಟ್ ಕಂಡ ಶ್ರೇಷ್ಠ ಎಡಗೈ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು. ಅದರಲ್ಲೂ 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 4 ಶತಕ ಸಿಡಿಸುವ ಮೂಲಕ ಇತಿಹಾಸ ಬರೆದರಾದರು, ವಿಶ್ವಕಪ್ ವಿಜೇತ ತಂಡದಲ್ಲಿ ಸ್ಥಾನಪಡೆಯಲು ಸಾಧ್ಯವಾಗದ್ದು ಮಾತ್ರ ದುರಂತ. ವಿಕೆಟ್ ಕೀಪರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಸಂಗಾ ಪರಿಣಿತ ಬ್ಯಾಟ್ಸ್ ಮನ್ ಆಗಿ ಬದಲಾದರು. ಕ್ರಿಕೆಟ್ ಗೆ ವಿದಾಯ ಹೇಳುವ ಮುನ್ನ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಬಳಿಕ ಗರಿಷ್ಠ ರನ್ ಬಾರಿಸಿದರ ಆಟಗಾರ ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು. 2007 ಹಾಗೂ 2011ರ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ತಂಡ ಫೈನಲ್ ಪ್ರವೇಶಿಸಿತಾದರೂ ವಿಶ್ವಕಪ್ ಗೆಲ್ಲಲು ವಿಫಲವಾಗಿದ್ದು ಮಾತ್ರ ನಿಜಕ್ಕೂ ಸಂಗಕ್ಕರ ಅಭಿಮಾನಿಗಳ ಪಾಲಿಗೆ ಎಂದೆಂದು ಮರೆಯಲಾಗದ ಕಟು ಸತ್ಯವಾಗಿಯೇ ಉಳಿದಿದೆ.

9 ಎಬಿ ಡಿವಿಲಿಯರ್ಸ್: 


ಆಧುನಿಕ ಕ್ರಿಕೆಟ್ ಕಂಡ ಸೂಪರ್ ಸ್ಟಾರ್ ಕ್ರಿಕೆಟಿಗ, ಜಗತ್ತಿನಾದ್ಯಂತ ಅಸಂಖ್ಯಾತ  ಅಭಿಮಾನಿಗಳನ್ನು ಹೊಂದಿರುವ ಎಬಿ ಡಿವಿಲಿಯರ್ಸ್ ವಿಶ್ವಕಪ್ ಗೆಲ್ಲಲಿಲ್ಲ ಎನ್ನುವ ಕೊರಗು ಸ್ವತಃ ಅಭಿಮಾನಿಗಳಲ್ಲೂ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ. 
ವೆಸ್ಟ್ ಇಂಡೀಸ್ ವಿರುದ್ಧ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಎಬಿಡಿ, ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಸಫಲವಾಗಲಿಲ್ಲ. 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಕೇವಲ ಒಂದು ವರ್ಷ ಬಾಕಿಯಿದ್ದಾಗ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಶಾಕ್ ನೀಡಿದ್ದನ್ನು ಕ್ರಿಕೆಟ್ ಅಭಿಮಾನಿಗಳಿನ್ನು ಮರೆತಿಲ್ಲ.

10 ಶಾಹಿದ್ ಅಫ್ರಿದಿ: 


’ಬೂಮ್ ಬೂಮ್’ ಖ್ಯಾತಿಯ ಶಾಹಿದ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್ ಗಳಲ್ಲಿ ಒಬ್ಬರು. ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿದ್ದ ಅಫ್ರಿದಿ 1996ರಲ್ಲಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ದಾಖಲೆ ಹಲವು ವರ್ಷಗಳ ಕಾಲ ಅಫ್ರಿದಿ ಹೆಸರಿನಲ್ಲೇ ಉಳಿದಿತ್ತು. ಬರೋಬ್ಬರಿ 398 ಪಂದ್ಯಗಳನ್ನಾಡಿ ಎಂಟು ಸಾವಿರಕ್ಕೂ ಅಧಿಕ ರನ್ ಹಾಗೆಯೇ 395 ವಿಕೆಟ್ ಕಬಳಿಸಿದ್ದರು ಅಫ್ರಿದಿ ಪಾಲಿಗೆ ವಿಶ್ವಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದದ್ದು ಮಾತ್ರ ವಿಪರ್ಯಾಸ. ಅದ್ಭುತ ಆಲ್ರೌಂಡರ್ ಹಾಗೂ ಶ್ರೇಷ್ಠ ನಾಯಕತ್ವಕ್ಕೆ ಹೆಸರಾಗಿದ್ದ ಅಫ್ರಿದಿ ವಿಶ್ವಕಪ್ ಕನಸು ಮರೀಚಿಕೆಯಾಗಿಯೇ ಉಳಿಯಿತು.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...

click me!