ದಾನ ಶೂರ ಕರ್ಣನಾದ ಸಚಿವ ಜಮೀರ್ ಅಹ್ಮದ್

By Web DeskFirst Published Oct 4, 2018, 11:08 AM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವರು ನಾಗರಿಕರ ಪಾಲಿಗೆ ಅಕ್ಷರಶಃ ಕೇಳಿದ್ದನ್ನು ಕೊಡುವ ಕಾಮಧೇನುವಿನಂತೆ ಕಾಣಿಸಿದರು. ಸಹಾಯ ಕೇಳಿದವರಿಗೆಲ್ಲಾ ಅವರು ಹಣವನ್ನು ಹಂಚಿದರು.

ಸುಳ್ಯ:  ಸರ್ಕಾರದ ಕಡೆಯಿಂದ ಮಾತ್ರವಲ್ಲದೆ ವೈಯಕ್ತಿಕ ಸಹಾಯ ಮಾಡುವುದರಲ್ಲೂ ಆಹಾರ ಖಾತೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಎತ್ತಿದ ಕೈ ಎಂಬುದು ತಿಳಿದೇ ಇರುವ ವಿಷಯ. ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವರು ನಾಗರಿಕರ ಪಾಲಿಗೆ ಅಕ್ಷರಶಃ ಕೇಳಿದ್ದನ್ನು ಕೊಡುವ ಕಾಮಧೇನುವಿನಂತೆ ಕಾಣಿಸಿದರು. ದಾನಶೂರ ಕರ್ಣನಂತೆ ಗೋಚರಿಸಿದರು. 10 ಸಾವಿರ ರೂ., 20 ಸಾವಿರ ರೂ., 50 ಸಾವಿರ ರೂ, 5 ಲಕ್ಷ ರೂ. ಹೀಗೆ ಸಚಿವರ ಜೊತೆಗಿದ್ದ ಆಪ್ತ ಕಾರ್ಯದರ್ಶಿಗೆ ಸಚಿವರು ಕೇಳಿದ ಹಾಗೆ ಬ್ಯಾಗಿನಿಂದ ಹಣ ತೆಗೆದುಕೊಡುವುದೇ ಕೆಲಸವಾಗಿತ್ತು.

ವಿದ್ಯಾಸಂಸ್ಥೆಗೆ 5 ಲಕ್ಷ!: 

ಬುಧವಾರ ಬೆಳಗ್ಗೆ ತೆಕ್ಕಿಲ್‌ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ಸಚಿವರಿಗೆ ಶಾಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲು ಕೋರಲಾಯಿತು. ಬಹುಮಾನ ಸ್ವೀಕರಿಸಿದ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾರಣ ಅಲ್ಲಿ ಇಬ್ಬರು ಮಕ್ಕಳಿಗೆ ತಲಾ 26 ಸಾವಿರ ಮತ್ತು ಇನ್ನಿಬ್ಬರು ಮಕ್ಕಳಿಗೆ ತಲಾ 10 ಸಾವಿರ ರೂ.ನಂತೆ ಸಚಿವರು ವೈಯಕ್ತಿಕ ಪ್ರೋತ್ಸಾಹ ಧನ ನೀಡಿದರು. ವಿದ್ಯಾಸಂಸ್ಥೆಗೂ ವೈಯಕ್ತಿಕವಾಗಿ 8 ಲಕ್ಷ ರೂ.ಘೋಷಣೆ ಮಾಡಿದ್ದಲ್ಲದೇ ಸ್ಥಳದಲ್ಲೇ 5 ಲಕ್ಷ ರೂ. ನಗದು ಹಸ್ತಾಂತರಿಸಿದರು.

ವೃದ್ಧಗೆ 50 ಸಾವಿರ: 

ಬಳಿಕ ತೆಕ್ಕಿಲ್‌ನಲ್ಲಿ ರಸ್ತೆ ಕಾಮಗಾರಿಗೆ 70 ಲಕ್ಷ ರೂ., ಇಂಟರ್‌ಲಾಕ್‌ ಕಾಮಗಾರಿಗೆ 10 ಲಕ್ಷ ರೂ. ಮತ್ತು ಕಾಲನಿ ರಸ್ತೆಗೆ 25 ಲಕ್ಷ ರೂ.ಅನುದಾನ ಘೋಷಿಸಿದರು. ಇದೇ ವೇಳೆ ಜೋಡುಪಾಲ ಪ್ರಕೃತಿ ದುರಂತದಲ್ಲಿ ಸಂತ್ರಸ್ತರಾದ ವೃದ್ಧರೊಬ್ಬರು ತನ್ನ ಅಳಲನ್ನು ತೋಡಿಕೊಂಡಾಗ ವೈಯಕ್ತಿವಾಗಿ ಸ್ಥಳದಲ್ಲೇ 50 ಸಾವಿರ ರೂ.ನಗದು ನೀಡಿದರು.

