
ಮನುಷ್ಯರೇ ಆಗಲಿ ಪ್ರಾಣಿಗಳೇ ಆಗಲಿ ತಮ್ಮ ಕರುಳ ಕುಡಿಗಳನ್ನು ಕಾಯುವುದಕ್ಕಾಗಿ ಎಂತಹ ಕಷ್ಟವನ್ನು ಕೂಡ ಎದುರಿಸುತ್ತಾರೆ. ಅದೇ ರೀತಿ ಅವುಗಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವವರೆಗೂ ಬಹಳ ಜೋಪಾನದಿಂದ ಕಾಯುತ್ತಾರೆ. ಇದಕ್ಕೆ ಪ್ರಾಣಿಗಳು ಹೊರತಲ್ಲ, ಪ್ರಾಣಿಗಳು ತಮ್ಮ ಮಕ್ಕಳನ್ನು ಕಾಳಜಿ ಮಾಡುವ ಹಲವು ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ರೀತಿ ಇಲ್ಲೊಂದು ಕಡೆ ಕರಡಿಯೊಂದು ತನ್ನ ಮರಿಯನ್ನು ಬೆನ್ನ ಮೇಲೆ ಹೊತ್ತು ಸಾಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ದೃಶ್ಯ ಕಂಡು ಬಂದಿದ್ದು, ರಾಜ್ಯದ ಪ್ರಸಿದ್ಧ ಕರಡಿ ಧಾಮವಾಗಿರುವ ಬಳ್ಳಾರಿ ಜಿಲ್ಲೆಯ ದಾರೋಜಿ ಕರಡಿ ಧಾಮದಲ್ಲಿ..
ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ತಾಯಿ ಕರಡಿಯೊಂದು ತನ್ನ ಎರಡು ಮಕ್ಕಳ ಜೊತೆ ಹಸಿರು ಕಾನನದ ನಡುವೆ ನಡೆದುಕೊಂಡು ಹೋಗುತ್ತಿದೆ. ತಾಯಿಯ ಬೆನ್ನ ಮೇಲೆ ಒಂದು ಮರಿ ನಿಂತಿದ್ದಾರೆ. ಇನ್ನೊಂದು ಮರಿ ತಾಯಿ ಸಾಗುವ ದಾರಿಯಲ್ಲೇ ತಾಯಿಯ ಹಿಂದೆಯೇ ಸಾಗುತ್ತಿದೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಫಾರೆಸ್ಟರ್ ಆಗಿ ಕೆಲಸ ಮಾಡುವ ಹೊಯ್ಸಳ ಸಂಜಯ್ ಹಾಗೂ ಪರಿಸರ ಪರಿವಾರ ಎಂಬ ಇನ್ಸ್ಟಾಗ್ರಾಮ್ ವೀಡಿಯೋದಿಂದ ಪೋಸ್ಟ್ ಮಾಡಲಾಗಿದೆ.
ವೀಡಿಯೋ ಪೋಸ್ಟ್ ಮಾಡಿದ ಅವರು 'ಕಿರಿ ಮಗ ಬೆನ್ನ ಮೇಲೆ ಹಿರಿ ಮಗ ಬೆನ್ನ ಹಿಂದೆ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಕರಡಿ ಜೀವಶೈಲಿಯ ಬಗ್ಗೆ ವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಕರಡಿಗಳು ಸಾಮಾನ್ಯವಾಗಿ ಎರಡು ಮರಿಗಳಿಗೆ ಜನ್ಮ ನೀಡುತ್ತವೆ. ಮರಿ ದೊಡ್ಡವಾಗುವ ತನಕ ತಾಯಿ ಕರಡಿ ಎರಡೂ ಮರಿಗಳನ್ನು ಕಾಡಿನಲ್ಲಿ ಹೆಗಲ ಮೇಲೆ ಕೂರಿಸಿಕೊಂಡು ಅಡ್ಡಾಡುತ್ತದೆ. ಪ್ರಾಣಿ ಪ್ರಪಂಚದಲ್ಲಿ ಈ ರೀತಿ ಮರಿಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಓಡಾಡುವ ಪರಿಪಾಠ ಕರಡಿಗಳಿಗೆ ಮಾತ್ರವಿದೆ. ಮರಿಗಳು ಹೆಗಲ ಮೇಲೆ ಕುಳಿತಾಗ ಸಾಮಾನ್ಯವಾಗಿ ತಬ್ಬಿಕೊಂಡು ಮಲಗಿದ ಭಂಗಿಯಲ್ಲಿರುತ್ತವೆ. ಈ ವಿಡಿಯೋದಲ್ಲಿ ಮರಿ ಸ್ವಲ್ಪ ದೊಡ್ಡದಾಗಿರುವ ಕಾರಣ ಒಂದು ಮರಿ ಮಾತ್ರ ಹೆಗಲ ಮೇಲಿದ್ದು, ಮತ್ತೊಂದು ಕೆಳಗೆ ನಡೆಯುತ್ತಾ ತಾಯಿಯನ್ನು ಹಿಂಬಾಲಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಮರಿ ತಬ್ಬಿ ಕೂರದೆ ನಿಂತು ಅತ್ತಿತ್ತ ನೋಡುತ್ತಾ ಹೋಗುತ್ತಿರುವುದು ಎಂದು ಅವರು ಬರೆದಿದ್ದಾರೆ.
