ಕಂಠೀರವ ಕ್ರೀಡಾಂಗಣ ಇನ್ಮುಂದೆ ಅಥ್ಲೆಟಿಕ್ಸ್’ಗೆ ಮೀಸಲು..!

By Web DeskFirst Published Oct 5, 2018, 9:37 AM IST
Highlights

ಕಂಠೀರವ ಕ್ರೀಡಾಂಗಣದ ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ಪಡೆದ ಮುತ್ತಪ್ಪ ರೈ, ‘ಈವರೆಗೂ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯಲ್ಲಿ ಏನಾಗಿದೆ ಎಂದು ನಾನು ಕೇಳುವುದಿಲ್ಲ. ಆದರೆ ಇನ್ನು ಮುಂದೆ ಎಲ್ಲವೂ ಬದಲಾಗಬೇಕು. ಈ ನಿಟ್ಟಿನಲ್ಲಿ ಮೊದಲು ಕಂಠೀರವ ಕ್ರೀಡಾಂಗಣವನ್ನು ಜೆಎಸ್‌ಡಬ್ಲ್ಯುವಿನ ಹಿಡಿತದಿಂದ ಮುಕ್ತಗೊಳಿಸಿ, ಅಥ್ಲೆಟಿಕ್ಸ್‌ಗೆ ಮಾತ್ರ ಮೀಸಲಾಗಬೇಕು. ಕಂಪನಿ ಎಷ್ಟೇ ಪ್ರಭಾವಿಯಾಗಿದ್ದರೂ ಸರಿ, ಚರ್ಚಿಸಿ ಸರಿಪಡಿಸಿಕೊಳ್ಳೋಣ. ಅಗತ್ಯವೆನಿಸಿದರೆ ಕಾನೂನು ಹೋರಾಟಕ್ಕೂ ಸಿದ್ಧ. ಏನೇ ಆದರೂ ರಾಜ್ಯದ ಅಥ್ಲೀಟ್‌ಗಳಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ’ ಎಂದರು. 

ಬೆಂಗಳೂರು[ಅ.05]: ಕಂಠೀರವ ಕಿತ್ತಾಟಕ್ಕೆ ತೆರೆ ಬೀಳುವ ದಿನಗಳು ಹತ್ತಿರದಲ್ಲಿವೆ ಎನಿಸುತ್ತಿದೆ. ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ) ಮಾಲೀಕರಾದ ಜೆಎಸ್‌ಡಬ್ಲ್ಯು ಸಂಸ್ಥೆಯಿಂದ ಕ್ರೀಡಾಂಗಣವನ್ನು ಮುಕ್ತಗೊಳಿಸಿ, ಕೇವಲ ಅಥ್ಲೆಟಿಕ್ಸ್‌ಗೆ ಮೀಸಲುಗೊಳಿಸುವ ಭರವಸೆಯನ್ನು ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆ (ಕೆಎಎ) ನೂತನ ಅಧ್ಯಕ್ಷ ಮುತ್ತಪ್ಪ ರೈ ನೀಡಿದ್ದಾರೆ.

ಗುರುವಾರ, ಕಂಠೀರವ ಕ್ರೀಡಾಂಗಣದ ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ಪಡೆದ ಮುತ್ತಪ್ಪ ರೈ, ‘ಈವರೆಗೂ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯಲ್ಲಿ ಏನಾಗಿದೆ ಎಂದು ನಾನು ಕೇಳುವುದಿಲ್ಲ. ಆದರೆ ಇನ್ನು ಮುಂದೆ ಎಲ್ಲವೂ ಬದಲಾಗಬೇಕು. ಈ ನಿಟ್ಟಿನಲ್ಲಿ ಮೊದಲು ಕಂಠೀರವ ಕ್ರೀಡಾಂಗಣವನ್ನು ಜೆಎಸ್‌ಡಬ್ಲ್ಯುವಿನ ಹಿಡಿತದಿಂದ ಮುಕ್ತಗೊಳಿಸಿ, ಅಥ್ಲೆಟಿಕ್ಸ್‌ಗೆ ಮಾತ್ರ ಮೀಸಲಾಗಬೇಕು. ಕಂಪನಿ ಎಷ್ಟೇ ಪ್ರಭಾವಿಯಾಗಿದ್ದರೂ ಸರಿ, ಚರ್ಚಿಸಿ ಸರಿಪಡಿಸಿಕೊಳ್ಳೋಣ. ಅಗತ್ಯವೆನಿಸಿದರೆ ಕಾನೂನು ಹೋರಾಟಕ್ಕೂ ಸಿದ್ಧ. ಏನೇ ಆದರೂ ರಾಜ್ಯದ ಅಥ್ಲೀಟ್‌ಗಳಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ’ ಎಂದರು. ಮುತ್ತಪ್ಪ ರೈ, ಕ್ರೀಡಾಂಗಣದ ಪರಿಶೀಲನೆ ವೇಳೆ ಅಭ್ಯಾಸದಲ್ಲಿ ನಿರತರಾಗಿದ್ದ ಹಲವು ಅಥ್ಲೀಟ್‌ಗಳನ್ನು ಭೇಟಿಯಾದರು.

