ಗುಜರಾತಲ್ಲಿ  ಮೋದಿ ಮೇಲೆ ಸಿಟ್ಟಿದೆ ಆದರೆ...

By ಪ್ರಶಾಂತ್ ನಾತುFirst Published Dec 3, 2017, 12:13 PM IST
Highlights

ನೋಟು ಬಂದಿ ಮತ್ತು ಜಿಎಸ್‌ಟಿಯಿಂದಾಗಿ 2014ರ ವರೆಗೆ ಉಚ್ಛ್ರಾಯದಲ್ಲಿದ್ದ ಮೋದಿ ವೈಯಕ್ತಿಕ ಜನಪ್ರಿಯತೆ ಸ್ವಂತ ರಾಜ್ಯದಲ್ಲಿ ವ್ಯಾಪಾರೀ ವಲಯದಲ್ಲಿ ಮಾತ್ರ ಸ್ವಲ್ಪ ಕಡಿಮೆಯಾಗಿದೆ. ಆದರೆ ಈ ಸಿಟ್ಟಿಗೆ 22 ವರ್ಷಗಳ ಆಡಳಿತವನ್ನೇ ಕಿತ್ತೊಗೆಯುವ ಶಕ್ತಿ ಮೇಲ್ನೋಟಕ್ಕಂತೂ ಕಾಣುತ್ತಿಲ್ಲ ಎಂದೆನಿಸುತ್ತದೆ.

2001ರಿಂದ ಸತತವಾಗಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಒಮ್ಮೆ ತೆಗೆದುಕೊಂಡ ನಿರ್ಣಯವನ್ನು ವಾಪಾಸ್ ತೆಗೆದುಕೊಂಡ ಉದಾಹರಣೆಗಳು ಕಡಿಮೆ. ಚರ್ಚೆ ಮಾಡುವಾಗ ಕೂಲಂಕಷವಾಗಿ ಯೋಚಿಸಿ ನಂತರವೇ ನಿರ್ಣಯ ತೆಗೆದುಕೊಳ್ಳುವ ನರೇಂದ್ರ ಮೋದಿ ಅವರಿಗೆ ಜುಲೈನಲ್ಲಿ ಜಿಎಸ್‌ಟಿ ಜಾರಿಗೆ ತಂದ ಮೇಲೆ ನಿಧಾನವಾಗಿ ಎಲ್ಲಿಯೋ ತಪ್ಪಾಗಿದೆ ಎಂದು ಅರಿವಾಗತೊಡಗಿತ್ತು. ಹೀಗಾಗಿಯೇ ಯಾವಾಗ ಜಿಎಸ್‌ಟಿ ಗುಜರಾತ್‌ನಲ್ಲಿ ಬಿಜೆಪಿಯನ್ನು ಮನೆಗೆ ಕಳುಹಿಸಬಲ್ಲ ಅಸ್ತ್ರವಾಗಿ ವಿರೋಧಿಗಳಿಗೆ ಸಿಗುತ್ತಿದೆ, ಮನೆ ಅಲುಗಾಡುತ್ತಿದೆ ಎಂದು ಅನ್ನಿಸತೊಡಗಿತೋ ಮೋದಿ ಸತತವಾಗಿ ಬೆನ್ನು ಹತ್ತಿ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಸಿ ರಾಜ್ಯ ಸರ್ಕಾರಗಳನ್ನು ಒಪ್ಪಿಸಿ ಜಿಎಸ್‌ಟಿ ತೆರಿಗೆ ದರಗಳನ್ನೇ ಬದಲಾಯಿಸಿದರು.

ಹೀಗೆ 100 ದಿನಗಳಲ್ಲಿ ತೆಗೆದುಕೊಂಡ ನಿರ್ಣಯ ಬದಲಾಯಿಸುವುದು ಮೋದಿ ಶೈಲಿಯಲ್ಲ. ಆದರೆ ಗುಜರಾತ್ ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆಲ್ಲವನ್ನು ಮಾಡಿಸಿದಂತೆ ಕಾಣುತ್ತಿದೆ. ಎಲ್ಲಾ ಚುನಾವಣಾ ಮಹಿಮೆ!

