ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿಯನ್ನು ಗೆಲ್ಲಿಸಲು ಕಾಂಗ್ರೆಸ್‌ನಿಂದ ಎಲ್ಲ ಅಸ್ತ್ರ ಪ್ರಯೋಗ..!

By Shashishekar P  |  First Published May 18, 2024, 11:07 AM IST

ಕಳೆದ ಚುನಾವಣೆಯಲ್ಲಿ ಅಮೇಠಿಯಿಂದ ಸೋಲಾಗಬಹುದು ಅನ್ನೋ ಸೂಚನೆ ರಾಹುಲ್ ಗಾಂಧಿಗೆ ಮೊದಲೇ ಸಿಕ್ಕಿತ್ತು. ಅದಕ್ಕೇ ವಯನಾಡನ್ನ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ರು. ಈ ಬಾರಿ ರಾಯ್ ಬರೇಲಿಯಿಂದ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ರಾಹುಲ್ ಗಾಂಧಿಯವರದ್ದು. ಅದಕ್ಕೇ ರಾಯ್ ಬರೇಲಿಯನ್ನ ಈ ಬಾರಿ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ರಾಹುಲ್ ಗಾಂಧಿ.


ಶಶಿ ಶೇಖರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ರಾಯ್ ಬರೇಲಿ(ಮೇ.18):  ರಾಯ್ ಬರೇಲಿ ಲೋಕಸಭಾ ಕ್ಷೇತ್ರ. ದೇಶದಲ್ಲಿ ಇತಿಹಾಸ ಸೃಷ್ಟಿಸಿದ ಕ್ಷೇತ್ರ, ದೇಶದ ಇತಿಹಾಸ ಬದಲಿಸಿದ ಕ್ಷೇತ್ರ. 2024ರ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕುತೂಹಲಕ್ಕೆ ಕಾರಣವಾಗಿರೋ ಲೋಕಸಭಾ ಕ್ಷೇತ್ರ. ಇಷ್ಟು ಕುತೂಹಲಕ್ಕೆ ಕಾರಣವಾಗಿರೋದು ರಾಹುಲ್ ಗಾಂಧಿ ಸ್ಪರ್ಧೆಯ ಕಾರಣಕ್ಕೆ. ಈ ಬಾರಿ ಈ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡ್ತಿದ್ದಾರೆ. ಸೋನಿಯಾ ಗಾಂಧಿ 5 ಬಾರಿ ಚುನಾವಣೆ ಎದುರಿಸಿ 20 ವರ್ಷಗಳ ಕಾಲ ಸಂಸದರಾಗಿದ್ದ ಕ್ಷೇತ್ರ ಇದು. ಕಳೆದ ಬಾರಿ ಅಮೇಠಿಯಲ್ಲಿ ಸೋಲು ಕಂಡು ಮುಖಭಂಗಕ್ಕೀಡಾಗಿದ್ದ ರಾಹುಲ್ ಗಾಂಧಿ ಈ ಬಾರಿ ಪಕ್ಕದ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Tap to resize

Latest Videos

undefined

ಕಳೆದ ಚುನಾವಣೆಯಲ್ಲಿ ಅಮೇಠಿಯಿಂದ ಸೋಲಾಗಬಹುದು ಅನ್ನೋ ಸೂಚನೆ ರಾಹುಲ್ ಗಾಂಧಿಗೆ ಮೊದಲೇ ಸಿಕ್ಕಿತ್ತು. ಅದಕ್ಕೇ ವಯನಾಡನ್ನ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ರು. ಈ ಬಾರಿ ರಾಯ್ ಬರೇಲಿಯಿಂದ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ರಾಹುಲ್ ಗಾಂಧಿಯವರದ್ದು. ಅದಕ್ಕೇ ರಾಯ್ ಬರೇಲಿಯನ್ನ ಈ ಬಾರಿ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ರಾಹುಲ್ ಗಾಂಧಿ.

ಗಾಂಧಿ ಕೌಟುಂಬಿಕ ಭದ್ರಕೋಟೆ ರಾಯ್‌ಬರೇಲೀಲಿ ರಾಹುಲ್ ಗಾಂಧಿ ಕಣಕ್ಕೆ

ರಾಹುಲ್ ಗಾಂಧಿಯವರನ್ನ ಈ ಬಾರಿ ಹೇಗಾದರೂ ಮಾಡಿ ಗೆಲ್ಲಿಸಿಕೊಳ್ಳಬೇಕು, ಮತ್ತೊಂದು ಅಮೇಠಿ ದುಃಸ್ವಪ್ನವಾಗದಂತೆ ಕಾಂಗ್ರೆಸ್ ಇನ್ನಿಲ್ಲದ ಎಚ್ಚರಿಕೆ ವಹಿಸಿದೆ. ಹೀಗಾಗಿ ದೇಶದ ಹಲವು ರಾಜ್ಯಗಳಿಂದ ಕಾಂಗ್ರೆಸ್ ನಾಯಕರು ರಾಯ್ ಬರೇಲಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಛತ್ತೀಸ್ ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರನ್ನ ರಾಯ್ ಬರೇಲಿಯ ಚುನಾವಣಾ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಕರ್ನಾಟಕದಿಂದಲೂ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ರಾಯ್ ಬರೇಲಿಯಲ್ಲಿ ಪ್ರಚಾರ ಮಾಡಿದ್ದಾರೆ. ಕೆ.ಎಚ್ ಮುನಿಯಪ್ಪನವರಂತೂ ಮೂರ್ನಾಲ್ಕು ದಿನ ರಾಯ್ ಬರೇಲಿಯಲ್ಲಿದ್ದುಕೊಂಡು ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ರಾಹುಲ್ ಗಾಂಧಿ ಪರ ಪ್ರಚಾರ ನಡೆಸಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್-ಕನ್ನಡ ಪ್ರಭ ಪ್ರತಿನಿಧಿ ಜತೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಬಾರಿ ರಾಹುಲ್ ಗಾಂಧಿ ರಾಯ್ ಬರೇಲಿಯಿಂದ ಗೆದ್ದೇ ಗೆಲ್ಲುತ್ತಾರೆ. ಜನರ ಪ್ರತಿಕ್ರಿಯೆ ಅದ್ಭುತವಾಗಿದೆ. ಗಾಂಧಿ-ನೆಹರು ಕುಟುಂಬದ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ಗೆಲುವು ನಿಶ್ಚಿತ ಎಂದಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಕೊಟ್ಟಂತೆ ದೇಶಾದ್ಯಂತ ಗ್ಯಾರಂಟಿ ನೀಡುತ್ತೇವೆ. ಕರ್ನಾಟಕ, ತೆಲಂಗಾಣದ ನಂತರ ದೇಶದಲ್ಲೂ ಇಂಡಿಯಾ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಬಿವಿ ಶ್ರೀನಿವಾಸ್ 10–12 ದಿನಗಳಿಂದ ರಾಯ್ ಬರೇಲಯ ಹಳ್ಳಿ ಹಳ್ಳಿ ಸುತ್ತಾಡುತ್ತಿದ್ದಾರೆ. ನಮ್ಮ ನಾಯಕನನ್ನ ಗೆಲ್ಲಿಸಲು ಇದು ಅಳಿವು ಸೇವೆಯಷ್ಟೇ. ನನ್ನಂಥವನ್ನ ಗುರುತಿಸಿ ರಾಷ್ಟ್ರಮಟ್ಟದಲ್ಲಿ ಸ್ಥಾನ ಕೊಟ್ಟಿದ್ದಾರೆ, ಅವರಿಗಾಗಿ ನಾನು ಕೆಲಸ ಮಾಡ್ತಿದ್ದೇನೆ ಅಂತಾರೆ ಬಿ.ವಿ ಶ್ರೀನಿವಾಸ್.