2017ರಲ್ಲೇ ಒಪ್ಪಂದ ಮುಕ್ತಾಯ!: ‘ಜೆಎಸ್‌ಡಬ್ಲ್ಯು, 4 ವರ್ಷಗಳ ಹಿಂದೆ ತನ್ನ ಒಡೆತನದ ಫುಟ್ಬಾಲ್‌ ತಂಡದ ಅಭ್ಯಾಸ ಮತ್ತು ಪಂದ್ಯಗಳಿಗಾಗಿ ಸರ್ಕಾರದೊಂದಿಗೆ ಕಂಠೀರವ ಕ್ರೀಡಾಂಗಣವನ್ನು ಬಾಡಿಗೆಗೆ ಪಡೆದು ಒಪ್ಪಂದ ಮಾಡಿಕೊಂಡಿತ್ತು. ಆ ಒಪ್ಪಂದ 2017, ಜುಲೈ 13ರಂದೇ ಮುಕ್ತಾಯಗೊಂಡಿದೆ. ಆದರೂ ತನ್ನ ಪ್ರಭಾವದ ಬಲದಿಂದ ಕಂಠೀರವ ಕ್ರೀಡಾಂಗಣದಲ್ಲಿ ತನ್ನ ಚಟುವಟಿಕೆ ಮುಂದುವರಿಸಿದೆ. ಇದರಿಂದಾಗಿ ನಮ್ಮ ರಾಜ್ಯದ ಅಥ್ಲೀಟ್‌ಗಳಿಗೆ ಅಭ್ಯಾಸ ನಡೆಸಲು ತೊಂದರೆಯಾಗುತ್ತಿದೆ’ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡ ಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅಥ್ಲೀಟ್‌ಗಳಲ್ಲಿ ಮೂಡಿದ ಭರವಸೆ: ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಬಹುತೇಕ ಹಾಳಾಗಿದ್ದು, ಅಭ್ಯಾಸ ನಡೆಸಲು ಕಷ್ಟವಾಗುತ್ತಿದೆ ಎಂಬುದು ಅಥ್ಲೀಟ್‌ಗಳ ಗೋಳು. ‘ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗಿದ್ದು, ಓಡುವುದಕ್ಕೆ ಕಷ್ಟವಾಗುತ್ತಿದೆ. ಮೊದಲು ಸಿಂಥೆಟಿಕ್‌ ಟ್ರ್ಯಾಕ್‌ ನವೀಕರಣಗೊಳ್ಳಬೇಕು. ಜತೆಗೆ ಜಿಮ್‌ ಕೂಡ ಇಲ್ಲ. ಇದರಿಂದಾಗಿ ಅಥ್ಲೀಟ್‌ಗಳ ಫಿಟ್ನೆಸ್‌ ತರಬೇತಿಗೆ ತೊಂದರೆಯಾಗುತ್ತಿದೆ’ ಎಂದು ಅಥ್ಲೀಟ್‌ವೊಬ್ಬರು ಹೇಳಿದರು. ‘ನ್ಯಾಯಾಲಯದ ಆದೇಶ ಮೀರಿ ಮೈದಾನದೊಳಗೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇದರಿಂದ ಶಾಟ್‌ಪುಟ್‌, ಹ್ಯಾಮರ್‌ ಥ್ರೋ, ಜಾವೆಲಿನ್‌ ಥ್ರೋ ಅಥ್ಲೀಟ್‌ಗಳ ಅಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಫುಟ್ಬಾಲ್‌ನಿಂದಾಗಿ ಅಥ್ಲೀಟ್‌ಗಳಿಗೆ ತೊಂದರೆಯಾಗುತ್ತಿದೆ’ ಎಂದು ಅರ್ಜುನ ಪ್ರಶಸ್ತಿ ವಿಜೇತ ಮಾಜಿ ಅಥ್ಲೀಟ್‌, ಹಾಲಿ ಕೋಚ್‌ ಒಬ್ಬರು ಬೇಸರ ವ್ಯಕ್ತಪಡಿಸಿದರು.

ವರದಿ: ಮಲ್ಲಪ್ಪ.ಸಿ.ಪಾರೇಗಾಂವ, ಕನ್ನಡಪ್ರಭ

click me!