
ಅಹಮ್ಮದಾಬಾದ್ (ಡಿ.09) ಗಂಡ ಹಾಗೂ ಹೆಂಡತಿಯ ಸುಖ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಈ ಮಾತು ಹಲವು ಸಂದರ್ಭದಲ್ಲಿ ಕೇಳಿರುತ್ತೀರಿ. ಆದರೆ ಈರುಳ್ಳಿ ಬೆಳ್ಳುಳ್ಳಿ ಸಂಸಾರದ ಮೇಲೆ ವಕ್ರದೃಷ್ಠಿ ಬೀರಿದ್ದು ಕೇಳಿದ್ದೀರಾ? ಇಲ್ಲೊಂದು ಸಂಸಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯಿಂದ ಕೋಲಾಹಲವೇ ನಡೆದು ಹೋಗಿದೆ. ಹೆಚ್ಚಿನ ಸಮಸ್ಯೆಗಳಿಲ್ಲದ ಸಾಗುತ್ತಿದ್ದ ಸಂಸಾರಕ್ಕೆ ಈರುಳ್ಳಿ ಬೆಳ್ಳುಳ್ಳಿ ಹುಳಿಯಾಗಿದೆ. ಬರೋಬ್ಬರಿ 11 ವರ್ಷಗಳ ಸಂಸಾರದ ಒಡೆದು, ಇದೀಗ ಅಧಿಕೃತವಾಗಿ ಡಿವೋರ್ಸ್ ಪಡೆದ ಘಟನೆ ಅಹಮ್ಮದಾಬಾದ್‌ನಲ್ಲಿ ನಡೆದಿದೆ.
ಈರುಳ್ಳಿ ಬೆಳ್ಳುಳ್ಳಿ ಬೆಲೆ ಏರಿಕೆ ಈ ಕುಟುಂಬಕ್ಕೆ ತಟ್ಟಿರಲಿಲ್ಲ, ಆದರೆ ಈರುಳ್ಳಿ ಬೆಳ್ಳುಳ್ಳಿ ಘಾಟು ಈ ಕುಟುಂಬ ನಿದ್ದೆಗೆಡಿಸಿದೆ. ಈ ಜೋಡಿ 2002ರಲ್ಲಿ ಮದುವೆಯಾಗಿದೆ. ಮದುವೆ ಆರಂಭದಲ್ಲಿ ಎಲ್ಲವೂ ಒಕೆಯಾಗಿತ್ತು. ಆಹಾರ ಪದ್ಧತಿಗಳಲ್ಲೂ ಹೊಂದಾಣಿಕೆ ಇತ್ತು. ಗಂಡ ಎಲ್ಲಾ ಆಹಾರಕ್ಕೂ ಒಕೆ ಇದ್ದ, ಅತ್ತೆ ಕೂಡ ನಿರ್ದಿಷ್ಠ ಆಹಾರ ಬೇಕು ಎಂದು ಬೇಡಿಕೆ ಇಟ್ಟಿರಲಿಲ್ಲ. ಆದರೆ ಈಕೆ ಸ್ವಾಮಿ ನಾರಾಯಣನ ಭಕ್ತೆ. ಹೀಗಾಗಿ ತನ್ನ ಧಾರ್ಮಿಕ ಆಚರಣೆಯ ಭಾಗವಾಗಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ಮಾಡುತ್ತಿರಲಿಲ್ಲ. ತನ್ನ ವೃತವನ್ನು ಕಟ್ಟುನಿಟ್ಟಾಗಿ ಈಕೆ ಪಾಲಿಸುತ್ತಾ ಬಂದಿದ್ದಾಳೆ. ಆದರೆ ಗಂಡ, ತನ್ನ ಅತ್ತೆ ಈರುಳ್ಳಿ ಬೆಳ್ಳುಳ್ಳಿ ಆಹಾರ ಸೇವನೆ ಮಾಡುತ್ತಿದ್ದರು.
