ಶುರುವಾಗಿದೆ ಕುದುರೆ ರೇಸ್! ಡರ್ಬಿ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ

By Web DeskFirst Published Jul 21, 2019, 12:15 PM IST
Highlights

ಪತ್ರಿಕೆಗಳಲ್ಲಿ ಡರ್ಬಿ ಮುಂತಾದ ಕುದುರೆ ರೇಸುಗಳ ಸಮಾಚಾರ ಬರುತ್ತಿರುತ್ತದೆ. ಕುದುರೆ ಬಾಲಕ್ಕೆ ದುಡ್ಡು ಕಟ್ಟಿಸೋತ ಅಂತ ಮಾತಾಡುತ್ತಾರೆ. ಕುದುರೆ ಪಂಚಾಂಗ ಹಿಡಕೊಂಡು ರೇಸ್‌ ಕೋರ್ಸ್‌ ರಸ್ತೆಯಲ್ಲಿ ಅಲೆದಾಡುವವರನ್ನು ನೋಡಿರುತ್ತೀರಿ. ಲಂಕೇಶ್‌, ವೈಯನ್ಕೆ, ಅಂಬರೀಷ್‌ ಮುಂತಾದವರು ರೇಸುಕುಳಗಳೆಂದು ಓದಿದ್ದೇವೆ. ಅಷ್ಟಕ್ಕೂ ಮತ್ತೊಬ್ಬರ ಕಾಸಿಗಾಗಿ ಓಡುವ ಕುದುರೆಗಳನ್ನು ಹೇಗೆ ರೇಸಿಗೆ ಸಿದ್ಧಮಾಡುತ್ತಾರೆ ಗೊತ್ತೇ? ಇಂದು ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕಿಂಗ್‌ ಫಿಶರ್‌ ಆಲ್ಟ್ರಾ ಡರ್ಬಿ 2019 ನಡೆಯುತ್ತಿರುವ ಹೊತ್ತಲ್ಲಿ ಆ ಕುರಿತು ಮಾಹಿತಿ. ಕಿಂಗ್‌ಫಿಷರ್‌ ಡರ್ಬಿ ಅಂದರೆ ಕ್ರಿಕೆಟ್ಟಿನಲ್ಲಿ ಐಪಿಎಲ್‌ ಇದ್ದಂತೆ!

ಕೆಂಡಪ್ರದಿ

ಸದ್ಯದ ರಾಜ್ಯ ರಾಜಕಾರಣದಲ್ಲಿ ಕುದುರೆ ವ್ಯಾಪಾರ ಅನ್ನೋ ಪದ ನಿತ್ಯ ಬಳಕೆಯಲ್ಲಿದೆ. ಇಂತಿಪ್ಪ ದಿನಗಳಲ್ಲಿಯೇ ಇಂದು (ಜುಲೈ 21ರಂದು) ಬೆಂಗಳೂರು ಟಫ್‌ರ್‍ ಕ್ಲಬ್‌ ಈ ವರ್ಷದ ಕಿಂಗ್‌ಫಿಶರ್‌ ಆಲ್ಟಾ್ರ ಡರ್ಬಿ 2019ಕ್ಕೆ ಸರ್ವ ರೀತಿಯಲ್ಲಿಯೂ ತಯಾರಿ ಮಾಡಿ ಮುಗಿಸಿದೆ. ದೇಶದ ವಿವಿಧ ಭಾಗಗಳಿಂದ ಓಡುವ ಕುದುರೆಗಳು ಬೆಂಗಳೂರಿಗೆ ಬಂದಿಳಿದು ನಿತ್ಯವೂ ಎರಡು ಬಾರಿ ತಾಲೀಮು ನಡೆಸುತ್ತಿವೆ. ಜಾಕಿಗಳು ಮೈ ಕೈ ಗಟ್ಟಿಮಾಡಿಕೊಂಡು, ಆರೋಗ್ಯದ ಕಡೆಗೆ ಗಮನ ನೀಡಿ ಮೆಗಾ ಫೈಟ್‌ಗೆ ಸಜ್ಜಾಗುತ್ತಿದ್ದಾರೆ.

