ರಾಜಾಜಿನಗರ ಕದನ: ಸುರೇಶ್‌ ಕುಮಾರ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

By Kannadaprabha NewsFirst Published Mar 30, 2023, 9:56 AM IST
Highlights

ಬಿಜೆಪಿಯ ‘ಸಜ್ಜನ ಶಾಸಕ’ 5 ಬಾರಿ ಗೆದ್ದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪುಟ್ಟಣ್ಣ ಎದುರಾಳಿ, ಕೈ ಪಾಳೆಯದಲ್ಲಿ ಭಿನ್ನಮತದ ಸಮಸ್ಯೆ. 

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಮಾ.30): ಬೆಂಗಳೂರು ಪಶ್ಚಿಮ ಭಾಗದ ಪ್ರಸಿದ್ಧ ಕೈಗಾರಿಕಾ ಹಾಗೂ ವಸತಿ ವಲಯವಾಗಿ ಗುರುತಿಸಿಕೊಂಡಿರುವ ರಾಜಾಜಿನಗರವು ಸ್ವಾತಂತ್ರ್ಯ ನಂತರದ 2ನೇ ವರ್ಷಕ್ಕೆ ರೂಪು ತಳೆದ ಯೋಜಿತ ಬಡಾವಣೆ. ವಲ್ಡ್‌ರ್‍ ಟ್ರೇಡ್‌ ಸೆಂಟರ್‌, ಇಸ್ಕಾನ್‌ ದೇವಾಲಯ ಸೇರಿದಂತೆ ಸಾಲು-ಸಾಲು ದೇಗುಲಗಳು, ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ಹೊಂದಿರುವ ರಾಜಾಜಿನಗರ 1978ರಲ್ಲಿ ವಿಧಾನಸಭಾ ಕ್ಷೇತ್ರವಾಗಿ ರೂಪುಗೊಂಡಿತು. 1949ರ ಜು.3ರಂದು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರಿಂದ ಉದ್ಘಾಟನೆಗೊಂಡಿದ್ದ 1 ಸಾವಿರ ಎಕರೆಯ ರಾಜಾಜಿನಗರ ಬಡಾವಣೆಯು ಆ ಕಾಲದಲ್ಲೇ 500 ಎಕರೆ ಕೈಗಾರಿಕೆ ಹಾಗೂ 500 ಎಕರೆ ವಸತಿ ವಲಯಕ್ಕಾಗಿ ಮೀಸಲಿಡಲ್ಪಟ್ಟ ಯೋಜಿತ ಬಡಾವಣೆ. 500 ಎಕರೆ ಕೈಗಾರಿಕಾ ವಲಯದಲ್ಲಿ 140 ಎಕರೆ ಜವಳಿ, 220 ಎಕರೆ ಯಂತ್ರೋಪಕರಣ, 100 ಎಕರೆ ರಾಸಾಯನಿಕ ಘಟಕ, 40 ಎಕರೆ ಆಹಾರ ಕೈಗಾರಿಕಾ ಘಟಕ, ಉಳಿದ 500 ಎಕರೆಯಲ್ಲಿ 4 ಸಾವಿರ ವಸತಿ ನಿವೇಶನ ಸೃಷ್ಟಿಮಾಡಲಾಗಿತ್ತು.

ದೇಶದ ಕೊನೆಯ ಗವರ್ನರ್‌ ಜನರಲ್‌ ಭಾರತರತ್ನ ಸಿ. ರಾಜಗೋಪಾಲಚಾರಿ (ರಾಜಾಜಿ) ಅವರ ನೆನಪಿನಾರ್ಥ ಅವರ ಹೆಸರನ್ನೇ ರಾಜಾಜಿನಗರ ಎಂದು ನಾಮಕರಣ ಮಾಡಲಾಗಿತ್ತು. ಬೆಂಗಳೂರಿನ ಅತ್ಯಂತ ಉದ್ದದ ರಸ್ತೆಗಳಲ್ಲಿ ಒಂದಾದ ಕಾರ್ಡ್‌ ರಸ್ತೆಯನ್ನು ಹೊಂದಿರುವ ರಾಜಾಜಿನಗರ ಕೈಗಾರಿಕೆ, ವಾಣಿಜ್ಯ ಹಾಗೂ ಶೈಕ್ಷಣ ಚಟುವಟಿಕೆಗಳಿಂದ ಸಕ್ರಿಯವಾಗಿರುವ ಕ್ಷೇತ್ರ. ಇದೀಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯವಾಗಿಯೂ ಬಿಸಿಯೇರಿದೆ.
ಐದು ಬಾರಿ ಕ್ಷೇತ್ರದಿಂದ ಗೆದ್ದಿರುವ ಮಾಜಿ ಸಚಿವ ಎಸ್‌.ಸುರೇಶ್‌ಕುಮಾರ್‌ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. 1983, 1990ರಲ್ಲಿ ಎರಡು ಬಾರಿ ಪಾಲಿಕೆ ಸದಸ್ಯರಾಗಿ 1994, 1999, 2008, 2013, 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಕಾಂಗ್ರೆಸ್‌ನ ನರೇಂದ್ರ ಬಾಬು ವಿರುದ್ಧ ಸೋತಿರುವುದನ್ನು ಬಿಟ್ಟರೆ ಉಳಿದಂತೆ ಸೋಲು ಕಂಡಿಲ್ಲ. ಆದರೆ, ಈ ಬಾರಿ ಅವರಿಗೆ ಅಷ್ಟುಸುಲಭವಿಲ್ಲ ಎಂಬ ವಾತಾವರಣವಿದೆ.