ಆರಂಭದಲ್ಲೇ ಎಲ್ಲರೂ ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ಸೇವನೆ ಮಾಡಲು ಆರಂಭಿಸಿದ್ದರು. ಇದರ ನಡುವೆ ಅತ್ತೆ ಕೆಲವು ಬಾರಿ ಈರುಳ್ಳಿ ಬೆಳ್ಳುಳ್ಳಿ ಆಹಾರ ಖಾದ್ಯಗಳನ್ನು ಮಾಡುತ್ತಿದ್ದರು. ಇಲ್ಲಿಂದ ಸಮಸ್ಯೆಗಳು ಶುರುವಾಗಿದೆ. ಕೊನೆಗೆ ಒಂದೆ ಮನೆಯಲ್ಲಿ ಪ್ರತ್ಯೇಕ ಅಡುಗೆಗಳು ಆರಂಭಗೊಂಡಿತು. ಪತಿ ಹಾಗೂ ಅತ್ತೆಗೆ ಬೇರೆ, ತನಗೆ ಬೇರೆ ಎಂಬಂತೆ ಪದ್ಧತಿಗಳು ಶುರುವಾಯಿತು. ಇದರ ಜೊತೆಗೆ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಶುರುವಾಯಿತು. ಜಗಳ ತಾರಕಕ್ಕೇರಲು ಆರಂಭಗೊಂಡಿತು.
ಜಗಳ ತೀವ್ರಗೊಳ್ಳುತ್ತಿದ್ದಂತೆ 2013ರಲ್ಲಿ ಮಗುವಿನ ಜೊತೆ ಪತ್ನಿ ತಾಯಿ ಮನೆ ಸೇರಿಕೊಂಡಿದ್ದಾಳೆ. ಪಂಚಾಯಿತಿ, ಮಾತುಕತೆಗಳು ಮುರಿದು ಬಿದ್ದಿತ್ತು. ಹೀಗಾಗಿ ಪತಿ ಅಹಮ್ಮದಾಬಾದ್ ಫ್ಯಾಮಿಲಿ ಕೋರ್ಟ್ ಗೆ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ 2024ರಲ್ಲಿ ಫ್ಯಾಮಿಲಿ ಕೋರ್ಟ್ ಡಿವೋರ್ಸ್ ನೀಡಿತ್ತು. ಇದೇ ವೇಳೆ ಪತ್ನಿಗೆ ಜೀವನಾಂಶ ನೀಡಲು ಸೂಚಿಸಿತ್ತು.
ಪತ್ನಿಯೇ ಬಿಟ್ಟು ಹೋಗಿದ್ದಾಳೆ, ಆಕೆಯೊಂದಿಗೆ ನಾವು ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ಸೇವಿಸುತ್ತಿದ್ದೆವು. ಆಕೆಯೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಹೈಕೋರ್ಟ್‌ನಲ್ಲಿ ಮತ್ತಷ್ಟು ದಾಖಲೆಯೊಂದಿಗೆ ಗಂಡನ ಪರ ವಕೀಲರು ವಾದ ಮಂಡಿಸಿದ್ದರು. ಇತ್ತ ಪತ್ನಿ ತಾನು ಡಿವೋರ್ಸ್‌ಗೆ ವಿರುದ್ಧವಾಗಿಲ್ಲ, ತನಗೆ ಜೀವನಾಂಶ ನೀಡಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಳು. ಬಾಕಿ ಇರುವ ಪಾವತಿಯನ್ನು ಹಂತ ಹಂತವಾಗಿ ಮಾಡುವುದಾಗಿ ಪತಿ ಒಪ್ಪಿಕೊಂಡಿದ್ದಾನೆ. ಇದರೊಂದಿಗೆ ಹೈಕೋರ್ಟ್ ದಂಪತಿಗೆ ಡಿವೋರ್ಸ್ ನೀಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.