2019ರ ಅಮೇಠಿಯ ಸೋಲು ನೆಹರು-ಗಾಂಧಿ ಕುಟುಂಬವನ್ನ ಎಷ್ಟು ಕಂಗೆಡೆಸಿದೆ ಅಂದ್ರೆ, ಈ ಬಾರಿ ರಾಹುಲ್ ಅವರನ್ನ ಗೆಲ್ಲಿಸಲೇಬೇಕು ಎಂದು ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಪಣ ತೊಟ್ಟಿದ್ದಾರೆ. ತಮ್ಮ ಬತ್ತಳಿಕೆಯಲ್ಲಿರೋ ಎಲ್ಲ ಅಸ್ತ್ರಗಳನ್ನೂ ರಾಯ್ ಬರೇಲಿಯಲ್ಲಿ ಪ್ರಯೋಗಿಸುತ್ತಿದೆ ಕಾಂಗ್ರೆಸ್. ರಾಯ್ ಬರೇಲಿಯಿಂದಲೂ ರಾಹುಲ್ ಗಾಂಧಿಗೆ ಸೋಲಾದರೆ ಅವರ ರಾಜಕೀಯ ಭವಿಷ್ಯ ಮತ್ತು ನಾಯಕತ್ವದ ಮೇಲೆ ಪ್ರಶ್ನಾರ್ಥಕ ಚಿಹ್ನ ಬೀಳಲಿದೆ ಅನ್ನೋ ಕಾರಣಕ್ಕೆ ಈ ಗೆಲ್ಲಿಸಿಕೊಳ್ಳೋ ಹಠ. ಪ್ರಿಯಾಂಕಾ ಗಾಂಧಿ ಈ ಬಾರಿ ರಾಯಬರೇಲಿಯಲ್ಲೇ ಉಳಿದುಕೊಂಡು ಅಣ್ಣನ ಪರ ಪ್ರಚಾರ ಮಾಡ್ತಿದ್ದಾರೆ. ದಿನಕ್ಕೆ ಏನಿಲ್ಲವೆಂದರೂ ನಾಲ್ಕೈದು ಚುನಾವಣಾ ಪ್ರಚಾರ ಸಭೆಗಳು, ಸ್ಥಳೀಯ ನಾಯಕರ ಜತೆ ಮೀಟಿಂಗ್, ಕಾರ್ಯಕರ್ತರೊಂದಿಗೆ ಮಾತುಕತೆ ನಡೆದೇ ಇದೆ. ಇನ್ನು ಸೋನಿಯಾ ಗಾಂಧಿ ಅನಾರೋಗ್ಯದ ನಡುವೆಯೂ ನಾಮಪತ್ರ ಸಲ್ಲಿಕೆಗೆ ರಾಹುಲ್ ಜತೆ ರಾಯಬರೇಲಿಗೆ ಬಂದಿದ್ದರು. ಅಷ್ಟೇ ಅಲ್ಲ ರಾಯಬರೇಲಿಯಲ್ಲಿ ನಡೆದ ಕಾಂಗ್ರೆಸ್-ಎಸ್ ಪಿ ಮೈತ್ರಿ ಸಮಾವೇಶದಲ್ಲೂ ಭಾಗಿಯಾಗಿ ರಾಹುಲ್ ಗೆಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿಯವರ ಮೊದಲ ಮತ್ತು ಬಹುಶಃ ಕೊನೇ ಪ್ರಚಾರ ಇದು.