ವಿಚಿತ್ರ ಎಂದರೆ ನೋಟು ರದ್ಧತಿ ಮಾಡಿದ ಕಾರಣ ದಿಂದಲೇ ಮೋದಿ ಉತ್ತರ ಪ್ರದೇಶದ ಚುನಾವಣೆಯನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಲು ಸಾಧ್ಯವಾಯಿತು. ಜನಸಂಘದ ಕಾಲದಿಂದಲೂ ಬನಿಯಾ ಪಾರ್ಟಿ ಎನಿಸಿಕೊಂಡಿದ್ದ ಬಿಜೆಪಿಗೆ, ನೋಟು ರದ್ದತಿ ಮಾಡಿ ‘ಮೋದಿ ಬಡವರ ಪರ’ ಎಂಬ ಇಮೇಜ್ ಕೊಡುವ ಪ್ರಯತ್ನ ಮಾಡಿದ್ದರು. ನೋಟು ರದ್ಧತಿಯಿಂದ ತನಗೆ ನಷ್ಟವಾದರೂ ಚಿಂತೆಯಿಲ್ಲ. ಆದರೆ ತನ್ನ ಮೇಲೆ ದಬ್ಬಾಳಿಕೆ ನಡೆಸುವ ಶ್ರೀಮಂತನ ಹಣ ಹೋಯಿತಲ್ಲ ಎಂಬ ಭ್ರಮೆ ಸೃಷ್ಟಿಸಲು ಯಶಸ್ವಿಯಾಗಿದ್ದ ಮೋದಿ ಮತ್ತವರ ಬಿಜೆಪಿಗೆ, ಉತ್ತರ ಪ್ರದೇಶದ ಬಡ ಮತದಾರ ದಂಡಿಯಾಗಿ ವೋಟ್ ಕೊಟ್ಟಿದ್ದ. ಆದರೆ ಅದಾದ ಕೆಲ ತಿಂಗಳುಗಳಲ್ಲಿಯೇ

ಕ್ರಾಂತಿಕಾರಿ ತೆರಿಗೆ ಸುಧಾರಣೆ ತರುವ ಭರದಲ್ಲಿ ಜಿಎಸ್‌ಟಿ ತಂದಾಗ ಸ್ವಂತ ರಾಜ್ಯ ಗುಜರಾತ್ ಮತದಾರನೇ ಮುನಿಸಿಕೊಂಡಿದ್ದ. ಸೂರತ್ ಅಹಮದಾಬಾದ್ ಬರೋಡಾಗಳ ಬಿಜೆಪಿ ಭದ್ರ ಕೋಟೆಯಲ್ಲಿ ಬಿಜೆಪಿ ಮತದಾರನೇ ಪ್ರತಿಭಟನೆ ನಡೆಸತೊಡಗಿದಾಗ, ಮೋದಿ ಮತ್ತು ಅಮಿತ್ ಶಾಗೆ ನಿಂತ ನೆಲವೇ ಕುಸಿದಂತೆ ಭಾಸವಾಗತೊಡಗಿತ್ತು. ಹೀಗಾಗಿ ಸತತವಾಗಿ ಮೋದಿ ಬೆನ್ನು ಹತ್ತಿದ್ದ ಅಮಿತ್ ಶಾ ಮತ್ತು ಗುಜರಾತಿನ ಬಿಜೆಪಿ ನಾಯಕರು ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಿಸಿದ್ದರು.

ಗುಜರಾತ್‌ನ ಒಬ್ಬ ಸಂಸದರು ನರೇಂದ್ರ ಮೋದಿಗೆ ‘ಸರ್ಕಾರ ಉಳಿದರೆ ತಾನೇ ಜಿಎಸ್‌ಟಿ ಲಾಭ? ನೀವು ಬದಲಾಯಿಸದೆ ಹೋದರೆ ಬಹಳ ನಷ್ಟವಾಗುತ್ತದೆ’ ಎಂದು ನೇರವಾಗಿಯೇ ಹೇಳಿ ಬಂದಿದ್ದರಂತೆ. ವಿಚಿತ್ರವಾದರೂ ಸತ್ಯ ಏನೆಂದರೆ, ದೂರದ ಉತ್ತರ ಪ್ರದೇಶದಲ್ಲಿ ನೋಟು ಬಂದಿಯಿಂದ ಪರಕೀಯ ನರೇಂದ್ರ ಮೋದಿ ನಮ್ಮವನು ಎಂದು ಹಿಂದುಳಿದ ವರ್ಗಗಳ ಬಡವರಿಗೆ ಅನ್ನಿಸಿದರೆ, ಅದೇ ನೋಟು ಬಂದಿ ಮತ್ತು ಜಿಎಸ್‌ಟಿಯಿಂದ

