ಸಾಕುಪ್ರಾಣಿಗಳೆಂದರೆ ಅವು ಮನೆ ಮಕ್ಕಳಂತೆಯೇ ಆಗಿಬಿಟ್ಟಿರುತ್ತವೆ. ಉಕ್ರೇನ್ ಮೇಲೆ ರಷ್ಯಾ ನಿರಂತರ ಬಾಂಬ್ ದಾಳಿ ನಡೆಸಿ ಆಕ್ರಮಣ ಮಾಡುತ್ತಿರುವ ಈ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ದೇಶ ಬಿಟ್ಟು ಹೋಗುತ್ತಿರುವ ಹಲವು ಉಕ್ರೇನಿಯನ್ ಕುಟುಂಬಗಳು ತಮ್ಮ ಸಾಕು ಪ್ರಾಣಿಗಳನ್ನು ಮರೆತಿಲ್ಲ.
ಅಕ್ಭರ್ ಬೀರಬಲ್ಲರ ಕತೆಯೊಂದಿದೆ. ತಾಯ್ತನ(motherhood)ಕ್ಕಿಂತ ಪ್ರಾಣವೇ ಹೆಚ್ಚು ಎಂಬರ್ಥದ್ದು. ಒಮ್ಮೆ ಜಗತ್ತಿನಲ್ಲಿ ಎಲ್ಲಕ್ಕಿಂತ ಯಾವುದು ದೊಡ್ಡದು ಎಂದು ಅಕ್ಬರ್(Akbar) ಪ್ರಶ್ನಿಸುತ್ತಾನೆ. ಆಗ ಅದಕ್ಕೆ ಆಸ್ಥಾನದ ವಿದ್ವಾಂಸರೆಲ್ಲ ತಲೆ ಕೆಡಿಸಿಕೊಂಡು ಯೋಚಿಸಿ ತಾಯ್ತನವೇ ದೊಡ್ಡದೆಂಬ ಜಿಜ್ಞಾಸೆಗೆ ಬರುತ್ತಾರೆ. ಅದು ಸರಿಯೆಂದೇ ಅಕ್ಬರನಿಗೆ ಅನ್ನಿಸುತ್ತದೆ. ಆದರೆ, ಮಂತ್ರಿ ಬೀರಬಲ್ಲ(Birbal) ಮಾತ್ರ ಈ ವಿಷಯದಲ್ಲಿ ತುಟಿ ಬಿಚ್ಚದಿರುವುದು ಕಂಡ ಅಕ್ಬರ್, ಅವನಲ್ಲಿ ಕಾರಣ ಕೇಳುತ್ತಾನೆ. ಆಗ ಬೀರ್‌ಬಲ್ ತಾಯ್ತನಕ್ಕಿಂತ ಪ್ರಾಣವೇ ದೊಡ್ಡದು, ಪ್ರಾಣವಿದ್ದರೆ ಮಾತ್ರ ತಾಯ್ತನ, ಪ್ರೀತಿ ಎಲ್ಲ ಎನ್ನುತ್ತಾನೆ. ಬೀರ್‌ಬಲ್ಲನ ಈ ವಿವರಣೆ ಅಕ್ಬರನಿಗೆ ಇಷ್ಟವಾಗುವುದಿಲ್ಲ. ಈ ಮಾತನ್ನು ಸಾಬೀತುಪಡಿಸುವಂತೆ ಬೀರ್‌ಬಲ್ಲನಿಗೆ ಸವಾಲು ಹಾಕುತ್ತಾನೆ. ಆಗ ಬೀರ್‌ಬಲ್ ತಾಯಿ ಹಾಗೂ ಮರಿಮಂಗವನ್ನು ತರಿಸಿ ದೊಡ್ಡದೊಂದು ಟ್ಯಾಂಕ್‌ನೊಳಗೆ ಬಿಡುವಂತೆ ಸಲಹೆ ನೀಡುತ್ತಾನೆ. ನಂತರ ಆ ಟ್ಯಾಂಕಿಗೆ ನೀರು ತುಂಬಿಸಲಾರಂಭಿಸುತ್ತಾರೆ. ಹೊರಬರಲಾರದೆ ಎರಡೂ ಕೋತಿಗಳು(Monkeys) ಚಡಪಡಿಸುತ್ತಿರುತ್ತವೆ. ನೀರು ಮೇಲೇರಿದಂತೆಲ್ಲ ತಾಯಿ ಕೋತಿಯು ಮರಿಕೋತಿಯನ್ನು ತನ್ನ ತಲೆಯ ಮೇಲಿಟ್ಟು ರಕ್ಷಣೆ ಮಾಡಲು ಪ್ರಯತ್ನಿಸುತ್ತದೆ. ಯಾವಾಗ ನೀರು ಮತ್ತಷ್ಟು ಮೇಲೇರಿ ತನ್ನ ಉಸಿರನ್ನೇ ಕಟ್ಟಿಸಲಾರಂಭಿಸುತ್ತದೋ ಆಗ ತಾಯಿ ಕೋತಿ ಮರಿಯನ್ನು ಕಾಲ ಕೆಳಗೆ ಹಾಕಿಕೊಂಡು ಅದರ ಮೇಲೆ ನಿಂತು ತನ್ನ ಪ್ರಾಣ ರಕ್ಷಿಸಿಕೊಳ್ಳುವ ಯೋಜನೆ ಹೂಡುತ್ತದೆ. ಅಲ್ಲಿಗೆ ತಮ್ಮ ತಮ್ಮ ಪ್ರಾಣ ಉಳಿಸಿಕೊಳ್ಳುವುದೇ ಎಲ್ಲರಿಗೂ ದೊಡ್ಡದು ಎಂಬ ಬೀರ್‌ಬಲ್ಲನ ಮಾತನ್ನು ಎಲ್ಲರೂ ಒಪ್ಪಬೇಕಾಗುತ್ತದೆ.
ಈಗ ಉಕ್ರೇನ್- ರಷ್ಯಾ(Ukraine- Russia) ಯುದ್ಧ ಸಂದರ್ಭದಲ್ಲಿ ಬೀರ್‌ಬಲ್ಲನ ಈ ಮಾತು ಸುಳ್ಳಾಗಿಸುವ ನಿದರ್ಶನಗಳು ಕಾಣಿಸುತ್ತಿವೆ ಎಂಬುದು ಮಾನವೀಯತೆ(Humanity)ಯ ಮೇಲಿನ ನಂಬಿಕೆ ಹೆಚ್ಚಿಸುತ್ತಿದೆ. ಹೌದು, ಯುದ್ಧದ ಭೀಕರತೆಗೆ ಹೆದರಿರುವ ಲಕ್ಷಾಂತರ ಉಕ್ರೇನಿಯನ್ನರು ದೇಶ ಬಿಟ್ಟು ಹೊರ ಹೋಗುವ ಮಾರ್ಗಗಳನ್ನರಸಿ ಗುಳೆ ಹೊರಟಿದ್ದಾರೆ. ರೈಲ್ವೇ ಸ್ಟೇಶನ್‌ಗಳು, ವಿಮಾನ ನಿಲ್ದಾಣಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಆದರೆ, ಹೆಚ್ಚಿನ ಜನರು ತಮ್ಮ ಸಾಕು ಪ್ರಾಣಿ(pets)ಗಳನ್ನು ಕೂಡಾ ಬ್ಯಾಗಿಗೆ, ಪಂಜರಕ್ಕೆ ತುಂಬಿಕೊಂಡು ತಮ್ಮೊಂದಿಗೆ ಅವುಗಳ ಜೀವವನ್ನೂ ಉಳಿಸಲು ಸಾಧ್ಯವಾದ ಪ್ರಯತ್ನ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ನೋಡಿದರೆ ಮನ ಕಲಕುತ್ತದೆ. ಜೊತೆಗೆ, ಜಗತ್ತಿನಲ್ಲಿ ಮಾನವೀಯತೆ ಎನ್ನುವುದು ಇನ್ನೂ ಉಳಿದಿದೆಯಲ್ಲ ಎಂಬ ಸಮಾಧಾನವೂ ಆಗುತ್ತದೆ.
undefined
ರಷ್ಯಾ ಸೇನೆಯ ನಿರಂತರ ಬಾಂಬ್ ಹಾಗೂ ಕ್ಷಿಪಣಿಗೆ ಕಂಗೆಟ್ಟಿರುವ ಸಾವಿರಾರು ಉಕ್ರೇನಿಯರು ಜೀವ ಉಳಿದರೆ ಸಾಕಪ್ಪಾ ಎಂದುಕೊಂಡು ತಮ್ಮ ನೆಂಟರಿಷ್ಟರ ಮನೆಗಳನ್ನರಸಿ, ನಿರಾಶ್ರಿತ ಶಿಬಿರಗಳನ್ನರಸಿ ಪಕ್ಕದ ಪೋಲಂಡ್(Poland), ಬಲ್ಗೇರಿಯಾ(Bulgaria), ಹಂಗೇರಿ(Hungary), ರೊಮಾನಿಯಾ(Romania) ಹಾಗೂ ಮೊಲ್ಡೋವಾ(Moldova)ಗೆ ಪಲಾಯನಗೈಯ್ಯುತ್ತಿದ್ದಾರೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಕೇವಲ ತಮ್ಮದೊಂದೇ ಜೀವದ ಬಗ್ಗೆ ಯೋಚಿಸದೆ, ತಮ್ಮೊಂದಿಗೆ ಮಕ್ಕಳಂತೆಯೇ ಇದ್ದ ಸಾಕುಪ್ರಾಣಿಗಳನ್ನೂ ಹೊತ್ತೊಯ್ಯುತ್ತಿರುವುದು ಉಕ್ರೇನಿಯನ್ನರ ಮೇಲೆ ಜಗತ್ತಿನ ಸಹಾನುಭೂತಿ, ಮೆಚ್ಚುಗೆಗೆ ಕಾರಣವಾಗಿದೆ.
ಭಾರತಕ್ಕೆ ಬಂದಿರುವುದು ತುಂಬಾ ನೆಮ್ಮದಿ ಎನಿಸುತ್ತಿದೆ, ಉಕ್ರೇನ್‌ನಿಂದ ವಾಪಸ್ಸಾದ ವಿದ್ಯಾರ್ಥಿಗಳ ಸಂತಸ
ತಮ್ಮ ಪ್ರೀತಿಯ ನಾಯಿ, ಬೆಕ್ಕುಗಳನ್ನು ಪುಟ್ಟ ಮಕ್ಕಳಂತೆ ಹೆಗಲ ಮೇಲೆ ಹೊತ್ತು, ಬ್ಯಾಗಿನಲ್ಲಿ ತುಂಬಿಕೊಂಡು ಇಲ್ಲವೇ ಪಂಜರದೊಳಗೆ ಕೂರಿಸಿಕೊಂಡು ಅವನ್ನೂ ಕರೆದುಕೊಂಡು ದೂರ ದೇಶ ಪ್ರಯಾಣಕ್ಕೆ ಹೊರಟಿರುವುದನ್ನು ನೋಡಿದರೆ ಎಂಥವರಿಗಾದರೂ ಕರುಳು ಚುರುಕ್ ಎನ್ನುತ್ತದೆ. ಕೆಲವರಂತೂ ಒಂದು ಕೈಲಿ ಮಗು, ಮತ್ತೊಂದರಲ್ಲಿ ನಾಯಿ, ಜೊತೆಗೆ ಮತ್ತೊಂದಿಷ್ಟು ಅಗತ್ಯ ಸಾಮಾನುಗಳ ಬ್ಯಾಗ್ ಹಿಡಿದು ಪರದಾಡುತ್ತಾ ಜೀವ ಉಳಿಸಿಕೊಳ್ಳುವ ಸಾಹಸಕ್ಕೆ ಬಿದ್ದಿದ್ದಾರೆ. ಈ ಫೋಟೋಗಳು ಸೋಷ್ಯಲ್ ಮೀಡಿಯಾ(Social Media)ದಲ್ಲಿ ಸದ್ದು ಮಾಡುತ್ತಿವೆ. ಪೊಲ್ಯಾಂಡ್, ರೊಮ್ಯಾನಿಯಾ ಹಾಗೂ ಸ್ಲೊವಾಕಿಯಾ ಗಡಿಗಳಲ್ಲಿ ಪ್ರಾಣಿಗಳಿಗೆ ಯಾವುದೇ ದಾಖಲೆ ಇಲ್ಲದಿದ್ದರೂ ಮಾನವೀಯತೆ ಆಧಾರದಲ್ಲಿ ಒಳ ಬಿಡಲಾಗುತ್ತಿದೆ ಎಂಬುದು ಸಮಾಧಾನಕರ ಸಂಗತಿ.
ಇನ್ನು ಉಕ್ರೇನಿನ ಬೀದಿನಾಯಿಗಳು ಹಾಗೂ ಇತರೆ ಅನಾಥ ಪ್ರಾಣಿಗಳು(stray animals) ಮನುಷ್ಯರ ತಪ್ಪು ನಿರ್ಧಾರಗಳು ಹಾಗೂ ದ್ವೇಷ, ಸ್ವಾರ್ಥ ಸಾಧನೆಗೆ ಅಮಾಯಕ ಜೀವಿಗಳಾಗಿ ಬಲಿಯಾಗಬೇಕಾದ, ಬಾಂಬ್ ಸದ್ದಿಗೆ ಹೆದರಿ ನಲುಗಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಆದರೆ, ಪ್ರಾಣಿಪ್ರಿಯರು ಆ ಅನಾಥ ಪ್ರಾಣಿಗಳಿಗೂ ಬಂಕರ್, ಸಬ್‌ವೇ ಸ್ಟೇಶನ್ ಹಾಗೂ ಇತರೆ ರಕ್ಷಣಾ ವ್ಯವಸ್ಥೆಗಳಲ್ಲಿ ಅವುಗಳಿಗೂ ಸಾಧ್ಯವಾದಷ್ಟು ಸ್ಥಳ, ಆಹಾರ ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
SWIFT ಮುಂದಿಟ್ಟುಕೊಂಡು ರಷ್ಯಾಗೆ ಬೆದರಿಕೆ, ಪುಟಿನ್ ರಾಷ್ಟ್ರದ ಆರ್ಥಿಕತೆ ಮುಗ್ಗರಿಸುತ್ತಾ?
ಒಟ್ನಲ್ಲಿ ಮನುಷ್ಯ ಮನುಷ್ಯರ ಸ್ವಾರ್ಥ ಸಾಧನೆಯ ನಡುವೆ ಅಮಾಯಕ ಪ್ರಾಣಿಗಳು ನಲುಗುತ್ತಿವೆ. ಇಂಥ ಯುದ್ಧದ ನಡುವೆಯೂ ಮಾನವೀಯತೆ ಸ್ಪರ್ಶ ಹೊಂದಿರುವ ಫೋಟೋಗಳು ನಂಬಿಕೆ, ಭರವಸೆಯನ್ನು ಕಳೆದುಕೊಳ್ಳದಂತೆ ಸಂದೇಶ ನೀಡುತ್ತಿವೆ.