
ಸಮಷ್ಠಿಪುರ: 32 ವರ್ಷ ಮಹಿಳೆಯೊಬ್ಬಳು ತನ್ನ ಗಂಡನ 18 ವರ್ಷ ತಂಗಿಯನ್ನು ಮದ್ವೆಯಾಗಿದ್ದು, ಈಗ ಪೊಲೀಸರಿಗೆ ತನ್ನ ಗಂಡನ ಮನೆಯವರ ವಿರುದ್ಧ ತನ್ನ ಜೀವನ ಸಂಗಾತಿಯನ್ನು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದಾಳೆ. ಬಿಹಾರದ ಸಮಷ್ಠಿಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಇದು ಪೊಲೀಸರ ಪಾಲಿಗೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳ ತಾಯಿಯೂ ಆಗಿರುವ 32 ವರ್ಷದ ಮಹಿಳೆ ಶುಕ್ಲಾದೇವಿ ಈ ಆರೋಪ ಮಾಡಿದ್ದಾಳೆ. ಈಕೆ ಗಂಡನ ಬದಲು ಗಂಡನ ತಂಗಿ ಜೊತೆ ಬಾಳಲು ಆರಂಭಿಸಿದ್ದು, ಇದರಿಂದ ಗಂಡನಿಗೂ ಅವರ ಮನೆಯವರಿಗೂ ಪೀಕಲಾಟ ಶುರುವಾಗಿದೆ. ಈ ಬಗ್ಗೆ ಈಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶುಕ್ಲಾ ದೇವಿ ಎಂಬಾಕೆ 10 ವರ್ಷಗಳ ಹಿಂದೆ ಸಮಸ್ಠಿಪುರ ಜಿಲ್ಲೆಯ (Samastipur district) ರೊಸೇರಾ ಬ್ಲಾಕ್‌ನ (Rosera block) ನ ನಿವಾಸಿಯಾಗಿದ್ದ ಪ್ರಮೋದ್ ದಾಸ್ (Pramod Das) ಎಂಬಾತನನ್ನು ಮದುವೆಯಾಗಿದ್ದು, ಈ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಆದರೆ ಆರು ತಿಂಗಳ ಹಿಂದೆ ಪ್ರಮೋದ್ ದಾಸ್ ಜೊತೆಗಿನ ಮದ್ವೆಯನ್ನು ತಿರಸ್ಕರಿಸಿದ ಶುಕ್ಲಾದೇವಿ ಆತನ ತಂಗಿ 18 ವರ್ಷದ (Soni Devi) ಜೊತೆ ಜೀವನ ಮಾಡಲು ಶುರು ಮಾಡಿ ಸಂಪ್ರದಾಯಗಳಿಗೆ ಸವಾಲೆಸೆದಿದ್ದಾಳೆ.
ಮದುವೆಗೆ ಮೊದಲೇ ಮಕ್ಕಳನ್ನು ಹೆರಬೇಕು! ಬುಡಕಟ್ಟು ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ
ನಾವು ಪರಸ್ಪರ ಪ್ರೀತಿಸಲು ಶುರು ಮಾಡಿದ ನಂತರ ಮದುವೆಯಾದೆವು ಎಂದು ಶುಕ್ಲಾದೇವಿ ಹೇಳಿದ್ದು, ಈ ವೇಳೆ ಮಾಧ್ಯಮಗಳು ಆಕೆಯನ್ನು ನಿಮಗೆ ಈಗಾಗಲೇ ಮದ್ವೆಯಾಗಿದೆಯಲ್ಲಾ? ನಿಮ್ಮ ಪತಿಯೂ ಇದ್ದಾರೆ, ಹೀಗಿರುವಾಗಿ ಈ ಹುಡುಗಿಯನ್ನು ಮದ್ವೆಯಾಗಿದ್ದು ಏಕೆ ಎಂದು ಪ್ರಶ್ನಿಸಿದಾಗ ಆಕೆ ಪತಿ ಇದ್ದರೇನು? ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ನಾವಿರುತ್ತೇವೆ ಎಂದು ಆಕೆ ಹೇಳಿದ್ದಾಳೆ. ಅಲ್ಲದೇ ಮದ್ವೆಯ ನಂತರ ಖುಷಿಯಿಂದ ಇರುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ.
ಹೃದಯವೇ ಪ್ರೀತಿಗೆ ಮನೆ ಎಂದು ನಾನು ನಂಬುತ್ತೇನೆ. ನಾವು ನಮ್ಮ ಹೃದಯದಾಳದಿಂದ ಪ್ರೀತಿ ಮಾಡುತ್ತಿದ್ದೇವೆ. ಹೃದಯಕ್ಕೆ ನಿಜ ಪ್ರೀತಿಗಿಂತ ಬೇರೆ ಯಾವ ಮನೋರಂಜನೆಯೂ ಇಲ್ಲ. ಸೋನಿ ತುಂಬಾ ಒಳ್ಳೆಯವಳು ಎಂದು ಆಕೆ ಹೇಳಿದ್ದಾಳೆ.