ಗುಜರಾತಿಯೇ ಆಗಿರುವ ನರೇಂದ್ರ ಮೋದಿ, ಬಿಜೆಪಿ ಬೆನ್ನೆಲುಬು ಆಗಿರುವ ವ್ಯಾಪಾರಿಗಳಿಗೆ ಪರಕೀಯ ಎನ್ನಿಸತೊಡಗಿದ್ದರು. ಹೀಗಾಗಿಯೇ ತರಾತುರಿಯಲ್ಲಿ ಮೋದಿ ಸರ್ಕಾರ ಜಿಎಸ್‌ಟಿ ದರಗಳನ್ನು ಇಳಿಸಿದ್ದನು ಗುಜರಾತ್ ಚುನಾವಣೆಯ ಪರಿಪ್ರೇಕ್ಷದಲ್ಲಿ ನೋಡಬೇಕಾಗುತ್ತದೆ.

ಜಿಎಸ್‌ಟಿ ತಂದ ಸಂಕಷ್ಟ

ಉತ್ತರ ಪ್ರದೇಶದಂಥ ‘ವ್ಯಾಪಾರಿಗಳನ್ನು ಶೋಷಿಸುವವನು’ ಎಂದು ನೋಡುವ ರಾಜ್ಯದಲ್ಲಿ ಮೋದಿ ಆರ್ಥಿಕ ನಿರ್ಣಯಗಳಿಗೆ ರಾಜಕೀಯ ಲಾಭ ಸಿಕ್ಕಿರಬಹುದು. ಆದರೆ ಗುಜರಾತ್ ಮುಖ್ಯವಾಗಿ ವ್ಯಾಪಾರಿಗಳ ರಾಜ್ಯ ವಜ್ರದಿಂದ ಹಿಡಿದು ಬಟ್ಟೆಯವರೆಗೆ ದೇಶದ ಬಹುತೇಕ ವ್ಯಾಪಾರ ಆರಂಭವಾಗುವುದೇ ಗುಜರಾತ್‌ನಲ್ಲಿ. ಹೀಗಿರುವಾಗ ನೋಟು ಬಂದಿ ಮಾಡಿದ್ದರಿಂದ ಕುಸಿದು ಹೋಗಿದ್ದ ಗುಜರಾತಿ ವ್ಯಾಪಾರಿಗಳನ್ನು 8 ತಿಂಗಳಲ್ಲಿ ಬಂದ ಜಿಎಸ್‌ಟಿ ಅತೀವ ಸಮಸ್ಯೆಗೆ ದೂಡಿತ್ತು.

ಗುಜರಾತ್‌ನಲ್ಲಿ ಸೂರತ್ ದೊಡ್ಡ ವ್ಯಾಪಾರಿ ಕೇಂದ್ರ. ವಜ್ರ ಮತ್ತು ಬಟ್ಟೆ ಮಾರಾಟಕ್ಕೆ ಸೂರತ್ ವಿಶ್ವದಲ್ಲಿಯೇ ಹೆಸರುವಾಸಿ. ನೀವು ಸೂರತ್‌ನಲ್ಲಿರುವ ಬಾಂಬೆ ಮಾರ್ಕೆಟ್‌ಗೆ ಹೋದರೆ ಬರೀ ಸೀರೆಯದೆ 5000 ಅಂಗಡಿಗಳಿವೆ. ಇಂಥ 5000 ಅಂಗಡಿಗಳಿರುವ ಕನಿಷ್ಠ 5 ಮಾರ್ಕೆಟ್‌ಗಳು ಸೂರತ್‌ನಲ್ಲಿದ್ದು, ಸುಮಾರು 65ಸಾವಿರ ಸಣ್ಣ ಮತ್ತು ಮಧ್ಯಮ ಬಟ್ಟೆ ವ್ಯಾಪಾರಿಗಳಿದ್ದಾರೆ. ಮುಂಬೈ, ದಿಲ್ಲಿಯಿಂದ ಹಿಡಿದು ಬೆಂಗಳೂರಿನ ಚಿಕ್ಕಪೇಟೆವರೆಗೆ ಸೂರತ್‌ನ ಬಟ್ಟೆಗಳು ಹೋಗುತ್ತವೆ. ವ್ಯಾಪಾರಿಗಳು ಗುಜರಾತ್‌ನವರಾದರೆ ಇವರ ಬಳಿ ಕೆಲಸ ಮಾಡುವವರು ಮಾತ್ರ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ಗಳಿಂದ ಬರುವ ಯುವಕರು. ಈ ಮಾರ್ಕೆಟ್‌ಗಳಲ್ಲಿ ಜಿಎಸ್‌ಟಿ ಕಾರಣದಿಂದ ಬೇರೆ ಊರಿನ ಮುಂಗಡ ಆರ್ಡರ್‌ಗಳು ಸಿಗುವುದೇ ಮೊದಲಿನ 4 ತಿಂಗಳು ಕಷ್ಟವಾಗಿತ್ತಂತೆ. ಮೊದಲಿಗೆ ನೋಟು ರದ್ಧತಿಯಿಂದ ಸಮಸ್ಯೆ ಅನುಭವಿಸಿದ್ದ ಬಟ್ಟೆ ವ್ಯಾಪಾರಿಗಳು ಜಿಎಸ್‌ಟಿ ನಂತರ ಇನ್ನಷ್ಟು ತೊಂದರೆಗೊಳಗಾದಾಗ ನೇರವಾಗಿ ಮೋದಿಗೆ ಶಾಪ ಹಾಕತೊಡಗಿದ್ದು ಸುಳ್ಳಲ್ಲ.

