ಸರ್ಕಾರಕ್ಕೆ ಗ್ಯಾರಂಟಿ ಜಾರಿಗಿರುವ ಆಸಕ್ತಿ ರೈತರ ಮೇಲಿಲ್ಲ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Dec 8, 2023, 4:23 AM IST
Highlights

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರವು ಧಾವಿಸಬೇಕಾದ ಅಗತ್ಯವಿದ್ದು, ಎರಡು ಲಕ್ಷ ರು.ವರೆಗಿನ ಕೃಷಿ ಸಾಲಮನ್ನಾ ಮಾಡುವುದರ ಜತೆಗೆ ತಕ್ಷಣ 10 ಸಾವಿರ ಕೋಟಿ ರು. ಅನುದಾನವನ್ನು ಒದಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 

ವಿಧಾನಸಭೆ (ಡಿ.08): ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರವು ಧಾವಿಸಬೇಕಾದ ಅಗತ್ಯವಿದ್ದು, ಎರಡು ಲಕ್ಷ ರು.ವರೆಗಿನ ಕೃಷಿ ಸಾಲಮನ್ನಾ ಮಾಡುವುದರ ಜತೆಗೆ ತಕ್ಷಣ 10 ಸಾವಿರ ಕೋಟಿ ರು. ಅನುದಾನವನ್ನು ಒದಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಗುರುವಾರ ಬರಗಾಲ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಪ್ರಚಾರದ ಮೇಲೆ ಇರುವ ಆಸಕ್ತಿ ರೈತರ ಬಗ್ಗೆ ಇಲ್ಲ.

ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಅಸಡ್ಡೆತನ ಆಶ್ಚರ್ಯವನ್ನುಂಟು ಮಾಡಿದೆ. ಕಳೆದ ಆರು ತಿಂಗಳಿನಿಂದ ಕೇವಲ ಗ್ಯಾರಂಟಿಗಳ ಬಗ್ಗೆಯೇ ಕೆಲಸ ಮಾಡುತ್ತಿರುವ ಈ ಸರ್ಕಾರ, ಆರ್ಥಿಕ ಹೊರೆಯನ್ನು ತನ್ನ ಮೇಲೆ ಎಳೆದುಕೊಂಡು ರೈತರಿಗೆ ಪ್ರತಿಯೊಂದಕ್ಕೂ ಬರೆ ಎಳೆಯುತ್ತಿದೆ. ಬೆಳೆ ನಾಶದಿಂದ ಅತೀವ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಸಾಲಮನ್ನಾ ಮೂಲಕ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಮುಸ್ಲಿಮರನ್ನು ಸಂತೈಸುತ್ತಿರುವ ಸಿಎಂ ಸಿದ್ದರಾಮಯ್ಯ: ಯಡಿಯೂರಪ್ಪ ಟೀಕೆ

ಗ್ಯಾರಂಟಿಗಳ ಅನುಷ್ಠಾನಗೊಳಿಸುವ ಭರದಲ್ಲಿ ಉಳಿದ ಕಾರ್ಯಗಳ ಕಡೆಗಣನೆ ಮಾಡಲಾಗಿದೆ. ಗ್ಯಾರಂಟಿ ಜಾರಿಗೆ ಹೆಚ್ಚು ಸಮಯ ಕೊಟ್ಟು ಆರ್ಥಿಕ ಹೊರೆ ಅವರೇ ತಂದು ಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಪಿಡಿಓ ಖಾತೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 800 ಕೋಟಿ ರು. ಮೀಸಲಿಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಬರಪೀಡಿತ 216 ತಾಲೂಕುಗಳ ನಷ್ಟದ ಬಗ್ಗೆ ಮಾಹಿತಿ ನೀಡಿದೆ. ರಾಜ್ಯ ಸರ್ಕಾರ ನೀಡಿರುವ ಅಂದಾಜಿನ ಪ್ರಕಾರ ರೈತರು ಅನುಭವಿಸಿರುವ ಬೆಳೆ ನಷ್ಟದ ಶೇ.10ರಷ್ಟು ಬೆಳೆ ನಷ್ಟಕ್ಕೂ ಪರಿಹಾರ ಕೊಡಲಾಗುವುದಿಲ್ಲ. ಹೀಗಾಗಿ ರೈತರು ಸರ್ಕಾರದಿಂದ ನೆರವು ಬಯಸುತ್ತಿದ್ದಾರೆ ಎಂದರು.