ಈ ಬಗ್ಗೆ ಆಕೆಯ ಗಂಡನಲ್ಲಿ ಕೇಳಿದಾಗ ಆತ ಇದಕ್ಕೆ ನನ್ನ ವಿರೋಧ ಏನಿಲ್ಲ. ಆಕೆ ಖುಷಿಯಾಗಿದ್ದರೆ ನಾನು ಖುಷಿಯಾಗಿರುವೆ ಎಂದು ಹೇಳಿದ್ದಾನೆ. ಆದರೆ ಕುಟುಂಬದ ಮೂಲಗಳ ಪ್ರಕಾರ ಶುಕ್ಲಾದೇವಿ ಮದುವೆಯಾದ ನಂತರ ತನ್ನ ಹೆಸರನ್ನು ಸೂರಜ್ ಕುಮಾರ್ (Suraj Kumar) ಎಂದು ಬದಲಾಯಿಸಿಕೊಂಡಿದ್ದಲ್ಲದೇ ತನ್ನ ಕೂದಲನ್ನು ಕೂಡ ಹುಡುಗರಂತೆ ಕತ್ತರಿಸಿಕೊಂಡಿದ್ದಾಳೆ. ಜೊತೆಗೆ ಹುಡುಗರಂತೆ ಧಿರಿಸು ಧರಿಸುತ್ತಾಳೆ. ಆಕೆಯ ಹೊಸ ಜೀವನ ಸಂಗಾತಿಗೆ ಗಂಡನ ಭಾವ ಮೂಡಿಸಲು ಆಕೆ ಹೀಗೆ ತನ್ನ ವೇಷ ಬದಲಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಕೊರೋನಾ ಎಫೆಕ್ಟ್: ವರ ಇಲ್ಲದೆ ನಡೀತು ರಿಸೆಪ್ಷನ್!
ಅಲ್ಲದೇ ಆಕೆ ಲಿಂಗ ಬದಲಿಸಿಕೊಳ್ಳಲು ಕೂಡ ಮುಂದಾಗಿದ್ದು, ಈ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಟ ಕೂಡ ಮಾಡಿದ್ದಾಳೆ. ಅಲ್ಲದೇ ಇದಕ್ಕೆ ಸಂಬಂಧಿಸಿದ ಕೆಲ ವಿಡಿಯೋ ನೋಡಿದ ನಂತರ ಆಕೆ ಭಯಬಿದ್ದು ಲಿಂಗ ಬದಲಾವಣೆಯ ನಿರ್ಧಾರವನ್ನು ಹಿಂಪಡೆದಿದ್ದಾಳೆ. ಶುಕ್ಲಾದೇವಿಯ ಈ ಹೊಸ ಅವತಾರ ಊರಿನಲ್ಲೆಡೆ ಹಬ್ಬಿದ್ದಲ್ಲದೇ ಅತ್ತೆ ಮಾವನವರಿಗೂ ಗೊತ್ತಾಗಿದ್ದು, ಕೂಡಲೇ ಅವರು ಬಂದು ಮಗಳು ಸೋನಿ ದೇವಿಯನ್ನು ತಮ್ಮ ಜೊತೆ ದೂರ ಕರೆದೊಯ್ದಿದ್ದಾರೆ. ಇದು ಶುಕ್ಲಾದೇವಿಯನ್ನು ಸಿಟ್ಟಿಗೇಳುವಂತೆ ಮಾಡಿದ್ದು, ಆಕೆ ತನ್ನ ಅತ್ತೆ ಮಾವನವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಹೀಗಾಗಿ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೋಸೆರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೃಷ್ಣಪ್ರಸಾದ್, ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಮಹಿಳಾ ಇನ್ಸ್‌ಪೆಕ್ಟರ್ ಒಬ್ಬರ ಬಳಿ ಈ ಬಗ್ಗೆ ತನಿಖೆ ನಡೆಸುವಂತೆ ಕೇಳಲಾಗಿದೆ. ಈ ವಿಚಾರ ಬಹಳ ವಿವಾದಾತ್ಮಕವಾಗಿದ್ದು, ಸೂಕ್ತ ತನಿಖೆಯ ನಂತರವಷ್ಟೇ ನಿಜ ಬಯಲಿಗೆ ಬರಲಿದೆ ಎಂದು ಹೇಳಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.