ರಾಹುಲ್ ವಿರುದ್ಧ ತಿರುಗಿ ನಿಂತರೇ ವಾದ್ರಾ?

By Suvarna Web DeskFirst Published Dec 5, 2017, 4:15 PM IST
Highlights

ಶೆಹಜಾದ್ ಪೂನಾವಾಲಾ ಏಕಾಏಕಿ ರಾಹುಲ್ ವಿರುದ್ಧ ಹೇಳಿಕೆ ನೀಡಲು ಭಾವನೇ ಕಾರಣವಂತೆ !

ಗಾಂಧಿ ಕುಟುಂಬದ ಕಟ್ಟಾಳು ತರಹ ಟಿ ವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶೆಹೆಜಾದ್ ಪೂನಾವಾಲಾ ಎಕಾಏಕಿ ರಾಹುಲ್ ಗಾಂಧಿ ಅಧ್ಯಕ್ಷರಾಗಿ ಆಯ್ಕೆಯಾಗುವುದನ್ನು ವಿರೋಧಿಸಿದ್ದು ಏಕೆ ಎಂಬ ಚರ್ಚೆ ಅಕ್ಬರ್ ರೋಡ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿಯೇ ಗುಸು ಗುಸು ರೂಪದಲ್ಲಿ ನಡೆಯುತ್ತಿದ್ದು, ಅನೇಕ ಹಿರಿಯ ಕಾಂಗ್ರೆಸ್ ನಾಯಕರ ಪ್ರಕಾರ ಇದರ ಹಿಂದೆ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಇದ್ದಾರಂತೆ.

ಗಮನಿಸಲೇಬೇಕಾದ ಸಂಗತಿ ಎಂದರೆ ಶಹೆಜಾದ್ ಸಹೋದರ ತೆಹೆಸಿನ್ ಪೂನಾವಾಲಾ ಮದುವೆಯಾಗಿದ್ದು ರಾಬರ್ಟ್ ವಾದ್ರಾ ತಂಗಿಯನ್ನು. ಕಳೆದ ವರ್ಷ ತೆಹೆಸಿಸ್ ಪೂನಾವಾಲಾ ಮದುವೆ ಆರತಕ್ಷತೆ ನಡೆದಾಗ ಮುಂದೆ ನಿಂತು ಉಸ್ತುವಾರಿ ನೋಡಿಕೊಂಡಿದ್ದು ರಾಬರ್ಟ್ ವಾದ್ರಾ ಮತ್ತು ಈಗ ರಾಹುಲ್ ಮೇಲೆ ಮುಗಿ ಬಿದ್ದ ಶೆಹೆಜಾದ್. ಯುವ ಕಾಂಗ್ರೆಸ್ ಮುಖಂಡರು ಹೇಳುವ ಪ್ರಕಾರ ರಾಬರ್ಟ್ ವಾದ್ರಾ ಹೇಳಿದ್ದಕ್ಕಾಗಿಯೇ ಶೆಹೆಜಾದ್ ಪೂನಾವಾಲಾಗೆ ಮಹಾರಾಷ್ಟ್ರ ಕಾಂಗ್ರೆಸ್ ಜವಾಬ್ದಾರಿ ನೀಡಲಾಗಿತ್ತು ಅಷ್ಟೇ ಅಲ್ಲ, ವಾದ್ರಾ ಶಿಫಾರಸ್ಸಿನ ಕಾರಣದಿಂದಲೇ ಶೆಹಜಾದ್‌ನನ್ನು ಯುಪಿಎ ಸರ್ಕಾರದ ಅವಧಿಯಲ್ಲಿಯೇ ಆಗಿನ ಸಂಸದೀಯ ವ್ಯವಹಾರಗಳ ಸಚಿವ ರಾಜೀವ್ ಶುಕ್ಲಾ ತಮ್ಮ ಬಳಿ ಇಲಾಖೆ ಕೆಲಸಕ್ಕಾಗಿ ಇಟ್ಟುಕೊಂಡಿದ್ದರು. ಗಾಂಧಿ ಕುಟುಂಬದ ಆಪ್ತತೆ ಕಾರಣಕ್ಕಾಗಿಯೇ ಶೆಹೆಜಾದ್ ಮತ್ತು ತೆಹೆಸಿನ್ ಇಬ್ಬರಿಗೂ ಕೂಡ ಕಾಂಗ್ರೆಸ್‌ನ ಯಾವುದೇ ನಾಯಕರ ಬಳಿ ಸುಲಭದ ರಹದಾರಿ ಸಿಗುತ್ತಿತ್ತು. ಆದರೆ ಈಗ ಏಕಾಏಕಿ ಶೆಹಜಾದ್ ವಂಶ ಪಾರಂಪರ್ಯದ ಬಗ್ಗೆ ಮಾತನಾಡಿರುವುದು ನೋಡಿದರೆ ಹಿಂದೆ ರಾಬರ್ಟ್ ಇದ್ದಾರಾ ಎಂಬ ಗುಸು ಗುಸು ಕಾಂಗ್ರೆಸ್ ಕಚೇರಿಯಿಂದಲೇ ಕೇಳಿ ಬರುತ್ತಿದೆ. ಯಾರು ಹೇಳದೆ ಯಾರ ಬೆಂಬಲವು ಇಲ್ಲದೆ ಪೂನಾವಾಲಾ ಸುಮ್ಮನೆ ಹೇಳಿಕೆ ನೀಡಲು ಸಾಧ್ಯವಿಲ್ಲ ಬಿಡಿ.

