ಗೋ ಹತ್ಯೆ ವಿಧೇಯಕ ಅಂಗೀಕಾರ: ಬಿಜೆಪಿ ಕಚೇರಿಯಲ್ಲಿ ಗೋ ಪೂಜೆ
ಬೆಂಗಳೂರು(ಡಿ.11): ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿಧೇಯಕ 2020ಕ್ಕೆ ಬುಧವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಗುರುವಾರ ಮಲ್ಲೇಶ್ವರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗೋ ಪೂಜೆಯನ್ನು ನೆರವೇರಿಸಲಾಯಿತು.
ಪಕ್ಷದ ಕಚೇರಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ಕುಮಾರ್ ಅವರು ಗೋ ಪೂಜೆ ಮಾಡುವ ಮೂಲಕ ವಿಧೇಯಕವನ್ನು ಸ್ವಾಗತಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ, ಗೋಹತ್ಯೆ ನಿಷೇಧ ಕಾಯ್ದೆಗೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ವಿಧಾನಪರಿಷತ್ತಿನಲ್ಲೂ ಅಂಗೀಕಾರ ದೊರೆಯಲಿದೆ.
ಈ ಮೂಲಕ ಶೀಘ್ರವೇ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ಆಯಾ ಜಿಲ್ಲೆಗಳ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಪಕ್ಷದ ಕಚೇರಿಗಳಲ್ಲಿ ಗೋ ಪೂಜೆಯನ್ನು ರಾಜ್ಯಾದ್ಯಂತ ನೆರವೇರಿಸಲಿದ್ದಾರೆ. ಇದೊಂದು ಐತಿಹಾಸಿಕ ನಿರ್ಣಯವಾಗಿದೆ ಎಂದು ಶ್ಲಾಘಿಸಿದರು.
ಈ ವೇಳೆ ಸಂಸದರಾದ ಉಮೇಶ್ ಜಾಧವ್, ರಾಜಾ ಅಮರೇಶ್ವರ ನಾಯಕ್, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ ರೇವೂರ, ವೆಂಕಟರೆಡ್ಡಿ, ಮುದ್ನಾಳ, ಬಸವರಾಜ್ ಮತ್ತಿಮೂಡ್, ಡಾ.ಅವಿನಾಶ್ ಜಾಧವ್, ಸುಭಾಷ್ ಗುತ್ತೇದಾರ್, ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಸುನೀಲ್ ವಲ್ಯಾಪುರೆ, ಪಕ್ಷದ ಉಪಾಧ್ಯಕ್ಷ ನಿರ್ಮಲ್ಕುಮಾರ್ ಸುರಾನಾ, ಲೋಕೇಶ್ ಅಂಬೇಕಲ್ಲು ಇತರರಿದ್ದರು. ಗೋ ಪೂಜೆ ಬಳಿಕ ಕಾರ್ಯಕರ್ತರು ಗೋವಿಗೆ ಧವಸದಾನ್ಯ, ಬೆಲ್ಲ ತಿನ್ನಿಸಿ ಸಂಭ್ರಮಿಸಿದರು.