ರಾಯಬರೇಲಿ ಬಿಜೆಪಿ... ಮನೆಯೊಂದು ಮೂರು ಬಾಗಿಲು

ರಾಹುಲ್ ಗಾಂಧಿಗೆ ತಾನು ರಾಯ್ ಬರೇಲಿಯಿಂದ ಗೆಲ್ಲಬಹುದು ಅನ್ನೋ ಆತ್ಮವಿಶ್ವಾಸ ಬರಲು ಕಾರಣವಾಗಿದ್ದು ಇಲ್ಲಿನ ಬಿಜೆಪಿ ಒಳಜಗಳ. ಅಮೇಠಿಯಿಂದಲೇ ಮತ್ತ ಸ್ಪರ್ಧೆ ಮಾಡಿದ್ರೆ ಮತ್ತೆ ಕಣದಲ್ಲಿ ಸ್ಮೃತಿ ಇರಾನಿಯನ್ನ ಎದುರಿಸಬೇಕಾಗ್ತಿತ್ತು. ಅಮೇಠಿಗೆ ಹೋಲಿಸಿದರೆ ರಾಯ್ ಬರೇಲಿ ಸೋನಿಯಾ ಗಾಂಧಿ ಕ್ಷೇತ್ರವಾದ್ದರಿಂದ ಸ್ವಲ್ಪ ಮಟ್ಟಿಗೆ ಸುರಕ್ಷಿತ. ರಾಯ್ ಬರೇಲಿಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕನ್ನ ಎಸ್ ಪಿ ಗೆದ್ದಿತ್ತು. ಸಮಾಜವಾದಿ ಪಕ್ಷದ ಬಲ ಇರೋದ್ರಿಂದ ಮೈತ್ರಿಯ ಕಾರಣಕ್ಕೆ ಸುಲಭವಾಗಿ ಗೆಲ್ಲಬಹುದು ಅನ್ನೋ ಲೆಕ್ಕಾಚಾರ.

ರಾಯ್ ಬರೇಲಿಯಿಂದ ದಿನೇಶ್ ಪ್ರತಾಪ್ ಸಿಂಗ್ ಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಯಾರಿಗೆ ಟಿಕೆಟ್ ಕೊಡಬೇಕು ಅನ್ನೊ ಗೊಂದಲದಲ್ಲಿದ್ದ ಬಿಜೆಪಿ ಕೊನೇ ಗಳಿಕೆಯಲ್ಲಿ ಕಳೆದ ಬಾರಿ ಸೋನಿಯಾ ಗಾಂಧಿ ವಿರುದ್ದ ಸ್ಪರ್ಧಿಸಿ ಸೋತಿದ್ದ ವ್ಯಕ್ತಿಗೇ ಮತ್ತೆ ಟಿಕೆಟ್ ಕೊಟ್ಟಿದೆ. ರಾಯ್ ಬರೇಲಿ ಬಿಜೆಪಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ಇರುವವರೇ ಹೆಚ್ಚು. ರಾಯ್ ಬರೇಲಿಯ ಶಾಸಕಿ ಅದಿತಿ ಸಿಂಗ್ ಅವರಿಗೂ ದಿನೇಶ್ ಪ್ರತಾಪ್ ಗೂ ಹಾವು- ಮುಂಗುಸಿ ಜಗಳ. ಇನ್ನು ಉಂಚಾಹರ್ ಕ್ಷೇತ್ರದಿಂದ ಎಸ್ ಪಿ ಟಿಕೆಟ್ ನಿಂದ ಗೆದ್ದು ಶಾಸಕರಾಗಿರೋ ಮನೋಜ್ ಪಾಂಡೆ ಬಂಡೆದ್ದು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಆದ್ರೆ ಬಿಜೆಪಿ ಅಭ್ಯರ್ಥಿಗೂ ಮನೋಜ್ ಪಾಂಡೆಗೂ ಒಬ್ಬರನ್ನ ಕಂಡರೆ ಮತ್ತೊಬ್ರಿಗೆ ಆಗದಂತಾ ಸ್ಥಿತಿ. ದಿನೇಶ್ ಪ್ರತಾಪ್ ಪರ ಈವರೆಗೂ ಒಂದೇ ಒಂದು ದಿನ ಇಬ್ಬರೂ ಶಾಸಕರು ಪ್ರಚಾರ ಮಾಡಿಲ್ಲ. ಈ ವೆತ್ಯಾಸ ಗಮನಿಸಿದ ಅಮಿತ್ ಶಾ ಇತ್ತೀಚೆಗೆ ರಾಯ್ ಬರೇಲಿಗೆ ಬಂದು ಸಮಾಧಾನ ತಣಿಸುವ ಪ್ರಯತ್ನ ಮಾಡಿದ್ರು. ಆದ್ರೆ ಪರಿಸ್ಥಿತಿ ಮೊದಲು ಹೇಗಿತ್ತೋ ಹಾಗೇ ಇದೆ. ದಿನೇಶ್ ಪ್ರತಾಪ್ ಸಿಂಗ್ ಬಿಟ್ಟು ಬೇರೆ ಯಾರಿಗಾದರೂ ಬಿಜೆಪಿ ಟಿಕೆಟ್ ಕೊಟ್ಟಿದ್ದರೆ ರಾಹುಲ್ ಗೆಲುವು ಕಷ್ಟವಾಗ್ತಿತ್ತು ಅನ್ನೋ ಅಭಿಪ್ರಾಯ ಇಲ್ಲಿನ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿದೆ.

ಬಿಜೆಪಿಯೊಳಗೇ ವಿರೋಧ ಇದ್ದರೂ ದಿನೇಶ್ ಪ್ರತಾಪ್ ಸಿಂಗ್ ಯಾವುದನ್ನೂ ಲೆಕ್ಕಿಸದೇ ಪ್ರಚಾರ ಮಾಡ್ತಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಮಂತ್ರಿಯೂ ಆಗಿರೋದ್ರಿಂದ ಕ್ಷೇತ್ರದಲ್ಲಿ ಅವರ ಪ್ರಭಾವ ಹೆಚ್ಚಾಗಿಯೇ ಇದೆ. ಜತೆಗೆ ಉತ್ತರ ಪ್ರದೇಶದ ಅಷ್ಟೂ ನಾಯಕರಿಗೆ ತಮ್ಮ ತಮ್ಮ ಜಾತಿಯ ಮತ ತರಲೇಬೇಕು ಅನ್ನೋ ಟಾರ್ಗೆಟ್ ಕೊಡಲಾಗಿದೆ. ಬಿಜೆಪಿಯನ್ನ ಗೆಲ್ಲಿಸಬೇಕು ಅಂತ ಅಮಿತ್ ಶಾ ಕಟ್ಟಾಜ್ಞೆ ಹೊರಡಿಸಿರೋದ್ರಿಂದ ಬಿಜೆಪಿಯ ರಾಜ್ಯಮಟ್ಟದ ನಾಯಕರು ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಲು ದುಡಿಯುತ್ತಿದ್ದಾರೆ.

ಸೋನಿಯಾ ಎಂಪಿ ನಿಧಿಯ 70% ಅಲ್ಪಸಂಖ್ಯಾತರಿಗೆ ಹಂಚಿಕೆ: ಅಮಿತ್‌ ಶಾ ಕಿಡಿ

ಗಾಂಧಿ ನೆಹರು ಕುಟುಂಬದ ರಾಜಕೀಯ ಕರ್ಮಭೂಮಿಯಾಗಿದ್ದರೂ ರಾಯ್ ಬರೇಲಿಯ ಹಣೆಬರಹ ಮಾತ್ರ ಬದಲಾಗ್ತಿಲ್ಲ. ಇಂದಿರಾ ಗಾಂಧಿ ಕಾಲದಲ್ಲಿ ಆದ ಕೆಲವು ಅಭಿವೃದ್ಧಿ ಯೋಜನೆಗಳು ಬಿಟ್ಟರೆ ರಾಯಬರೇಲಿ ಕರ್ನಾಟದ ಯಾವುದೇ ಜಿಲ್ಲೆಗೆ ಹೋಲಿಸಿದರೂ 30-40 ವರ್ಷ ಹಿಂದಿದೆ. ರಾಯ್ ಬರೇಲಿಯಲ್ಲಿ ಏನೂ ಬದಲಾಗಿಲ್ಲ. ಇದು ಬದಲಾಗೋದು ಇಲ್ಲ ಅಂತ ಇಲ್ಲಿನ ಜನರೇ ಒಪ್ಪಿಕೊಳ್ತಾರೆ. ನೆಹರು-ಗಾಂಧಿ ಕುಟುಂಬದ ಮೇಲಿನ ಪ್ರೀತಿ ಮತ್ತು ಜಾತಿಯಾಧಾರದ ಮೇಲೆಯೇ ಇಲ್ಲಿನ ಜನ ಮತ ಹಾಕ್ತಾರೆ. ಅಭಿವೃದ್ಧಿಗಾಗಿ ಮತ ಹಾಕಬೇಕು ಅನ್ನೊದು ಇಲ್ಲಿನವರಿಗೆ ಹೊಸ ವಿಷಯ. ಕಾಂಗ್ರೆಸ್ ಆಳ್ವಿಕೆಯ ಕಾಲದಲ್ಲಿ ಆದ ಎಂಜಿನಿಯರಿಂಗ್ ಕಾಲೇಜು, ರೈಲ್ವೇ ಕೋಚ್ ಫ್ಯಾಕ್ಟರಿ, ರಸ್ತೆ ಬ್ರಿಡ್ಜ್, ಏಮ್ಸ್ ಮಂಜೂರು ಬಿಟ್ಟರೆ ಅಂತಾ ಅಭಿವೃದ್ಧಿ ಕೆಲಸಗಳೇನೂ ಆಗಿಲ್ಲ. 2013 ರಲ್ಲಿ ಮಂಜೂರಾಗಿದ್ದ ಏಮ್ಸ್ ನ ಒಪಿಡಿ ವಿಭಾಗ ಕಾರ್ಯಾರಂಭ ಮಾಡಿತ್ತು ಮೋದಿ ಸರ್ಕಾರದ ಕಾಲದಲ್ಲಿ ಅಂದ್ರೆ 2018ರಲ್ಲಿ. ಈಗ ಏಮ್ಸ್ ಆಸ್ಪತ್ರೆ 2021 ರಿಂದ ಪೂರ್ಣ ಪ್ರಮಾಣದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನ ಬಿಟ್ರೆ ರಾಯ್ ಬರೇಲಿಯನ್ನ ಸಂಪರ್ಕಿಸೋ ರಸ್ತೆಗಳು, ರೈಲ್ವೇ ಸಂಪರ್ಕ, ವಂದೇ ಬಾರತ್ ರೈಲು ಓಡಾಟ ಶುರುವಾಗಿದೆ. ಇದನ್ನ ಬಿಟ್ರೆ ರಾಯ್ ಬರೇಲಿ ಹೇಗಿತ್ತೋ ಹಾಗೇ ಇದೆ. ರಾಯ್ ಬರೇಲಿಯನ್ನ ಅಭಿವೃದ್ಧಿ ಪಡಿಸೋ ಇಚ್ಛೆ ಬಿಜೆಪಿಗೂ ಇದ್ದಂತಿಲ್ಲ. 2014ರಲ್ಲಿ ಂಒದಿ ಸರ್ಕಾರ, 2017ರಲ್ಲಿ ಯೋಗಿ ಸರ್ಕಾರ ಬಂದ ಮೇಲೂ ರಾಯಬರೇಲಿಯ ಹಣೆಬರಹ ಬದಲಾಗ್ತಿಲ್ಲ. ಇದಕ್ಕೆ ಒಂದೇ ಒಂದು ಉದಾಹರಣೆ ಅಂದ್ರೆ ನಮ್ಮ ಪ್ರತಿನಿಧಿ ಐದು ವರ್ಷದ ಹಿಂದೆ ರಾಯ್ ಬರೇಲಿ ಚುನಾವಣಾ ಪ್ರಚಾರಕ್ಕೆ ಬಂದಾಗ ನಗರದ ಬಸ್ ಸ್ಟಾಂಡ್ ಯಾವ ಸ್ಥಿತಿಯಲ್ಲಿತ್ತೋ ಈಗಲೂ ಹಾಗೇ ಇದೆ... ಅದೇ ಕೊಳಕು, ಅದೇ ಗುಂಡಿಗಳು, ಅದೇ ಶಿಥಿಲಾವಸ್ಥೆಯ ಬಸ್ ಸ್ಟಾಂಡು. ಇದೊಂದು ಉದಾಹರಣೆ ಸಾಕು ರಾಯ್ ಬರೇಲಿ ಅಭಿವೃದ್ಧಿ ವಿಷಯದಲ್ಲಿ ಎಷ್ಟು ಹಿಂದೆ ಉಳಿದಿದೆ ಅನ್ನೋದಕ್ಕೆ. ಆದ್ರೆ ರಾಜಕೀಯಕ್ಕೆ ಮಾತ್ರ ರಾಯಬರೇಲಿ ಬರಪೂರ ಹುಲ್ಲುಗಾವಲು.

ಅಮೇಠಿ ಬದಲು ರಾಹುಲ್ ಸ್ಪರ್ಧೆ ರಾಯ್​ಬರೇಲಿಯಿಂದ ಯಾಕೆ..?

1. ಅಮೇಠಿಯಲ್ಲಿ ಸ್ಪರ್ಧಿಸಿದರೆ ಸ್ಮೃತಿ ಇರಾನಿ ವಿರುದ್ಧ ಸೋಲುವ ಭೀತಿ
2. ಅಮೇಠಿಗೆ ಹೋಲಿಸಿದರೆ ರಾಯಬರೇಲಿಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು
3. ಸೋನಿಯಾ ಕಣಕ್ಕಿಳಿಯುತ್ತಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲ
4. ರಾಯ್​​ಬರೇಲಿಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 4ರಲ್ಲಿ ಎಸ್​ಪಿ ಶಾಸಕರು
5. ಎಸ್​ಪಿ-ಕಾಂಗ್ರೆಸ್ ಸಂಘಟನೆ ಬಲದ ಮೇಲೆ ಗೆಲ್ಲುವ ಪ್ಲಾನ್
ರಾಯ್ ಬರೇಲಿಯಲ್ಲಿ ನೆಹರು- ಗಾಂಧಿ ಕುಟುಂಬದ ರಾಜಕಾರಣ
1952-1960 : ಫಿರೋಜ್ ಗಾಂಧಿ
1967-1980 : ಇಂದಿರಾ ಗಾಂಧಿ
1980-1989 : ಅರುಣ್ ನೆಹರು
1989-1991 : ಶೀಲಾ ಕೌಲ್
2004-2024 : ಸೋನಿಯಾ ಗಾಂಧಿ

ನೆಹರು-ಗಾಂಧಿ ಕೋಟೆಯಲ್ಲೂ ಅರಳಿತ್ತು ಕಮಲ..!

ರಾಯಬರೇಲಿ ಕ್ಷೇತ್ರದಿಂದ ಬಿಜೆಪಿ ಎರಡು ಬಾರಿ ಗೆದ್ದ ಉದಾಹರಣೆಯೂ ಇದೆ. 1996 ಮತ್ತು 1998 ರ ಲೋಕಸಭಾ ಚುನಾವಣೆಯಲ್ಲಿ ಅಶೋಕ್ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.

click me!