ಓಡುವ ಕುದುರೆಗೆ ಇಲ್ಲಿ ಎಲ್ಲಿಲ್ಲದ ಡಿಮ್ಯಾಂಡ್‌. ರಾಜ ಮರ್ಯಾದೆ. ಮೈ ಒರೆಸಲು ಒಬ್ಬ, ಕಾಲು ಒರೆಸಲು ಒಬ್ಬ, ಮೇವು ನೀಡಲು ಮತ್ತೊಬ್ಬ ಹೀಗೆ ಹೆಜ್ಜೆ ಹೆಜ್ಜೆಗೂ ಕುದುರೆಗಳನ್ನು ನೋಡಿಕೊಳ್ಳಲು ಜನರಿದ್ದಾರೆ. ಒಂದು ಸಣ್ಣ ಧೂಳಿನ ಕಣವೂ ಮೈ ಮೇಲೆ ಕೂರದ ಹಾಗೆ, ಕಣ್ಣಿನಲ್ಲಿ ಒಂದು ತೊಟ್ಟು ನೀರು ಬಂದರೂ ಅದನ್ನು ತಕ್ಷಣವೇ ಒರೆಸಿ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ನಿತ್ಯ ಎರಡು ಬಾರಿ ತಾಲೀಮು

ಬೆಳಿಗ್ಗೆ ಎರಡು ಗಂಟೆಗಳ ಕಾಲ, ಸಂಜೆ ಎರಡು ಗಂಟೆಗಳ ಕಾಲ ಕುದುರೆಗಳಿಗೆ ತಾಲೀಮಿನ ಸಮಯ. ಬೆಳಿಗ್ಗೆ ಸುಮಾರು 7 ಗಂಟೆಗೆ ಲಾಯಗಳಿಂದ ಹೊರ ಬಂದವಾದರೆ 2000 ಮೀ. ಉದ್ದದ ಟ್ರ್ಯಾಕ್‌ನಲ್ಲಿ ಓಡಲು ಶುರು ಮಾಡುತ್ತವೆ. ಓಡುವುದು ಎಂದರೆ ಏಕ ಪ್ರಕಾರವಾಗಿ ಅಲ್ಲ. ಅದಕ್ಕೆ ಬದಲಾಗಿ ವಿವಿಧ ವೇಗ, ಬೇರೆ ಬೇರೆ ರೀತಿಯಲ್ಲಿ ಭಂಗಿಗಳಲ್ಲಿ ಓಡಿಸಲಾಗುತ್ತದೆ. ಹೀಗೆ ಎರಡು ಗಂಟೆಗಳ ಕಾಲ ಬೆವರು ಇಳಿಸಿದ ನಂತರ ಸೀದಾ ಕುದುರೆಗಳನ್ನು ಕರೆದುಕೊಂಡು ಹೋಗುವುದು ಸ್ವಿಮ್ಮಿಂಗ್‌ ಪೂಲ್‌ ಕಡೆಗೆ. ಬೆಳಗಿನ ತಾಲೀಮು ಮುಗಿದ ಮೇಲೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಕನಿಷ್ಟಹದಿನೈದು ನಿಮಿಷ ಈಜಲು ಬಿಡುತ್ತಾರೆ. ಮೈ ಮೇಲಿನ ಬೆವರು ಇಳಿಯಬೇಕು, ಕೂತಿರುವ ಧೂಳು ಕರಗಿ ಹೋಗಬೇಕು, ಆದ ಆಯಾಸ ನಿವಾರಣೆಯಾಗಬೇಕು, ಕಾಲಿನ ಗೊರಸಿನಲ್ಲಿ ಸೇರಿಕೊಂಡ ಮರಳಿನ ಕಣಗಳು ಉದುರಿಹೋಗಬೇಕು ಎನ್ನುವುದು ಇದರ ಹಿಂದಿನ ಮುಖ್ಯ ಉದ್ದೇಶ.

