ಮೌನಿ ಹುಡುಗನ ಗೆಳೆತನದ ದಿನಗಳು!

By Kannadaprabha NewsFirst Published Oct 24, 2019, 3:25 PM IST
Highlights

ಸ್ನೇಹಿತರ ಜೊತೆ ಸೇರಿದ್ರೆ ಹೋಂವರ್ಕ್ ಮಾಡಿಲ್ಲ ಅನ್ನೋದು ಮರ್ತು ಹೋಗ್ತಿತ್ತು....

ಅದು 2008ನೇ ಇಸವಿ. ನಾನು ಆಗ ತಾನೇ 8ನೇ ತರಗತಿ ಉತ್ತಿರ್ಣನಾಗಿ 9ನೇ ತರಗತಿಗೆ ಕಲಬುರಗಿಯ ಜಡಿ ಬಸವಲಿಂಗೇಶ್ವರ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆದಿದ್ದೆ. ನನ್ನದು ಮೌನ ಸ್ವಭಾವ. ಸಂಕೋಚದ ವ್ಯಕ್ತಿತ್ವ . ಶಾಲೆಯ ಮೊದಲ ಕೆಲವು ದಿನಗಳಲ್ಲಿ ಒಂದು ಬಗೆಯ ಒಂಟಿತನ ಆವರಿಸಿತ್ತು. ಮೌನವಾಗಿಯೇ ಇರುತ್ತಿದ್ದ ನನಗೆ ಯಾರೂ ಅಂಥ ಗೆಳೆಯರಿರಲಿಲ್ಲ. ಆದರೆ ದಿನಗಳೂ ಉರುಳಿದಂತೆ ಮೌನ ಮುರಿಯಿತು. ಮಾತು ಬೆಳೆಯಿತು. ಸ್ನೇಹಿತರೂ ಹೆಚ್ಚಾದರು. ನಮ್ಮ ಕ್ಲಾಸ್‌ನಲ್ಲಿದ್ದುದು 9 ಜನ ಹುಡುಗರು ಮತ್ತು 10 ಜನ ಹುಡುಗಿಯರು.

ಕೊನೆಯ ಭೇಟಿ; ಹಾಸ್ಟೆಲ್‌ ಲೈಫಿನ ಒಂದು ಎಮೋಷನಲ್‌ ಸೀನ್‌! .

ದಿನಬೆಳಗಾದರೇ ಸ್ನಾನ ಮಾಡಿ ನೀಟಾಗಿ ಡ್ರೆಸ್‌ ಮಾಡಿಕೊಂಡು ಶಾಲೆಗೇ ಹೋಗುವ ತಯಾರಿ ಒಂದು ಕಡೆ ಆದರೆ, ಮೇಷ್ಟು್ರ ಹೇಳಿದ ಹೋಮ್‌ ವರ್ಕ್ ಮಾಡಿಲ್ಲ ಎನ್ನುವ ಚಿಂತೆ ಇನ್ನೊಂದು ಕಡೆ. ಇದರ ಭಯದಲ್ಲೇ ಶಾಲೆ ಪ್ರವೇಶಿಸುತ್ತಿದ್ದೆ. ಯಾವಾಗ ಕ್ಲಾಸ್‌ ಹೊಕ್ಕೆನೋ ಆಗ ಗೆಳೆಯರ ಕೀಟಲೆ, ನಗು ಶುರುವಾಗುತ್ತಿತ್ತು. ನಗೆಬುಗ್ಗೆಯಲ್ಲಿ ಕರಗಿ ಹೋಗುತ್ತಿದ್ದವನಿಗೆ ಹೋಂವರ್ಕ್ ಮಾಡಿಲ್ಲ ಅನ್ನುವುದು ನೆನಪಾಗುತ್ತಿದ್ದದ್ದು ಮೇಷ್ಟು್ರ ಬಂದಾಗಲೇ! ಆಮೇಲಿನ ಕತೆ ಹೇಳಿ ಪ್ರಯೋಜನ ಇಲ್ಲ.

ನಮ್ಮ ತಂಡದಲ್ಲಿ ರಾಮು, ಕಾಂತು ಸಖತ್ತಾಗಿ ಡ್ಯಾನ್ಸ್‌ ಮಾಡುತ್ತಿದ್ದರು. ಓಂಕಾರ ಮತ್ತು ಕಾಮೆಡಿ ಕಿಂಗ್‌ಗಳು! ಶಿವರಾಜ ಕಲೆಯಲ್ಲಿ ಪಳಗಿದವ. ಶ್ರೀಶೈಲ ಲೀಡರ್‌. ಮಹೇಶ ಆ್ಯಕ್ಟಿಂಗ್‌ ನಲ್ಲಿ ಪಂಟ, ನಾಗೇಶ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದ. ಇವರ ಮಧ್ಯೆ ನಾನೊಬ್ಬ ಬರಹಗಾರನಾಗಿದ್ದೆ.

ಸಕಲಕಲಾವಲ್ಲಭರ ನಮ್ಮ ತರಗತಿಯಲ್ಲಿ ಎಂಥಾ ಮೋಜು ಇದ್ದಿರಬಹುದು, ಯೋಚಿಸಿ..

ಇದರ ನಡುವೆ ಸಿನಿಮಾದಂತೆ ಪ್ರವಾಸಗಳು, ಛಲಗಾರ ಗೆಳೆಯರು, ಏನೇನೋ ಘಟನೆಗಳು, ಆಗ ತೆರೆದುಕೊಳ್ಳುತ್ತಿದ್ದ ಗೆಳೆಯರ ಮಮತೆ..

ಜೀವನವೇ ಒಂದು ಅಡ್ಜೆಸ್ಟ್‌ಮೆಂಟ್‌; ಹೊಂದಿಕೊಳ್ಳುವುದೇ ಬೆಸ್ಟ್!

ಹೀಗೆ ದಿನಗಳು ಓಡತೊಡಗಿದಾಗ ಎಸ್‌. ಎಸ್‌. ಎಲ್‌.ಸಿ ಪರೀಕ್ಷೇ ಬಂದೇ ಬಿಟ್ಟಿತು. ಎಲ್ಲರಿಗೂ ಪರೀಕ್ಷೆಯ ಚಿಂತೆಯಾದರೆ ನನಗೆ ಗೆಳೆಯರ ಬಿಟ್ಟು ಮತ್ತೆ ಒಂಟಿಯಾಗುವ ಚಿಂತೆ!

ಆ ದಿನ ಕಳೆದುಹೋಗಿದೆ. ನಾನು ಮತ್ತೆ ಮೌನದ ಮುಸುಕನ್ನೇ ಹೊತ್ತಿದ್ದೇನೆ. ಈಗಲೂ ಆ ಗೆಳೆಯರು ಮತ್ತೆ ಸಿಗುವಂತಿದ್ದರೆ ಎಂದು ಮನಸ್ಸು ಬಯಸುತ್ತದೆ.

- ಶ್ರೀನಿವಾಸ ಬಿ ಔಂಟಿ ಬೀದರ,ಪತ್ರಿಕೋದ್ಯಮ ವಿದ್ಯಾರ್ಥಿ, ಗುವಿವಿ

click me!