ಬೆಟ್ಟದಷ್ಟಿರುವ ಬಿಜೆಪಿ ಭಿನ್ನಮತ ಕರಗಿಸುತ್ತಾರ ಸೋಮಣ್ಣ?

Published : Sep 13, 2017, 07:17 PM ISTUpdated : Apr 11, 2018, 01:02 PM IST
ಬೆಟ್ಟದಷ್ಟಿರುವ ಬಿಜೆಪಿ ಭಿನ್ನಮತ ಕರಗಿಸುತ್ತಾರ ಸೋಮಣ್ಣ?

ಸಾರಾಂಶ

ಜಿಲ್ಲೆಯಲ್ಲಿ ಬಿಜೆಪಿ ಮುಗಿಸಲು ಎದುರಾಳಿ ಕಾಂಗ್ರೆಸ್ ಪಕ್ಷವೇ ಬೇಕಾಗಿಲ್ಲ, ಬಿಜೆಪಿಯವರೇ ಸಾಕು ಎಂಬ ಮಾತು ಜಿಲ್ಲೆಯ ಮಟ್ಟಿಗೆ ಜನಜನಿತವಾಗಿದೆ. 2008ರ ವಿಧಾನಸಭಾ ಚುನಾವಣೆವರೆಗೂ ಕಾಂಗ್ರೆಸ್ ಮತ್ತು ಜನತಾಪರಿವಾರದ ನೆಲೆಯಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರದಿಂದ ಮತ್ತಷ್ಟು ಪ್ರಬಲವಾಗಿ ಬೇರೂರಿದೆ. ಆದರೆ, ಬಿಜೆಪಿ ಪರ ಮತದಾರರು ಮತ್ತು ಕಾರ್ಯಕರ್ತರು ಒಲವು ತೋರಿದರೂ ಅದನ್ನು ಗೆಲುವಾಗಿ ಪರಿವರ್ತನೆ ಮಾಡಲು ಜಿಲ್ಲೆಯಲ್ಲಿನ ಭಿನ್ನಮತವೇ ಅಡ್ಡಿಯಾಗಿದೆ.

ಚಾಮರಾಜನಗರ:  ಜಿಲ್ಲೆಯಲ್ಲಿ ಬಿಜೆಪಿ ಮುಗಿಸಲು ಎದುರಾಳಿ ಕಾಂಗ್ರೆಸ್ ಪಕ್ಷವೇ ಬೇಕಾಗಿಲ್ಲ, ಬಿಜೆಪಿಯವರೇ ಸಾಕು ಎಂಬ ಮಾತು ಜಿಲ್ಲೆಯ ಮಟ್ಟಿಗೆ ಜನಜನಿತವಾಗಿದೆ. 2008ರ ವಿಧಾನಸಭಾ ಚುನಾವಣೆವರೆಗೂ ಕಾಂಗ್ರೆಸ್ ಮತ್ತು ಜನತಾಪರಿವಾರದ ನೆಲೆಯಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರದಿಂದ ಮತ್ತಷ್ಟು ಪ್ರಬಲವಾಗಿ ಬೇರೂರಿದೆ. ಆದರೆ, ಬಿಜೆಪಿ ಪರ ಮತದಾರರು ಮತ್ತು ಕಾರ್ಯಕರ್ತರು ಒಲವು ತೋರಿದರೂ ಅದನ್ನು ಗೆಲುವಾಗಿ ಪರಿವರ್ತನೆ ಮಾಡಲು ಜಿಲ್ಲೆಯಲ್ಲಿನ ಭಿನ್ನಮತವೇ ಅಡ್ಡಿಯಾಗಿದೆ.

2008ರವರೆಗೂ ಪಕ್ಷಕ್ಕೆ ಜಿಲ್ಲೆಯಲ್ಲಿ ಅಷ್ಟಾಗಿ ಅಸ್ತಿತ್ವ ಇರಲಿಲ್ಲ, ಬಿ.ಎಸ್.ಯಡಿಯೂರಪ್ಪ ಅವರ ಅಲೆ ಮತ್ತು ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಜಿಲ್ಲಾಧ್ಯಕ್ಷರಾದ ಬಳಿಕ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿದ್ದರೂ ಭಿನ್ನಮತ ಮತ್ತು ಪಕ್ಷದಿಂದ ಟಿಕೆಟ್ ಪಡೆದವರು ಮತ್ತು ವಿವಿಧ ಹುದ್ದೆ ಗಿಟ್ಟಿಸಿಕೊಂಡವರು ಪಕ್ಷದ ಸಂಘಟನೆಗೆ ಒತ್ತು ನೀಡದೆ ತಮ್ಮ ಸ್ವಾರ್ಥ ಸಾಧನೆ ಮಾಡಿದ್ದರಿಂದ ಪಕ್ಷ ಸಂಘಟನೆ ಕುಂಠಿತವಾಗಿದೆ.

