'ಕೂತು ಮಾತಾಡೋದು ಸುಲಭ..': ನಗುನಗುತ್ತಲೇ ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ

By Naveen Kodase  |  First Published Apr 29, 2024, 4:43 PM IST

ವಿರಾಟ್ ಕೊಹ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಭಾನುವಾರ ಗುಜರಾತ್ ಟೈಟಾನ್ಸ್ ಎದುರು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲೂ ಕೊಹ್ಲಿ ಕೇವಲ 44 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಈ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ನಗುನಗುತ್ತಲೇ ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.


ಅಹಮದಾಬಾದ್(ಏ.29): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ ಚರ್ಚೆಯ ಪ್ರಮುಖ ವಿಷಯವಾಗಿದೆ. ವಿರಾಟ್ ಕೊಹ್ಲಿ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ವಿರಾಟ್ ಕೊಹ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಭಾನುವಾರ ಗುಜರಾತ್ ಟೈಟಾನ್ಸ್ ಎದುರು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲೂ ಕೊಹ್ಲಿ ಕೇವಲ 44 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಈ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ನಗುನಗುತ್ತಲೇ ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

"ಸಾಕಷ್ಟು ಮಂದಿ ನನ್ನ ಸ್ಟ್ರೈಕ್‌ರೇಟ್‌ ಬಗ್ಗೆ ಹಾಗೂ ನಾನು ಸ್ಪಿನ್ನರ್‌ಗಳ ವಿರುದ್ದ ಚೆನ್ನಾಗಿ ಆಡಲ್ಲ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ನನ್ನ ಗುರಿ ನನ್ನ ತಂಡದ ಗೆಲುವಿಗಾಗಿ ಆಡಬೇಕು ಅಂದುಕೊಂಡಿದ್ದೇನೆ. ಈ ಕಾರಣಕ್ಕಾಗಿಯೇ ನಾನು ಕಳೆದ 15 ವರ್ಷಗಳಿಂದ ತಂಡದಲ್ಲಿದ್ದೇನೆ. ಮೈದಾನದಲ್ಲಿ ಆಡುವವರಿಗೆ ಪಂದ್ಯ ಪರಿಸ್ಥಿತಿ ಏನು ಎನ್ನುವುದರ ಅರಿವಿರುತ್ತದೆಯೇ ಹೊರತು ಕಾಮೆಂಟರಿ ಬಾಕ್ಸ್‌ನಲ್ಲಿ ಕೂತು ಹರಟುವವರಿಗಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

500 runs 71 average 148 strike rate. People can talk about dot balls and strike rate. Kohli is an undisputed king. https://t.co/aar5ACj6bZ

— Prasanna (@prasannalara)

Tap to resize

Latest Videos

ವಾರ್ನರ್‌ ದಾಖಲೆ ಸರಿಗಟ್ಟಿದ ವಿರಾಟ್‌

ಕೊಹ್ಲಿ ಈ ಐಪಿಎಲ್‌ನಲ್ಲಿ 500 ರನ್‌ ಪೂರ್ಣಗೊಳಿಸಿದರು. ಈ ಮೂಲಕ ಅತಿ ಹೆಚ್ಚು ಆವೃತ್ತಿಗಳಲ್ಲಿ 500+ ರನ್‌ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಡೇವಿಡ್‌ ವಾರ್ನರ್‌ರನ್ನು ಸರಿಗಟ್ಟಿದರು. ಇವರಿಬ್ಬರೂ ತಲಾ 7 ಆವೃತ್ತಿಗಳಲ್ಲಿ 500+ ರನ್‌ ಸಿಡಿಸಿದ್ದಾರೆ. ಶಿಖರ್‌ ಧವನ್‌ ಹಾಗೂ ಕೆ.ಎಲ್‌.ರಾಹುಲ್‌ ತಲಾ 5 ಬಾರಿ ಈ ಸಾಧನೆ ಮಾಡಿದ್ದಾರೆ. 

24ನೇ ಫಿಫ್ಟಿ: ಐಪಿಎಲ್‌ನಲ್ಲಿ ಚೇಸಿಂಗ್‌ ವೇಳೆ ಕೊಹ್ಲಿ 24ನೇ ಅರ್ಧಶತಕ ಬಾರಿಸಿದರು. ಪಟ್ಟಿಯಲ್ಲಿ ಡೇವಿಡ್‌ ವಾರ್ನರ್‌(35) ಮೊದಲ ಸ್ಥಾನದಲ್ಲಿದ್ದಾರೆ.

ಜ್ಯಾಕ್ಸ್‌ ಸಿಕ್ಸರ್‌ ಮಳೆಯಲ್ಲಿ ಮುಳುಗಿದ ಟೈಟಾನ್ಸ್‌!

ಅಹಮದಾಬಾದ್‌: ಸತತ ಸೋಲುಗಳಿಂದ ಕಂಗೆಟ್ಟು ಪ್ಲೇ-ಆಫ್‌ ಹಾದಿಯಿಂದ ಒಂದು ಕಾಲು ಹೊರಗಿಟ್ಟಿರುವ ಆರ್‌ಸಿಬಿ ಈಗ ಫೀನಿಕ್ಸ್‌ನಂತೆ ಎದ್ದು ಬರುತ್ತಿದ್ದು, ತನ್ನ ಅತ್ಯಾಕರ್ಷಕ ಆಟದ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸುತ್ತಿದೆ.

ವಿಲ್‌ ಜ್ಯಾಕ್ಸ್‌ರ ಸಿಕ್ಸರ್‌ ಸುರಿಮಳೆ, ರನ್‌ ಮೆಷಿನ್‌ ಕೊಹ್ಲಿಯ ಆರ್ಭಟದ ಮೂಲಕ ಭಾನುವಾರ ಗುಜರಾತ್‌ ಟೈಟಾನ್ಸ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಆರ್‌ಸಿಬಿ 9 ವಿಕೆಟ್‌ಗಳಿಂದ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿದೆ.

ಆರ್‌ಸಿಬಿ 10ರಲ್ಲಿ 3ನೇ ಗೆಲುವು ದಾಖಲಿಸಿದರೂ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದ್ದು, ಗುಜರಾತ್‌ 10ರಲ್ಲಿ 6ನೇ ಸೋಲುಂಡು ಪ್ಲೇ-ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತು.

ಗುಜರಾತನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಆರ್‌ಸಿಬಿ, ಮತ್ತೆ ಕಳಪೆ ಬೌಲಿಂಗ್‌ ಮಾಡಿ 3 ವಿಕೆಟ್‌ಗೆ 200 ರನ್‌ ಬಿಟ್ಟುಕೊಟ್ಟಿತು. ಎಂತೆಂಥಾ ದಾಖಲೆಗಳಿಗೆ ಸಾಕ್ಷಿಯಾದ ಈ ಐಪಿಎಲ್‌ನಲ್ಲಿ ಈ ಮೊತ್ತ ಕಡಿಮೆಯೇ. ಅದನ್ನು ಆರ್‌ಸಿಬಿ ತನ್ನ ಬ್ಯಾಟಿಂಗ್ ಶೈಲಿಯ ಮೂಲಕ ಮತ್ತೆ ಸಾಬೀತುಪಡಿಸಿತು.

12 ಎಸೆತದಲ್ಲಿ 24 ರನ್‌ ಗಳಿಸಿ ನಾಯಕ ಡು ಪ್ಲೆಸಿ ಪೆವಿಲಿಯನ್‌ಗೆ ಮರಳಿದರೂ, ಬಳಿಕ ಶುರುವಾಗಿದ್ದ ಕೊಹ್ಲಿ-ಜ್ಯಾಕ್ಸ್‌ ಶೋ. ಟೈಟಾನ್ಸ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮುರಿಯದ 2ನೇ ವಿಕೆಟ್‌ಗೆ 74 ಎಸೆತದಲ್ಲಿ 166 ರನ್‌ ಸಿಡಿಸಿತು. ಅದರಲ್ಲೂ ಕೊನೆಯಲ್ಲಿ ಜ್ಯಾಕ್ಸ್‌ರ ಆಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮೊದಲ 17 ಎಸೆತದಲ್ಲಿ 17 ರನ್‌ ಸಿಡಿಸಿದ್ದ ಜ್ಯಾಕ್ಸ್‌, 31 ಎಸೆತದಲ್ಲಿ ಅರ್ಧಶತಕ ಗಳಿಸಿದರು.

ಆದರೆ ಬಳಿಕ ಸೆಂಚುರಿ ಪೂರ್ಣಗೊಳಿಸಲು ಕೇವಲ 10 ಎಸೆತ ತೆಗೆದುಕೊಂಡರು. 15 ಮತ್ತು 16ನೇ ಓವರಲ್ಲಿ ತಲಾ 28 ರನ್‌ ಚಚ್ಚಿದ ಜ್ಯಾಕ್ಸ್‌ 41 ಎಸೆತದಲ್ಲಿ 5 ಬೌಂಡರಿ, 10 ಸಿಕ್ಸರ್‌ನೊಂದಿಗೆ 100 ರನ್‌ ಬಾರಿಸಿದರು. ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟಿದ್ದ ವಿರಾಟ್‌ 44 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 70 ರನ್‌ ಸಿಡಿಸಿ ಔಟಾಗದೆ ಉಳಿದರು.
 

click me!