ಕಾಸರವಳ್ಳಿ ವರ್ಸಸ್ ಕಾಸರವಳ್ಳಿ, ಸಿನಿಮಾ ಜಗತ್ತಿನ ಕುರಿತ ಮಾಹಿತಿಯ ಕೃತಿ 'ಬಿಂಬ-ಬಿಂಬನ'

By Kannadaprabha News  |  First Published Mar 17, 2024, 12:09 PM IST

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಸಿನಿಮಾ ಜಗತ್ತಿನ ಕುರಿತ ಮಾಹಿತಿ, ಒಳನೋಟ ಹೊಂದಿರುವ ಕೃತಿ ಬಿಂಬ-ಬಿಂಬನ. ಮಾರ್ಚ್‌ 24ರಂದು ಬಿಡುಗಡೆಯಾಗಲಿರುವ ಈ ವಿಶಿಷ್ಟ ಕೃತಿಯ ಒಂದು ಅಧ್ಯಾಯ.


ಕಳೆದ ಅರ್ಧ ಶತಮಾನದ ಗಿರೀಶರ ಚಿತ್ರಯಾನದಲ್ಲಿ ಸಾಕ್ಷ್ಯಚಿತ್ರ, ಟೆಲಿಫಿಲ್ಮ್, ಟಿವಿ ಸೀರಿಯಲ್‌ಗಳಲ್ಲದೆ ಅವರು 14 ಪೂರ್ಣ ಪ್ರಮಾಣದ ಕಥಾಚಿತ್ರಗಳನ್ನೂ 2 ಕಿರುಚಿತ್ರಗಳನ್ನೂ ಮಾಡಿದ್ದಾರೆ. ಚಿತ್ರ ನಿರ್ದೇಶನವನ್ನು ಕೈಗೆತ್ತಿಕೊಳ್ಳುವಾಗ ಅವರು ಮಾಡುವ ತಯಾರಿ ಗಮನಿಸುವಂಥದ್ದು. ಕತೆಯನ್ನು ಆರಿಸಿದ ನಂತರ ಆ ಕತೆಯಲ್ಲಿ ಒಂದು ಧ್ವನಿ ಇದ್ದರೆ ಅವರು ಅದಕ್ಕೆ ಹಲವು ಧ್ವನಿಗಳನ್ನು ಜೋಡಿಸಿ ಸ್ವರೂಪನ್ನೇ ಬದಲಿಸಿ ಹೊಸ ಅರ್ಥ, ಹೊಸ ವ್ಯಾಖ್ಯಾನವನ್ನು ಹೊಳೆಯಿಸುತ್ತಾರೆ. ಯಥಾಪ್ರತಿ ಮಾಡುವುದಾದರೆ ಚಿತ್ರವನ್ನೇಕೆ ಮಾಡಬೇಕು, ಕತೆಯೇ ಇದೆಯಲ್ಲ ಎಂದವರು ಹೇಳುತ್ತಾರೆ.

ಉದಾಹರಣೆಗೆ ಗುಲಾಬಿ ಟಾಕೀಸ್ ಚಿತ್ರದ ಮೂಲ ಕತೆಯಲ್ಲಿ ಚಿತ್ರಮಂದಿರ ಮುಖ್ಯ ಪಾತ್ರ ವಹಿಸುತ್ತದೆ, ಆದರೆ ಗಿರೀಶರ ಚಿತ್ರದಲ್ಲಿ ಅವರು ಟಿವಿ ತರುತ್ತಾರೆ. ಕೆಲವೊಮ್ಮೆ ಚಿತ್ರಕ್ಕೆ ಅವರು ಕತೆಯ ಶೀರ್ಷಿಕೆಯನ್ನೇ ಬದಲಾಯಿಸುತ್ತಾರೆ (ಹಸೀನ, ಕನಸೆಂಬೋ ಕುದುರೆಯನೇರಿ). ತಮ್ಮ ಮೂಲಕತೆಯಿಂದ ಮಾಡಿದ ಬದಲಾವಣೆಯನ್ನು ತೀರಾ ಮೆಚ್ಚಿದ್ದೆಂದರೆ ಅನಂತಮೂರ್ತಿಯವರು (ಘಟಶ್ರಾದ್ಧ). ಗಿರೀಶರ ‘ಶೂಟಿಂಗ್ ಸ್ಕ್ರಿಪ್ಟ್’ ಓದಿದರೆ ಶೂಟ್ ಮಾಡುವಾಗ ಅವರ ಉಪಸ್ಥಿತಿಯ ಅಗತ್ಯವೇ ಇಲ್ಲ ಎಂದು ಚಿತ್ರತಂಡದವರೊಬ್ಬರು ಹೇಳಿದ್ದರಂತೆ! ಚಿತ್ರದ ಕತೆಯ ಆಯ್ಕೆಯ ಬಗ್ಗೆ ಇರುವಷ್ಟೇ ಆಳವಾದ ಮುತುವರ್ಜಿ ಅವರಿಗೆ ಚಿತ್ರದ ಇತರ ಅಂಶಗಳ ಬಗ್ಗೆಯೂ ಇರುತ್ತದೆ.

Latest Videos

undefined

ಔತ್ತಮ್ಯದ ಗೀಳಿನಲ್ಲಿ

ಈ ನಿಟ್ಟಿನಲ್ಲಿ ಅವರ ಎಲ್ಲಾ ಕಥಾಚಿತ್ರಗಳನ್ನು, ಒಂದು ಕಿರುಚಿತ್ರವನ್ನು ಮತ್ತು ಒಂದು ಟೆಲಿಫಿಲ್ಮ್‌ ಅನ್ನು ಕುರಿತು ಮಂಥನ ಮಾಡುವ, ದಾಖಲಿಸುವ ಹೆಜ್ಜೆಯಲ್ಲಿ ಈ ಪುಸ್ತಕ ರೂಪಿತವಾಗಿದೆ. ಬಿಂಬ ಬಿಂಬನದಲ್ಲಿ ಗಿರೀಶ್ ಕಾಸರವಳ್ಳಿ ತಮ್ಮ ಚಿತ್ರಗಳ ಸಂಯೋಜನೆಯ ಕುರಿತು ಗೋಪಾಲಕೃಷ್ಣ ಪೈ ಅವರಿಗೆ ನೀಡಿದ ಕೆಲವು ಉತ್ತರಗಳು ಇಲ್ಲಿವೆ.

ಪೈ: ನಿಮ್ಮ ದೃಶ್ಯ ಸಂಯೋಜನೆಯಲ್ಲಿ ಪಾತ್ರಗಳ ನಿರ್ಗಮನ, ಪ್ರವೇಶ ಅಂತ ಇರುವುದಿಲ್ಲ. ದೃಶ್ಯ ಆರಂಭವಾಗುವಾಗಲೇ ಚಿತ್ರ ಚೌಕಟ್ಟಿನಲ್ಲಿ ಪಾತ್ರಗಳು ಇರುವಂತೆ ದೃಶ್ಯ ಸಂಯೋಜನೆ ಇರುತ್ತವೆ.

ಗಿರೀಶ್: ನೀವು ಹೇಳುವಂತಹ ನಿರ್ಗಮನ ಮತ್ತು ಪ್ರವೇಶ 70ರ ದಶಕದಲ್ಲಿ ಹೊಸ ಅಲೆ ಹಣೆಪಟ್ಟಿ ಕಟ್ಟಿಕೊಂಡು ಬಂದ ಕನ್ನಡ ಚಿತ್ರಗಳಲ್ಲಿ ಕಾಣಬಹುದಿತ್ತು. ಆದರೆ ಆ ಕಾಲದ ಜನಪ್ರಿಯ ಚಿತ್ರಗಳ ದೃಶ್ಯ ಬದಲಾವಣೆ ತಂತ್ರಗಳಲ್ಲಿ ವೈವಿಧ್ಯ ಇತ್ತು, ಹೊಸತನ ಇರುತ್ತಿತ್ತು. ಇವತ್ತಿನ ಜನಪ್ರಿಯ ಚಿತ್ರಗಳಲ್ಲಿ ಹೊಸ ರೀತಿಯ ವಿನ್ಯಾಸಗಳಿವೆ. ಸುಲಲಿತವಲ್ಲದ ಛೇದ (Jerky Cut) ಇವತ್ತಿನ ನುಡಿಗಟ್ಟು (idiom) ಆಗಿದೆ.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಪಾತ್ರದ ನಿರ್ಗಮನ ಮತ್ತು ಪ್ರವೇಶ ಪ್ರೊಸೀನಿಯಂ ಥಿಯೇಟರ್‌ನಲ್ಲಿ ಅನಿವಾರ್ಯವಾಗಿದ್ದ ತಂತ್ರ, ಸಿನಿಮಾಕ್ಕೆ ಅಗತ್ಯವಿಲ್ಲ. ಹಾಗಾಗಿ ಒಂದು ವಿವರದಿಂದಲೋ, ಚಲನೆಯಿಂದಲೋ, ಬಿಂಬವನ್ನು ಲಂಘನ ಮಾಡಿಯೋ ದೃಶ್ಯ ಆರಂಭಿಸುತ್ತೇನೆ. ಆದರೆ ಚಿತ್ರದ ಸಂವಿಧಾನದ ಬಗ್ಗೆ ಎಚ್ಚರವಿರುವ ಕೆಲವು ನಿರ್ದೇಶಕರು ನಿರ್ಗಮನ ಮತ್ತು ಪ್ರವೇಶವನ್ನು ಉದ್ದೇಶಪೂರ್ವಕವಾಗಿಯೇ ಇಟ್ಟುಕೊಳ್ಳುತ್ತಾರೆ. ಚಿತ್ರಶೈಲಿಯನ್ನು ಗಮನಿಸಿದಾಗಷ್ಟೇ ಅದು ಉದ್ದೇಶಪೂರ್ವಕವೋ ಅಥವಾ ಮಾಧ್ಯಮದ ಸಾಧ್ಯತೆಗಳ ಅರಿವಿಲ್ಲದೆ ಹುಟ್ಟಿದ್ದೋ ಗೊತ್ತಾಗುತ್ತದೆ.

ಪೈ: ಹಳೇ ಮೈಸೂರಿನ ದಕ್ಷಿಣ ಭಾಗದಲ್ಲಿ ಮುಖ್ಯವಾದ ಕಸುಬು ಎಂದರೆ ರೇಷ್ಮೆ ಹುಳು ಸಾಕಾಣಿಕೆ. ಆದರೆ ಕರ್ನಾಟಕದ ಈ ಭಾಗದ ಕತೆಯುಳ್ಳ ಎಷ್ಟೋ ಸಿನಿಮಾಗಳಲ್ಲಿ ಅದರ ಪ್ರಸ್ತಾಪವಾಗಲೀ, ದೃಶ್ಯಗಳಲ್ಲಿ ಅದರ ಅಳವಡಿಕೆಯಾಗಲೀ ಇಲ್ಲ. ಈ ಚಿತ್ರದಲ್ಲಿ ರಾಜಣ್ಣನ ರೇಷ್ಮೆ ಹುಳದ ಸಾಕಾಣಿಕೆ ಕೇವಲ ಹೊರಾವರಣ ಸೃಷ್ಟಿಗಾಗಿ ಮಾತ್ರ ಬಳಕೆಯಾಗಿಲ್ಲ. ಅದಕ್ಕೊಂದು ವ್ಯಂಗ್ಯಾರ್ಥವೂ ಮೂಡಿದೆ. ರಾಜಣ್ಣ ಹುಳದ ಕೋಣೆಯಲ್ಲೇ ರಂಗಜ್ಜಿಯ ಬಿಡಾರದ ವ್ಯವಸ್ಥೆ ಮಾಡುತ್ತಾನಲ್ಲ!

ಗಿರೀಶ್: ಹೌದು. ಸಿನಿಮಾಗಳಲ್ಲಿ ಆವರಣ ಕಟ್ಟುವಾಗ ಆ ಪ್ರದೇಶಕ್ಕೆ ಸಹಜವಾದ ವಿವರಗಳನ್ನು ಹುಡುಕಲೇ ಬೇಕಾಗುತ್ತದೆ. ಅದು ಕೇವಲ ಪಾತ್ರಗಳ ಉಡುಪು, ವೃತ್ತಿ, ಮನೆ ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ. ಅಂತಹ ಸಮಂಜಸವಾದ ವಿವರ ಸಿಕ್ಕಾಗ ಪಾತ್ರಧಾರಿಗಳಿಗೆ ಆಂಗಿಕಾಭಿನಯಕ್ಕೂ ಅನುವು ಮಾಡಿಕೊಟ್ಟು ಅಭಿನಯಕ್ಕೆ ಸಹಜತೆ ತರಲು ಸಹಕಾರಿಯಾಗುತ್ತದೆ. ಮೂಲ ಕಥೆಯಲ್ಲಿ ಈ ವಿವರವಿಲ್ಲ. ಆದರೆ ದೃಶ್ಯ ಭಾಷೆಯಲ್ಲಿ ಇದು ಪರಿಣಾಮಕಾರಿಯಾಗಿ ಬರುತ್ತದೆ ಎಂದು ರಾಜಣ್ಣನಿಗೆ ರೇಷ್ಮೆಹುಳು ಸಾಕುವ ವೃತ್ತಿ ನೀಡಿದೆ. ರಾಜಣ್ಣ ಹುಳ ಸಾಯಿಸಿ ದುಡ್ಡು ಮಾಡಿಕೊಳ್ಳುತ್ತಾನೆ ಎಂದು ವ್ಯಂಗ್ಯವಾಡುವ ರಂಗಜ್ಜಿಯನ್ನು ಉದ್ದೇಶ ಪೂರ್ವಕವಾಗಿ ರಾಜಣ್ಣ ಚಂದ್ರಿಕೆ ಇಡುವ ಕೋಣೆಯಲ್ಲೇ ಉಳಿಸುತ್ತಾನೆ. ಸೊಪ್ಪು ತಿನ್ನುವ ಹುಳಗಳ ಚರಪರ ಶಬ್ದ ಕೇಳಿಸಿ ಕೊಳ್ಳುತ್ತಾ ದಿನ, ರಾತ್ರಿ ಕಳೆಯ ಬೇಕಾದ ರಂಗಜ್ಜಿಗೆ ಇದು ಅಸಹನೀಯ, ಆದರೆ ಅನಿವಾರ್ಯ. ಇದು ಕ್ರೌರ್ಯದ ಪರಮಾವಧಿ.

