ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ ಆರಂಭ

By Web DeskFirst Published Nov 12, 2018, 1:08 PM IST
Highlights

6 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿ ನ.17ರಂದು ಕೊನೆಗೊಳ್ಳಲಿದೆ. ಟೂರ್ನಿಗೆ ಹಾಲಿ ಸಿಂಗಲ್ಸ್‌ ಚಾಂಪಿಯನ್‌ ಭಾರತದ ಸುಮಿತ್‌ ನಗಾಲ್‌ಗೆ ವೈಲ್ಡ್‌ ಕಾರ್ಡ್‌ ಸಿಕ್ಕಿದೆ. ಜತಗೆ ಭಾರತದ ಅಗ್ರ ಟೆನಿಸ್‌ ಆಟಗಾರರಾದ ಸಾಕೇತ್‌ ಮೈನೇನಿ, ಜೀವನ್‌ ನೆಡುಂಚಿಯನ್‌, ಎನ್‌. ಶ್ರೀರಾಮ್‌ ಬಾಲಾಜಿ, ವಿಷ್ಣುವರ್ಧನ್‌, ಪ್ರಜ್ನೇಶ್‌ ಗುಣೇಶ್ವರನ್‌, ಅರ್ಜುನ್‌ ಖಾಡೆ ಮತ್ತು ಕರ್ನಾಟಕದ ಯುವ ಸಿಂಗಲ್ಸ್‌ ಟೆನಿಸಿಗ ಸೂರಜ್‌ ಪ್ರಬೋದ್‌ ಪಾಲ್ಗೊಳ್ಳಲಿದ್ದಾರೆ. 

ಬೆಂಗಳೂರು(ನ.12): ಬೆಂಗಳೂರು ಟೆನಿಸ್‌ ಪ್ರಿಯರಿಗೆ ಇಂದಿನಿಂದ ವಿಶ್ವದ ಕೆಲ ಪ್ರತಿಭಾನ್ವಿತ ಟೆನಿಸಿಗರನ್ನು ನೋಡುವ ಅವಕಾಶ ಸಿಗಲಿದೆ. ಇಲ್ಲಿನ ಕಬ್ಬನ್‌ ಪಾರ್ಕ್ ಆವರಣದಲ್ಲಿರುವ ಕರ್ನಾಟಕ ರಾಜ್ಯ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಮೈದಾನದಲ್ಲಿ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ ಆರಂಭವಾಗಲಿದೆ. ಕ್ರೀಡಾ ಸಚಿವರೂ ಆಗಿರುವ ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಹಾಗೂ ಗ್ರಾಂಡ್‌ಸ್ಲಾಂ ವಿಜೇತ ಟೆನಿಸಿಗ ರೋಹನ್‌ ಬೋಪಣ್ಣ ಟೂರ್ನಿಗೆ ಚಾಲನೆ ನೀಡಲಿದ್ದಾರೆ.

6 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿ ನ.17ರಂದು ಕೊನೆಗೊಳ್ಳಲಿದೆ. ಟೂರ್ನಿಗೆ ಹಾಲಿ ಸಿಂಗಲ್ಸ್‌ ಚಾಂಪಿಯನ್‌ ಭಾರತದ ಸುಮಿತ್‌ ನಗಾಲ್‌ಗೆ ವೈಲ್ಡ್‌ ಕಾರ್ಡ್‌ ಸಿಕ್ಕಿದೆ. ಜತಗೆ ಭಾರತದ ಅಗ್ರ ಟೆನಿಸ್‌ ಆಟಗಾರರಾದ ಸಾಕೇತ್‌ ಮೈನೇನಿ, ಜೀವನ್‌ ನೆಡುಂಚಿಯನ್‌, ಎನ್‌. ಶ್ರೀರಾಮ್‌ ಬಾಲಾಜಿ, ವಿಷ್ಣುವರ್ಧನ್‌, ಪ್ರಜ್ನೇಶ್‌ ಗುಣೇಶ್ವರನ್‌, ಅರ್ಜುನ್‌ ಖಾಡೆ ಮತ್ತು ಕರ್ನಾಟಕದ ಯುವ ಸಿಂಗಲ್ಸ್‌ ಟೆನಿಸಿಗ ಸೂರಜ್‌ ಪ್ರಬೋದ್‌ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ಮಾಲ್ಡೋವಾದ ಆಲ್ಬೋಟ್‌ ರಡು(ಅಗ್ರ ಶ್ರೇಯಾಂಕಿತ) ಬ್ರಿಟನ್‌ನ ಜೇ ಕ್ಲಾರ್ಕ್, ಸ್ವೀಡನ್‌ನ ಎಲಿಯಾಸ್‌ ಯೆಮೆರ್‌, ಕೆನಡಾದ ಫಿಲಿಪ್‌ ಪೆಲಿವೋ, ಫ್ರಾನ್ಸ್‌ನ ಕ್ವಿಂಟಿನ್‌ ಹೇಲ್ಸ್‌ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ಪುರುಷರ ಸಿಂಗಲ್ಸ್‌ ಹಾಗೂ ಪುರುಷರ ಡಬಲ್ಸ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಸಿಂಗಲ್ಸ್‌ ವಿಭಾಗದಲ್ಲಿ ಅಂತಿಮ 16, ಡಬಲ್ಸ್‌ ವಿಭಾಗದಲ್ಲಿ ಅಂತಿಮ 8ರ ಸುತ್ತಿನೊಂದಿಗೆ ಸ್ಪರ್ಧೆ ನಡೆಯಲಿದೆ. ಅಂತಿಮ ಅರ್ಹತಾ ಸುತ್ತಿನ ಪಂದ್ಯಗಳು ಸೋಮವಾರ ಬೆಳಗ್ಗೆ ಕೂಡ ನಡೆಯಲಿದೆ. ಪಂದ್ಯಾವಳಿಯ ಒಟ್ಟು ಪ್ರಶಸ್ತಿ ಮೊತ್ತ 150000 ಅಮೆರಿಕನ್‌ ಡಾಲರ್‌(1.08 ಕೋಟಿ ರುಪಾಯಿ)ಯಾಗಿದ್ದು ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಆಟಗಾರನಿಗೆ 125 ರೇಟಿಂಗ್‌ ಅಂಕದ ಜತೆ 15.5 ಲಕ್ಷ ರುಪಾಯಿ, ರನ್ನರ್‌-ಅಪ್‌ಗೆ 75 ರೇಟಿಂಗ್‌ ಅಂಕಗಳ ಜತೆ .9.15 ಲಕ್ಷ ಬಹುಮಾನ ಮೊತ್ತ ಸಿಗಲಿದೆ.

ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಜೋಡಿಗೆ 125 ರೇಟಿಂಗ್‌ ಅಂಕಗಳೊಂದಿಗೆ 6.69 ಲಕ್ಷ ರುಪಾಯಿ, ರನ್ನರ್‌-ಅಪ್‌ ಆಗುವ ಜೋಡಿಗೆ 75 ರೇಟಿಂಗ್‌ ಅಂಕಗಳ ಜತೆ 3.38 ಲಕ್ಷ ರುಪಾಯಿ ಬಹುಮಾನ ಮೊತ್ತ ಸಿಗಲಿದೆ.

click me!