ಇದಕ್ಕೆ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳೇ ಸಾಕ್ಷಿ. ಇಂತಹ ಸ್ಥಿತಿಯಲ್ಲಿರುವ ಪಕ್ಷದಲ್ಲಿ ಬಿನ್ನಮತ ಇಂದಿಗೂ ಬೆಟ್ಟದಷ್ಟಿದೆ. ಅದರಲ್ಲಿ ಇದೀಗ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿರುವ ವಿ. ಸೋಮಣ್ಣ ಅವರ ಗುಂಪು ಎಂದರೆ ತಪ್ಪಾಗಲಾರದು. ವಿ. ಸೋಮಣ್ಣ ಅವರ ಬೆಂಬಲಿಗರು ಪಕ್ಷದಲ್ಲಿ ವಿವಿಧ ಹುದ್ದೆ ಪಡೆದುಕೊಂಡಿದ್ದರು. ಬಹುತೇಕರು ಪಕ್ಷದ ಕಚೇರಿಯೊಳಗೆ ಕಾಲಿಟ್ಟ ಉದಾಹರಣೆಯೇ ಇಲ್ಲ, ಸಂಘಟನೆ ಇನ್ನೆಲ್ಲಿ. ಅವರು ಸೋಮಣ್ಣ ಜಿಲ್ಲೆಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಗಡಿಯಲ್ಲಿ ಮತ್ತು ಕೊಳ್ಳೇಗಾಲದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ಬೆಟ್ಟದಷ್ಟಿರುವ ಬಿಜೆಪಿ ಭಿನ್ನಮತವನ್ನು ಶಮನ ಮಾಡುವುದು ವಿ. ಸೋಮಣ್ಣ ಅವರಿಗೆ ದೊಡ್ಡ ಸವಾಲಾಗಿದೆ.

ಬಾಯಿ ಬಿಡದ ನಾಯಕರು, ಹೋರಾಟವಂತೂ ಇಲ್ಲವೇ ಇಲ್ಲ: ಕಳೆದ 2 ಅವಧಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಪ್ರತಿಪಕ್ಷವಾಗಿದ್ದರೂ ಜಿಲ್ಲೆಯಲ್ಲಿ ಬಿಜೆಪಿ ಪ್ರತಿಪಕ್ಷದಂತೆ ನಡೆದುಕೊಂಡಿದ್ದೇ ಇಲ್ಲ. ಜಿಲ್ಲೆಯ ಜನತೆ ಮೂಲಭೂತ ಸೌಲಭ್ಯದಿಂದ ಹಿಡಿದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇದುವರೆಗೆ ಜಿಲ್ಲೆಯಿಂದ ಗೆದ್ದವರು, ಸೋತವರು ಮತ್ತು ಪಕ್ಷದ ಅಧಿಕಾರ ಅನುಭವಿಸಿದರು ಒಟ್ಟಾಗಿ ಹೋರಾಟ ಮಾಡಿದ್ದು, ಆಡಳಿತ ಪಕ್ಷದ ವಿರುದ್ಧ ಮಾತನಾಡಿದ್ದು ಇಲ್ಲವೇ ಇಲ್ಲ.  ಕೆಲವು ನಾಯಕರಂತೂ ಯಾವ ಪಕ್ಷದಲ್ಲಿದ್ದಾರೆ ಎಂಬುದೇ ಜಿಲ್ಲೆಯ ಜನತೆಗೆ ಅರ್ಥವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯ ನಾಯಕರನ್ನು ಬೀದಿಗಿಳಿಯುಂತೆ ಮಾಡಿದಂತೆ ಜಿಲ್ಲೆಯಲ್ಲೂ ಇದೀಗ ಪಕ್ಷದ ಉಸ್ತುವಾರಿ ಹೊತ್ತ ಸೋಮಣ್ಣ ಜಿಲ್ಲೆಯ ನಾಯಕರನ್ನು ಬೀದಿಗಿಳಿದು ಹೋರಾಟ ಮಾಡಿಸುವ ಹಾಗೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬಾಯಿ ಬಿಡಿಸುವ ಕೆಲಸಮಾಡಬೇಕಾಗಿದೆ.