ಪೈ: ಕಾದಂಬರಿಗೆ ದ್ವೀಪ ಅನ್ನುವ ಶೀರ್ಷಿಕೆಗೆ ಹೆಚ್ಚಿನ ಅರ್ಥಗಳಿಲ್ಲ. ಆಕರ್ಷಕವೂ ಅಲ್ಲ. ಕಾದಂಬರಿಯ ಕಥನದಲ್ಲಿ ನೀವು ಅನೇಕ ಬದಲಾವಣೆಗಳನ್ನು ಮಾಡಿ ಚಿತ್ರ ಮಾಡಿದ್ದೀರಿ. ಆದರೆ ಅದನ್ನು ಬದಲಾಯಿಸದೇ ಯಾಕೆ ಇಟ್ಟುಕೊಂಡಿರಿ?

ಗಿರೀಶ್: ಕೃತಿಯೊಂದು ತನ್ನ ಒಡಲೊಳಗಿಂದ ಹುಟ್ಟಿಸುವ ಅರ್ಥಸಾಧ್ಯತೆಗಳು ಅನೇಕ ವೇಳೆ ಕೃತಿಕಾರನನ್ನೇ ಬೆರಗುಗೊಳಿಸುತ್ತದೆ ಎನ್ನುವ ಹೇಳಿಕೆಯೊಂದಿದೆ. ‘ದ್ವೀಪ’ದ ಚಿತ್ರಕಥೆ ಬರೆಯುತ್ತಿದ್ದಾಗ ನನಗೆ ಅಂತಹ ಅನೇಕ ಅನುಭವಗಳಾಗಿವೆ. ಚಿತ್ರಕಥೆಯನ್ನು ಬರೆಯುವ ಮೊದಲು ದ್ವೀಪ ಎಂಬ ಶೀರ್ಷಿಕೆ ಕೇವಲ ಒಂದು ಭೌಗೋಳಿಕ ತಾಣವನ್ನು ಮಾತ್ರ ಹೇಳುತ್ತಿದೆ ಎನ್ನಿಸಿತ್ತು. ಚಿತ್ರಕಥೆ ಬರೆಯುತ್ತಾ ಹೋದಂತೆ ಕಥಾಹಂದರಕ್ಕೆ ಇನ್ನೊಂದೆರಡು ಘಟನೆಗಳನ್ನು ಸೇರಿಸಿದರೆ ಮನುಷ್ಯ ಸ್ಥಿತಿಯ ಬಗೆಗಿನ ವ್ಯಾಖ್ಯಾನವಾಗಬಹುದೆನ್ನಿಸಿ ಹೊಸತೇ ಆದ ವಿನ್ಯಾಸ ಗರಿಗೆದರತೊಡಗಿತು.

