ಟಿಕೆಟ್ ಫೈಟ್
ಕೆ.ಆರ್.ರವಿಕಿರಣ್
undefined
ದೊಡ್ಡಬಳ್ಳಾಪುರ (ಡಿ.16) : ರಾಜಧಾನಿಗೆ ಸಮೀಪದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ತಾಲೂಕುಗಳನ್ನು ಒಳಗೊಂಡಿದೆ. ಆ ಪೈಕಿ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಗಳು ಸಾಮಾನ್ಯ ವಿಧಾನಸಭೆ ಕ್ಷೇತ್ರಗಳು. ದೇವನಹಳ್ಳಿ ಮತ್ತು ನೆಲಮಂಗಲ ಮೀಸಲು ವಿಧಾನಸಭಾ ಕ್ಷೇತ್ರಗಳು. ಪ್ರಸ್ತುತ ದೇವನಹಳ್ಳಿ ಮತ್ತು ನೆಲಮಂಗಲ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರೆ, ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೊಸಕೋಟೆಯಲ್ಲಿ ಪಕ್ಷೇತರ (ಕಾಂಗ್ರೆಸ್) ಸದಸ್ಯರಿದ್ದಾರೆ.
ಎಲ್ಲಾ 4 ವಿಧಾನಸಭಾ ಕ್ಷೇತ್ರಗಳೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಭಾಗವಾಗಿವೆ. ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಮುಸ್ಲಿಮರು, ನೇಕಾರರು, ಲಿಂಗಾಯತ, ಬಣಜಿಗ, ಕುರುಬ ಸಮುದಾಯಗಳು ಕೂಡ ನಿರ್ಣಾಯಕ ಸಂಖ್ಯೆಯ ಮತದಾರರನ್ನು ಹೊಂದಿವೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಖಾತೆ ತೆರೆಯಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮತ್ತು ಹೊಸಕೋಟೆಯ ಪ್ರಭಾವಿ ನಾಯಕ, ಸಚಿವ ಎಂ.ಟಿ.ಬಿ. ನಾಗರಾಜ್ ಅವರು ಬಿಜೆಪಿ ಬಲವರ್ಧನೆಗೆ ಯತ್ನಿಸುತ್ತಿದ್ದಾರೆ.
Ticket Fight: ಕೊಡಗಿನ ಎರಡು ಕ್ಷೇತ್ರಗಳಿಗೆ ಆಕಾಂಕ್ಷಿಗಳ ದಂಡು
1.ದೊಡ್ಡಬಳ್ಳಾಪುರ: ಮೂರೂ ಪಕ್ಷಗಳಲ್ಲೂ ಲಾಬಿ
ದೊಡ್ಡಬಳ್ಳಾಪುರ, ಕಾಂಗ್ರೆಸ್‌ನ ಭದ್ರಕೋಟೆ. ಕಳೆದ 4 ದಶಕಗಳಲ್ಲಿ ಒಂದೆರಡು ಬಾರಿ ಹೊರತುಪಡಿಸಿ ಉಳಿದೆಲ್ಲಾ ಸಂದರ್ಭದಲ್ಲೂ ಆರ್.ಎಲ್.ಜಾಲಪ್ಪ ಅವರ ಪ್ರಭಾವ ನಿರ್ಣಾಯಕವಾಗಿದೆ. ಕಾಂಗ್ರೆಸ್‌ನ ಟಿ.ವೆಂಕಟರಮಣಯ್ಯ ಸತತ 2 ಬಾರಿ ಶಾಸಕರಾಗಿದ್ದು, ಈ ಬಾರಿಯೂ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದಾರೆ. ಜೊತೆಗೆ, ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ.
ಬಿಜೆಪಿಯಿಂದ ಗೊಲ್ಲ ಸಮುದಾಯಕ್ಕೆ ಸೇರಿದ ಧೀರಜ್ ಮುನಿರಾಜ್, ಹಿರಿಯ ಮುಖಂಡ ಬಿ.ಸಿ.ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಿ.ಎಚ್. ಕರಿಗೌಡ ಟಿಕೆಟ್ ಬಯಸಿದ್ದಾರೆ. ಅನುಭವ-ಜಾತಿ ಲೆಕ್ಕಾಚಾರಗಳ ಮೇಲೆ ಇಲ್ಲಿ ಬಿಜೆಪಿ ಟಿಕೆಟ್ ನಿರ್ಧಾರವಾದರೆ ಅಚ್ಚರಿ ಪಡಬೇಕಿಲ್ಲ.
ಜೆಡಿಎಸ್‌ನಲ್ಲಿ ಸತತ 3 ಚುನಾವಣೆಗಳಲ್ಲಿ ಸೋಲು ಕಂಡಿರುವ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಹೆಸರು ಮುಂಚೂಣಿಯಲ್ಲಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ, ಉದ್ಯಮಿ ಹುಸ್ಕೂರು ಆನಂದ್ ಕೂಡ ಜೆಡಿಎಸ್ ಟಿಕೆಟ್‌ನ ರೇಸ್‌ನಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಪುರುಷೋತ್ತಮ್ ಸ್ಪರ್ಧಿಸುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಒಕ್ಕಲಿಗ, ಪರಿಶಿಷ್ಟಸಮುದಾಯ, ಮುಸ್ಲಿಮರು, ನೇಕಾರರು, ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ.
