ಇತ್ತೀಚೆಗೆ ವಿವಾಹ ವಿಚ್ಛೇದನಗಳು ಇಂತಹದ್ದೇ ನಿಗದಿತ ಕಾರಣಗಳಿಗೆ ಆಗುತ್ತವೆ ಎಂದು ಹೇಳಲಾಗದು, ವಿವಾಹೇತರ ಸಂಬಂಧಗಳು, ಕಾಯಿಲೆ, ಮಾನಸಿಕ ಕಿರುಕುಳ, ಮಕ್ಕಳಾಗದ ಸಮಸ್ಯೆ ಹೀಗೆ ಇಂತಹ ಗಂಭೀರವೆನಿಸಿದ ಕಾರಣಗಳ ಜೊತೆ ಕೆಲವು ಕ್ಷುಲ್ಲಕ ವಿಚಾರಗಳಿಗೂ ಇಂದು ವಿಚ್ಚೇದನಗಳು ನಡೆಯುತ್ತವೆ ಎಂಬುದನ್ನು ವಕೀಲರು ವೀಡಿಯೋ ಮೂಲಕ ತಿಳಿಸಿದ್ದು, ವಕೀಲರ ಈ ವೀಡಿಯೋ ಈಗ ವೈರಲ್ ಆಗಿದೆ.
ಮುಂಬೈ: ಗಂಡ ನನ್ನ ಪ್ರೀತಿಸಲ್ಲ, ಹೊಡಿತಾನೆ ಬಡಿತಾನೆ, ಬೇರೆ ಹೆಣ್ಮಕ್ಕಳನ್ನ ಪ್ರೀತಿ ಮಾಡ್ತಾನೆ, ನನ್ನ ಗೌರವಿಸಲ್ಲ ಎಂಬೆಲ್ಲಾ ಕಾರಣಕ್ಕೆ ವಿಚ್ಛೇದನಕ್ಕೆ ಹೆಂಗೆಳೆಯರು ಮುಂದಾಗಿರುವುದನ್ನು ನೀವು ಇದುವರೆಗೂ ನೋಡಿರಬಹುದು. ಆದರೆ ಇಲ್ಲೊಬ್ಬಳು ತನ್ನ ಗಂಡ ತುಂಬಾ ಪ್ರೀತಿ ಮಾಡ್ತಾನೆ ಜಗಳ ಮಾಡಲ್ಲ ಎಂಬ ಕಾರಣಕ್ಕೆ ಗಂಡನಿಂದ ವಿಚ್ಛೇದನ ಪಡೆಯಲು ಮುಂದಾಗಿರುವ ವಿಚಿತ್ರ ಘಟನೆ ನಡೆದಿದೆ. ಮುಂಬೈ ಮೂಲದ ಕಂಟೆಂಟ್ ಕ್ರಿಯೇಟರ್ ಆಗಿರುವ ಮಹಿಳಾ ವಕೀಲರೊಬ್ಬರು ಈ ವಿಚಾರ ತಿಳಿಸಿದ್ದಾರೆ. ಇದರ ಜೊತೆಗೆ ಅವರು ವಿಚ್ಛೇದನ ಬಯಸುವವರು ನೀಡಿದ ಹಲವು ಕ್ಷುಲಕ ಕಾರಣಗಳ ಲಿಸ್ಟ್ ನೀಡಿದ್ದು, ಮದುವೆಯ ಹೊಸ್ತಿಲಲ್ಲಿರುವವರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಇತ್ತೀಚೆಗೆ ವಿವಾಹ ವಿಚ್ಛೇದನಗಳು ಇಂತಹದ್ದೇ ನಿಗದಿತ ಕಾರಣಗಳಿಗೆ ಆಗುತ್ತವೆ ಎಂದು ಹೇಳಲಾಗದು, ವಿವಾಹೇತರ ಸಂಬಂಧಗಳು, ಕಾಯಿಲೆ, ಮಾನಸಿಕ ಕಿರುಕುಳ, ಮಕ್ಕಳಾಗದ ಸಮಸ್ಯೆ ಹೀಗೆ ಇಂತಹ ಗಂಭೀರವೆನಿಸಿದ ಕಾರಣಗಳ ಜೊತೆ ಕೆಲವು ಕ್ಷುಲ್ಲಕ ವಿಚಾರಗಳಿಗೂ ಇಂದು ವಿಚ್ಚೇದನಗಳು ನಡೆಯುತ್ತವೆ ಎಂಬುದನ್ನು ಈ ವಕೀಲರು ವೀಡಿಯೋ ಮೂಲಕ ತಿಳಿಸಿದ್ದು, ಈ ವಕೀಲರ ವೀಡಿಯೋ ಈಗ ವೈರಲ್ ಆಗಿದೆ. ಮುಂಬೈ ಮೂಲದ ವಕೀಲೆಯಾಗಿರುವ ತಾನ್ಯಾ ಅಪ್ಪಚ್ಚು ಕೌಲ್ ಎಂಬುವವರು ಯಾವೆಲ್ಲಾ ಕ್ಷುಲ್ಲಕ ಕಾರಣಕ್ಕೆ ವಿಚ್ಚೇದನ ನಡೆಯುತ್ತದೆ ಎಂಬುದನ್ನು ಕೇಳಿದರೆ ನೀವು ಶಾಕ್‌ಗೆ ಒಳಗಾಗುವುದು ಗ್ಯಾರಂಟಿ. ಇವರ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಹೊಸ ಚರ್ಚೆ ಸೃಷ್ಟಿಸಿದ್ದು, ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ನೆಪಕ್ಕಷ್ಟೇ ಮದುವೆ ಆಗುತ್ತಿದ್ದಾರೆ. ಸಂಸಾರ ನಡೆಸುವುದಕ್ಕಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಕೀಲರು ಹೇಳಿದ ಕೆಲವು ಸಿಲ್ಲಿ ಎನಿಸುವಂತಹ ಕಾರಣಗಳು ಇಲ್ಲಿವೆ ನೋಡಿ,
ಹನಿಮೂನ್ ಸಮಯದಲ್ಲಿ ಅಸಭ್ಯ ಹೆಂಡತಿ ಅಸಭ್ಯವಾಗಿ ಬಟ್ಟೆ ತೊಟ್ಟಿದ್ದಳು ಎಂದು ಓರ್ವ ಪತಿ ವಿಚ್ಚೇದನ (Divorce) ಕೇಳಿದ್ದರೆ, ಪತ್ನಿಯೊಬ್ಬಳು, ತನ್ನ ಪತಿ ಕೇಂದ್ರ ನಾಗರಿಕ ಸೇವಾ ಆಯೋಗದ ಪರೀಕ್ಷೆಗೆ (UPSC) ಸಿದ್ಧತೆ ನಡೆಸುತ್ತಿದ್ದು, ತನಗೆ ಆತ ಸಮಯ ನೀಡುತ್ತಿಲ್ಲ ಎಂದು ವಿಚ್ಛೇದನಕ್ಕೆ ಕಾರಣ ಹೇಳಿದ್ದಾಳೆ. ಇನ್ನೊಂದು ಪ್ರಕರಣದಲ್ಲಿ ಹೆಂಡತಿ ತನ್ನ ಪಾದ ಮುಟ್ಟಲು ನಿರಾಕರಿಸಿದಳು ಎಂದು ಗಂಡ ವಿಚ್ಚೇದನ ಕೇಳಿದ್ದರೆ, ಮತ್ತೊಂದು ಪ್ರಕರಣದಲ್ಲಿ ಹೆಂಡತಿಗೆ ಅಡುಗೆ ಮಾಡಲು ತಿಳಿದಿಲ್ಲ, ಬೆಳಗ್ಗೆ ಮನೆಯಲ್ಲಿ ಉಪಹಾರ ತಯಾರಿಸದೇ ಕೆಲಸಕ್ಕೆ ಹೊರಟು ಹೋಗುತ್ತಾಳೆ ಎಂದು ಆರೋಪಿಸಿ ಗಂಡ ವಿಚ್ಚೇದನ ಕೇಳಿದ್ದಾನೆ.
ಆದರೆ ಇನ್ನು ವಿಚಿತ್ರವೆನಿಸುವ ಪ್ರಕರಣದಲ್ಲಿ ಹೆಂಡತಿಯೋರ್ವಳು, ಗಂಡ ನನ್ನನ್ನು ತುಂಬಾ ಪ್ರೀತಿ ಮಾಡುತ್ತಾನೆ. ನಾನು ಏನು ಮಾಡಿದರು ಜಗಳ ಮಾಡುವುದಿಲ್ಲ, ಆತನ ಪ್ರೀತಿ ನನ್ನ ಉಸಿರುಕಟ್ಟಿಸಿದೆ ಎಂದು ಮಹಿಳೆಯೊಬ್ಬಳು ಆರೋಪಿಸಿದ್ದಾಳೆ. 2020ರಲ್ಲಿ ಬೆಳಕಿಗೆ ಬಂದ ಉತ್ತರ ಪ್ರದೇಶದ ಜೋಡಿಯ ವಿಚ್ಚೇದನ ಪ್ರಕರಣ ಇದಾಗಿದ್ದು, ಇಲ್ಲಿ ಮಹಿಳೆ ಗಂಡ ನನ್ನನ್ನು ತುಂಬಾ ಪ್ರೀತಿಸುತ್ತಾನೆ ಜಗಳವೇ ಆಡುತ್ತಿಲ್ಲ ಎಂದು ಹೇಳಿ ಮದುವೆಯಾದ 18ನೇ ತಿಂಗಳಿಗೆ ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು.
ಈ ರೀತಿಯ ಕ್ಷುಲಕ ಕಾರಣಗಳಿಗೆ ವಿಚ್ಚೇದನವಾಗುತ್ತದೆ ಎಂದು ತಿಳಿಸಿರುವ ಈ ವೀಡಿಯೋವನ್ನು 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೀವೇಕೆ ಮದುವೆಯಾಗುತ್ತೀರಿ ಎಂದು ಶೀರ್ಷಿಕೆ ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಮದುವೆ ಬೇಕು ಸಂಸಾರ ಬೇಡ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮದುವೆಗೂ ಮೊದಲು ಯುವ ಸಮೂಹಕ್ಕೆ ವಿವಾಹದ ಬಗ್ಗೆ ಕೌನ್ಸೆಲಿಂಗ್ ಮಾಡುವುದು ಕಡ್ಡಾಯ ಮಾಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.