ಅಪಘಾತದ ನಂತರ ಅಂಗವಿಕಲಳಾದ ಗೃಹಿಣಿಯನ್ನು ಪತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದು, ಎರಡು ವರ್ಷವಾದರೂ ಮರಳಿ ಬಾರದ ಆತನ ವಿರುದ್ಧ ಅಪೊಲೊ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಈಗ ಕೋಟಿ ರೂನ ಬಿಲ್‌ಗಾಗಿ ಕೋರ್ಟ್ ಮೆಟ್ಟಿಲೇರಿದೆ.
ಕೋಲ್ಕತ್ತಾ: ಅಪಘಾತದ ನಂತರ ಅಂಗವಿಕಲಳಾದ ಗೃಹಿಣಿಯನ್ನು ಪತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದು, ಎರಡು ವರ್ಷವಾದರೂ ಮರಳಿ ಬಾರದ ಆತನ ವಿರುದ್ಧ ಅಪೊಲೊ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಈಗ ಕೋಟಿ ರೂನ ಬಿಲ್‌ಗಾಗಿ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಬಂಧಿಸಿದ ಅಮ್ಹೆರ್ಸ್ಟ್ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಈ ವೇಳೆ ಆಕೆಯನ್ನು ತನಗೆ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾನೆ.
ಅಪಘಾತದ ನಂತರ ಮಹಿಳೆ ಮಾತು ಕಳೆದುಕೊಂಡಿದ್ದು, ಆಕೆಯ ದೇಹದ ಕೆಳಭಾಗ ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾಗಿದೆ. ಇತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾದ ಪತಿಯನ್ನು ನ್ಯಾಯಾಧೀಶರಾದ ಅಮೃತಾ ಸಿನ್ಹಾ ಅವರು ಏಕೆ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪತಿ ತಾನೊಬ್ಬ ಅಂಗಡಿಯೊಂದರ ಮಾಲೀಕನಾಗಿದ್ದು, ಅಂಗವಿಕಲ ಪತ್ನಿಯ ಆರೈಕೆಗೆ ಬೇಕಾದ ಸಾಧನ ತನ್ನ ಬಳಿ ಇಲ್ಲ ಎಂದು ಹೇಳಿದ್ದಾನೆ.
ಇತ್ತ ಅಪೊಲೊ ಆಸ್ಪತ್ರೆ ಪರ ವಕೀಲರು ನ್ಯಾಯಾಲಯದಲ್ಲಿ ಮಾತನಾಡಿ ಆಸ್ಪತ್ರೆಯು ಆಕೆಗೆ ಎರಡು ವರ್ಷಗಳ ಕಾಲ ಚಿಕಿತ್ಸೆ ನೀಡಿದೆ, ಆಕೆಗೆ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ ಮತ್ತು ಆಕೆಯ 6 ಲಕ್ಷ ರೂ. ವಿಮಾ ಮೊತ್ತವು ಬಹಳ ಹಿಂದೆಯೇ ಖಾಲಿಯಾಗಿದೆ ಎಂದು ವಾದಿಸಿದರು. ಪ್ರಸ್ತುತ ಬಾಕಿ ಇರುವ ಮೊತ್ತ 1 ಕೋಟಿ ರೂ. ಹಾಗೂ ರೋಗಿಯ ಜವಾಬ್ದಾರಿಯನ್ನು ಇನ್ನು ಮುಂದೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಇದೇ ವೇಳೆ ಮಹಿಳೆಯ ಪತಿ ಬೇರೆಯೇ ಕುಟುಂಬವನ್ನು ಶುರು ಮಾಡಿದ್ದಾರೆ ಎಂದು ಆಸ್ಪತ್ರೆ ಪರ ವಕೀಲರು ನ್ಯಾಯಾಲಯದಲ್ಲಿ ದೂರಿದ್ದಾರೆ. ಆದರೆ, ನ್ಯಾಯಮೂರ್ತಿ ಸಿನ್ಹಾ ಅವರು ಕುಟುಂಬದ ಈ ವಿಚಾರದಲ್ಲಿ ತಲೆ ಹಾಕಲಿಲ್ಲ. ರಾಜ್ಯವು ಉಚಿತ ಸೇವೆಗಳನ್ನು ನೀಡುವ ಆಶ್ರಯ ತಾಣಗಳನ್ನು ಹೊಂದಿದೆ ಎಂದು ರಾಜ್ಯದ ಪರ ವಕೀಲರು ವಾದಿಸಿದರು. ಆದರೆ ರಾಜ್ಯ ಚಾಲಿತ ಆಶ್ರಯ ತಾಣದ ನೌಕರರು ಅನಾರೋಗ್ಯ ಪೀಡಿತ ರೋಗಿಗಳನ್ನು ನೋಡಿಕೊಳ್ಳುವಷ್ಟು ಪರಿಣತಿಯನ್ನು ಹೊಂದಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 9 ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತು ಇಂತಹ ಜನರಿಗೆ ರಾಜ್ಯವು ಯಾವುದೇ ನಿಯಂತ್ರಣವನ್ನು ಹೊಂದಿದ್ದರೆ ತಿಳಿಸುವಂತೆ ಮತ್ತು ಪರಿಹಾರವನ್ನು ಸೂಚಿಸುವಂತೆ ನ್ಯಾಯಮೂರ್ತಿ ಸಿನ್ಹಾ ಅವರು ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶನ ನೀಡಿದರು. ಆ ದಿನ ಪತಿಯೂ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಮೂಲಗಳ ಪ್ರಕಾರ, 40 ರ ಹರೆಯದ ಮಹಿಳೆಯನ್ನು ಸೆಪ್ಟೆಂಬರ್ 2021 ರಲ್ಲಿ ಅವರ ಪತಿ ತಲೆಗೆ ಗಾಯವಾದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದರು. ಈ ಮಹಿಳೆಗೆ ಜೀವ ಉಳಿಸುವ ನರಶಸ್ತ್ರಚಿಕಿತ್ಸೆ ಸೇರಿದಂತೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಆದರೆ ಅವರು ಬದುಕುಳಿದರಾದರೂ ಅವರಿಗಾದ ಗಾಯವು ಅವರಿಗೆ ಚಲಿಸಲಾಗದಂತೆ ಮಾಡಿದೆ. ಅವರ ಸ್ಥಿತಿ ಸ್ಥಿರವಾಗಿದ್ದರೂ, ಅವರ ಪತಿ ಜೈಪ್ರಕಾಶ್ ಗುಪ್ತಾ ಅವರನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಗುಪ್ತಾಗೆ ಹಲವಾರು ಬಾರಿ ಆಸ್ಪತ್ರೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಆಸ್ಪತ್ರೆಯು ಕಳೆದ ವರ್ಷ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ನಿಯಂತ್ರಣ ಆಯೋಗವನ್ನು ಸಂಪರ್ಕಿಸಿತು. ಆರೋಗ್ಯ ಸಮಿತಿಯ ವಿಚಾರಣೆಗೂ ಗುಪ್ತಾ ಹಾಜರಾಗಲು ವಿಫಲವಾದ ನಂತರ, ನ್ಯಾಯಮೂರ್ತಿ (ನಿವೃತ್ತ) ಆಶಿಮ್ ಕುಮಾರ್ ಬ್ಯಾನರ್ಜಿ ಅವರು ಆಸ್ಪತ್ರೆಗೆ ನ್ಯಾಯಾಲಯಗಳನ್ನು ಸಂಪರ್ಕಿಸುವುದು ಸೂಕ್ತ ಎಂದು ಅಪೊಲೊಗೆ ತಿಳಿಸಿದರು.
ಪ್ರಸ್ತುತ, ಈ ಮಹಿಳೆಯನ್ನು ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸಾಮಾನ್ಯ ಹಾಸಿಗೆಯಲ್ಲಿ ಇರಿಸಲಾಗಿದ್ದು, ಸರದಿಯಲ್ಲಿ ನರ್ಸ್‌ಗಳು ನೋಡಿಕೊಳ್ಳುತ್ತಿದ್ದಾರೆ. ಗಾಯವು ಅವರನ್ನು ನಿಶ್ಚಲರನ್ನಾಗಿಸಿದಾಗಲೂ ಅವರನ್ನು ತಮ್ಮ ಸಂಬಂಧಿಕರಂತೆ ನೋಡಿಕೊಳ್ಳುತ್ತಿರುವ ನಮ್ಮ ನರ್ಸ್‌ಗಳಿಗೆ ನಮಸ್ಕಾರ. ಆದರೆ ಈ ಮಹಿಳೆಗೆ ಅವರ ಕುಟುಂಬದ ಪ್ರೀತಿ ಮತ್ತು ಆರೈಕೆಯ ಅಗತ್ಯವಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.