Kannada FM ಮುಚ್ಚಲು ರಮಾಕಾಂತ್‌ ಸಂಚು: ಮಾಜಿ ಸಚಿವ ಸುರೇಶ್‌ ಕುಮಾರ್‌

ಆದರೆ, ಇದರ ಸದುಪಯೋಗಪಡೆದುಕೊಳ್ಳಬೇಕಾಗಿದ್ದ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ನಡುವಿನ ಸೆಣಸಾಟ ಜೋರಾಗಿಯೇ ಸಾಗಿದೆ. ಬಿಬಿಎಂಪಿ ಮಾಜಿ ಮೇಯರ್‌ ಪದ್ಮಾವತಿ, ಕಾಂಗ್ರೆಸ್‌ ವಕ್ತಾರೆ ಭವ್ಯಾ ನರಸಿಂಹಮೂರ್ತಿ, ಬೆಂಗಳೂರು ನಗರ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಘುವೀರ್‌ಗೌಡ, ಪುಟ್ಟರಾಜು ನಡುವೆ ಟಿಕೆಟ್‌ಗಾಗಿ ತೀವ್ರ ಹಣಾಹಣಿ ನಡೆದಿತ್ತು. ಅಚ್ಚರಿ ಎಂಬಂತೆ ಬಿಜೆಪಿ ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಇನ್ನೂ 4 ವರ್ಷದ ಅವಧಿ ಇರುವಾಗಲೇ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಟಿಕೆಟ್‌ ಗಿಟ್ಟಿಸಿದ್ದಾರೆ. ಇದರಿಂದ ಉಳಿದ ಆಕಾಂಕ್ಷಿಗಳಲ್ಲಿ ಭಿನ್ನಮತ ಶುರುವಾಗಿದೆ. ಈ ಭಿನ್ನಮತವನ್ನು ಹತ್ತಿಕ್ಕಿದರೆ ಸುರೇಶ್‌ಕುಮಾರ್‌ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡುವ ಅವಕಾಶ ಕಾಂಗ್ರೆಸ್ಸಿಗಿದೆ.

ಹಿಜಾಬ್ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸ ಮಾಡಬೇಕಿದೆ, ಸಿಎಂಗೆ ಪತ್ರ ಬರೆದ ಸುರೇಶ್ ಕುಮಾರ್‌

ಲಿಂಗಾಯತರು ಹಾಗೂ ಒಕ್ಕಲಿಗರು ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವು ಪಕ್ಷದ ವಕ್ತಾರ ಗಂಗಾಧರ ಮೂರ್ತಿ ಅವರನ್ನು ಕಣಕ್ಕಿಳಿಸಿದೆ. ಇನ್ನು ಕೆಆರ್‌ಎಸ್‌ ಪಕ್ಷ, ಆಮ್‌ ಆದ್ಮಿ ಪಕ್ಷವು ಸಕ್ರಿಯವಾಗಿ ಓಡಾಡುತ್ತಿದೆ.

ಒಟ್ಟು ಮತದಾರರು: 2,01,287
ಪುರುಷರು - 1,01,976
ಮಹಿಳೆಯರು- 99,304
ಲಿಂಗತ್ವ ಅಲ್ಪಸಂಖ್ಯಾತರು- 7

ಜಾತಿ ಲೆಕ್ಕಾಚಾರ

ಬೆಂಗಳೂರಿನಲ್ಲೇ ಅತಿ ಕಡಿಮೆ ಮತದಾರರನ್ನು ಹೊಂದಿರುವ ರಾಜಾಜಿನಗರ ಕ್ಷೇತ್ರದಲ್ಲಿ 53,000 ಲಿಂಗಾಯತರು, 45,00 ಒಕ್ಕಲಿಗರು, 35 ಸಾವಿರ ಎಸ್ಸಿ-ಎಸ್ಟಿ ಮತದಾರರು, 23 ಸಾವಿರ ಬ್ರಾಹ್ಮಣರು, 10 ಸಾವಿರ ಕುರುಬರು, 7 ಸಾವಿರ ಮುಸ್ಲಿಂ ಮತದಾರರು ಇದ್ದಾರೆ.

ಕ್ಷೇತ್ರದ ಹಿನ್ನೆಲೆ

1978ರಿಂದ 10 ಚುನಾವಣೆ ಕಂಡಿರುವ ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್‌, 2 ಬಾರಿ ಸಿಪಿಐ, 1 ಬಾರಿ ಜನತಾಪಕ್ಷ, 5 ಬಾರಿ ಬಿಜೆಪಿ ಗೆದ್ದಿದೆ. ಬಿಜೆಪಿ ಗೆದ್ದಿರುವ 5 ಬಾರಿಯೂ ಎಸ್‌.ಸುರೇಶ್‌ಕುಮಾರ್‌ ಅವರೇ ಬಿಜೆಪಿಯನ್ನು ಪ್ರತಿನಿಧಿಸಿರುವುದು ವಿಶೇಷ.

click me!