ಕೊಬ್ಬರಿ ಖರೀದಿ ಕೇಂದ್ರ ಪುನಾರಂಭ ಮಾಡಲು ಆಗ್ರಹ: ಕೊಬರಿ ಬೆಳೆಗಾರರ ಸಂಕಷ್ಟವನ್ನು ಸದನದಲ್ಲಿ ವಿವರಿಸಿದ ಕುಮಾರಸ್ವಾಮಿ, ರೈತರಿಗೆ ಅನುಕೂಲವಾಗಲು ತಕ್ಷಣವೇ ಕೊಬರಿ ಖರೀದಿ ಕೇಂದ್ರಗಳನ್ನು ಮರು ಆರಂಭ ಮಾಡಬೇಕು. ಕೊಬ್ಬರಿ ಬೆಲೆ ಈ ಹಿಂದೆ ಕ್ವಿಂಟಾಲ್ ಗೆ 18 ಸಾವಿರ ರು ಇತ್ತು. ಈಗ 7,500 ರುಗೆ ಬಂದಿದೆ. ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನಾಫೆಡ್ ಗೆ ಎಷ್ಟು ಪತ್ರ ಬರೆದರೂ ಉಪಯೋಗ ಇಲ್ಲದಾಗಿದೆ ಎಂದು ಹೇಳಿದರು. ಈ ಹಿಂದೆ ಖರೀದಿ ಕೇಂದ್ರಗಳ ಮೂಲಕ ನಾಫೆಡ್ ಪ್ರತಿ ಕ್ವಿಂಟಲ್ ಗೆ 11,750 ರು. ನೀಡಿ ಕೊಬ್ಬರಿ ಖರೀದಿ ಮಾಡುತ್ತಿತ್ತು. ಅಂದಾಜು ಒಟ್ಟು 50 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ 580 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಕೆಲ ದಿನಗಳ ನಂತರ ಖರೀದಿ ಕೇಂದ್ರಗಳು ಸ್ಥಗಿತವಾದವು. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್‌ಸಿ, ಎಸ್‌ಟಿ ಹಣ ದುರ್ಬಳಕೆ: ಸಚಿವ ಎಂ.ಬಿ.ಪಾಟೀಲ್‌

ಕೊಬ್ಬರಿ ದರವೂ 7500 ರೂಪಾಯಿಗೆ ಕುಸಿಯಿತು. ನಾಫೆಡ್ ಅಂದು ಕ್ವಿಂಟಾಲ್ ಕೊಬ್ಬರಿಯನ್ನು 11,750 ರೂಪಾಯಿಗೆ ಖರೀದಿ ಮಾಡಿದ್ದು, ಈಗ ಅದನ್ನು ಖಾಸಗಿ ಎಣ್ಣೆ ಕಂಪನಿಗಳಿಗೆ 7,500 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅವರಿಗೆ 200 ಕೋಟಿ ರು. ನಷ್ಟವಾಗುತ್ತಿದೆ ಎಂದು ಹೇಳಿದರು. ನಾನು ಸಹ ತೆಂಗು ಬೆಳೆಗಾರನಾಗಿದ್ದು, ಸುಮಾರು ಒಂದೂವರೆ ಲಕ್ಷ ದಷ್ಟು ಕೊಬ್ಬರಿಯನ್ನು ಒಂದೂವರೆ ವರ್ಷದಿಂದ ಮಾರಾಟ ಮಾಡಲಾಗದೆ ಇಟ್ಟಿದ್ದೇನೆ. ನನ್ನಂತಹವನಿಗೆ ಈ ಸ್ಥಿತಿಯಾದರೆ, ರೈತರ ಪಾಡೇನು ಎಂದು ಹೇಳಿದ ಅವರು, ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುವ ಸರ್ಕಾರಗಳು ರೈತನಿಗೆ ಸಣ್ಣ ಪ್ರಮಾಣದ ಬೆಂಬಲ ಬೆಲೆ ನೀಡುವುದಕ್ಕೆ ಇಷ್ಟು ಮೀನಾಮೇಷ ಏಕೆ? ಎಂದು ತಿಳಿಸಿದರು.

click me!