
ಅತ್ತೆ ಮನೆಯವರು ಒರಟಾಗಿ ವರ್ತಿಸಿದ್ರು ಎಂದು ಗಂಡನ ಮನೆ ಹತ್ತಿದ ಕೇವಲ 20 ನಿಮಿಷದಲ್ಲಿ ವಧುವೊಬ್ಬಳು ಯಾರ ಮಾತು ಕೇಳದೆ ಮದುವೆ ಮುರಿದುಕೊಂಡ ಘಟನೆ ಉತ್ತರ ಪ್ರದೇಶದ ದಿಯೋರಿಯಾದಲ್ಲಿ ನಡೆದಿದೆ. ನವೆಂಬರ್ 25 ರಂದು ಈ ಮದುವೆ ನಡೆದಿದ್ದು, 26ರಂದು ಈ ಘಟನೆ ನಡೆದಿದೆ. ಮದುವೆಯ ಎಲ್ಲಾ ಸಂಪ್ರದಾಯ ಸಂಭ್ರಮಾಚರಣೆಯನ್ನು ಮುಗಿಸಿಕೊಂಡು ಗಂಡನ ಮನೆಗೆ ಬಂದ ವಧು ಕೆಲ ನಿಮಿಷದಲ್ಲಿಯೇ ಈ ಮನೆಯಲ್ಲಿ ನಾನು ಇರುವುದಿಲ್ಲ ಎಂದು ಹೇಳಿ ಅಪ್ಪ ಅಮ್ಮನನ್ನು ಕರೆಸಲು ಹೇಳಿದ್ದಾಳೆ. ಗಂಡನ ಮನೆಯವರು ಆಕೆಯ ಮನವೊಲಿಸಲು ಹಲವು ಪ್ರಯತ್ನ ಮಾಡಿದರು ಯಾವುದು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಮರುದಿನ ಆಕೆಯನ್ನು ಕರೆಸಿ ಆಕೆಯ ತವರು ಮನೆಗೆ ಕಳುಹಿಸಿಕೊಟ್ಟಂತಹ ಘಟನೆ ನಡೆದಿದೆ.
ದಿಯೋರಿಯಾದ ಭಲುವಾನಿಯಲ್ಲಿ ತಂದೆಯೊಂದಿಗೆ ಜನರಲ್ ಸ್ಟೋರೊಂದನ್ನು ನಡೆಸುತ್ತಿದ್ದ ವಿಶಾಲ್ ಮಧೇಸಿಯಾ ಅವರಿಗೆ ನವೆಂಬರ್ 25ರಂದು ಸಲೇಂಪುರ್ ನಿವಾಸಿಯಾದ ಪೂಜಾ ಎಂಬಾಕೆಯ ಜೊತೆ ಮದುವೆ ನಡೆದಿತ್ತು. ಅದೇ ದಿನ ರಾತ್ರಿ ವಧುವನ್ನು ವರನ ಮನೆಗೆ ಕಳುಹಿಸಿಕೊಟ್ಟಿದ್ದರು. ಮದುವೆಯ ಭಾಗವಾಗಿ ನೆಂಟರು, ಸ್ನೇಹಿತರು ಕುಣಿದು ಕುಪ್ಪಳಿಸಿದರು, ಕಂಠಪೂರ್ತಿ ಕುಡಿದರು. ಫೋಟೊಗಳನ್ನು ಕ್ಲಿಕ್ಕಿಸಿದರು ಸಿಹಿ ಹಂಚಿ ಸಂಭ್ರಮಿಸಿದರು ಇದಾದ ನಂತರ ವಧುವನ್ನು ವರನ ಮನೆಗೆ ಕಳುಹಿಸಿ ಕೊಡಲಾಯ್ತು. ಮದುವೆಯೊಂದು ಬಹಳ ಪರಿಪೂರ್ಣವಾಗಿ ನಡೆದಂತೆ ಕಾಣುತ್ತಿತ್ತು. ಆದರೆ ವಧು ತವರು ಮನೆ ಬಿಟ್ಟು ಗಂಡನ ಮನೆಗೆ ಬರುತ್ತಿದ್ದಂತೆ ಆಕೆಗೆ ಏನಾಯಿತು ಏನೋ, ಮನೆಗೆ ಬಂದು 20 ನಿಮಿಷಗಳ ಂತರ ಆಕೆ ಮನೆಯಿಂದ ಹೊರಗೆ ಬಂದು ಸಂಬಂಧಿಕರು ಹಾಗೂ ಅತಿಥಿಗಳ ಮುಂದೆ ಜೋರಾಗಿ, ನಾನು ಇಲ್ಲಿ ವಾಸಿಸುವುದಿಲ್ಲ ಎಂದು ಹೇಳಿದ್ದಾಳೆ.
ಅಲ್ಲಿದ್ದವರು ಮೊದಲಿಗೆ ಆಕೆ ತಮಾಷೆ ಮಾಡುತ್ತಿದ್ದಾಳೆ, ಅಥವಾ ಅಲ್ಲಿ ಸೇರಿದ್ದ ಜನರಿಗೆ ಸುಮ್ಮನೇ ಚಮಕ್ ನೀಡಲು ಹಾಗೆ ಮಾಡುತ್ತಿದ್ದಾಳೆ ಎಂದು ಭಾವಿಸಿದರು. ಆದರೆ ಹಾಗೆ ಆಗಲಿಲ್ಲ, ಆಕೆ ಬಹಳ ಗಂಭೀರವಾಗಿಯೇ ನನ್ನ ಹೆತ್ತವರಿಗೆ ಕರೆ ಮಾಡಿ ನಾನು ಇಲ್ಲಿ ವಾಸಿಸುವುದಿಲ್ಲ ಎಂದು ಹೇಳಿದ್ದಾಳೆ. ಆಕೆ ನಿಜವನ್ನೇ ಹೇಳುತ್ತಿದ್ದಾಳೆ ಎಂಬುದನ್ನು ನಂತರ ಅರ್ಥ ಮಾಡಿಕೊಂಡ ವರನ ಕುಟುಂಬದವರು ಆಕೆಯನ್ನು ಮೊದಲು ಸೌಮ್ಯವಾಗಿ ಮನವೊಲಿಸಲು ಯತ್ನಿಸಿದರು. ಆಕೆ ಒಪ್ಪದೇ ಹೋದಾಗ ಭಾವನಾತ್ಮಕವಾಗಿ ಬೆದರಿಸಿದರು. ಅದಕ್ಕೂ ಮಣಿಯದೇ ಹೋದಾಗ ವಿಶಾಲ್‌ನ ಕುಟುಂಬದವರು ಪೂಜಾಳ ಪೋಷಕರಿಗೆ ಕರೆ ಮಾಡಿದರು. ಅವರೂ ಬಂದರು ನಂತರ ಎರಡು ಕುಟುಂಬದ ಮಧ್ಯೆ ನೆಂಟರ ಸಮ್ಮುಖದಲ್ಲೇ ಪೂಜಾಳ ಮನವೊಲಿಸುವ ಪ್ರಯತ್ನ ನಡೆಯಿತು.
ಇದನ್ನೂ ಓದಿ: ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ
ಈ ಸಂಧಾನ ಸಭೆ 5 ಗಂಟೆಗಳವರೆಗೆ ನಡೆದರೂ ಕೂಡ ಎಲ್ಲಾ ಜ್ಯೋತಿಷ್ಯದಿಂದ ಹಿಡಿದು ಮದುವೆ ಊಟದವರೆಗೂ ಎಲ್ಲದರ ಬಗ್ಗೆ ಚರ್ಚಿಸಿದರು ಕೂಡ ವಧುವಿನ ನಿರ್ಧಾರದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಲಿಲ್ಲ, ಕಡೆಗೆ ಸಂಧಾನ ಸಭೆ ನಡೆಸಿದವರು ಮದುವೆ ಮುರಿಯುವಂತೆ ಎರಡೂ ಕುಟುಂಬದವರಿಗೆ ಸೂಚಿಸಿದರು. ನಂತರ ಎರಡೂ ಕಡೆಯವರು ಸೇರಿ ಈ ನವದಂಪತಿಯ ಮದುವೆ ಮುರಿಯುವ ನಿರ್ಧಾರ ಮಾಡಿ ಬರಹ ರೂಪದ ಒಪ್ಪಂದ ಮಾಡಿದರು. ಅದರಂತೆ ಮದುವೆಯಲ್ಲಿ ಪರಸ್ಪರ ವಿನಿಮಯ ಮಾಡಿಕೊಂಡ ಉಡುಗೊರೆ ಹಾಗೂ ಹಣವನ್ನು ಹಿಂದಿರುಗಿಸುವುದು ಹಾಗೂ ಇಬ್ಬರೂ ಮರು ಮದುವೆ ಮಾಡಿಕೊಳ್ಳಲು ಅರ್ಹರು ಎಂಬ ನಿರ್ಧಾರಕ್ಕೆ ಬರಲಾಯ್ತು. ನಂತರ ನವೆಂಬರ್ 26 ರಂದು ಸಂಜೆ 6 ಗಂಟೆಯ ಹೊತ್ತಿಗೆ ಪೂಜಾ ಗಂಡನ ಮನೆಯಿಂದ ತನ್ನ ಹೆತ್ತವರ ಮನೆಗೆ ಮರಳಿದ್ದಾಳೆ.
