ಜಿಲ್ಲೆಯಾಗಿ 25 ವರ್ಷಗಳೇ ಕಳೆದರೂ ಹಿಂದುಳಿದಿರುವ ಜಿಲ್ಲಾ ಕೇಂದ್ರದ ಅಭಿವೃದ್ಧಿ, ಸಮರ್ಪಕ ಕುಡಿಯುವ ನೀರು ಪೂರೈಕೆ, ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ಪೂರ್ಣಗೊಳಿಸುವುದು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕೈಗಾರಿಕೆ ಸ್ಥಾಪನೆ ಸೇರಿದಂತೆ ನೂತನವಾಗಿ ಆಯ್ಕೆಯಾಗಿರುವ ಶಾಸಕ ರುದ್ರಪ್ಪ ಲಮಾಣಿ ಅವರ ಮೇಲೆ ಸವಾಲುಗಳ ಸರಮಾಲೆಯೇ ಇದೆ.
ನಾರಾಯಣ ಹೆಗಡೆ
ಹಾವೇರಿ (ಮೇ.20): ಜಿಲ್ಲೆಯಾಗಿ 25 ವರ್ಷಗಳೇ ಕಳೆದರೂ ಹಿಂದುಳಿದಿರುವ ಜಿಲ್ಲಾ ಕೇಂದ್ರದ ಅಭಿವೃದ್ಧಿ, ಸಮರ್ಪಕ ಕುಡಿಯುವ ನೀರು ಪೂರೈಕೆ, ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯುಜಿಡಿ ಕಾಮಗಾರಿ ಪೂರ್ಣಗೊಳಿಸುವುದು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕೈಗಾರಿಕೆ ಸ್ಥಾಪನೆ ಸೇರಿದಂತೆ ನೂತನವಾಗಿ ಆಯ್ಕೆಯಾಗಿರುವ ಶಾಸಕ ರುದ್ರಪ್ಪ ಲಮಾಣಿ(Rudrappa lamani MLA) ಅವರ ಮೇಲೆ ಸವಾಲುಗಳ ಸರಮಾಲೆಯೇ ಇದೆ.
undefined
ಹಾವೇರಿ ಜಿಲ್ಲೆ ರಚನೆಯಾಗಿ 25 ವರ್ಷ ಕಳೆದರೂ ಅಂದುಕೊಂಡ ಮಟ್ಟಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಸಾಧಿಸಿಲ್ಲ. ಕೃಷಿ, ಶೈಕ್ಷಣಿಕ, ಕೈಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಹಾವೇರಿ ಜಿಲ್ಲೆ ರಚನೆಯಾದ ಸಂದರ್ಭದಲ್ಲೇ ಅಸ್ತಿತ್ವಕ್ಕೆ ಬಂದ ಪಕ್ಕದ ಗದಗ ಹಾಗೂ ದಾವಣಗೆರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಹಾವೇರಿ ಹಿಂದುಳಿದ ಜಿಲ್ಲೆಯಂತೆ ಕಾಣುತ್ತಿದೆ. ಅದರಲ್ಲೂ ಜಿಲ್ಲಾ ಕೇಂದ್ರ ಹಾವೇರಿ ಅಭಿವೃದ್ಧಿಗೆ ಆಡಳಿತ ನಡೆಸಿದವರ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂಬುದು ಎಲ್ಲರ ಆರೋಪ.
Bitcoin Scam| ಶ್ರೀಕಿ ಜೊತೆ ದರ್ಶನ್ ನಂಟು: ಪುತ್ರನ ಬಗ್ಗೆ ಕೈ ನಾಯಕ ರುದ್ರಪ್ಪ ಲಮಾಣಿ ಹೇಳಿದ್ದಿಷ್ಟು!
ಹಾಗೆ ನೋಡಿದರೆ ಇಲ್ಲಿ ಯಾರು ಯಾರ ಮೇಲೆಯೂ ಆರೋಪ ಮಾಡುವ ಸ್ಥಿತಿಯಲ್ಲಿಲ್ಲ. ಕಾರಣ, ಕಳೆದ ಅವಧಿಯಲ್ಲಿ ನೆಹರು ಓಲೇಕಾರ ಶಾಸಕರಾಗಿದ್ದರೆ, ಅದಕ್ಕಿಂತ ಪೂರ್ವದಲ್ಲಿ ರುದ್ರಪ್ಪ ಲಮಾಣಿ ಅವರೇ ಕ್ಷೇತ್ರದ ಶಾಸಕರಾಗಿದ್ದರು. ಮೇಲಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಆಗ ಇದ್ದ ಸಮಸ್ಯೆಯೇ ಈಗಲೂ ಇವೆ. ಅನೇಕ ಯೋಜನೆಗಳು, ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರೂ ಅವು ಅನುಷ್ಠಾನಕ್ಕೆ ಬರಲಿಲ್ಲ. ನಗರದ ರಸ್ತೆ ಅಭಿವೃದ್ಧಿಗೆ ಅವರ ಕಾಲದಲ್ಲಿ . 50 ಕೋಟಿ ವಿಶೇಷ ಅನುದಾನ ಬಂದರೂ ವಾರ್ಡ್‌ಗಳ ರಸ್ತೆ ಅಭಿವೃದ್ಧಿ ಕಾಣಲಿಲ್ಲ. ಒಳಚರಂಡಿ ಯೋಜನೆ ಅವರ ಕಾಲದಲ್ಲಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಇನ್ನು ಕುಡಿಯುವ ನೀರಿನ ಸಮಸ್ಯೆಯಂತೂ ಯಾರು ಬಂದರೂ ಸುಧಾರಣೆ ಕಂಡಿಲ್ಲ. ಈಗ ಮತ್ತೊಮ್ಮೆ ರುದ್ರಪ್ಪ ಲಮಾಣಿ ಅವರು ಶಾಸಕರಾಗಿದ್ದಾರೆ. ಪ್ರಚಾರದ ವೇಳೆ ಈ ಎಲ್ಲ ಸಮಸ್ಯೆ ನಿವಾರಣೆ ಮಾಡುತ್ತೇನೆ ಎಂದು ಹೇಳಿಕೊಂಡಿರುವ ಅವರ ಮೇಲೆ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜನರ ಬೇಡಿಕೆಗಳನ್ನು ಈಡೇರಿಸುವ ಸವಾಲು ರುದ್ರಪ್ಪ ಲಮಾಣಿ ಹೆಗಲ ಮೇಲಿದೆ.
24*7 ನೀರಿನ ಯೋಜನೆ:
ಹಾವೇರಿ ಎಂದರೆ ಕುಡಿಯಲು ನೀರಿಲ್ಲದ ಊರು ಎಂಬುದು ಎಲ್ಲರಿಂದ ಕೇಳಿಬರುವ ವಾಸ್ತವದ ಮಾತು. ವಾರಕ್ಕೊಮ್ಮೆ ಕುಡಿಯುವ ನೀರು ಬಂದರೆ ಅದೇ ದೊಡ್ಡದು ಎಂಬ ಪರಿಸ್ಥಿತಿಯಿದೆ. ಇದರ ಪರಿಣಾಮವಾಗಿ ಗಲ್ಲಿಗಲ್ಲಿಗೆ ನಾಲ್ಕಾರು ಶುದ್ಧ ಕುಡಿಯುವ ನೀರಿನ ಘಟಕ ಶುರುವಾಗಿದೆ. ನಗರಸಭೆಯಿಂದ ಹತ್ತಾರು ಕೋಟಿ ರು. ಖರ್ಚು ಮಾಡಿ 24-7 ಕುಡಿಯುವ ನೀರಿನ ಯೋಜನೆ ಜಾರಿಗೊಂಡು ದಶಕವೇ ಕಳೆದರೂ ಇದುವರೆಗೆ ಯೋಜನೆ ಅನುಷ್ಠಾನಗೊಂಡಿಲ್ಲ. ಈ ಯೋಜನೆಗಾಗಿ ಅಳವಡಿಸಿದ ಪೈಪ್‌ಲೈನ್‌ನಲ್ಲಿ ವಾರಕ್ಕೊಮ್ಮೆ ನೀರು ಬಿಡುತ್ತಿರುವುದೇ ಸಾಧನೆ ಎಂಬಂತಾಗಿದೆ. ನಗರಸಭೆ ಮತ್ತು ಶಾಸಕರ ನಡುವಿನ ಸಮನ್ವಯತೆ ಕೊರತೆಯಿಂದ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ರುದ್ರಪ್ಪ ಲಮಾಣಿ ಅವರು ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಬೇಕಿದೆ. ನಗರದ ಜನತೆಗೆ ನಿರಂತರ ನೀರು ಪೂರೈಸುವ ಸವಾಲು ಹಾಗೂ ಜವಾಬ್ದಾರಿ ಅವರ ಮೇಲಿದೆ.
