ಪ್ಯಾರಿಸ್ ಒಲಿಂಪಿಕ್ಸ್‌ಗೆ ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್ ಟಿಕೆಟ್ ಕನ್ಫರ್ಮ್
2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆ
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದು ಈ ಸಾಧನೆ ಮಾಡಿದರು
ಬ್ಯಾಂಕಾಕ್(ಜು.16): ಭಾರತದ ತಾರಾ ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಮೊದಲ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶನಿವಾರ ಇಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದು ಈ ಸಾಧನೆ ಮಾಡಿದರು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ 24 ವರ್ಷದ ಶ್ರೀಶಂಕರ್ 8.37 ಮೀ. ದೂರಕ್ಕೆ ಜಿಗಿದು 2ನೇ ಸ್ಥಾನಿಯಾದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 8.27 ಮೀ. ದೂರ ಜಿಗಿಯಬೇಕಿತ್ತು. ಮೊದಲ 4 ಸರಿಯಾದ ಪ್ರಯತ್ನಗಳಲ್ಲಿ ಕ್ರಮವಾಗಿ 8.10 ಮೀ., 8.12 ಮೀ., 8.11 ಮೀ. ಹಾಗೂ 8.13 ಮೀ. ದೂರ ಜಿಗಿದ ಅವರು ಕೊನೆ ಪ್ರಯತ್ನದಲ್ಲಿ 8.37 ಮೀ. ದೂರ ದಾಖಲಿಸಿದರು. ಚೈನಿಸ್ ತೈಪೆಯ ಯು ತಾಂಗ್ ಲಿನ್ 8.40 ಮೀ. ದೂರ ಜಿಗಿದು ಚಿನ್ನ ಗೆದ್ದರು.
6ನೇ ಚಿನ್ನ ಗೆದ್ದ ಭಾರತ
ಭಾರತದ ಅಥ್ಲೀಟ್‌ಗಳು ಶನಿವಾರ ಚಿನ್ನ ಸೇರಿ 5 ಪದಕ ಗೆದ್ದಿದ್ದು, ದೇಶದ ಒಟ್ಟು ಪದಕ ಗಳಿಕೆ 14ಕ್ಕೆ ಏರಿಕೆಯಾಗಿದೆ. ಇದರಲ್ಲಿ 6 ಚಿನ್ನವೂ ಸೇರಿದೆ. 4*400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ರಾಜೇಶ್, ಐರ್ಶರ್ಯಾ ಮಿಶ್ರಾ, ಅಮೊಲ್ ಜಾಕೊಬ್, ಶುಭಾ ಅವರನ್ನೊಳಗೊಂಡ ತಂಡ 3 ನಿಮಿಷ 14.70 ಸೆಕೆಂಡ್‌ಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಜಯಿಸಿತು.
Wimbledon 2023: ಮಾರ್ಕೆಟಾ ವೊಂಡ್ರೊಸೋವಾ ವಿಂಬಲ್ಡನ್ ರಾಣಿ!
ಪುರುಷರ ಹೈ ಜಂಪ್‌ನಲ್ಲಿ ಸರ್ವೇಶ್ ಕುಶಾರೆ 2.26ಮೀ. ಎತ್ತರಕ್ಕೆ ನೆಗೆದು ಬೆಳ್ಳಿ ಗೆದ್ದರೆ, ಮಹಿಳೆಯರ ಹೆಪ್ಟಥ್ಲಾನ್‌ನಲ್ಲಿ 5840 ಅಂಕಗಳೊಂದಿಗೆ ಸ್ವಪ್ನಾ ಬರ್ಮನ್ ಕೂಡಾ ಬೆಳ್ಳಿ ಜಯಿಸಿದರು. ಇದು ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ ಸ್ವಪ್ನಾಗೆ ಸತತ 3ನೇ ಪದಕ. ಇನ್ನು, ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಸಂತೋಷ್ ಕುಮಾರ್ 49.09 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕಂಚು ಜಯಿಸಿದರು.
ಸಿಗ್ನಲ್ ಜಂಪ್ ಮಾಡಿದ ಮೆಸ್ಸಿ ಅಪಘಾತದಿಂದ ಪಾರು
ಮಿಯಾಮಿ(ಅಮೆರಿಕ): ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಪರಿಣಾಮ ಸಂಭವಿಸಬಹುದಾಗಿದ್ದ ಕಾರು ಅಪಘಾತದಿಂದ ಅರ್ಜೆಂಟೀನಾದ ದಿಗ್ಗಜ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಪಾರಾಗಿದ್ದಾರೆ. ಅಮೆರಿಕದ ಮೇಜರ್ ಸಾಕರ್ ಲೀಗ್‌ನ ಇಂಟರ್ ಮಿಯಾಮಿ ತಂಡದ ಪರ ಇನ್ನಷ್ಟೇ ಪಾದಾರ್ಪಣೆ ಮಾಡಬೇಕಿರುವ ಮೆಸ್ಸಿ, ಮಿಯಾಮಿಯಲ್ಲಿ ಕಾರು ಚಲಾಯಿಸುತ್ತಿದ್ದಾಗ ಸಿಗ್ನಲ್ ಜಂಪ್ ಮಾಡಿದ್ದಾರೆ. ಹೀಗಾಗಿ ಮತ್ತೊಂದು ಕಡೆಯಿಂದ ಬರುತ್ತಿದ್ದ ಕಾರು ಮೆಸ್ಸಿಯ ಕಾರಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳಿತ್ತಾದರೂ, ಕೂದಲೆಳೆ ಅಂತರದಲ್ಲಿ ಅಪಘಾತ ತಪ್ಪಿದೆ. ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
'ನಾನು ಈವರೆಗೂ ಮಾಡಿದ ಅತ್ಯಂತ ಮುಜುಗರದ ಸಂಗತಿ..' ತಾಯಿಗೆ ಮುಖ ತೋರಿಸಲು ನಾಚಿಕೆ ಪಟ್ಟಿದ್ದೇಕೆ ದ್ರಾವಿಡ್!
ಈ ಬಾರಿಯೂ ಏಷ್ಯಾಡ್‌ಗಿಲ್ಲ ಭಾರತ ಫುಟ್ಬಾಲ್ ತಂಡ!
ನವದೆಹಲಿ: ಭಾರತ ಫುಟ್ಬಾಲ್ ತಂಡ (Indian Football Team) ಕಳೆದ ಬಾರಿಯಂತೆ ಈ ಸಲವೂ ಏಷ್ಯನ್ ಗೇಮ್ಸ್‌ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಗೇಮ್ಸ್‌ನಲ್ಲಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಶನ್(ಎಎಫ್‌ಸಿ) ಅಡಿಯಲ್ಲಿ ಬರುವ ಅಗ್ರ-8 ತಂಡಗಳು ಪಾಲ್ಗೊಳ್ಳಬಹುದು. ಆದರೆ ಭಾರತ ಸದ್ಯ ಎಎಫ್‌ಸಿ ರ್‍ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತಕ್ಕೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲ. ತನಗೆ ಅವಕಾಶ ಕಲ್ಪಿಸುವಂತೆ ಎಎಫ್‌ಸಿಗೆ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಭಾರತ 1951ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿ ಹಾಗೂ 1962ರಲ್ಲಿ ಚಿನ್ನದ ಪದಕ ಗೆದ್ದಿತ್ತು.