ರಾಹುಲ್, ರಾಬರ್ಟ್ ವಾದ್ರಾ ಅಷ್ಟಕಷ್ಟೇ

ರಾಬರ್ಟ್ ವಾದ್ರಾ ಸಹೋದರಿ ಪ್ರಿಯಾಂಕಾ ಗಾಂಧಿ ಪತಿಯಾದರೂ ಕೂಡ ಆಪ್ತರು ಹೇಳುವ ಪ್ರಕಾರ ರಾಹುಲ್ ಮತ್ತು ರಾಬರ್ಟ್ ಸಂಬಂಧ ಅಷ್ಟಕಷ್ಟೇ. ಉತ್ತರ ಪ್ರದೇಶದಲ್ಲಿ ತಾನು ಚುನಾವಣೆಗೆ ನಿಲ್ಲಬೇಕೆಂದು ರಾಬರ್ಟ್ ವಾದ್ರಾ ಬಹಿರಂಗವಾಗಿಯೇ ಹೇಳಿದಾಗ ರಾಹುಲ್ ಗಾಂಧಿ ನೇರವಾಗಿ ರಾಬರ್ಟ್‌ಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಆಗಿನಿಂದ ಇಬ್ಬರ ನಡುವೆ ಸಂಬಂಧ ಅಷ್ಟಕಷ್ಟೇ. ಕಾಂಗ್ರೆಸ್ ಕಚೇರಿಯ ನೌಕರರು ಹೇಳುವ ಪ್ರಕಾರ ಪ್ರತಿ ಬಾರಿ ಕಾಂಗ್ರೆಸ್ ಚುನಾವಣೆ ಸೋತಾಗ ಅಕ್ಬರ್ ರೋಡ್‌ನಲ್ಲಿ ಕಾಣಿಸುವ ಪ್ರಿಯಾಂಕಾ ಲಾವೋ ದೇಶ ಬಚಾವೋ ಭಿತ್ತಿ ಪತ್ರಗಳ ಹಿಂದೆ ಕೂಡ ರಾಬರ್ಟ್ ವಾದ್ರಾ ಶಿಷ್ಯನೇ ಇರುತ್ತಾನಂತೆ. ಜಗದೀಶ್ ಶರ್ಮ ಎಂಬ ದಿಲ್ಲಿಯ ಫುಡಾರಿ, ಕಚೇರಿಯಲ್ಲಿ ಓಡಾಡುತ್ತಿದ್ದರೆ ಸಾಕು ಅಲ್ಲಿನ ನೌಕರರು ಬಂದಾ ನೋಡಿ ರಾಬರ್ಟ್ ಬಾತ್ಮಿದಾರ ಎಂದು ಹೇಳುತ್ತಿರುತ್ತಾರೆ.

ಪ್ರಿಯಾಂಕಾ, ರಾಹುಲ್ ಅನ್ಯೋನ್ಯ

ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ನಡುವೆ ಸಂಬಂಧ ಅಷ್ಟಕಷ್ಟೇ ಎಂಬಂತಿದ್ದರೂ ಕೂಡ ಸೋನಿಯಾ ಪ್ರಿಯಾಂಕಾ ಮತ್ತು ರಾಹುಲ್ ಅನ್ಯೋನ್ಯವಾಗಿದ್ದಾರಂತೆ. ರಾಬರ್ಟ್ ಸ್ವಲ್ಪ ಮಟ್ಟಿಗೆ ಮಾಡುವ ಹಸ್ತಕ್ಷೇಪ ಸ್ವತಃ ಪ್ರಿಯಾಂಕಾಗೂ ಇಷ್ಟವಿಲ್ಲವಂತೆ. ಆದರೆ ಪ್ರಿಯಾಂಕಾ ಮೂಲಕ ಕಾಂಗ್ರೆಸ್ ಪಕ್ಷವನ್ನು ತಾನು ನಡೆಸಬೇಕು ಎಂಬ ಮಹತ್ವಾಕಾಂಕ್ಷೆ ರಾಬರ್ಟ್ ವಾದ್ರಾ ಗೆ ಮಾತ್ರ ಸ್ವಲ್ಪ ಹೆಚ್ಚಾಗಿಯೇ ಇದೆ. ಆದರೆ ರಾಜಕೀಯವಾಗಿ ರಾಬರ್ಟ್ ವಾದ್ರಾ ಹೇಳುವ ಯಾವುದೇ ಮಾತಿಗೂ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಗಾಂಧಿ ಕುಟುಂಬ ತಮ್ಮ ಪರಮಾಪ್ತರಿಗೆ ಮೌಖಿಕವಾಗಿ ಯಾವಾಗಲೋ ಹೇಳಿಯಾಗಿದೆಯಂತೆ.

ಪ್ರಶಾಂತ್ ನಾತು

(ಇಂಡಿಯಾ ಗೇಟ್ ಆಯ್ದ ಭಾಗ)

click me!