Parenting Tips: ಮಕ್ಕಳಿಗೆ ಚಿಕ್ಕಂದಿನಲ್ಲೇ ಕಲಿಸಿಕೊಡಬೇಕಾದ ವಿಚಾರಗಳಿವು

By Suvarna News  |  First Published Jan 14, 2022, 9:02 PM IST

ಕೆಲವೊಂದು ಮಕ್ಕಳನ್ನು (Children) ನೀವು ನೋಡಿರಬಹುದು. ಯಾರ ಮಾತನ್ನೂ ಕೇಳದೆ ಹಠ ಮಾಡುತ್ತಾ ಎಲ್ಲರ ಜತೆ ಸಿಟ್ಟಿನಿಂದ ವರ್ತಿಸುತ್ತಾರೆ. ಯಾರ ಮಾತಿಗೂ ಬಗ್ಗುವುದಿಲ್ಲ. ಮಕ್ಕಳ ಇಂಥಹಾ ವರ್ತನೆ (Behaviour) ಪೋಷಕರಿಗೂ ತಲೆನೋವು (Headache) ತರಿಸುತ್ತದೆ. ಹಾಗಿದ್ರೆ ಮಕ್ಕಳಿಗೆ ಚಿಕ್ಕಂದಿನಲ್ಲೇ ಹೇಳಿ ಕೊಡಬೇಕಾದ ಬೋಧನೆಗಳೇನು ?
 


ತಾಯಿಯೇ ಮೊದಲ ಗುರು ಅನ್ನೋ ಮಾತೇ ಇದೆ. ಮಗುವಿನ ಮೊದಲ ಗುರುಗಳು ಪೋಷಕರು. ಮಗುವಿನ ತಪ್ಪನ್ನು ತಿದ್ದಿ, ಬುದ್ಧಿ ಹೇಳಿ ಒಳ್ಳೆಯ ದಾರಿಯಲ್ಲಿ ನಡೆಸಬೇಕಾದವರು. ಹೀಗಾಗಿಯೇ ಹೆತ್ತವರು ಮಕ್ಕಳಿಗೆ ಏನನ್ನು ಹೇಳಿಕೊಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಪೋಷಕರು ಹೇಳಿಕೊಡುವ ಮಾತುಗಳನ್ನೇ ಮಕ್ಕಳು ಕಲಿಯುತ್ತಾರೆ. ಅದನ್ನೇ ಅನುಸರಿಸುತ್ತಾರೆ. ತಂದೆ-ತಾಯಿಯ ಸಕಾರಾತ್ಮಕ ಬೋಧನೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪೀಕರಿಸುತ್ತದೆ. ಹೀಗಾಗಿ ಮಕ್ಕಳಿಗೆ ಏನನ್ನು ಹೇಳಿಕೊಡಬೇಕು, ಏನನ್ನು ಹೇಳಿಕೊಡಬಾರದು ಎಂಬುದನ್ನು ತಿಳಿದಿರಬೇಕಾದುದು ಅತೀ ಅಗತ್ಯ.

ಉತ್ತಮ ಮಕ್ಕಳು ಮಾತ್ರ ಮುಂದೆ ದೊಡ್ಡವರಾದಾಗ ಉತ್ತಮ ಪ್ರಜೆಗಳಾಗಲು ಸಾಧ್ಯ. ಹೀಗಾಗಿ ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ಅಗತ್ಯವಾದ ಬುದ್ಧಿಯನ್ನು ಹೇಳಿ ಕೊಡಬೇಕು. ಇದರಿಂದ ದೊಡ್ಡವರಾದಗಲೂ ಅವರು ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಪ್ರತಿ ಮಗುವಿಗೆ ಪ್ರೀತಿ, ಸಹಾನುಭೂತಿ ಮತ್ತು ದಯೆಯನ್ನು ಕಲಿಸಬೇಕು. ಇದರಿಂದ ಮಕ್ಕಳೂ ಬೆಳೆಯುತ್ತಿರುವ ವರ್ಷಗಳಲ್ಲಿ ಇತರರನ್ನು ಇದೇ ಮನೋಭಾವದಿಂದ ನೋಡುತ್ತಾರೆ. ನಿಮ್ಮ ಮಗುವಿಗೆ ನೀವು ಕಲಿಸಬೇಕಾದ 5 ವಿಷಯಗಳು ಇಲ್ಲಿವೆ. ಇದು ಮಕ್ಕಳ ಮನಸ್ಸಿನ ಮೇಲೆ ಧನಾತ್ಮಕವಾಗಿ ಪರಿಣಾಮವನ್ನು ಬೀರುತ್ತದೆ:

Tap to resize

Latest Videos

Parenting Tips: ಮಕ್ಕಳು ಹಾಲು ಕುಡಿದ್ರೆ ವಾಂತಿ, ಗಂಭೀರ ಕಾಯಿಲೆ ಬರುತ್ತಾ?

ಪ್ರೀತಿಯೇ ಜೀವನ
ಜಗತ್ತೇ ಪ್ರೀತಿ (Love)ಯಿಂದ ರೂಪುಗೊಂಡಿರುವಂತದ್ದು. ಪ್ರೀತಿಯಿಲ್ಲದೆ ಮನುಕುಲವಿಲ್ಲ. ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯನೆಡೆಗೆ ಪ್ರೀತಿಯಿರಬೇಕಾದುದು ಮುಖ್ಯ. ಪ್ರೀತಿಯಿಂದ ಮಾತ್ರ ಉತ್ತಮ ಸಂಬಂಧವನ್ನು ಬೆಳೆಸಲು ಸಾಧ್ಯ. ದ್ವೇಷದಿಂದ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರೀತಿಯ ಸಾರವನ್ನು ಮಕ್ಕಳಿಗೆ (Children) ಹೇಳಿಕೊಡಬೇಕಾದುದು ಅತೀ ಮುಖ್ಯವಾಗಿದೆ. ನಿಮ್ಮ ಮಗುವಿಗೆ ಎಲ್ಲರನ್ನೂ ಪ್ರೀತಿಸುವುದನ್ನು ಕಲಿಸಿ. ಜಾತಿ, ಮತ, ಧರ್ಮ, ವಯಸ್ಸು, ಲಿಂಗ, ಚರ್ಮದ ಬಣ್ಣ ಯಾವುದನ್ನೂ ಲೆಕ್ಕಿಸದೆ ಪ್ರತಿಯೊಬ್ಬ ಮನುಷ್ಯನನ್ನು ಪ್ರೀತಿಸುವುದನ್ನು ಹೇಳಿ ಕೊಡಿ. ಮೇಲು-ಕೀಲು, ಕಪ್ಪು-ಬಿಳಿ ಇದೆಲ್ಲಕ್ಕಿಂತಲೂ ಮನುಷ್ಯನ ಗುಣ ಮಿಗಿಲು ಎಂಬುದನ್ನು ಮನವರಿಕೆ ಮಾಡಿ.ನಿಮ್ಮ ಮಗುವಿಗೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವಂತೆ ಪ್ರೇರೇಪಿಸಿ. 

ದಯೆ ಎಲ್ಲಕ್ಕಿಂತ ಮಿಗಿಲು
ದಯೆ (Kindness)ಯಿಲ್ಲದ ಮನುಷ್ಯ ಕಲ್ಲಿಗೆ ಸಮಾನ. ಮನುಷ್ಯ ಎಂದಾಗ ಭಾವನೆಗಳಿರುವುದು ಮುಖ್ಯ. ಕಷ್ಟದಲ್ಲಿರುವವರನ್ನು ಕಂಡಾಗ ಕನಿಕರ, ದಯೆ ಮೂಡದಿದ್ದರೆ ಆತ ಮನುಷ್ಯನೇ ಅಲ್ಲ. ದಯಾ ಗುಣವನ್ನು ಪ್ರತಿ ಮಗುವಿಗೆ ಕಲಿಸಬೇಕಾದುದು ಅಗತ್ಯವಾಗಿದೆ. ಅದು ಮನುಷ್ಯನಾಗಲಿ ಅಥವಾ ಪ್ರಾಣಿಯಾಗಲಿ, ಮಗುವು ಈ ಪ್ರಪಂಚದ ಪ್ರತಿಯೊಂದು ಜೀವಿಗಳ ಮೇಲೆ ದಯೆ ತೋರುತ್ತಾ ಬೆಳೆಯಬೇಕು. ದಯೆ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಪೋಷಕರು ಕಷ್ಟದಲ್ಲಿರುವವರಿಗೆ ನೆರವಾಗುವ ಸಣ್ಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.

Parenting Tips: ಏನೇ ಹೇಳಿದರೂ ಮಕ್ಕಳು ಸಿಡುಕುತ್ತಿರುವುದ್ಯಾಕೆ?