ಇದಿಷ್ಟೂಮುಗಿದ ಮೇಲೆ ಕುದುರೆಗಳ ಇಡೀ ಮೈಯನ್ನೆಲ್ಲಾ ಒರೆಸಲಾಗುತ್ತದೆ. ಅಲ್ಲಿಗೆ ಒಂದು ರೌಂಡ್‌ ತಾಲೀಮು ಮತ್ತು ಸ್ನಾನ ಮುಗಿದ ಹಾಗೆ. ಅಲ್ಲಿಂದ ನೇರವಾಗಿ ಲಾಯಕ್ಕೆ ಹೆಜ್ಜೆ. ಅದಕ್ಕೂ ಮೊದಲು ಅಗತ್ಯವಿರುವ ಕುದುರೆಗಳಿಗೆ ವೈದ್ಯಾಧಿಕಾರಿ ಸಲಹೆಯ ಮೇರೆಗೆ ವಿವಿಧ ರೀತಿಯ ಡೋಸ್‌ಗಳನ್ನು ಕೊಡುವ ಪ್ರಕ್ರಿಯೆಯೂ ಇರುತ್ತದೆ.

ಮೂರು ಹೊತ್ತು ಊಟ, ಕುಡಿಯುವಷ್ಟುನೀರು

ಬೆಳಿಗ್ಗೆ ತಾಲೀಮು ಮುಗಿಸಿ ಬಂದ ಕುದುರೆಗಳಿಗೆ ಓಟ್ಸ್‌, ಕ್ಯಾರೆಟ್‌, ಸೇಬು, ಜೇನುತುಪ್ಪ, ತರಕಾರಿ, ಸೊಪ್ಪುಗಳು ಇದರ ಜೊತೆಗೆ ವೈದ್ಯರು ಸಲಹೆ ಮಾಡಿದ ಆಹಾರಗಳ ಪೂರೈಕೆಯಾಗುತ್ತದೆ. ಇದು ದಿನದಲ್ಲಿ ಮೂರು ಟೈಂ. ಇನ್ನು ಕುದುರೆಯ ಮುಂದೆ ಯಾವಾಗಲೂ ನೀರು ಇದ್ದ ಹಾಗೆ. ಲಾಯದಲ್ಲಿ ಯಾವಾಗಲೂ ಒಂದು ಪದರ ಮೆದುವಾದ ಹೊಣ ಹುಲ್ಲಿನ ಹಾಸು ಇದ್ದೇ ಇರುತ್ತದೆ. ಇದನ್ನು ದಿನಕ್ಕೆ ಎರಡು ಬಾರಿಯಾದರೂ ಬದಲಾಯಿಸುತ್ತಾರೆ. ಯಾಕೆಂದರೆ ಓಡುವ ಕುದುರೆಯ ಅತೀ ಸೂಕ್ಷ್ಮ ಅಂಗ ಎಂದರೆ ಅದು ಪಾದ. ಗೊರಸು ಸವೆಯಬಾರದು ಎನ್ನುವ ಕಾರಣಕ್ಕೆ ಅಲ್ಲಿಗೆ ಲಾಳವನ್ನು ಬಡಿದಿರುತ್ತಾರೆ. ಗೊರಸು ಮತ್ತು ಲಾಳದ ಸಂದಿಯಲ್ಲಿ ಮರಳಿನ ಕಣಗಳು, ಸಣ್ಣ ಸಣ್ಣ ಕಲ್ಲುಗಳು, ಲದ್ದಿ ಸೇರಿಕೊಂಡು ಹೆಚ್ಚು ಸಮಯ ಅಲ್ಲಿ ಉಳಿದುಬಿಟ್ಟರೆ ಅದು ಕುದುರೆಯ ಓಟದ ಜೀವನಕ್ಕೆ ಕುತ್ತು ತಂದೊಡ್ಡುವ ಅಪಾಯ ಇರುತ್ತದೆ. ಸಣ್ಣ ಕಲ್ಲು ಅಥವಾ ಮರಳಿನ ಕಣ ಕುದುರೆ ವೇಗವಾಗಿ ಓಡುವಾಗ ಚುಚ್ಚಲು ಶುರು ಮಾಡಿದವು ಎಂದಾದರೆ ಅಲ್ಲಿಗೆ ಕತೆ ಮುಗಿದ ಹಾಗೆಯೇ. ಅದಕ್ಕಾಗಿಯೇ ಕುದುರೆಯ ಕಾಲಿನ ಬಗ್ಗೆ ತುಂಬಾ ಕಾಳಜಿ.

