ಪತ್ನಿಗೆ ಕೋಪ ಏಕೆ ಬಂದಿದೆ ಎಂದು ಗೊತ್ತಾಗದವರು ವರ್ಸಸ್ ಪತ್ನಿಗೆ ಕೋಪ ಬಂದಿದೆ ಎಂದೇ ಗೊತ್ತಾಗದವರು!
ಶೇ.80ರಷ್ಟು ಗಂಡಸರಿಗೆ ಹೆಂಡತಿ(wife)ಗೆ ಯಾಕೆ ಸಿಟ್ಟು ಬಂದಿದೆ ಎಂದೇ ಗೊತ್ತಿರುವುದಿಲ್ಲವಂತೆ. ಇನ್ನುಳಿದ ಶೇ.20ರ ಮೇಲೆ ಕುತೂಹಲ ಹುಟ್ಟಿತಾ ? ಅವರಿಗೆ ಹೆಂಡತಿಗೆ ಸಿಟ್ಟು ಬಂದಿದೆ ಎಂದೇ ಗೊತ್ತಿರೋಲ್ಲ!
ಈ ಎರಡನೆಯ ವರ್ಗದ ಗಂಡುಜೀವಗಳ ಬಗ್ಗೆ ಕೇಳಿದ ಮೇಲೆ ಮೊದಲನೇ ವರ್ಗವೇ ಬೆಟರ್ ಎನಿಸುತ್ತದಲ್ಲವೇ? ಯಾಕೆ ಎಂದು ಗೊತ್ತಿಲ್ಲದಿದ್ದರೂ ಕನಿಷ್ಠ ಪಕ್ಷ ಸಿಟ್ಟಾದರೂ ಇದೆ ಎಂದು ಗೊತ್ತಿದ್ದರೆ, ಅದನ್ನು ತಣಿಸಲು ಫುಡ್ ಆರ್ಡರ್ ಮಾಡುವುದು, ಹೊರಗೆ ಕರೆದುಕೊಂಡು ಹೋಗುವುದೋ, ಹೆಚ್ಚು ಪ್ರೀತಿ ತೋರುವುದೋ, ಸಿನಿಮಾಗೆ ಕರೆದುಕೊಂಡು ಹೋಗುವುದೋ ಏನೋ ಒಂದು ಸರ್ಕಸ್ ಮಾಡುತ್ತಾರೆ. ಈ ಸರ್ಕಸ್ ನೋಡುತ್ತಲೇ ಸ್ವಲ್ಪ ಸಿಟ್ಟು ಕರಗುತ್ತಾ ಹೋಗುತ್ತದೆ. ಆದರೆ ಈ ಎರಡನೆಯ ಕೆಟಗರಿಯ ಗಂಡುಪ್ರಾಣಿ ಇದೆಯಲ್ಲ... ಆ ವರ್ಗಕ್ಕೆ ಸೇರಿದ ಪತಿರಾಯನನ್ನು ಪಡೆದ ನತದೃಷ್ಟೆಯರ ಕಷ್ಟ ಹೇಳತೀರದು.
ಕೋಪ ಏಕೆ ಬರುತ್ತದೆ?
ಅವಳಾದರೂ ಸಾಮಾನ್ಯವಾಗಿ ಸಿಟ್ಟಾಗುವುದು ಏತಕ್ಕೆ? ಹೆಂಡತಿಯ ಸಿಟ್ಟನ್ನು ಅರ್ಥ ಮಾಡಿಕೊಳ್ಳಲಾಗದ ಗಂಡಂದಿರಾದರೆ ಇವುಗಳಲ್ಲಿ ಯಾವ ತಪ್ಪು ನೀವು ಮಾಡುತ್ತಿದ್ದೀರಿ ಎಂದು ಗಮನಿಸಿಕೊಳ್ಳಿ.
