Braille Day: ದೃಷ್ಟಿಹೀನರ ಲಿಪಿಗಾಗಿ ಒಂದು ದಿನ, ಈ ದಿನದ ಬಗ್ಗೆ ನಿಮಗೇನು ಗೊತ್ತು?

By Suvarna NewsFirst Published Jan 4, 2022, 1:45 PM IST
Highlights

ಇಂದು ಬ್ರೈಲ್ ಡೇ- ಬ್ರೈಲ್ ಲಿಪಿಯ ದಿನ. ಸ್ವತಃ ಅಂಧನಾದ ಲೂಯಿ ಬ್ರೈಲ್ ಅಂಧರ ಕಲಿಕೆಗಾಗಿ ಒಂದು ಲಿಪಿ ಆವಿಷ್ಕರಿಸಿದ್ದೇ ರೋಚಕ ಕಥೆ.

ಸ್ವತಃ ದೃಷ್ಟಿಯಿಲ್ಲದ ಲೂಯಿ ಬ್ರೈಲ್ (Louise Braille) ಎಂಬಾತ ದೃಷ್ಟಿವಿಹೀನರಿಗಾಗಿ (Blind) ಒಂದು ಲಿಪಿ (Script) ಯನ್ನೇ ಆವಿಷ್ಕರಿಸಿದ. ಅವನ ಕೊಡುಗೆಯಿಂದಲೇ ಇಂದು ಅಂಧರು ಎಲ್ಲ ಬಗೆಯ ಅಕ್ಷರಜ್ಞಾನವನ್ನು ಪಡೆಯುತ್ತಿದ್ದಾರೆ. ದೃಷ್ಟಿ ವಿಶೇಷ ಚೇತನರರು ಇಂದು ಓದಲು ಮತ್ತು ಬರೆಯಲು ಈ ಬ್ರೈಲ್‌ ಲಿಪಿ(ಭಾಷೆ)ಯನ್ನು ಬಳಸುತ್ತಾರೆ. ಬ್ರೈಲ್‌ ಲಿಪಿಯ ಸಂಶೋಧಕ ಲೂಯಿಸ್‌ ಬ್ರೈಲ್‌ ಅವರ ಜನ್ಮದಿನ ಪ್ರಯುಕ್ತ ಪ್ರತಿವರ್ಷ ಜನವರಿ 4ರಂದು ವಿಶ್ವದಾದ್ಯಂತ ವಿಶ್ವ ಬ್ರೈಲ್‌ ಡೇ ಆಚರಿಸಲಾಗುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜ.೪ನ್ನು ಬ್ರೈಲ್ ದಿನವಾಗಿ ನವೆಂಬರ್ 2018 ರಲ್ಲಿ ಅಧಿಕೃತವಾಗಿ ಅಂಗೀಕರಿಸಿದ ನಂತರ ವಿಶ್ವ ದೃಷ್ಟಿವಿಕಲಚೇತನರ ಒಕ್ಕೂಟ ಈ ದಿನವನ್ನು ಆಚರಿಸುತ್ತ ಬಂದಿದೆ. ಮೊದಲ ವಿಶ್ವ ಬ್ರೈಲ್ ದಿನವನ್ನು 2019ರಲ್ಲಿ ಆಚರಿಸಲಾಯಿತು. ಅಂಧರು ಮತ್ತು ಭಾಗಶಃ ದೃಷ್ಟಿ ಹೊಂದಿರುವ ಜನರಿಗೆ ಸಂವಹನ ಸಾಧನವಾಗಿ ಬ್ರೈಲ್‌ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಬ್ರೈಲ್ ದಿನವನ್ನು ಅಧಿಕೃತವಾಗಿ ಗೊತ್ತುಪಡಿಸಲಾಗಿದೆ.

ಬ್ರೈಲ್ ಭಾಷೆಯ ಸೃಷ್ಟಿಕರ್ತೃ ಲೂಯಿಸ್ ಬ್ರೈಲ್ 1809ರ ಜನವರಿ 4ರಂದು ಫ್ರಾನ್ಸ್‌ನ (France) ಒಂದು ಹಳ್ಳಿಯಲ್ಲಿ ಜನಿಸಿದರು. ತಂದೆ ಸೈಮನ್‌ರದು ಕುದುರೆ ಸವಾರರಿಗೆ ಚರ್ಮದ ಜೀನ್ ತಯಾರಿಸುವ ವೃತ್ತಿ. ಒಮ್ಮೆ ತಂದೆಯ ಕೆಲಸದ ಜಾಗಕ್ಕೆ ಪುಟ್ಟ ಮಗು ಬ್ರೈಲ್ ಬಂದ, ಅಲ್ಲಿದ್ದ ಕೆಂಪಗೆ ಕಾದ ಕಬ್ಬಿಣದ ದಬ್ಬಳ ಆತನ ಕಣ್ಣುಗಳಿಗೆ ಚುಚ್ಚಿತು. ಅವನು ಅಂಧನಾದ.

ಬರೀ negative thoughts ಬರುತ್ತಾ? ತಪ್ಪಿಸಿಕೊಳ್ಳೋದ್ ಹೀಗೆ..