ಹಿಂದೂಗಳಿಗೆ ಯಾತ್ರೆ ಪ್ಯಾಕೇಜ್‌!:

ಅಲ್ಲಿನ ಸಮುದಾಯ ಭವನದಲ್ಲಿ ನಡೆದ ಎಕ್ಸಲೆನ್ಸ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು, ಜೋಡುಪಾಲ ಪ್ರಕೃತಿ ದುರಂತದ ಸಂದರ್ಭ ಸಂತ್ರಸ್ತರ ನೆರವಿಗೆ ಧಾವಿಸಿದ ಎಸ್ಕೆಎಸ್ಸೆಸ್ಸೆಫ್‌ ಸಂಘಟನೆಯ 12 ಯುವಕರಿಗೆ ಪವಿತ್ರ ಹಜ್‌ ಯಾತ್ರೆಯ ಕೊಡುಗೆ ನೀಡಿದರು. ಅದೇ ರೀತಿ ಕಾರ್ಯ ನಿರ್ವಹಿಸಿದ ಬಜರಂಗದಳ ಸಂಘಟನೆಯ ನಾಲ್ವರು ಹಿಂದೂ ಯುವಕರಿಗೆ ದೇಶ ಅಥವಾ ವಿದೇಶದಲ್ಲಿ ಅವರು ಇಚ್ಛಿಸುವ ಯಾವುದೇ ಧರ್ಮಕ್ಷೇತ್ರಕ್ಕೆ ಕುಟುಂಬ ಸಮೇತ ಭೇಟಿ ನೀಡುವ ಪೂರ್ತಿ ವೆಚ್ಚ ನೀಡುವುದಾಗಿ ಭರವಸೆ ನೀಡಿದರು. ಮಧ್ಯಾಹ್ನ ಊಟದ ವೇಳೆ ಈ ನಾಲ್ವರೂ ಯುವಕರನ್ನು ಪಕ್ಕಕ್ಕೆ ಕರೆದು ಕೈತುತ್ತು ತಿನ್ನಿಸಿ ಅಚ್ಚರಿ ಮೂಡಿಸಿದರು. ಈ 16 ಜನರ ಸಂಘಟನೆಗೆ ಒಂದು ಆ್ಯಂಬುಲೆನ್ಸ್‌ ಕೊಡಿಸುವುದಾಗಿಯೂ ಭರವಸೆ ನೀಡಿದರು.

ಬೆಂಗಳೂರಿನ ಕ್ರೈಸ್ತ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರಂತೋಡಿನ ರಿನ್‌ಶಾ ಮರಿಯಂ ಅವರು ನೇಪಾಳದಲ್ಲಿ ನಡೆದ ಸೌತ್‌ ಏಶಿಯನ್‌ ಐಟಿಎಫ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಸ್ವರ್ಣ ಪದಕ ಗಳಿಸಿದ ವಿಷಯ ತಿಳಿದು ಆಕೆಗೆ ಸ್ಥಳದಲ್ಲೇ 20 ಸಾವಿರ ರೂ.ನಗದು ನೀಡಿದರು. ಬಳಿಕ ಸುಳ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜನಪ್ರತಿನಿಧಿಗಳನ್ನು ಕರೆದು ಪಕ್ಕದಲ್ಲೇ ಕೂರಿಸಿ ಆತ್ಮೀಯತೆಯಿಂದ ಮಾತನಾಡಿಸಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು.

ಯಾರಿಗೆ ಸಿಕ್ಕಿದ್ದೆಷ್ಟು? (ರೂ.ಗಳಲ್ಲಿ)

ತೆಕ್ಕಿಲ್‌ ಆಂಗ್ಲ ಮಾಧ್ಯಮ ಶಾಲೆಗೆ-5 ಲಕ್ಷ (ಘೋಷಿಸಿದ್ದು 8 ಲಕ್ಷ, ಸ್ಥಳದಲ್ಲಿ ಕೊಟ್ಟದ್ದು 5 ಲಕ್ಷ)
ಇಬ್ಬರು ವಿದ್ಯಾರ್ಥಿಗಳಿಗೆ- ತಲಾ 26 ಸಾವಿರ
ಮತ್ತಿಬ್ಬರು ವಿದ್ಯಾರ್ಥಿಗಳಿಗೆ- ತಲಾ 10 ಸಾವಿರ
ಪ್ರಕೃತಿ ದುರಂತದ ಸಂತ್ರಸ್ತ ವೃದ್ಧಗೆ- 50 ಸಾವಿರ
ಕ್ರೀಡಾಪಟು ರಿನ್‌ಶಾ ಮರಿಯಂಗೆ​​-20 ಸಾವಿರ
ವಿಶೇಷ ಕೊಡುಗೆ
ಎಸ್ಕೆಎಸ್ಸೆಸ್ಸೆಫ್‌ನ 12 ಯುವಕರಿಗೆ ಹಜ್‌ ಯಾತ್ರೆ
ಬಜರಂಗದಳದ 4 ಯುವಕರಿಗೆ ಧಾರ್ಮಿಕ ಯಾತ್ರೆ ವ್ಯವಸ್ಥೆ
ಜೋಡುಪಾಲದ ಯುವಕರ ಸಂಘಟನೆಗೆ ಆ್ಯಂಬುಲೆನ್ಸ್‌


ಡಿಗ್ರಿ ಮಾಡಿದ್ದರೆ ನನ್ನನ್ನು ಹಿಡಿಯುವವರೇ ಇರ್ತಿರಲಿಲ್ಲ!

ಸುಳ್ಯ ತಾಲೂಕಿನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವ ಜಮೀರ್‌ ಭಾಷಣ ಮಾಡುವ ವೇಳೆ ತನ್ನ ವೈಯಕ್ತಿಕ ಬದುಕನ್ನೂ ತೆರೆದಿಟ್ಟರು. ನಾನು ಬಡತನದಿಂದಲೇ ಮೇಲೆ ಬಂದವ. ಆದರೆ ಆ ಬಳಿಕ ದೇವರು ನನಗೆ ಆಶ್ಚರ್ಯವಾಗುವ ರೀತಿಯಲ್ಲಿ ಸಂಪತ್ತು ಕರುಣಿಸಿದ. ಅದನ್ನು ಬಡವರ ಸೇವೆಗಾಗಿಯೇ ಮೀಸಲಿಟ್ಟಿದ್ದೇನೆ. ನನಗೆ ದೇವರು ಎಲ್ಲವನ್ನೂ ಕೊಟ್ಟ. ಆದರೆ ಸಾಕಷ್ಟುವಿದ್ಯೆ ಸಿಗಲಿಲ್ಲ. ನಾನು ಎಸ್ಸೆಸ್ಸೆಲ್ಸಿ ಓದಿದ್ದೇನಷ್ಟೇ. ಒಂದು ವೇಳೆ ಡಿಗ್ರಿ ಮಾಡುತ್ತಿದ್ದರೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಲ್ಲೇ ನನ್ನನ್ನು ಹಿಡಿಯುವವರಿರಲಿಲ್ಲ ಎಂದವರು ಹೇಳಿದರು. ಜಾತಿ, ಮತ, ಧರ್ಮದ ಆಧಾರದಲ್ಲಿ ಜನರನ್ನು ನೋಡುವುದು ತಪ್ಪು. ನನ್ನನ್ನು ಮುಸ್ಲಿಂ ಸಮುದಾಯಕ್ಕಿಂತಲೂ ಅಧಿಕ ಹಿಂದೂ ಸಮುದಾಯ ಪ್ರೀತಿಸುತ್ತಿದೆ. ಇಷ್ಟುದೊಡ್ಡ ರೀತಿಯಲ್ಲಿ ಜನರಿಂದ ಪ್ರೀತಿ ದೊರೆತ ಮತ್ತೊಬ್ಬ ರಾಜಕಾರಣಿ ಇರಲಾರರು. ಸಮುದಾಯ ತಲೆ ತಗ್ಗಿಸುವ ಕೆಲಸವನ್ನೂ ಎಂದೂ ಮಾಡಲ್ಲ ಎಂದವರು ಹೇಳಿದರು.

click me!