ಪತಿ(husband) ಮನೆಯ ಹಾಗೂ ಮನೆಯವರ ಚಾಕರಿ ಮಾಡಿಕೊಂಡು ಇದ್ದಾಗ್ಯೂ ಆಕೆಯ ತವರನ್ನು, ತನ್ನವರನ್ನು ಹಂಗಿಸಿ ಮಾತಾಡುವುದು, ಅವರ ಮೇಲೆ ಜೋಕ್ ಕಟ್ ಮಾಡುವುದು, ಅವರ ನಡೆನುಡಿಗಳನ್ನು ಅನುಕರಿಸಿ ನಗುವುದು ಇತ್ಯಾದಿ ಮಾಡಿದರೆ ಯಾವ ಹೆಣ್ಣಿಗಾದರೂ ಸಿಟ್ಟು(angry) ಬಂದೇ ಬಂದೀತು. ಇದಲ್ಲದೆ ಪತಿರಾಯ ತನಗೆ ಸಾಕಷ್ಟು ಸಮಯವನ್ನು ಕೊಡುತ್ತಿಲ್ಲ ಎನಿಸಿದಾಗ ಸಂಯಮ ಕಳೆದುಕೊಳ್ಳುವುದು ಮಾಮೂಲು. ಇನ್ನು ಮನೆ ನಿಭಾಯಿಸುವ ವಿಷಯದಲ್ಲಿ ಹೆಂಡತಿಯನ್ನೊಂದು ಮಾತೂ ಕೇಳದೆ ತನ್ನ ಪಾಡಿಗೆ ತಾನು ಎಲ್ಲ ನಿರ್ಧರಿಸುತ್ತಿದ್ದರೆ ಸಿಟ್ಟು ಬರುವುದು ಸ್ವಾಭಾವಿಕವೇ. ಮದುವೆಯ ಮೊದಲಲ್ಲಿ ರಂಬೆಮೇನಕೆ ಎಂದು ಏರಿಸಿ ಹಳೆಯದಾದಂತೆಲ್ಲ ಹಿಡಿಂಬೆ ಶೂರ್ಪನಖಿ ಎಂದು ತಮಾಷೆ ಮಾಡಿದರೆ, ಹೆಂಡತಿಯ ಕುರಿತ ಜೋಕ್‌ಗಳನ್ನು ಆಸ್ವಾದಿಸಿ ನಗುತ್ತಿದ್ದರೆ ಕೋಪ ಬರದೆ ಮುದ್ದು ಉಕ್ಕುಕ್ಕಿ ಬರಲು ಸಾಧ್ಯವೇ? ಇನ್ನು ಹೆಂಡತಿಯನ್ನು ಹೊರಗೆ ಕರೆದುಕೊಂಡು ಹೋಗಿ ದೃಷ್ಟಿಯೆಲ್ಲ ಬೇರೆ ಹೆಣ್ಮಕ್ಕಳ ಮೇಲೇ ಇದ್ದರೆ, ಅಥವಾ ಬೇರೆ ಹೆಣ್ಣನ್ನು ಹೊಗಳುವುದು, ವರ್ಣಿಸುವುದು ಮಾಡುತ್ತಿದ್ದರೆ ನೋಡಿಯೂ ಕುರುಡಳಂತಿರಲು, ಕೇಳಿಯೂ ಕಿವುಡಳಂತಿರಲು ಆಕೆಯೇನು ಪ್ರಪಂಚದ 8ನೇ ಅದ್ಭುತ ಸೃಷ್ಟಿಯಲ್ಲವಷ್ಟೇ. ಮನೆಗೆಲಸದಲ್ಲಿ ಕಿಂಚಿತ್ತೂ ಸಹಾಯ ಮಾಡದೆ ಆಕೆಯನ್ನು ಕೆಲಸದವಳಂತೆ ನೋಡಿದರೆ, ಅವಳ ಮಾತುಗಳಿಗೆ ಕೆಪ್ಪನಂತೆ ವರ್ತಿಸಿದರೆ ಬೆಪ್ಪುಗಂಡನ ಕಟ್ಟಿಕೊಂಡ ಅಸಹಾಯಕತೆ(helplessness) ಸಿಟ್ಟು ತರದೇ ಇರುವುದೇ ಹೇಳಿ..?
Bengaluru ಕುರಿತ ಈ ವಿಷಯಗಳು ಸ್ವತಃ ಬೆಂಗಳೂರಿಗರಿಗೇ ಗೊತ್ತಿಲ್ಲ!
ಕೋಪ ಬಂದಿದೆಯೆಂದೇ ತಿಳಿಯದ ಪತಿರಾಯ!
ಈಗ ಹೀಗೆಲ್ಲ ಎಡವಟ್ಟುಗಳನ್ನು ಮಾಡಿ ಆಕೆಗೆ ಕೋಪ ತರಿಸಿ, ಕೋಪ ಬಂದಿದೆ ಎಂದೂ ಅರ್ಥವಾಗದ ಎಮ್ಮೆ ಚರ್ಮದ ಎರಡನೆ ಕೆಟಗರಿಯ ಗಂಡಂದಿರ ಅರ್ಥ ಮಾಡಿಕೊಳ್ಳುವ ಕೆಪಾಸಿಟಿ ಹೇಗಿದೆ ನೋಡೋಣ.