ಇಡೀ ಚಿತ್ರಕ್ಕೆ ‘ತಲೆ ಕೆಳಗಾದ ಪಿರಾಮಿಡ್’ ((inverted pyramid) ವಿನ್ಯಾಸ ಕೊಟ್ಟರೆ ಯಾವ ಮನುಷ್ಯ ದ್ವೀಪ ಅಲ್ಲ ಎನ್ನುವ ಹೇಳಿಕೆಯನ್ನೇ ಪ್ರಶ್ನಿಸಿ ಎಲ್ಲ ಮನುಷ್ಯರೂ ಒಂದೊಂದು ದ್ವೀಪ ಎನ್ನುವ ವ್ಯಂಗ್ಯಾರ್ಥವನ್ನು ಹೊಳೆಯಿಸಬಹುದು ಎನ್ನಿಸಿತು. ಚಿತ್ರದ ಆರಂಭದಲ್ಲಿ ಡ್ಯಾಂನ ನೀರು ಏರುತ್ತಾ ಬಂದಂತೆ ಒಂದು ಹಳ್ಳಿ ದ್ವೀಪವಾಗುತ್ತದೆ. ಕ್ರಮೇಣ ಒಬ್ಬೊಬ್ಬರೇ ಊರು ಬಿಡತೊಡಗಿದಾಗ ಒಂದು ಕುಟುಂಬ ಮಾತ್ರ ಉಳಿಯುತ್ತದೆ, ದ್ವೀಪವಾಗಿ. ಕತೆ ಮುಂದುವರಿದಂತೆ ಆ ನಾಲ್ಕು ಜನರ ಕುಟುಂಬದಲ್ಲಿ ದುಗ್ಗಜ್ಜ ಸತ್ತು, ಮೂರು ಜನರ ಕುಟುಂಬವಾಗುತ್ತದೆ. ಆನಂತರ ಕೃಷ್ಣನೂ ಹೊರಟು ಹೋದಾಗ ಗಂಡ ಹೆಂಡತಿಯರಿಬ್ಬರೇ ದ್ವೀಪವಾಗಿ ಉಳಿಯುತ್ತಾರೆ. ಕೊನೆಯಲ್ಲಿ ಏರುತ್ತಿರುವ ನೀರಿನಿಂದ ರಾತ್ರಿಯೆಲ್ಲಾ ಕೆಲಸ ಮಾಡಿ ಮನೆ ಉಳಿಸಿಕೊಳ್ಳುವ ನಾಗಿಯ ಪ್ರಯತ್ನವನ್ನೂ ಪರಿಗಣಿಸದ ಗಂಡ ಅದು ದೈವದ ಮಹಿಮೆ ಎಂದು ಹೇಳಿ ಹೊರಟುಹೋದಾಗ ನಾಗಿ ಗುಡ್ಡದ ಮೇಲಿನ ಮಂಟಪದಲ್ಲಿ ಒಂಟಿಯಾಗಿ ಕುಳಿತುಕೊಳ್ಳುತ್ತಾಳೆ. ಈಗ ದ್ವೀಪವಾಗುವುದು ನಾಗಿ. ಒಂದು ಭೂ ಪ್ರದೇಶದ ಮುಳುಗಡೆಯನ್ನು ಸೂಚಿಸುವ ಆ ಶೀರ್ಷಿಕೆ ಕ್ರಮೇಣ ತನ್ನ ಹರವನ್ನು ಚಿಕ್ಕದು ಮಾಡಿಕೊಳ್ಳುತ್ತಾ ಗಂಡ ಹೆಂಡತಿಯರ ಸಂಬಂಧದಲ್ಲಿ ಹೆಂಗಸು ಹೇಗೆ ದ್ವೀಪವಾಗಿ ಉಳಿಯುತ್ತಾಳೆ ಎಂದು ಚಿತ್ರಿಸುತ್ತದೆ. ಚಿತ್ರದ ತಲೆಕೆಳಗಾದ ಪಿರಮಿಡ್ ಸ್ಟ್ರಕ್ಚರ್ ಸಾಮಾಜಿಕ ರಾಜಕೀಯದ ಜೊತೆಗೇ ಕುಟುಂಬದ ಒಳಗಿನ ರಾಜಕಾರಣವನ್ನೂ ಹೊರ ತರುತ್ತದೆ.

ಬಿಂಬ-ಬಿಂಬನ (ಕಾಸರವಳ್ಳಿ ಚಿತ್ರಗಳ ಸಂಕಥನ)

ಗೋಪಾಲಕೃಷ್ಣ ಪೈ, ಗಿರೀಶ್ ಕಾಸರವಳ್ಳಿ

ಪ್ರ: ವೀರಲೋಕ ಬುಕ್ಸ್, ಬೆಂಗಳೂರು

ಮೊ: 7022122121

click me!