ಯುಜಿಡಿ ಸಮಸ್ಯೆಪರಿಹರಿಸಿ:
ಎಲ್ಲಿ ನೋಡಿದರೂ ತೆರೆದ ಚರಂಡಿ, ಸೊಳೆ ಮತ್ತು ಹಂದಿ ಕಾಟ, ಗಬ್ಬು ವಾಸನೆ ಇದು ಹಾವೇರಿ ನಗರದ ಸ್ಥಿತಿ. ಕಾರಣ ಒಳಚರಂಡಿ ಯೋಜನೆ ಇಲ್ಲದಿರುವುದು. ದಶಕದ ಹಿಂದೆಯೇ ನಗರದಲ್ಲಿ ಯುಜಿಡಿ ಕಾಮಗಾರಿ ಶುರುವಾಗಿ ರಸ್ತೆ ಅಗೆದು, ಹೊಂಡ ತೋಡಿ, ಅಲ್ಲಲ್ಲಿ ಮ್ಯಾನ್ ಹೋಲ್ ಅಳವಡಿಸಿರುವ ಕುರುಹು ಮಾತ್ರ ಕಾಣುತ್ತದೆಯೇ ಹೊರತು ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಇದಕ್ಕಾಗಿ ವ್ಯಯಿಸಿದ ಹಣ ಎಷ್ಟು, ಎಲ್ಲಿಗೆ ಹೋಯಿತು ಎಂಬುದೂ ತಿಳಿಯುತ್ತಿಲ್ಲ, ಶಾಸಕ ರುದ್ರಪ್ಪ ಲಮಾಣಿ ಅವರು ಯೋಜನೆ ಅನುಷ್ಠಾನಗೊಳಿಸಲು ಮುಂದಾಗಬೇಕಿದೆ.
ಬಣ್ಣ ನಿಮ್ಮದು ಕುಂಚ ನಮ್ಮದು 'ಅಕ್ಕ ಅನು ಬಳಗ'ದವರ ಕಾರ್ಯ ಶ್ಲಾಘನೀಯ
ರಿಂಗ್ ರೋಡ್ ಬೇಕು:
ಜಿಲ್ಲಾ ಕೇಂದ್ರದ ಜನಸಂಖ್ಯೆ ಹೆಚ್ಚುತ್ತಿದ್ದು, ಜನಸಾಂದ್ರತೆಗೆ ತಕ್ಕಂತೆ ಮೂಲಸೌಲಭ್ಯಗಳು ಅಭಿವೃದ್ಧಿಯಾಗುತ್ತಿಲ್ಲ. ಮುಖ್ಯವಾಗಿ ಇಡೀ ನಗರವನ್ನು ಸಂಪರ್ಕಿಸುವ ರಿಂಗ್ ರೋಡ್ ಅನುಷ್ಠಾನಗೊಳ್ಳಬೇಕಿದೆ. ಇದರಿಂದ ನಗರದ ಸುತ್ತಮುತ್ತಲಿನ ಬಡಾವಣೆ, ಗ್ರಾಮಗಳಿಗೆ ಸಂಪರ್ಕ ಸಾಧ್ಯವಾಗಲಿದೆ. ಕ್ಷೇತ್ರದಲ್ಲಿ ಸೂರಿಲ್ಲದ ಅನೇಕ ಕುಟುಂಬಗಳಿವೆ. ಅಂಥ ಕುಟುಂಬಗಳನ್ನು ಪಕ್ಷಾತೀತವಾಗಿ ಗುರುತಿಸಿ ಅರ್ಹರಿಗೆ ಸೂರು ಕಲ್ಪಿಸಲು ಮುಂದಾಗಬೇಕಿದೆ. ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು, ಅವುಗಳ ಸುಧಾರಣೆ ಆಗಬೇಕಿದೆ. ಆಸ್ಪತ್ರೆ, ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕಿದೆ.