'ಮೋದಿ ಸರ್ಕಾರ ಬಂದ್ಮೇಲೆ ದನದ ಮಾಂಸ ಹೆಚ್ಚಳ, ಬಿಜೆಪಿ ಬೆಂಬಲಿಗರಿಂದಲೇ ರಫ್ತು'

By Suvarna News  |  First Published Dec 11, 2020, 3:11 PM IST

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪರ-ವಿರೋಧಗಳ ಚರ್ಚೆಗಳು ನಡೆಯುತ್ತಿವೆ. ಈ ಕಾಯ್ದೆಗೆ ವಿರೋಧಿಸಿರುವ ಕಾಂಗ್ರೆಸ್ ಮೋದಿ ಸರ್ಕಾರಕ್ಕೆ ಕೆಲ ಪ್ರಶ್ನೆ ಹಾಕಿದೆ.


ಬೆಂಗಳೂರು, (ಡಿ.11): ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯನ್ನು ಬಲವಾಗಿ ವಿರೋಧಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೋದಿ ಸರ್ಕಾರ ಬಂದ ಮೇಲೆ ದನದ ಮಾಂಸ ರಫ್ತು ಹೆಚ್ಚಳವಾಗಿದೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಾರಣಾಸಿಯ ಸ್ವರೂಪಾನಂದ ಸ್ವಾಮಿ ಸರಸ್ವತಿ ಹೇಳುವಂತೆ ಮೋದಿ ಸರ್ಕಾರ ಬಂದ ಮೇಲೆ ದನದ ಮಾಂಸ ರಫ್ತು ಜಾಸ್ತಿಯಾಗಿದೆ. ಹಾಗಾದರೆ ಬಿಜೆಪಿ ಸರ್ಕಾರ ಒಂದು ಕಡೆ ಗೋಮಾಂಸಕ್ಕೆ ಪರವಾನಿಗೆ ನೀಡಿ ಮತ್ತೊಂದು ಕಡೆ ನಿಯಂತ್ರಣ ಮಾಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು.

Latest Videos

undefined

ಬಿಜೆಪಿ ಬೆಂಬಲಿಗರೇ ಗೋಮಾಂಸ ರಫ್ತು ಮಾಡುತ್ತಿದ್ದಾರೆ. ಕೇಂದ್ರ ಕಮಿಟಿ ರಚಿಸಿ ತಜ್ಞರ ಸಮಿತಿಯೊಂದನ್ನು ರಚಿಸಲಿ, ಇದರ ಸಾಧಕ- ಭಾದಕಗಳ ಬಗ್ಗೆ ವ್ಯಾಪಕ ಚರ್ಚೆ ನಡೆದು ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಗೋ ಹತ್ಯೆ ವಿಧೇಯಕ ಅಂಗೀಕಾರ: ಬಿಜೆಪಿ ಕಚೇರಿಯಲ್ಲಿ ಗೋ ಪೂಜೆ

ನಾವು ಸಹ ಗೋಮಾತೆಯನ್ನು ಪೂಜಿಸುತ್ತೇವೆ. ದೀಪಾವಳಿ ಹಬ್ಬದಂದೂ ನಾವು ಹಸುಗಳಿಗೆ ಎಡೆ ಹಾಕುತ್ತೇವೆ. ಒಂದು ಹಸುಗೆ ದಿನಕ್ಕೆ ಕನಿಷ್ಠ 6 ಕೆ.ಜಿ ಮೇವು ಬೇಕು. ಸರ್ಕಾರವೇ ದುಡ್ಡು ಕೊಟ್ಟು ಗೋ ಶಾಲೆಗಳನ್ನು ನಡೆಸಬೇಕಾಗುತ್ತದೆ. ಸರ್ಕಾರದಿಂದ ಪ್ರಾಕ್ಟಿಕಲ್ ಆಗಿ ಗೋವುಗಳನ್ನು ಗೋಶಾಲೆಯಲ್ಲಿ ಸಾಕಲು ಸಾಧ್ಯವೇ? ಇದು ಸರ್ಕಾರಕ್ಕೂ ಹೊರೆಯಾಗುವುದಿಲ್ಲವೇ? ಎಂದರು.

ಚರ್ಮ ಉದ್ಯಮಕ್ಕೂ ಧಕ್ಕೆ
ಗೋ ಹತ್ಯೆ ನಿಷೇಧದಿಂದ ಚರ್ಮ ಉದ್ಯಮಕ್ಕೂ ಧಕ್ಕೆಯಾಗಲಿದೆ. 25 ಲಕ್ಷ ಕುಟುಂಬಗಳು ಚರ್ಮೋದ್ಯೋಗದಲ್ಲಿದ್ದಾರೆ. ಸುಮಾರು 8 ಲಕ್ಷ ಪರಿಶಿಷ್ಟ ಜಾತಿಯ ಜನರು ಚರ್ಮ ಸುಲಿಯುವ ಕೆಲಸ ನಂಬಿಯೇ ಬದುಕಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ರೈತರ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ರೈತರು ವಯಸ್ಸಾದ ಹಸುಗಳನ್ನು ಬೀದಿಗೆ ಬಿಡಬೇಕಾಗುತ್ತದೆ. ಆಗ ಬೇರೆಯವರ ಜಮೀನುಗಳಿಗೆ ಹಸುಗಳು ನುಗ್ಗಿ ಗಲಾಟೆಗಳು ಆಗುತ್ತವೆ. ಸಣ್ಣ ರೈತರು, ಕೂಲಿ ಕಾರ್ಮಿಕರಿಗೆ ದೊಡ್ಡ ಹೊಡೆತ ಬೀಳಲಿದೆ. ಮಹಿಳೆಯರು ಬಹಳಷ್ಟು ಮಂದಿ ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದಾರೆ. ಈಗ ನಿಷೇಧ ಮಾಡಿದರೆ ಬಹಳಷ್ಟು ನಷ್ಟವಾಗಲಿದೆ‌ ಎಂದು ಹೇಳಿದರು.

ಚರ್ಮೋದ್ಯೋಗದಿಂದ 5.5 ಬಿಲಿಯನ್ ಡಾಲರ್ಸ್ ಜಿಡಿಪಿ ಆದಾಯ ಇದೆ.  ಚರ್ಮೋದ್ಯೋಗದಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ. ಚರ್ಮದ ಉತ್ಪನ್ನಗಳ ಮೇಲೆ ಸಾಕಷ್ಟು ಮಂದಿ ಅವಲಂಬಿತರಾಗಿದ್ದಾರೆ. ಈಗಲೇ ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಉದ್ಯೋಗ ಕೊಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಗೋಹತ್ಯೆ ನಿಷೇಧದಿಂದ ನಿರೋದ್ಯೋಗ ಇನ್ನೂ ಹೆಚ್ಚುತ್ತದೆ. ಕೇಂದ್ರ ಕಮಿಟಿ ರಚಿಸಿ ಒಂದು ತಜ್ಞರ ಕಮಿಟಿ ಮಾಡಲಿ. ವ್ಯಾಪಕವಾಗಿ ಚರ್ಚೆ ಆಗಲಿ. ವರದಿ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು.

click me!