ದಿನಕ್ಕೆ ಒಂದು ಸಾವಿರ ಖರ್ಚು

‘ಒಂದು ಕುದುರೆ ನೋಡಿಕೊಳ್ಳಲು ತಿಂಗಳಿಗೆ ಏನಿಲ್ಲವೆಂದರೂ ಮೂವತ್ತು ಸಾವಿರ ಖರ್ಚು ಬೇಕೇ ಬೇಕು. ಕೆಲವು ಕುದುರೆಗಳು ಮತ್ತೂ ವಿಶೇಷವಾದ ಆರೈಕೆ ಬೇಡುತ್ತವೆ. ಅದಕ್ಕೆ ಇನ್ನಷ್ಟುಖರ್ಚಾಗುವ ಸಾಧ್ಯತೆಯೂ ಇರುತ್ತದೆ. ನಿತ್ಯವೂ ವೈದ್ಯಕೀಯ ಪರೀಕ್ಷೆ, ಅವುಗಳನ್ನು ನೋಡಿಕೊಳ್ಳಲು ಆಳುಗಳು ಸದಾ ಇರಲೇಬೇಕು. ಮೊದಲೆಲ್ಲಾ ಜಾಕಿ, ಕುದುರೆಯನ್ನು ನೋಡಿಕೊಳ್ಳುವ ಕೆಲಸದಾಳು ತಾವಾಗಿಯೇ ಸಿದ್ಧಪಡಿಸಿದ ಆಹಾರಗಳನ್ನು ಕೊಡುತ್ತಿದ್ದರು. ಆದರೆ ಇಂದು ಮಾರುಕಟ್ಟೆಯಲ್ಲಿ ರೆಡಿಮೇಡ್‌ ಫುಡ್‌ಗಳು ಬಂದಿವೆ. ಅವುಗಳ ಬಳಕೆಯೇ ಇಂದು ಹೆಚ್ಚಾಗಿದೆ. ಹಾಗಾಗಿ ಇಂದು ಖರ್ಚಿನ ಪ್ರಮಾಣವೂ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಹೆಸರು ಹೇಳಲು ಬಯಸದ ಅಧಿಕಾರಿ.