Ticket Fight: ಹಾಸನದಲ್ಲಿ ಪ್ರೀತಂಗೌಡ VS ಭವಾನಿ ರೇವಣ್ಣ?
2. ಹೊಸಕೋಟೆ: ಪುತ್ರಗೆ ಬಿಜೆಪಿ ಟಿಕೆಟ್ ಕೊಡಿಸಲು ಎಂಟಿಬಿ ಕಸರತ್ತು
ವರ್ಣರಂಜಿತ ರಾಜಕಾರಣದಿಂದಲೇ ಗಮನ ಸೆಳೆದಿರುವ ಹೊಸಕೋಟೆ ಕ್ಷೇತ್ರದಲ್ಲಿ ಕಳೆದ ಮೂರೂವರೆ ದಶಕದಿಂದಲೂ ಸಂಸದ ಬಿ.ಎನ್.ಬಚ್ಚೇಗೌಡರು ತಮ್ಮ ಪ್ರಭಾವ ಉಳಿಸಿಕೊಂಡಿದ್ದಾರೆ. ಜತೆಗೆ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಕೂಡ ಕಳೆದೆರಡು ದಶಕಗಳಲ್ಲಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ರಾಜಕೀಯ ಮೇಲಾಟದಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಎಂ.ಟಿ.ಬಿ. ನಾಗರಾಜ್ ಬಿಜೆಪಿಗೆ ಸೇರ್ಪಡೆಗೊಂಡು ಬಳಿಕ ನಡೆದ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ನಂತರ ವಿಧಾನ ಪರಿಷತ್ ಸದಸ್ಯರಾಗಿ, ಮಂತ್ರಿಯೂ ಆಗಿರುವ ಅವರು, ಈ ಬಾರಿ ಶತಾಯ ಗತಾಯ ಬಿಜೆಪಿಯನ್ನು ಗೆಲ್ಲಿಸುವ ಹೊಣೆ ಹೊತ್ತಿದ್ದಾರೆ. ತಮಗೆ, ಇಲ್ಲದಿದ್ದರೆ ತಮ್ಮ ಪುತ್ರ ರಾಜೇಶ್ ಪುರುಷೋತ್ತಮ್‌ಗೆ ಟಿಕೆಟ್ ದೊರಕಿಸಿಕೊಡಲು ಕಸರತ್ತು ನಡೆಸಿದ್ದಾರೆ.
ತಮ್ಮ ತಂದೆ ಬಿ.ಎನ್.ಬಚ್ಚೇಗೌಡರು ಬಿಜೆಪಿಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಬಳಿಕ ಕಾಂಗ್ರೆಸ್‌ನಲ್ಲಿರುವ ಶರತ್ ಬಚ್ಚೇಗೌಡ, ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದಾರೆ. ಜಿ.ಪಂ. ಮಾಜಿ ಅಧ್ಯಕ್ಷ ವಿ.ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಶಾಮಣ್ಣ ಕೂಡ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಪ್ರಯತ್ನಿಸಿದ್ದಾರೆ. ಇಲ್ಲಿ ಜೆಡಿಎಸ್‌ಗೆ ಪ್ರಬಲ ನೆಲೆ ಇಲ್ಲ. ಹೀಗಾಗಿ, ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ದೊಡ್ಡಮಟ್ಟದ ಚರ್ಚೆ ನಡೆದಿಲ್ಲ. ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಪರಿಶಿಷ್ಟಜಾತಿ, ಮುಸಲ್ಮಾನ, ಕುರುಬ, ಪರಿಶಿಷ್ಟಪಂಗಡದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
Ticket Fight: ಬೀದರ್ ಶಾಸಕರಿಗೆ ಹೊಸ ಸ್ಪರ್ಧಿಗಳ ಸವಾಲ್
3. ನೆಲಮಂಗಲ: ಇಳಿ ವಯಸ್ಸಿನಲ್ಲಿಯೂ ಅಂಜನಮೂರ್ತಿ ತಯಾರು
ಪರಿಶಿಷ್ಟಸಮುದಾಯದ ಮೀಸಲು ಕ್ಷೇತ್ರವಾಗಿರುವ ನೆಲಮಂಗಲದಲ್ಲಿ ಪ್ರಸ್ತುತ ಜೆಡಿಎಸ್‌ನ ಡಾ.ಶ್ರೀನಿವಾಸಮೂರ್ತಿ ಶಾಸಕರು. ಈ ಬಾರಿಯೂ ಜೆಡಿಎಸ್‌ನಿಂದ ಡಾ.ಶ್ರೀನಿವಾಸಮೂರ್ತಿಯವರೇ ಸ್ಪರ್ಧಿಸುತ್ತಾರೆ ಎಂಬುದು ಪಕ್ಷದ ಉನ್ನತ ಮೂಲಗಳ ಮಾಹಿತಿ. ಕಾಂಗ್ರೆಸ್‌ನಲ್ಲಿ ನಾಲ್ವರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಮಾಜಿ ಸಚಿವ ಅಂಜನಮೂರ್ತಿಯವರು ತಮ್ಮ ಇಳಿ ವಯಸ್ಸಿನಲ್ಲಿಯೂ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಮಾಜಿ ಸಚಿವ ಡಾ.ಎಂ.ಶಂಕರ ನಾಯಕ್ ಅವರ ಪುತ್ರ ಸಪ್ತಗಿರಿ ಶಂಕರ ನಾಯಕ್, ಚಿಕ್ಕನಹಳ್ಳಿ ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಉಮಾದೇವಿ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಎಂ.ವಿ.ನಾಗರಾಜ್, ಹೊಂಬಯ್ಯ, ದೊಡ್ಡೇರಿ ವೆಂಕಟೇಶ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಕಳೆದ ಕೆಲ ಚುನಾವಣೆಗಳಿಂದ ಹೊಸ ಮುಖಗಳು ಇಲ್ಲಿ ಗೆಲುವು ಸಾಧಿಸುತ್ತಿರುವುದು ಕ್ಷೇತ್ರದ ವಿಶೇಷ. ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಲಿಂಗಾಯತ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಮತದಾರರು ಗಣನೀಯ ಪ್ರಮಾಣದಲ್ಲಿದ್ದಾರೆ.
4. ದೇವನಹಳ್ಳಿ: ಕಾಂಗ್ರೆಸ್‌ನಲ್ಲಿ 10 ಮಂದಿ ಆಕಾಂಕ್ಷಿಗಳು
ಈವರೆಗೂ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಗದ ಜಿಲ್ಲೆಯ ಏಕೈಕ ಕ್ಷೇತ್ರ ದೇವನಹಳ್ಳಿ. ಜೆಡಿಎಸ್‌ನ ನಿಸರ್ಗ ನಾರಾಯಣಸ್ವಾಮಿ ಹಾಲಿ ಶಾಸಕರು. ಈ ಬಾರಿಯೂ ಜೆಡಿಎಸ್ ಟಿಕೆಟ್‌ಗೆ ನಿಸರ್ಗ ನಾರಾಯಣಸ್ವಾಮಿ ಪ್ರಬಲ ಆಕಾಂಕ್ಷಿ. ಜೆಡಿಎಸ್‌ನಲ್ಲಿ ಒಮ್ಮೆ ಶಾಸಕರಾಗಿದ್ದ ಪಿಳ್ಳಮುನಿಶಾಮಪ್ಪಗೆ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ಸಿಕ್ಕಿರಲಿಲ್ಲ. ಬಳಿಕ ಅವರು ಬಿಜೆಪಿ ಸೇರಿದ್ದು, ಈ ಬಾರಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಜಿ.ಚಂದ್ರಣ್ಣ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಗೇಶ್, ದೊಡ್ಡಬಳ್ಳಾಪುರ ಮೂಲದ ಓಬದೇನಹಳ್ಳಿ ಮುನಿಯಪ್ಪ ಕೂಡ ಬಿಜೆಪಿ ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ.
ಕಾಂಗ್ರೆಸ್‌ನಿಂದ ಬರೋಬ್ಬರಿ 10 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎನ್ನಲಾಗಿದೆ. ಈ ಪೈಕಿ ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಎ.ಸಿ.ಶ್ರೀನಿವಾಸ್, ಮಾಜಿ ಶಾಸಕ ಮುನಿನರಸಿಂಹಯ್ಯ, ಎಂ.ವೆಂಕಟಸ್ವಾಮಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಉಳಿದಂತೆ, ಬಿಬಿಎಂಪಿ ಮಾಜಿ ಸದಸ್ಯ ಆನಂದ್, ಲೋಕೇಶ್, ದ್ಯಾವರಹಳ್ಳಿ ಶಾಂತಕುಮಾರ್, ಶೆಟ್ಟಿಗೆರೆ ರಾಜಣ್ಣ ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರು ದೇವನಹಳ್ಳಿಯಲ್ಲಿ ಸ್ಪರ್ಧೆಗಿಳಿಯುತ್ತಾರೆ ಎಂಬ ಸುದ್ದಿಯೂ ಇದೆ.
Assembly election: ಗೆದ್ದವರು, ಸೋತವರ ನಡುವೆಯೇ ಮತ್ತೆ ಕದನ!
ಆಮ್ ಆದ್ಮಿ ಪಕ್ಷದಿಂದ ಬಿ.ಎಸ್.ಶಿವಪ್ಪನವರ ಹೆಸರು ಕೇಳಿ ಬರುತ್ತಿದೆ. ಪಕ್ಷೇತರರಾಗಿ ಬಿಜ್ಜವಾರ ನಾಗರಾಜ್, ಮಂಜುನಾಥ್ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯೂ ಇದೆ. ಒಕ್ಕಲಿಗ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಮತದಾರರು ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದು, ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.
ಬೆಂಗಳೂರು ಗ್ರಾಮಾಂತರ
ಹಾಲಿ ಬಲಾಬಲ: