ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಡಿ.26): ಕೈಗಾರಿಕೆ ಕೇಂದ್ರವಾಗಿ ಗುರುತಿಸಿಕೊಂಡು ಎರಡನೇ ಚುನಾವಣೆ ((Election) ಎದುರಿಸುತ್ತಿರುವ ಬಿಡದಿ (Bidadi) ಪುರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ನಡೆಸುತ್ತಿರುವ ತೀವ್ರ ಪೈಪೋಟಿಯಿಂದಾಗಿ ಚುನಾವಣಾ (Election) ಕಣ ರಂಗೇರಿದೆ. ಪುರಸಭೆ ಚುನಾವಣೆಯ ಮತದಾನಕ್ಕೆ ಇನ್ನು ಎರಡು ದಿನ ಬಾಕಿ ಇರುವಂತೆಯೇ ಕಾಂಗ್ರೆಸ್ (Congress) ನಾಯಕ ಸಂಸದ ಡಿ.ಕೆ.ಸುರೇಶ್ (DK Suresh) ಹಾಗೂ ಜೆಡಿಎಸ್ (JDS) ನಾಯಕ ಮಾಜಿ ಸಿಎಂ ಕುಮಾರಸ್ವಾಮಿರವರು ವಾರ್ಡ್‌ವಾರು ಅಭ್ಯರ್ಥಿಗಳೊಂದಿಗೆ ಬಿರುಸಿನ ಪ್ರಚಾರ ನಡೆಸಿ ಮುಗಿಸಿದ್ದಾರೆ.
undefined
ಕುಮಾರಸ್ವಾಮಿ (Kumaraswamy) ಹಾಗೂ ಡಿ.ಕೆ.ಸುರೇಶ್ (DK Suresh) ಆಗಮನಕ್ಕೂ ಮುನ್ನ ಚುನಾವಣೆ (Election) ಬಿರುಸು ಪಡೆದಿರಲಿಲ್ಲ. ಇಬ್ಬರು ನಾಯಕರು ಅಖಾಡ ಪ್ರವೇಶಿಸುತ್ತಿದ್ದಂತೆ ಚುನಾವಣಾ ಕಣ ರಂಗೇರಿತು. ಮುಂಬರುವ ಮಾಗಡಿ ವಿಧಾನಸಭಾ ಚುನಾವಣಾ (Assembly Election) ದೃಷ್ಟಿಯಿಂದ ಈ ಚುನಾವಣೆ ಶಾಸಕ ಎ.ಮಂಜುನಾಥ್ (A Manjunath) ಹಾಗೂ ಮಾಜಿ ಶಾಸಕ ಬಾಲಕೃಷ್ಣ (Balakrishna) ಅವರಿಗೆ ಪ್ರತಿಷ್ಠೆ ತಂದೊಡ್ಡಿದೆ.
ಪುರಸಭೆಯನ್ನು ವಶ ಪಡಿಸಿಕೊಳ್ಳಲು ಹಾಲಿ ಮತ್ತು ಮಾಜಿ ಶಾಸಕರು ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ. ಪುರಸಭೆ ಆಡಳಿತ ತಮ್ಮ ಕೈಯಲ್ಲಿದ್ದರೆ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬಹುದೆಂಬ ರಾಜಕೀಯ (Politics) ಲೆಕ್ಕಾಚಾರದಲ್ಲಿ ಮುಳುಗಿರುವ ಇಬ್ಬರು ನಾಯಕರು, ವೈಯಕ್ತಿಕ ಚಾರಿತ್ರವಧೆಗೂ ಮುಂದಾಗಿದ್ದಾರೆ.
ಜೆಡಿಎಸ್ ಛಲ, ಕಾಂಗ್ರೆಸ್‌ಗೆ ಪ್ರತಿಷ್ಠೆ: ಬಿಡದಿ ಗ್ರಾಪಂ ಆಗಿದ್ದಾಗ ಜೆಡಿಎಸ್ (JDS) ಬೆಂಬಲಿತ ಸದಸ್ಯರು ಅಧಿಕ ಸಂಖ್ಯೆಯಲ್ಲಿದ್ದರು. ಗ್ರಾಪಂನಿಂದ ಮೇಲ್ದರ್ಜೆಗೇರಿದ ನಂತರ ನಡೆದ ಪುರಸಭೆಯ ಮೊದಲ ಚುನಾವಣೆಯಲ್ಲೂ ಜೆಡಿಎಸ್ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಅಧಿಪತ್ಯ ಸ್ಥಾಪಿಸಿತ್ತು. ಈಗ ಜೆಡಿಎಸ್ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಒತ್ತಡದಲ್ಲಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಶಾಸಕ ಮಂಜುನಾಥ್ ರವರು ಎಲ್ಲಾ ಸ್ಥಾನಗಳಲ್ಲಿಯೂ ಗೆಲವು ಸಾಧಿಸುವ ಛಲಕ್ಕೆ ಬಿದ್ದಿದ್ದಾರೆ.
ಜಿಲ್ಲೆಯ ಸ್ಥಳೀಯ ಸಂಸ್ಥೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಪ್ರಚಂಡ ಗೆಲವು ಸಾಧಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷಕ್ಕೂ ಪ್ರಸ್ತುತ ಚುನಾವಣೆ ಪ್ರತಿಷ್ಠೆಯಾಗಿದೆ. ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಪುರಸಭೆಯಲ್ಲಿ ಅಧಿಕಾರ ಹಿಡಿಯುವುದು ಸವಾಲಾಗಿದೆ. ಹೀಗಾಗಿ ಶತಾಯ ಗತಾಯ ಚುನಾವಣೆಯಲ್ಲಿ ಗೆಲವು ಸಾಧಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಪುರಸಭೆಯ 23 ವಾರ್ಡ್‌ಗಳಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಪರ್ಧೆ ಮಾಡಿದ್ದರೆ, ಆಡಳಿತ ರೂಢ ಬಿಜೆಪಿ ಕೇವಲ 12 ಸ್ಥಾನಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಕಮಲ ಅರಳಿಸುವ ಹುಮ್ಮಸ್ಸಿನಲ್ಲಿ ಮುಖಂಡರು ಇದ್ದಾರೆ.
ಜಿದ್ದಾಜಿದ್ದಿನ ಚುನಾವಣೆ: ಪುರಸಭೆ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದು, ಪ್ರಮುಖ ಮುಖಂಡರ ನಡುವಿನ ಕಾಳಗ ಎಂದು ಬಿಂಬಿತವಾಗಿದೆ. ಬಹುತೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಪುರಸಭೆಯ 23 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 68 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಕಳೆದ ಬಾರಿ ಸದಸ್ಯರಾಗಿದ್ದವರು ಬೇರೆ ವಾರ್ಡುಗಳಿಂದ ಸ್ಪರ್ಧಿಸಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.
ಮತದಾರರನ್ನು ಓಲೈಸಿಕೊಳ್ಳಲು ಸಾಕಷ್ಟುಕಸರತ್ತು ನಡೆಸುತ್ತಿರುವ ಅಭ್ಯರ್ಥಿಗಳು, ಸೋಮವಾರ ಮತದಾನಕ್ಕೆ ಕಾಯುತ್ತಿದ್ದಾರೆ. ಆದರೆ, ಮತದಾರ ಪ್ರಭು ಪುರಸಭೆಯ ಪಾರುಪಾತ್ಯವನ್ನು ಯಾರ ಮುಡಿಗೆ ಹಾಕುತ್ತಾನೆ ಎಂಬುದನ್ನು ತಿಳಿಯಲು ಫಲಿತಾಂಶದ ದಿನದವರೆಗೂ ಕಾಯಲೇಬೇಕು.
ಒಂದೋಟಿಗೆ 5 ರಿಂದ 20 ಸಾವಿರ !