ಮುಂದುವರೆದು ಕರ್ನಾಟಕದಲ್ಲಿ ಏಷ್ಯಾದ ಮೊದಲ ಕರಡಿ ಧಾಮ ಎನ್ನುವುದಕ್ಕೆ ಪ್ರಸಿದ್ಧವಾದ ಬಳ್ಳಾರಿ ಜಿಲ್ಲೆಯ ದಾರೋಜಿ ಕರಡಿಧಾಮವಿದ್ದು, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಅರಸೀಕೆರೆ ಭಾಗದಲ್ಲಿ ಅಭಯಾರಣ್ಯಗಳ ಸಂಖ್ಯೆ ಕಡಿಮೆ ಇದ್ದರೂ ಸಾಕಷ್ಟು ಕರಡಿಗಳಿವೆ. ಇನ್ನೂ ಪ್ರಮುಖ ವನ್ಯಜೀವಿ ತಾಣಗಳಾದ ಬಂಡೀಪುರ, ನಾಗರಹೊಳೆ, ಬಿ.ಆರ್‌ಟಿ, ಭದ್ರಾ, ದಾಂಡೇಲಿ ಕಡೆಗಳಲ್ಲೂ ಸಾಕಷ್ಟು ಕರಡಿಗಳಿವೆ. ಕಾಡಿನಲ್ಲಿ ಆನೆ ಬಿಟ್ಟರೆ ಅತಿಹೆಚ್ಚು ಆಕ್ರಮಣಕಾರಿ ಪ್ರಾಣಿ ಎಂದರೆ ಅದು ಕರಡಿ ಎನ್ನುವುದು ಕಾಡಿನಲ್ಲಿ ಕೆಲಸ ಮಾಡಿದ ಅನುಭವಿ ಕೆಲಸಗಾರರ ಅಭಿಪ್ರಾಯ. ಸ್ವಲ್ಪ ದಿನಗಳ ಹಿಂದೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಕರಡಿಯೊಂದು ಗಸ್ತಿನಲ್ಲಿ ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿಯಾಗಿದ್ದ ಪ್ರಕರಣ ವರದಿಯಾಗಿತ್ತು ಎಂದು ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಪರಿಸರದೊಳಗಿನ ಈ ಅಪರೂದಪ ವೀಡಿಯೋ ನೋಡಿದ ವೀಕ್ಷಕರು ಬಹಳ ಸೊಗಸಾದ ವೀಡಿಯೋ ಎಂದು ಖುಷಿ ಪಟ್ಟಿದ್ದಾರೆ. ಪ್ರಾಣಿ ಯಾವುದೇ ಆದರೂ ತಾಯಿ ಪ್ರೀತಿ ಒಂದೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರತಿ ಮನೆಯಲ್ಲೂ 2ನೇಯವರಾಗಿ ಹುಟ್ಟಿದ ಮಕ್ಕಳು ರೌಡಿಗಳಂತಿರುತ್ತಾರೆ. ಮೊದಲಿಗೆ ಹುಟ್ಟಿದವರು ಪಾಪದವರಂತಿರುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವಾವ್ ಅದ್ಭುತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರ. ಒಟ್ಟಿನಲ್ಲಿ ಈ ವೀಡಿಯೋ ಪ್ರಾಣಿ ಹಾಗೂ ಪರಿಸರ ಪ್ರಿಯರನ್ನು ಮೆಚ್ಚಿಸಿದೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.