ಆದಾಗ್ಯೂ, ಅವನು ಅಧ್ಯಯನದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. ಫ್ರಾನ್ಸ್‌ನ ರಾಯಲ್ ಇನ್‌ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್‌ಗೆ ವಿದ್ಯಾರ್ಥಿವೇತನವನ್ನು ಸಹ ಪಡೆದರು. ಈ ವರ್ಷಗಳಲ್ಲಿ ಅವರು ದೃಷ್ಟಿಹೀನ ಜನರಿಗೆ ಭಾಷೆಯೊಂದನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಿದರು. ಆಗೆಲ್ಲಾ ಕಾಯಿಸಿದ ತಾಮ್ರದ ತಂತಿಯಿಂದ ಮೇಣದ ಕಾಗದಗಳ ಮೇಲೆ ಒತ್ತಿ ಅಕ್ಷರಗಳನ್ನು ರೂಪಿಸಲಾಗುತ್ತಿತ್ತು. ಇದು ಸ್ಪಷ್ಟವಾಗಿ ಬೀಳುತ್ತಿರಲಿಲ್ಲ. ಹೀಗಾಗಿ ಅಸ್ಪಷ್ಟತೆ ಉಳಿಯುತ್ತಿತ್ತು. ಇದನ್ನು ಸುಧಾರಿಸುವುದು ಹೇಗೆ ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದರು.

Vaastu Tips: ನಿದ್ದೆನೇ ಬರ್ತಿಲ್ಲ ಅಂದ್ರೆ ಹೀಗ್ ಮಾಡಿ ನೋಡಿ..

1824ರಲ್ಲಿ, ತಮ್ಮ 15ನೇ ವಯಸ್ಸಿನಲ್ಲಿ, ಲೂಯಿಸ್ ಮೊದಲ ಬಾರಿಗೆ ದೃಷ್ಟಿವಿಹೀನರಿಗಾಗಿ ಬ್ರೈಲ್ ಲಿಪಿಯನ್ನು ಅಭಿವೃದ್ಧಿಪಡಿಸಿದ. ಆದರೆ ಇದನ್ನು ಮೊದಲು ಪ್ರಕಟಿಸಿದ್ದು 1829ರಲ್ಲಿ. ಮುಂದಿನ ವರ್ಷಗಳಲ್ಲಿ ಇದರಲ್ಲಿ ಹಲವಾರು ಸುಧಾರಿತ ವ್ಯವಸ್ಥೆಗಳಾಗಿವೆ. ಬ್ರೈಲ್ ಆವಿಷ್ಕರಿಸಿದ ಲಿಪಿ ಸರಳವಾಗಿತ್ತು. ಅದರಲ್ಲಿ ಇಂಗ್ಲಿಷ್- ಫ್ರೆಂಚ್ ಮುಂತಾದ ಭಾಷೆಗಳನ್ನು ಬಳಸಬಹುದು. ಕೇವಲ ಆರು ಚುಕ್ಕೆಗಳನ್ನು ಬಳಸಿ ಅವರು ವರ್ಣಮಾಲೆಯ ೬೩ ಅಕ್ಷರಗಳನ್ನು ರೂಪಿಸಿದರು. ಇದು ಕೆಲವು ವರ್ಷಗಳ ಕಾಲ ಅಷ್ಟೇನೂ ಜನಪ್ರಿಯತೆ ಗಳಿಸಲಿಲ್ಲ. ನಂತರ ಇದರ ಉಪಯುಕ್ತತೆಯನ್ನು ಅರ್ಥ ಮಾಡಿಕೊಂಡು ಎಲ್ಲರೂ ಬಳಸಲು ಆರಂಭಿಸಿದರು.

ಆದರೆ ಅವರು ಬದುಕಿದ್ದ ಕಾಲದಲ್ಲಿ ಅದೇನೂ ಅಷ್ಟು ಜನಪ್ರಿಯವಾಗಲಿಲ್ಲ. ೧೮೫೬ರಲ್ಲಿ ಅಂದರೆ ತನ್ನ ೪೭ನೇ ವಯಸ್ಸಿನಲ್ಲಿ ಆತ ತೀರಿಹೋದ. ಆತ ಸತ್ತ ಬಳಿಕ ಬ್ರೈಲ್ ಲಿಪಿ ಹೆಚ್ಚು ಹೆಚ್ಚು ಜನಪ್ರಿಯ ಆಗಲಾರಂಭಿಸಿತು. ಆತನ ಮಹತ್ವವನ್ನು ಅರ್ಥ ಮಾಡಿಕೊಂಡ ಫ್ರಾನ್ಸ್ ಸರಕಾರ, ಆತ ಸತ್ತ ನೂರು ವರ್ಷಗಳ ಬಳಿಕ, ಅಂದರೆ ೧೯೫೬ರಲ್ಲಿ ಆತನ ಶವವನ್ನು ಕೂವ್ರೆ ಸ್ಮಶಾನದ ಕುಣಿಯಿಂದ ಹೊರತೆಗೆದು, ಪ್ಯಾರಿಸ್‌ನ ಫ್ಯಾಂಥೆಯೋ ಸ್ಮಶಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಮಣ್ಣು ಮಾಡಿ, ಸ್ಮಾರಕವನ್ನು ರಚಿಸಿತು. ಅವರನ್ನು ಮತ್ತು ಅವರು ನೀಡಿದ ಕೊಡುಗೆಯನ್ನು ನೆನಪಿಟ್ಟುಕೊಳ್ಳಲು, ಲೂಯಿಸ್ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ಜನವರಿ 4ರಂದು ವಿಶ್ವ ಬ್ರೈಲ್ ದಿನವಾಗಿ ಆಚರಿಸಲಾಗುತ್ತದೆ.

 

click me!