ಬಿಡದಿ ಪುರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಕೆಲ ಅಭ್ಯರ್ಥಿಗಳು ಒಂದು ಮತಕ್ಕೆ ಕನಿಷ್ಠ 5 ರಿಂದ 20 ಸಾವಿರ ರುಪಾಯಿಗಳನ್ನು ನೀಡಲು ಮುಂದಾಗಿದ್ದಾರೆ. ಒಂದೇ ಮನೆಯಲ್ಲಿ ಮಹಿಳೆ ಸೇರಿ ನಾಲ್ಕೈದು ವೋಟ್ ಗಳಿದ್ದರೆ 25 ಸಾವಿರ ರುಪಾಯಿ ಕ್ಯಾಶ್ ಜತೆಗೆ ಸೀರೆ ಅಥವಾ ಮೂಗುತಿ. ಆನಂತರ ವೀಳ್ಯದೆಲೆ ಮೇಲೆ ಆಣೆ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ.
ಅಲ್ಲದೆ, ಮತದಾರರಿಗೆ ನಾನಾ ಬಗೆಯ ಉಡುಗೊರೆಗಳನ್ನು ನೀಡಿ ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ತಯಾರಿ ನಡೆಸಿದ್ದಾರೆ. ಮತದಾರರಿಗೆ ಹಂಚುವ ಸಲುವಾಗಿಯೇ ಹೋಲ್‌ಸೆಲ್ ದರದಲ್ಲಿ ಖರೀದಿಸಿರುವ ಸಾವಿರಾರು ಸೀರೆ, ಮೂಗುತಿ ಹಾಗೂ ವಾಚ್‌ಗಳು ಬೆಂಬಲಿಗರ ಮನೆಯಲ್ಲಿ ಭದ್ರವಾಗಿ ದಾಸ್ತಾನಾಗಿವೆ.
ಅಭ್ಯರ್ಥಿಗಳ ಬೆಂಬಲಿಗರು ಉಡುಗೊರೆಗಳನ್ನು ಮತದಾರನ ಕೈಗೆ ತಲುಪಿಸಲು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದಾರೆ. ಮತದಾನದ ಹಿಂದಿನ ದಿನ ರಾತ್ರಿ ಹಣ ಹಾಗೂ ಉಡುಗೊರೆಗಳನ್ನು ಮತದಾರನ ಮನೆ ಬಾಗಿಲಿಗೆ ತಲುಪಿಸಲು ಸಹ ಕೆಲ ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ.
ಬಿಡದಿ ಪುರಸಭೆ ಚುನಾವಣೆ - 25 ಮತ ಕೇಂದ್ರಗಳು
ಬಿಡದಿ ಪುರಸಭೆಯ ಪ್ರಥಮ ಚುನಾವಣೆಯ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಪುರಸಭೆಯ 23 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 68 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಭಾನುವಾರು ಒಟ್ಟು 23 ವಾರ್ಡ್‌ಗಳಿಗೆ 25 ಮತ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಡಿ.27ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಗೆವರೆಗೆ ಮತದಾನ ನಡೆಯಲಿದೆ.
ಒಟ್ಟು 25 ಮತ ಕೇಂದ್ರಗಳಲ್ಲಿ 10 ಸೂಕ್ಷ್ಮ, 15 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಪ್ರತಿ ಮತಗಟ್ಟೆಗೆ 3 ಚುನಾವಣೆ ಸಿಬ್ಬಂದಿಯಂತೆ ಒಟ್ಟು 100 ಸಿಬ್ಬಂದಿಯನ್ನು ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಮಸ್ಟರಿಂಗ್ ಕೇಂದ್ರ: ಬಿಡದಿಯ ಕೇತಿಗಾನಹಳ್ಳಿಯ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಯಂತ್ರಗಳ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರವನ್ನು ತೆರೆಯಲಾಗಿದ್ದು, ಡಿ.30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.