ತಾಳ್ಮೆ ಅಗತ್ಯ
ಪಾಲಕರು ಯಾವಾಗಲೂ ತಮ್ಮ ಮಕ್ಕಳಿಗೆ ತಾಳ್ಮೆ (Patience) ಎಷ್ಟು ಮುಖ್ಯ ಎಂಬುದನ್ನು ಕಲಿಸಬೇಕು. ಮಕ್ಕಳಲ್ಲಿ ತಾಳ್ಮೆಯ ಮಟ್ಟವು ಯಾವಾಗಲೂ ಮಿತಿಗಿಂತ ಕೆಳಗಿರುತ್ತದೆ. ಬೆಳೆಯುತ್ತಿರುವ ವರ್ಷಗಳಲ್ಲಿ ಮಕ್ಕಳಲ್ಲಿ ಸಾಮಾನ್ಯವಾಗಿ ಅಸಹನೆ ಮತ್ತು ಸಿಟ್ಟನ್ನು ಕಾಣಬಹುದು. ಸಾಮಾಜಿಕ ಮುಜುಗರವನ್ನು ತಪ್ಪಿಸಲು, ಪೋಷಕರು ಆಗಾಗ್ಗೆ ಮಕ್ಕಳ ಬೇಡಿಕೆಗಳಿಗೆ ಮಣಿಯುತ್ತಾರೆ. ಈ ರೀತಿ ಮಾಡುವುದನ್ನು ಬಿಟ್ಟು ಮಕ್ಕಳು ಕಿರುಚಾಡಿಗಾಗ, ಅಸಹನೆ ವ್ಯಕ್ತಪಡಿಸಿದಾಗ ತಾಳ್ಮೆಯನ್ನು ಕಲಿಯುವಂತೆ ಮಗುವಿಗೆ ಹೇಳಿಕೊಡಬೇಕು.

ಸ್ವಗೌರವ ಬೆಳೆಸಿಕೊಳ್ಳಲು ಕಲಿಸಿಕೊಡಿ
ನಿಮ್ಮ ಮಗುವಿಗೆ ಅವರು ಇರುವ ರೀತಿಯಲ್ಲಿಯೇ ಒಪ್ಪಿಕೊಳ್ಳಲು ಕಲಿಸಿ. ಸೌಂದರ್ಯ (Beauty), ಪ್ರತಿಭೆಯ ವಿಷಯಕ್ಕೆ ಬಂದಾಗ ಮಕ್ಕಳು ಇತರ ಮಕ್ಕಳಂತಾಗಲು ಹಾತೊರೆಯುತ್ತಾರೆ. ಈ ಮೂಲಕ ತಮ್ಮ ಬಗ್ಗೆಯೇ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಇದನ್ನು ಪೋಷಕರು ಬದಲಾಯಿಸಬೇಕು. ನಿಮ್ಮ ಮಗುವು ಸ್ವತಃ ಅಸುರಕ್ಷಿತವಾಗಿದ್ದರೆ, ಪೋಷಕರಾಗಿ ನೀವು ಅವನನ್ನು ಅಥವಾ ಅವಳನ್ನು ಸ್ವಗೌರವ ಬೆಳೆಸಿಕೊಳ್ಳಲು ಕಲಿಸಿಕೊಡಿ.

ಪರಿಶ್ರಮ ಮುಖ್ಯ
ಯಶಸ್ಸು ದೊರಕಲು ಪರಿಶ್ರಮ ಅತೀ ಮುಖ್ಯ. ಪರಿಶ್ರಮವಿಲ್ಲದೆ ಯಾವುದೇ ಕೆಲಸದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಿಲ್ಲ. ಮಕ್ಕಳು ಸಾಮಾನ್ಯವಾಗಿ ಪಠ್ಯ ಅಥವಾ ಇತರ ಯಾವುದೇ ವಿಷಯದಲ್ಲಿ ತ್ವರಿತವಾಗಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಯಾವುದೇ ವಿಷಯದಲ್ಲಿ ಯಶಸ್ಸು ದೊರಕಲು ನಿರಂತರವಾಗಿ ಪರಿಶ್ರಮ ಪಡುವುದು ಮುಖ್ಯ ಎಂಬುದನ್ನು ಅವರಿಗೆ ತಿಳಿಸಿಕೊಡಿ.

click me!