ಒಮ್ಮೆಯೂ ಬಾರದ ಶ್ರೀರಾಮುಲು:

ಬಿ.ಎಸ್. ಯಡಿಯೂರಪ್ಪ ರಾಜಾಧ್ಯಕ್ಷರಾದ ಬಳಿಕ ಚಾಮರಾಜನಗರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ ಬಳ್ಳಾರಿ ಲೋಕಸಭಾ ಸದಸ್ಯ ಬಿ. ಶ್ರೀರಾಮುಲು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದರು. ಆದರೆ, ಶ್ರೀರಾಮುಲು ಅವರು ಚಾಮರಾಜ ನಗರ ಜಿಲ್ಲೆಯತ್ತ ತಲೆಹಾಕಲೇ ಇಲ್ಲ. ಶ್ರೀರಾಮುಲು ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ ನೇಮಕವಾಗಿದ್ದರಿಂದ ಜಿಲ್ಲೆಯಲ್ಲಿ ಸಂಚಲನ ಉಂಟು ಮಾಡುತ್ತಾರೆ ಎಂಬ ಭಾರಿ ನಿರೀಕ್ಷೆ ಇತ್ತು. ಆದರೆ, ಶ್ರೀರಾಮುಲು ಜಿಲ್ಲೆಯಲ್ಲಿ ಸಂಘಟನೆ ಮಾಡಲು ನಿರಾಸಕ್ತಿ ತೋರಿದ್ದರಿಂದ ಎಲ್ಲವೂ ಹುಸಿಯಾಯಿತು. ಒಂದೆರಡು ಸಭೆಯಲ್ಲಿ ಕಾಣಿಸಿಕೊಂಡಿದ್ದು ಹೊರತು ಪಡಿಸಿ ಪಕ್ಷದ ಸಂಘಟನೆ ಮಾಡಲು ಮುಂದಾಗದ ಪರಿಣಾಮ ಇದೀಗ ಅವರನ್ನು ಬದಲಿಸಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ನೇಮಕ ಮಾಡಲಾಗಿದೆ. ಶ್ರೀರಾಮುಲು ಪಕ್ಷ ಸಂಘಟನೆ ಯಾಗಲಿ, ಪ್ರವಾಸ, ಪಕ್ಷದ ಕಾರ್ಯಗಳಿಂದ ದೂರ ಉಳಿದ ಪರಿಣಾಮ ಜಿಲ್ಲೆಯಲ್ಲಿ ಪಕ್ಷಕ್ಕೆ ಸಾಕಷ್ಟು ಹಿನ್ನಡೆಯಾಗಿದ್ದು, ಪಕ್ಷದೊಳಗಿನ ಭಿನ್ನಮತ ಶಮನ ಮಾಡಲು ವಿಫಲವಾಗಿದ್ದರಿಂದ ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲೂ ಅವರ ಪ್ರಭಾವ ಕೆಲಸ ಮಾಡದ ಪರಿಣಾಮ ಜಿಲ್ಲಾ ಉಸ್ತುವಾರಿ ಬದಲಿಸಲಾಗಿದೆ ಎನ್ನಲಾಗಿದೆ.

ಒಂದಾಗುವರೇ ವಿ. ಸೋಮಣ್ಣ, ಜಿಲ್ಲಾಧ್ಯಕ್ಷ ಕೆ.ಆರ್. ಮಲ್ಲಿಕಾರ್ಜುನಪ್ಪ?

ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಮತ್ತು ಇದೀಗ ಚಾಮರಾಜನಗರ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿರುವ ಮಾಜಿ ಸಚಿವ ವಿ. ಸೋಮಣ್ಣ ಅವರ ನಡುವೆ ಹಿಂದಿನಿಂದಲೂ ಅಷ್ಟಾಗಿ ಬಾಂಧವ್ಯ ಬೆಳೆದಿಲ್ಲ. ಒಂದು ಹಂತದಲ್ಲಿ ಸೋಮಣ್ಣ ಬೆಂಬಲಿಗರು ಜಿಲ್ಲಾಧ್ಯಕ್ಷರನ್ನು ಬದಲಿಸಿ ಎಂದು ಹೋರಾಟ ಮಾಡಿದ್ದು ಉಂಟು. ಇದೀಗ ಸೋಮಣ್ಣ ಅವರನ್ನು ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸೋಮಣ್ಣ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಕಚೇರಿಗೆ ಪ್ರವೇಶಿಸುವ ಮೂಲಕ ಮಲ್ಲಿಕಾರ್ಜುನಪ್ಪ ಅವರೊಂದಿಗೆ ಎಷ್ಟರ ಮಟ್ಟಿಗೆ ಹೊಂದಿಕೊಂಡು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ, ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು ಸೋಮಣ್ಣ ಅವರಿಗೆ ಯಾವ ರೀತಿ ಸಾಥ್ ನೀಡುತ್ತಾರೆ ಎಂಬುದು ತೀವ್ರ ಕುತೂಹಲ ಹುಟ್ಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ತಾಯಿ-ಮಗನ ವೈರುಧ್ಯ ನಡೆ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