ಓಟಿಟಿ ನಿಜಕ್ಕೂ ಚಿತ್ರರಂಗಕ್ಕೆ ನೆರವಾಗುತ್ತಾ?

By Kannadaprabha NewsFirst Published May 25, 2020, 1:38 PM IST
Highlights

ಕ್ಯೂಬ್‌ ಎಂಬ ಉಪಗ್ರಹದ ನೆರವಿನಿಂದ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ತೋರಿಸುವ ವ್ಯವಸ್ಥೆ ಬಂದ ಆರಂಭದ ದಿನಗಳಲ್ಲಿ ಚಿತ್ರರಂಗ ‘ಪ್ರಿಂಟ್‌ ಹಾಕುವ ಖರ್ಚು ಮತ್ತು ಹಂಚಿಕೆದಾರರ ಹಿಡಿತ’ದಿಂದ ಪಾರಾದೆ ಅಂದುಕೊಂಡಿತು. ಆದರೆ ಈಗ ಕ್ಯೂಬ್‌ ಕೂಡ ಉಸಿರುಗಟ್ಟಿಸುತ್ತಿದೆ ಅನ್ನುತ್ತಿದ್ದಾರೆ. ಹಾಗೆಯೇ, ಓಟಿಟಿ ಬರುತ್ತಿದ್ದಂತೆ ಎಲ್ಲವೂ ಬದಲಾಗುತ್ತದೆ ಎಂಬ ನಂಬಿಕೆಯಲ್ಲಿದೆ ಚಿತ್ರರಂಗ. ನಿಜಕ್ಕೂ ಹಾಗಾಗುತ್ತದಾ? ಇಲ್ಲಿದೆ ಒಂದು ಗ್ರೌಂಡ್‌ ರಿಪೋರ್ಟ್‌.

ಆರ್‌. ಕೇಶವಮೂರ್ತಿ

ಜಗತ್ತಿನಲ್ಲಿರುವ ಒಟ್ಟಾರೆ ಓಟಿಟಿ ಪ್ಲಾಟ್‌ಫಾರ್ಮುಗಳು 300ಕ್ಕೂ ಹೆಚ್ಚು. ಭಾರತದಲ್ಲೇ ಸುಮಾರು 53 ಓಟಿಟಿ ವೇದಿಕೆಗಳಿದ್ದಾವೆ. ಸುಮಾರು 53 ಕೋಟಿ ಮಂದಿಯ ಮನರಂಜನೆಯ ಮೂಲ ವಿಶ್ವಾದ್ಯಂತ ಇರುವ ಓಟಿಟಿ ಪರದೆಗಳೇ. ಲಾಕ್‌ಡೌನಿನಿಂದಾಗಿ ಈ ಓಟಿಟಿಗಳ ಪ್ರಾಬಲ್ಯ ಹೆಚ್ಚುತ್ತದೆ ಎಂಬುದು ಒಂದು ವಾದ. ಹಿಂದೆ ಡಿವಿಡಿ, ವಿಡಿಯೋ ಪ್ಲೇಯರ್‌ ಬಂದಾಗ ಥೇಟರುಗಳಿಗೇನೂ ಆಗಲಿಲ್ಲ, ಈಗಲೂ ಆಗುವುದಿಲ್ಲ ಎಂಬುದು ಮತ್ತೊಂದು ವಾದ.

ಮಲ್ಟಿಪ್ಲೆಕ್ಸ್‌ನಲ್ಲಿ ಸ್ಟಾರ್‌ಗಳ ಹವಾ, ನಿರ್ಮಾಪಕರಿಗೆ ವರದಾನವಾಗುತ್ತಾ OTT ಪ್ಲಾಟ್‌ಫಾರಂ?

ಈ ಮಧ್ಯೆ ಓಟಿಟಿ ಫ್ಲಾಟ್‌ ಫಾರ್ಮುಗಳ ವಿಸ್ತಾರ ಹೇಗಿದೆಯೆಂದರೆ ಅಲ್ಲಿ ಸಿನಿಮಾ ರಿಲೀಸ್‌ ಆದರೆ ದೊಡ್ಡ ಮೊತ್ತದ ಲಾಭ ಬರುತ್ತದೆ ಅನ್ನುವುದು ಅನೇಕರ ನಂಬಿಕೆ. ಚಿತ್ರಮಂದಿರಗಳ ಕಾಟ ಸಹಿಸಿಕೊಳ್ಳುವುದು ಕಷ್ಟಅನ್ನುವವರಿಗೆ ಓಟಿಟಿ ವರದಾನ.

ಅಷ್ಟಕ್ಕೂ ಚಿತ್ರಮಂದಿರಗಳ ಸಮಸ್ಯೆಯೇನು?

ಚಿತ್ರಮಂದಿರಗಳು ವಿತರಕರ ಕೈಲಿವೆ. ಬಹುತೇಕ ಚಿತ್ರಮಂದಿರಗಳು ಮಾಲೀಕರ ಕೈಯಲ್ಲಿ ಇಲ್ಲ, ವಿತರಕರ ಕೈಯಲ್ಲಿವೆ. ಚಿತ್ರಮಂದಿರಗಳನ್ನು ಗುತ್ತಿಗೆ ಕೊಟ್ಟು ಸುಮ್ಮನಾಗಿದ್ದಾರೆ ಮಾಲೀಕರು. ಗುತ್ತಿಗೆಗೆ ಪಡೆದಿರುವ ವಿತರಕರಿಗೆ ಚಿತ್ರಮಂದಿರ ತುಂಬಬೇಕು. ಅಂದರೆ ಸ್ಟಾರ್‌ ಸಿನಿಮಾಗಳೇ ಬೇಕು. ಅವಿಲ್ಲದೇ ಹೋದಾಗ ಸ್ಟಾಪ್‌ ಗ್ಯಾಪ್‌ ಆಗಿ ಸಣ್ಣ ಸಿನಿಮಾಗಳಿಗೆ ಅವಕಾಶ. ಇದು ಅಲಿಖಿತ ನಿಯಮ.

ಸಂತೋಷ ಇಲ್ಲ, ದುಃಸ್ವಪ್ನ ಮಾತ್ರ

ಹಣ, ತಾಕತ್ತು ಇದ್ದರೆ ಸಂತೋಷ್‌ ಚಿತ್ರಮಂದಿರ, ಸ್ಟಾರು-ಹಣ ಇಲ್ಲದಿದ್ದರೆ ಪ್ರೇಕ್ಷಕರೇ ಬಾರದ ಸ್ವಪ್ನ ಚಿತ್ರಮಂದಿರ ಎನ್ನುವ ನೀತಿ ಬಹುತೇಕ ವಿತರಕರದ್ದು. ಒಬ್ಬೊಬ್ಬ ವಿತರಕನ ಕೈಯಲ್ಲಿ 150 ರಿಂದ 200 ಚಿತ್ರಮಂದಿರಗಳಿವೆ. ಪ್ರತಿ ವಾರ ಇವರು ಇಷ್ಟೂಚಿತ್ರಮಂದಿರಗಳಿಗೆ ಸಿನಿಮಾಗಳನ್ನು ಬಿಡುಗಡೆ ಮಾಡಲ್ಲ, ತುಂಬಿಸುತ್ತಾರೆ! ಈ ವಾರದ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಮುಂದಿನ ವಾರದ ಸಿನಿಮಾ ಪೋಸ್ಟರ್‌ ಸಿದ್ಧವಾಗಿರುತ್ತದೆ.

ಸಿನಿಮಾ ಮಾಡೋದು ದೊಡ್ಡದಲ್ಲ, ಅದನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದೇ ದೊಡ್ಡ ಸವಾಲು ಎನ್ನುವ ನಿರ್ಮಾಪಕರು ನೂರಕ್ಕೆ 90 ಮಂದಿ ಸಿಗುತ್ತಾರೆ. ಇವರೆಲ್ಲ ಈಗ ಓಟಿಟಿ ತಮ್ಮ ಪಾಲಿಗೆ ವರದಾನ ಆಗಲಿದೆ ಎಂದು ಕಾಯುತ್ತಿದ್ದಾರೆ.

ಓಟಿಟಿಯಲ್ಲಿ ಸಲ್ಲುತ್ತಾರೆಯೇ?

ಓಟಿಟಿಯೂ ವ್ಯಾಪಾರಿ ಉದ್ಯಮ. ಚಿತ್ರಮಂದಿರಗಳಿದ್ದಾಗ ವಿತರಕರು ಮಾತಿಗಾದರೂ ಸಿಗುತ್ತಿದ್ದರು. ಓಟಿಟಿಯಲ್ಲಿ ಎಲ್ಲವೂ ಆನ್‌ಲೈನ್‌. ಓಟಿಟಿಗೂ ಬೇಕಾಗಿರುವುದು ಜನಪ್ರಿಯ, ಓಡುವ ಚಿತ್ರಗಳೇ. ಮಿಕ್ಕ ಚಿತ್ರಗಳಿಗೆ ರೆವೆನ್ಯೂ ಷೇರಿಂಗ್‌. ಕಾಸು ಬಂದರೆ ಹಂಚಿಕೊಳ್ಳುವ ಲೆಕ್ಕಾಚಾರ.