ಆದರೆ ವಧುವಿನ ಈ ಹಠಾತ್ ನಿರ್ಧಾರದಿಂದ ವರ ವಿಶಾಲ್ ಇನ್ನೂ ಆಘಾತದಲ್ಲಿದ್ದಾನೆ ಎಂದು ವರದಿಯಾಗಿದೆ. ಪೂಜಾ ಮದುವೆಗೆ ಮೊದಲು ಯಾವುದೇ ಹಿಂಜರಿಕೆ ತೋರಿಸಿರಲಿಲ್ಲ ಮತ್ತು ಸಂಪೂರ್ಣವಾಗಿ ಸಾಮಾನ್ಯ ಎಂಬಂತೆ ವರ್ತಿಸಿದ್ದರು. ಆಕೆಯ ಹಠಾತ್ ನಿರಾಕರಣೆ ಎರಡೂ ಕುಟುಂಬಗಳಿಗೆ ಮುಜುಗರವನ್ನುಂಟುಮಾಡಿತು ಎಂದು ವರ ವಿಶಾಲ್ ಹೇಳಿದ್ದು, ಅದರ ಹೊರತಾಗಿ ಅವರು ವಧುವಿನ ಮೇಲೆ ಬೇರೆ ಯಾವುದೇ ಆರೋಪವನ್ನು ಮಾಡಿಲ್ಲ ಎಂದು ವರದಿಯಾಗಿದೆ. ಆದರೆ ಈ ವಿಚಾರವೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.
ಇದನ್ನೂ ಓದಿ: 11,691 ರೂ. ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಅನೇಕರು ವಧು ಮಾಡಿದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕೆಲವು ವರ್ಷಗಳ ಕಾಲ ಹೊಂದಾಣಿಕೆ ಮಾಡಿಕೊಂಡು ಜೀವನವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಇದು ಉತ್ತಮ ನಿರ್ಧಾರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸದ್ಯ ಆಕೆ ಮದುವೆಯ ನಂತರ ವರನನ್ನು ಹನಿಮೂನ್‌ಗೆಂದು ಕರೆದುಕೊಂಡು ಹೋಗಿ ಸಾಯಿಸಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆಕೆ ಮತ್ತು ಆಕೆಯ ಕುಟುಂಬಕ್ಕೆ ಭಾರಿ ದಂಡ ವಿಧಿಸಬೇಕು ಮತ್ತು ಶಿಕ್ಷೆ ವಿಧಿಸಬೇಕು. ಜನರು ಮದುವೆಯನ್ನು ತಮಾಷೆ ಮತ್ತು ತಪ್ಪಿಸಿಕೊಳ್ಳುವ ಮಾರ್ಗವನ್ನಾಗಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮದುವೆಯ ಬಗ್ಗೆ ಮಾತನಾಡುತ್ತಿದ್ದಾಗ ಈ ಧೈರ್ಯ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಆ ದಂಪತಿಗಳ ನಿರ್ಧಾರ ಬುದ್ಧಿವಂತ ನಿರ್ಧಾರವಾಗಿದೆ ಇಬ್ಬರು ಒಳ್ಳೆ ಕೆಲಸ ಮಾಡಿದರು. 20 ನಿಮಿಷಗಳಲ್ಲಿ ಆಕೆ ಮನೆಯನ್ನು ನೋಡಿದರು ವಿಮರ್ಶೆ ಮಾಡಿದಳು ಹಾಗೂ ಆಮೇಜಾನ್ ಸರ್ವೀಸ್‌ಗಿಂತಲೂ ವೇಗವಾಗಿ ರಿಟರ್ನ್ ಮಾಡಿದ್ದಾಳೆ ಇದೊಂದು ಬ್ಲಿಂಕಿಂಟ್ ವೆಡ್ಡಿಂಗ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.