ಹೆಂಡತಿ ಸಿಟ್ಟಿನಿಂದ ಮೌನವಾಗಿದ್ದರೆ ಯಾವುದೋ ಮೌನವೃತವಿರಬಹುದು ಅಥವಾ ಆ ದಿನಗಳು ಹತ್ತಿರ ಬಂದು ಮೂಡ್ ಕೆಟ್ಟಿರಬಹುದು ಎಂದುಕೊಂಡು ಸುಮ್ಮನಾಗುತ್ತಾರೆ. ಮೌನವನ್ನು ಅರ್ಥ ಮಾಡಿಸಲಾಗದ್ದಕ್ಕೆ ಕಿರಿಕಿರಿಯಾಗಿ ಆಕೆ ಪಾತ್ರೆ ಕುಕ್ಕಿ ಮೌನ ಮುರಿವ ಪ್ರಯತ್ನಕ್ಕೆ ಕೈ ಹಾಕಿದಳು ಎಂದುಕೊಳ್ಳಿ, ಬೀಳಿಸ್ದೆ, ಶಬ್ದ ಮಾಡ್ದೆ ಕೆಲಸ ಮಾಡೋದನ್ನ ತವರಲ್ಲಿ ಕಲಿಸಿಲ್ಲ ಎಂದು ಮನಸ್ಸಲ್ಲೇ ಅಂದುಕೊಂಡೋ ಬೈದುಕೊಂಡೋ ಸುಮ್ಮನಾಗ್ತಾರೆ. ಸಿಟ್ಟಿನಿಂದ ಆಕೆ ಅಡುಗೆ(cook) ಮಾಡದೆ ಕುಳಿತರೆ ಮೈ ಹುಷಾರಿಲ್ಲದಿರಬಹುದು, ಆರ್ಡರ್ ಮಾಡೋಣ ಎಂದುಕೊಳ್ತಾರೆ. ತನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳಲಾಗದ ಪತಿಯನ್ನು ನೆನೆದು ಸಿಟ್ಟು ಅಳುವಾಗಿ ಬದಲಾದರೆ ಈ ಹೆಂಗಸರಿಗೆ ಸುಮ್ಮಸುಮ್ಮನೆ ಆಗಾಗ ಅಳು ಬರುತ್ತದೆ ಎಂದುಕೊಂಡು ತಾವು ದೂರವಿದ್ದರೆ ಸ್ವಲ್ಪ ಹೊತ್ತಿನಲ್ಲಿ ಸರಿಯಾಗುತ್ತಾಳೆ ಎಂದು ಪೇಪರ್ ಓದುತ್ತಾ ಕುಳಿತುಬಿಡುತ್ತಾರೆ. ಒಟ್ಟಿನಲ್ಲಿ ಅವಳಿಗೆ ಸಿಟ್ಟು ಬಂದಿರಬಹುದು ಎಂಬ ಲವಲೇಶದ ಅರಿವೂ ಆಗದಂಥ ಅಸೂಕ್ಷ್ಮ ಪ್ರಾಣಿ ಈತ. ಅಂಥದರಲ್ಲಿ ಅದನ್ನು ತಣಿಸುವ ಪ್ರಯತ್ನವಾದರೂ ಹೇಗೆ ಮಾಡುತ್ತಾನೆ?!
Breast Milk Jewellery: ತಾಯಿ, ಮಗುವಿನ ಬಾಂಧವ್ಯದ ಎದೆಹಾಲಿನ ಆಭರಣ
ಈಗ ಹೇಳಿ, ಇಂಥ ಗಂಡನನ್ನು ಕಟ್ಟಿಕೊಂಡ ಮೇಲೆ ಕೋಪ ಬರದಿದ್ದೀತೇ? ಕಡೆಕಡೆಗೆ ತನಗೆ ಕೋಪ ಬಂದ ಕಾರಣ ಆಕೆಗೂ ಮರೆತು ಇವನ ದಪ್ಪಚರ್ಮವೇ ಕೋಪಕ್ಕೆ ಕಾರಣ ಎನಿಸಲಾರಂಭಿಸುತ್ತದೆ. ಅದಕ್ಕೇ ಇನ್ನು ಮುಂದೆ ಹೆಂಡತಿಯ ಕೋಪದ ಬಗ್ಗೆ ಯಾರಾದರೂ ಹೇಳುತ್ತಿದ್ದರೆ, ಜೋಕ್ ಮಾಡುತ್ತಿದ್ದರೆ ಅವರೊಬ್ಬ ದಪ್ಪಚರ್ಮದ ಬೆಪ್ಪುತಕ್ಕಡಿ ಎಂಬುದನ್ನು ಎದುರಿರುವವರು ಅರ್ಥ ಮಾಡಿಕೊಳ್ಳಬೇಕು ಎಂಬುದೇ ಪತ್ನಿಯರ ಪರವಾಗಿ ಈ ಬರಹದ ಮೂಲಕ ಕೋರುತ್ತಿರುವ ವಿಶೇಷ ಕಳಕಳಿ.