ನೆಟ್‌ಫ್ಲಿಕ್ಸ್‌ಗೆ ಸಡ್ಡು ಹೊಡೆಯಲು ಬಂದಿದೆ 'ನಮ್ಮ Flix'; ಕನ್ನಡ ಚಿತ್ರ ಬೆರಳ ತುದಿಯಲ್ಲಿ!

ಹಾಗಂತ, ಎಲ್ಲ ಚಿತ್ರಗಳಿಗೂ ಓಟಿಟಿ ಹೆಬ್ಬಾಗಿಲು ತೆರೆದಿಟ್ಟಲ್ಲ. ನೀವು ತೀರಾ ಒತ್ತಾಯ ಮಾಡಿದರೆ ವೀಕ್ಷಕರ ಸಂಖ್ಯೆ ಮೇಲೆ ನಿರ್ಮಾಪಕನಿಗೆ ಹಣ ಕೊಡುವ ಒಪ್ಪಂದ ಮಾಡಿಕೊಂಡು ಸಿನಿಮಾ ಹಾಕುತ್ತಾರೆ.

ಬ್ರಾಂಡಿಂಗ್‌ ವ್ಯಾಪಾರ

ಈಗ ವ್ಯಾಪಾರದ ನೀತಿಗಳು ಅಷ್ಟುಸರಳವಾಗಿಲ್ಲ. ಪ್ರತಿಯೊಂದಕ್ಕೂ ಬ್ರಾಂಡಿಂಗ್‌ ಬೇಕು. ಕಂಟೆಂಟ್‌ಗಿಂತ ನಿಮ್ಮ ಚಿತ್ರದ ಹಿಂದೆ ಯಾವ ಸ್ಟಾರ್‌ ಇದ್ದಾರೆ ಎಂಬುದನ್ನು ನೋಡುತ್ತಾರೆ. ಪಿಆರ್‌ಕೆ ಕೇವಲ ಒಂದು ಬ್ಯಾನರ್‌ ಅಲ್ಲ, ಸ್ಟಾರ್‌ ನಟ ಪುನೀತ್‌ ರಾಜ್‌ಕುಮಾರ್‌ ಇದ್ದಾರೆ. ವರ್ಷ ವರ್ಷ ನಿರ್ಮಾಣವಾಗುವ 200-300 ಚಿತ್ರಗಳ ಹಿಂದೆ ಯಾರಿರುತ್ತಾರೆ?

ಸಂಭ್ರಮ ವರ್ಸಸ್‌ ವ್ಯಾಪಾರ

ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್‌ ಮಾಡುವುದು ಒಂದು ಸಂಭ್ರಮದ ಸಂಗತಿ. ಪಟಾಕಿ, ಹಾರ, ಕಟೌಟ್‌, ಮುಗಿಬಿದ್ದ ಅಭಿಮಾನಿಗಳು- ಇವೆಲ್ಲ ಸಿನಿಮಾದ ಒಂದು ಭಾಗ. ಅವಿಲ್ಲದೇ ಹೋದರೆ ಸಿನಿಮಾ ಅಂದರೆ ಬರೀ ದುಡ್ಡು. ಯಾಂತ್ರಿಕತೆ ಸ್ಥಾಯಿ, ಮಾಂತ್ರಿಕತೆ ಮಾಯ.

ಅಲ್ಲದೇ, ಚಿತ್ರಮಂದಿರಗಳಿಗೂ ಸಣ್ಣ ಸಿನಿಮಾಗಳೇ ಜೀವನಾಧಾರ. ಸ್ಟಾರ್‌ ಸಿನಿಮಾಗಳು ಹತ್ತು ಬರಬಹುದು. ಹತ್ತು ವಾರ ಅವು ಕಾಪಾಡಬಹುದು. ಮಿಕ್ಕ ನಲವತ್ತು ವಾರ ಹೊಸಬರ, ಮಧ್ಯಮ ವರ್ಗದ ಸಿನಿಮಾಗಳೇ ಚಿತ್ರಮಂದಿರಕ್ಕೆ ಆದಾಯದ ಮೂಲ.

ಹೀಗಾಗಿ ಪ್ರದರ್ಶಕ ಮತ್ತು ನಿರ್ಮಾಪಕ ಎಂಬ ಸಾಂಪ್ರದಾಯಿಕ ಸಂಬಂಧವೇ ಸ್ಥಿರ. ಮಿಕ್ಕಿದ್ದೆಲ್ಲ ಬಂದು ಹೋಗುವ ಲಾಭದಾಯಕ ಒಪ್ಪಂದ ಮಾತ್ರ ಎಂಬುದು ಇಬ್ಬರಿಗೂ ಅರ್ಥವಾದರೆ, ಓಟಿಟಿಯ ಶೂನ್ಯ ಸಂಪಾದನೆಯ ಸಿದ್ಧಾಂತವೂ ಅರ್ಥವಾಗುತ್ತದೆ.

click me!