ಮೋದಿ ತಪ್ಪಲ್ಲ, ಜೇಟ್ಲಿ ತಪ್ಪು

ಸೂರತ್‌ನ ಬೇಗಂಪುರಾ ಬಳಿ ಹೋಲ್‌ಸೇಲ್ ಬಟ್ಟೆ ವ್ಯಾಪಾರ ನಡೆಸುವ ವಿಪುಲ್ ಭಾಯಿ ಮಿತ್ತಲ್ ಹೇಳುವ ಪ್ರಕಾರ ‘ಬೇರೆ ಬೇರೆ ರಾಜ್ಯಗಳಿಂದ ಬರುವ ವ್ಯಾಪಾರಸ್ಥರು ಹಣ ನೀಡಿಯೇ ಇಲ್ಲಿಂದ ಬಟ್ಟೆ ಖರೀದಿ ಮಾಡುತ್ತಿದ್ದರು. ಆದರೆ ನೋಟ್ ಬಂದಿಯಿಂದ ನಮ್ಮ ವ್ಯಾಪಾರವೇ ನಿಂತು ಹೋಯಿತು. ಈಗ ಬಟ್ಟೆ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸಬೇಕಾದರೆ ಜಿಎಸ್‌ಟಿ ನಂಬರ್ ಬೇಕು. ಹೀಗಾಗಿ ವ್ಯಾಪಾರಿಗಳು ನಮ್ಮಿಂದ ಮಾಲ್ ತೆಗೆದುಕೊಳ್ಳುವುದು ಬಿಟ್ಟು, ದೊಡ್ಡ ಕಂಪನಿಗಳಿಂದ ಸ್ಥಳೀಯವಾಗಿ ಕೊಳ್ಳುತ್ತಿದ್ದಾರೆ’ ಎಂದು ಹೇಳುತ್ತಿದ್ದರೆ, ಅವರ ಪಕ್ಕದಲ್ಲಿಯೇ ಕುಳಿತಿದ್ದ ಮೋದಿ ಅವರ ಕಟ್ಟಾ ಅಭಿಮಾನಿ ಆಗಿರುವ ತಂದೆ ರಮೇಶ್ ಭಾಯಿ ‘ಯೇ ಮೋದಿ ಕಾ ಗಲತಿ ನಹಿ ಹೈ ವಕೀಲ್ ಕೋ ಅರ್ಥ ಶಾಸ್ತ್ರೀ ಬನಾಯಾ ನಾ ವೋ ಉಲ್ಟಾ ಹೋ ಗಯಾ’ ಎಂದು ಎಲ್ಲ ಒಳಗಿನ ಸುದ್ದಿ ಗೊತ್ತಿರುವವರಂತೆ ಪಕ್ಕಾ ಗುಜರಾತಿ ಶೈಲಿಯಲ್ಲಿ ಮೂಗಿನಿಂದ ಮಾತನಾಡುತ್ತಾ ಹೇಳುತ್ತಿದ್ದರು. ಮೋದಿ ತಪ್ಪಲ್ಲ ಅರುಣ್ ಜೈಟ್ಲಿ ಅವರದು ತಪ್ಪು ಎಂದು ರಮೇಶ್ ಭಾಯಿ ಅವರಿಗೆ ಹೇಗೋ ಮನವರಿಕೆಯಾಗಿದೆ ಅಷ್ಟೇ.

ಜಿಎಸ್‌ಟಿಯಿಂದ ವ್ಯಾಪಾರವೇ ಬಂದ್

ಆದರೆ ಇಷ್ಟು ಅಸಮಾಧಾನಕ್ಕೆ ಮುಖ್ಯ ಕಾರಣ ದಶಕಗಳಿಂದ ಹೆಚ್ಚಿನ ವ್ಯಾಪಾರ ಕಾಗದದ ಮೇಲಿರುವುದು. ಜಿಎಸ್‌ಟಿ ಬಂದ ಮೇಲೆ ಎಲ್ಲವೂ ಬಿಲ್‌ನಲ್ಲಿ ಬೇಕಾಗಿರುವುದರಿಂದ ಮೇಲಿನಿಂದ ಕೆಳಗಿನವರೆಗೆ ಒಮ್ಮೆಲೇ ವಹಿವಾಟು ನಿಂತು ಹೋಗಿದ್ದು, ಬ್ಯುಸಿನೆಸ್ ಚೈನ್ ಮೇಲೆಯೇ ಪ್ರಭಾವ ಬೀರಿದೆಯಂತೆ. ನೋಟ್ ಬಂದಿ ಆದ ಮೇಲೆ ಎರಡು ವರ್ಷ ಬಿಟ್ಟು ಜಿ ಎಸ್‌ಟಿ ಹಾಕಬೇಕಿತ್ತು. ಇಷ್ಟು ಗಡಿಬಿಡಿ ಏನಿತ್ತು? ಇತನಾ ಖಡಕ್ ಆ್ಯಕ್ಷನ್ ನಹಿ ಲೇನೇ ಕಾ ಧಂಧಾ ಹಿ ನಹಿ ತೋ ಖಾಯೇಗಾ ಕ್ಯಾ ಭರೇಗಾ ಕ್ಯಾ ಎಂದು ಬಹುಪಾಲು ಬಿಜೆಪಿ ಸಮರ್ಥಕರೇ ಆಗಿರುವ ವ್ಯಾಪಾರಿಗಳು ಕೇಳುತ್ತಾರೆ. ಅಹಮದಾಬಾದ್, ಸೂರತ್, ಬರೋಡಾ, ರಾಜಕೋಟ್‌ನ ಬಹುತೇಕ ವ್ಯಾಪಾರಿಗಳು ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿರುವ ಬನಿಯಾಗಳು, ಜೈನರು, ಪಟೇಲರು, ಬ್ರಾಹ್ಮಣರು ಎನ್ನುವುದು ಗಮನಿಸಲೇಬೇಕಾದ ಸಂಗತಿ.

ಜಿಎಸ್‌ಟಿ ದರ ಬದಲಾವಣೆ: ರಿಲೀಫ್

ಸೂರತ್‌ನಲ್ಲಿರುವ ಸಣ್ಣ ಮತ್ತು ಮಧ್ಯಮ ಬಟ್ಟೆ ವ್ಯಾಪಾರಿಗಳು ಹಣದ ವಹಿವಾಟಿನ ತೊಂದರೆ ಅನುಭವಿಸಿದರೆ ದೊಡ್ಡ ದೊಡ್ಡ ಕಾರ್ಖಾನೆಗಳ ಉದ್ಯಮಿಗಳು ಮಾತ್ರ ಖುಷಿಯಲ್ಲಿದ್ದಾರೆ. ಜಿಎಸ್‌ಟಿ ಬಂದ ಮೇಲೆ ದೊಡ್ಡ ದೊಡ್ಡ ಕಾರ್ಖಾನೆಗಳು ಬಹುತೇಕವಾಗಿ ಬಿಳಿಯಲ್ಲಿ ನಡೆಯುವ ವ್ಯವಹಾರ ಜಾಸ್ತಿ ಆಗಿದೆಯಂತೆ. ಗುಜರಾತ್‌ನಲ್ಲಿ ನಗರ ಪ್ರದೇಶಗಳಲ್ಲಿ ಬಿಜೆಪಿ ಪ್ರಭಾವ ಜಾಸ್ತಿಯಿದ್ದು, ಕಳೆದ ಬಾರಿ 48 ಕ್ಷೇತ್ರಗಳ ಪೈಕಿ 44 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ಜಿಎಸ್‌ಟಿ ಕಾರಣದಿಂದ ಗುಜರಾತ್‌ನಲ್ಲಿನ ನಗರಗಳ ವ್ಯಾಪಾರವೇ ಬಿದ್ದುಹೋದ ಮೇಲೆ ಜಿಎಸ್‌ಟಿ ದರಗಳಲ್ಲಿ ಇಳಿಕೆ ಮಾಡಿರುವುದು ಸ್ವಲ್ಪ ನಿರಾಳತೆಯಂತೂ ತಂದಿದೆ. ಆದರೆ ಬ್ಯುಸಿನೆಸ್ ವಾಪಾಸ್ ತರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ. ಇಷ್ಟೆಲ್ಲಾ ನಷ್ಟ ಅನುಭವಿಸಿದ ಮೇಲೆ ಯಾರಿಗೆ ಮತ ನೀಡುತ್ತೀರಿ? ಎಂದು ಬಾಂಬೆ ಮಾರ್ಕೆಟ್‌ನಲ್ಲಿ ಬಾಂದನಿ ಸೀರೆ ಮಾರುವ ಮೋಹಿನಿ ಟೆಕ್ಸ್ಟ್‌ಟೈಲ್ಸ್‌ನ ಮಾಲೀಕ ಮಣಿ ಭಾಯಿ ಅವರಿಗೆ ಕೇಳಿದಾಗ ‘ಮೋದಿ ಬಹಳ ತಪ್ಪು ಮಾಡಿದ್ದಾರೆ. ಆದರೆ ಇಲ್ಲಿ ಬೇರೆ ಯಾವುದೇ ವಿಕಲ್ಪಗಳಿಲ್ಲ. ಕಾಂಗ್ರೆಸ್‌ಗೆ ನಾವು ಇಲ್ಲಿಯವರೆಗೆ ಮತವನ್ನೇ ಹಾಕಿಲ್ಲ’ ಎಂದು ಹೇಳುತ್ತಿದ್ದರು.

ಮೋದಿ ಮೇಲೆ ಸಿಟ್ಟಿದೆ ಆದರೆ..

ಜಿಎಸ್‌ಟಿ, ಎಲ್ಲಿ ನಗರ ಪ್ರದೇಶಗಳಲ್ಲಿ ಬಿಜೆಪಿ ಅಸ್ತಿತ್ವವನ್ನೇ ಅಲುಗಾಡಿಸುತ್ತದೆಯೋ ಎನ್ನುವ ಮಾತುಗಳು ಬಿಜೆಪಿ ಮತದಾರರಿಂದಲೇ ಕೇಳಿ ಬರುತ್ತಿದ್ದಾಗ, ಜಿಎಸ್‌ಟಿ ದರವನ್ನು ಕಡಿಮೆ ಮಾಡಿದ ನಂತರ ಸ್ವಲ್ಪ ಸಿಟ್ಟು ಕಡಿಮೆಯಾದಂತೆ ಕಾಣುತ್ತದೆ. ಆದರೆ ಒಂದು ಆಶ್ಚರ್ಯವೆಂದರೆ ವ್ಯಾಪಾರಿಗಳು ನೋಟು ಬಂದಿ ಮತ್ತು ಜಿಎಸ್‌ಟಿ ಕಾರಣದಿಂದ, ನರೇಂದ್ರ ಮೋದಿ ಬಗ್ಗೆ ಸ್ವಲ್ಪ ಸಿಟ್ಟಿನಿಂದ ಮಾತನಾಡಿದರೂ, ಕಾಂಗ್ರೆಸ್ ಬಗ್ಗೆ ಮಾತ್ರ ಪ್ರೀತಿ ತೋರಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಹೇಳಿಕೊಳ್ಳುವಂಥ ನಾಯಕ ಇಲ್ಲದೆ ಇರುವುದು ಎನಿಸುತ್ತದೆ. ನೀವು ಯಾವುದೇ ಸಣ್ಣ ಮತ್ತು ಮಧ್ಯಮ ವ್ಯಾಪಾರಿಯನ್ನು ಹೋಗಿ ಮಾತನಾಡಿಸಿದರು ಕೂಡ ಮೊದಲಿಗೆ ‘ಬಹಳ ಕಷ್ಟವಿದೆ. ಇಬ್ಬರ ನಡುವೆ ಫೈಟ್ ಇದೆ ’ ಎನ್ನುತ್ತಾರೆ. ಆದರೆ ನೀವು ಕೆದಕಿ ಕೇಳಿದರೆ ‘ಏನೇ ಆಗಲಿ ಬರುವುದು ಬಿಜೆಪಿಯೇ. ಹತ್ತು ಇಪ್ಪತ್ತು ಸೀಟ್ ಕಡಿಮೆಯಾಗಬಹುದು’ ಎಂದು ಹೇಳುತ್ತಾರೆ.

ಒಂದು ತಮಾಷೆಯ ಸಂಗತಿ ಎಂದರೆ ಬರೋಡಾದಿಂದ ಕಾರ್ಖಾನೆ ಗಳಿರುವ ನಗರ ಅಂಕಲೇಶ್ವರ್‌ಗೆ ಹೋಗುತ್ತಿದ್ದಾಗ ನಡುವೆ ಒಂದು ಢಾಬಾ ಮಾಲೀಕನ ಜೊತೆ ಮಾತನಾಡುತ್ತಿದ್ದಾಗ, ಜಿಎಸ್‌ಟಿಯಿಂದ ಬಹಳವೇ ತೊಂದರೆಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದ. ಆದರೆ ಊಟ ಮಾಡಿದ ಮೇಲೆ ಕಚ್ಚಾ ಜಿಎಸ್‌ಟಿ ಇಲ್ಲದ ಬಿಲ್ ಯಾಕೆ ಕೊಟ್ಟೆ ಎಂದು ಕೇಳಿದರೆ ಏನ್ ಮಾಡೋದು? ಇಲ್ಲಿ ಹೀಗೆಯೇ ನಡೆಯುವುದು ಎಂದು ಹೇಳುತ್ತಿದ್ದ.  ಗುಜರಾತ್‌ನಲ್ಲಿ ಓಡಾಡಿದಾಗ ಅನ್ನಿಸುವ ಒಂದು ಅಂಶ ನೋಟು ಬಂದಿ ಮತ್ತು ಜಿಎಸ್‌ಟಿಯಿಂದಾಗಿ 2014ರ ವರೆಗೆ ಉಚ್ಛ್ರಾಯದಲ್ಲಿದ್ದ ಮೋದಿ ವೈಯಕ್ತಿಕ ಜನಪ್ರಿಯತೆ ಸ್ವಂತ ರಾಜ್ಯದಲ್ಲಿ ವ್ಯಾಪಾರೀ ವಲಯದಲ್ಲಿ ಮಾತ್ರ ಸ್ವಲ್ಪ ಕಡಿಮೆಯಾಗಿದೆ. ಆದರೆ ಈ ಸಿಟ್ಟಿಗೆ 22 ವರ್ಷಗಳ ಆಡಳಿತವನ್ನೇ ಕಿತ್ತೊಗೆಯುವ ಶಕ್ತಿ ಮೇಲ್ನೋಟಕ್ಕೆ ಹೊರಗಂತೂ ಕಾಣುತ್ತಿಲ್ಲ. ಒಳಗಡೆ ಇದ್ದರೆ ಆ ಮಾತು ಬೇರೆ ಬಿಡಿ. ಮೋದಿ ಮಾಡಿದ ಅಭಿವೃದ್ಧಿ, ಮೋದಿ ಜೊತೆಗೆ ಪ್ಯಾಕೆಜ್‌ನಲ್ಲಿಯೇ ಬರುವ ಹಿಂದುತ್ವದ ಜೊತೆ ಜೊತೆಗೆ ಮೋದಿ ತಂದ ಆರ್ಥಿಕ ಸಮಸ್ಯೆಗಳನ್ನು ತಕ್ಕಡಿಯಲ್ಲಿ ಇಟ್ಟು ಮತದಾರ ತೂಗುತ್ತಿದ್ದಾನೆ ಎನಿಸುತ್ತದೆ.

ಪ್ರಶಾಂತ್ ನಾತು

ಗುಜರಾತಲ್ಲಿ ಕನ್ನಡಪ್ರಭ ಭಾಗ-7

 

 

 

click me!