ಊಟ ಸ್ವಾದಿಷ್ಟ, ನಿದ್ದೆ ಅದರಿಷ್ಟ

ನಾವು ನೆಮ್ಮದಿಯಾಗಿ ನಿದ್ದೆ ಮಾಡಿ, ಒಳ್ಳೆಯ ಊಟ ಮಾಡಿದರೆ ಎಷ್ಟುಉಲ್ಲಾಸಿತವಾಗಿರುತ್ತೆವೆಯೋ ಅಷ್ಟೇ ಉಲ್ಲಾಸಿತವಾಗಿ ಕುದುರೆಗಳೂ ಇರುತ್ತವೆ. ಸಮಯಕ್ಕೆ ಸರಿಯಾಗಿ ಒಳ್ಳೆಯ ಆಹಾರ ನೀಡಿದರೆ, ಕುದುರೆ ಕಟ್ಟುವ ಜಾಗವನ್ನು ತುಂಬಾ ಅಚ್ಚುಕಟ್ಟಾಗಿ ಇಟ್ಟುಕೊಂಡು ಅವು ಚೆನ್ನಾಗಿ ನಿದ್ದೆ ಮಾಡುವಂತೆ ನೋಡಿಕೊಂಡರೆ ಸಾಕು. ಎಂತಹ ಕುದುರೆಯೂ ತನ್ನ ಶಕ್ತಿ ಮೀರಿ ಓಡಲು ಸಾಧ್ಯವಾಗುತ್ತದೆ.

ಜಾಕಿಯೂ ಮುಖ್ಯ

ಓಡುವ ಕುದುರೆಯ ಜೊತೆಗೆ ಜಾಕಿಯೂ ತುಂಬಾ ಮುಖ್ಯರು. ಅವರ ಅನುಭವ, ಸಮಯಪ್ರಜ್ಞೆ, ಕುದುರೆಯ ಬಗ್ಗೆ ಅವರು ತಿಳಿದುಕೊಂಡಿರುವ ರೀತಿಯೂ ಗೆಲುವಿನಲ್ಲಿ ಸಹಾಯಕ. ಇದಕ್ಕಾಗಿಯೇ ಜಾಕಿಗಳು ತಿಂಗಳು ಗಟ್ಟಲೆ ಅಭ್ಯಾಸ ಮಾಡುತ್ತಾರೆ. ನಿಯಮಿತವಾಗಿ ಅವರೂ ಜಿಮ್‌, ವಿವಿಧ ರೀತಿಯ ತರಬೇತಿಗಳಿಗೆ ಒಳಗಾಗುತ್ತಾರೆ.

ದಶ ಕುದುರೆಗಳ ದಶಾವರ!

ಈ ವರ್ಷದ ಕಿಂಗ್‌ ಫಿಶರ್‌ ಆಲ್ಟಾ್ರ ಡರ್ಬಿಯಲ್ಲಿ ಹತ್ತು ಕುದುರೆಗಳು ಓಡುತ್ತವೆ. ದೇಶದ ವಿವಿಧ ಭಾಗಗಳಿಂದ ಬಂದಿದ್ದ ಕುದುರೆಗಳಲ್ಲಿ ಹಲವಾರು ರೀತಿಯ ಪರೀಕ್ಷೆಗಳನ್ನು ನಡೆಸಿದ್ದು ಅವುಗಳಲ್ಲಿ ಕಡೆಯ ಹಂತಕ್ಕೆ ಹತ್ತು ಕುದುರೆಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಯಾವುದು ವಿಜಯಶಾಲಿಯಾಗಲಿದೆ ಎನ್ನುವುದು ಇಂದು ನಿರ್ಧಾರವಾಗಲಿದೆ. ಗೆದ್ದ ಕುದುರೆಗೆ ಕೋಟಿ ಕೋಟಿ ರುಪಾಯಿ ಲೆಕ್ಕದಲ್ಲಿ ಬಹುಮಾನ. ಇನ್ನು ಕುದುರೆಗಳ ಬಾಲಕ್ಕೆ ಹಣ ಕಟ್ಟಲು ಬರುವವರು, ರೇಸ್‌ ನೋಡಲು ಬರುವವರ ಸಂಖ್ಯೆ ಸುಮಾರು ಹದಿನೈದು ಸಾವಿರದಷ್ಟುಆಗಬಹುದು ಎನ್ನುವ ಲೆಕ್ಕಾಚಾರ ಇಟ್ಟುಕೊಂಡಿದೆ ಬೆಂಗಳೂರು ಟಫ್‌ರ್‍ ಕ್ಲಬ್‌.

click me!