ಬಿಜೆಪಿಯಿಂದ ದಿಢೀರ್‌ ಸರ್ಕಾರ ರಚನೆ ಏಕೆ?

By Web DeskFirst Published Jul 27, 2019, 8:26 AM IST
Highlights

ಕರ್ನಾಟಕದಲ್ಲಿ ತುರ್ತಾಗ  ಬಿಜೆಪಿ ಸರ್ಕಾರ ರಚನೆ ಮಾಡಿದೆ. ಆದರೆ ಇಷ್ಟು ದಿಢೀರ್ ಆಗಿ ಸರ್ಕಾರರಚನೆ ಮಾಡಲು ಕಾರಣವೇನು ಇಲ್ಲಿದೆ.

ಬೆಂಗಳೂರು [ಜು.27]:   ರಾಜ್ಯದಲ್ಲಿ ಬಿಜೆಪಿ ಪರ್ಯಾಯ ಸರ್ಕಾರ ರಚಿಸಲು ಇನ್ನೂ ಕೆಲವು ದಿನ ಬೇಕಾಗಬಹುದು ಎಂಬ ಮಾತು ಪಕ್ಷದಲ್ಲಿ ಗಂಭೀರವಾಗಿ ಕೇಳಿಬರುತ್ತಿರುವುದರ ಮಧ್ಯೆಯೇ ದಿಢೀರನೆ ಶುಕ್ರವಾರ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಲು ಹಸಿರು ನಿಶಾನೆ ತೋರುವ ಮೂಲಕ ಹೈಕಮಾಂಡ್‌ ಅಚ್ಚರಿ ಮೂಡಿಸಿದೆ.

ಸ್ವತಃ ಯಡಿಯೂರಪ್ಪ ಅವರೂ ಶುಕ್ರವಾರ ಪ್ರಮಾಣವಚನ ಸ್ವೀಕರಿಸುವ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರೂ ಖಾತ್ರಿ ಇರಲಿಲ್ಲ. ಗುರುವಾರ ರಾತ್ರಿವರೆಗೆ ಅದಕ್ಕೆ ಪೂರಕವಾದ ಯಾವುದೇ ಬೆಳವಣಿಗೆಗಳೂ ನಡೆದಿರಲಿಲ್ಲ. ದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ನಾಯಕರಿಗೂ ವರಿಷ್ಠರು ಇನ್ನಷ್ಟುಕಾಲ ಕಾಯುವುದು ಸೂಕ್ತ ಎಂಬ ಮಾತನ್ನೇ ಹೇಳಿದ್ದರು. ಅಲ್ಲಿಂದ ಸೂಚನೆ ಬಂದ ಮೇಲೆ ಸರ್ಕಾರ ರಚನೆಯಾಗುತ್ತದೆ. ಸೋಮವಾರದ ವೇಳೆಗೆ ಎಲ್ಲವೂ ಇತ್ಯರ್ಥವಾಗಬಹುದು ಎಂಬ ಎಣಿಕೆ ರಾಜ್ಯ ಬಿಜೆಪಿ ನಾಯಕರದಾಗಿತ್ತು.

ಆದರೆ, ಶುಕ್ರವಾರ ಬೆಳಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ನೇರವಾಗಿ ಯಡಿಯೂರಪ್ಪ ಅವರಿಗೆ ದೂರವಾಣಿ ಮೂಲಕ ಮಾತನಾಡಿ ತಕ್ಷಣ ಪ್ರಮಾಣವಚನ ಸ್ವೀಕರಿಸಿ ಎಂಬ ಸಂದೇಶ ರವಾನಿಸಿದರು.

ದಿಢೀರ್‌ ಸರ್ಕಾರ ರಚನೆಗೆ ಕಾರಣಗಳೇನು?

* ವಿಧಾನಸಭೆಯ ಸ್ಪೀಕರ್‌ ರಮೇಶ್‌ಕುಮಾರ್‌ ಅವರ ಮುಂದಿನ ನಡೆ ಏನಾಗಿರಬಹುದು ಎಂಬುದನ್ನು ಬಿಜೆಪಿ ವರಿಷ್ಠರು ಕಾಯುತ್ತಿದ್ದರು. ಶಾಸಕರ ರಾಜೀನಾಮೆ ಅಂಗೀಕರಿಸಬಹುದು ಎಂಬ ಸಣ್ಣ ನಿರೀಕ್ಷೆಯೂ ಇತ್ತು. ಸ್ಪೀಕರ್‌ ಅವರು ಗುರುವಾರ ರಾತ್ರಿ ಮೂವರು ಶಾಸಕರನ್ನು ಅನರ್ಹಗೊಳಿಸಿ ತೀರ್ಪು ನೀಡಿದ ಬೆನ್ನಲ್ಲೇ ಇನ್ನಷ್ಟುಕಾಲ ವಿಳಂಬ ಮಾಡಿದಲ್ಲಿ ರಾಜೀನಾಮೆ ನೀಡಿದ ಇನ್ನುಳಿದ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳಬಹುದು ಎಂಬ ಕಾರಣಕ್ಕಾಗಿ ತಕ್ಷಣ ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದರು.

* ಸ್ಪೀಕರ್‌ ಆದೇಶದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಗುರುವಾರ ತಡರಾತ್ರಿ ಕಾನೂನು ತಜ್ಞರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು. ಸ್ಪೀಕರ್‌ ಏನೇ ಮಾಡಲಿ, ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಎದುರಿಸೋಣ. ಸದ್ಯಕ್ಕೆ ಸರ್ಕಾರ ರಚಿಸುವುದೇ ಸೂಕ್ತ ಎಂಬ ನಿಲುವಿಗೆ ಬಂದರು.

* ಸರ್ಕಾರ ರಚನೆ ವಿಳಂಬ ಮಾಡಿದಲ್ಲಿ ರಾಜೀನಾಮೆ ನೀಡಿ ಕಳೆದ ಮೂರು ವಾರಗಳಿಂದ ಮುಂಬೈನಲ್ಲಿ ವಾಸ ಮಾಡುತ್ತಿರುವ ಶಾಸಕರು ಮನಸ್ಸು ಬದಲಿಸಿ ವಾಪಸ್‌ ಹೋದರೆ ಇದುವರೆಗೆ ಪಟ್ಟಿರುವ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಸರ್ಕಾರ ರಚಿಸಿದಲ್ಲಿ ಅತೃಪ್ತರಿಗೂ ಬಿಜೆಪಿ ಬಗ್ಗೆ ವಿಶ್ವಾಸ ಮೂಡುತ್ತದೆ ಎಂಬ ಮಾತನ್ನು ರಾಜ್ಯ ಬಿಜೆಪಿ ನಾಯಕರು ವರಿಷ್ಠರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು.

* ಮಹತ್ವದ ಹಣಕಾಸು ವಿಧೇಯಕಕ್ಕೆ ಇದೇ ತಿಂಗಳ ಅಂತ್ಯದೊಳಗೆ ವಿಧಾನಮಂಡಲದ ಉಭಯ ಸದನಗಳ ಅನುಮೋದನೆ ಪಡೆದುಕೊಳ್ಳುವುದು ಅನಿವಾರ್ಯ. ಒಂದು ವೇಳೆ ಆಗದಿದ್ದರೆ ಸರ್ಕಾರಿ ನೌಕರರ ವೇತನಗಳನ್ನೂ ನೀಡಲು ಸಾಧ್ಯವಾಗುತ್ತಿರಲಿಲ್ಲ. ಆಗ ಸಂಕಷ್ಟಎದುರಾಗುತ್ತಿತ್ತು. ಸರ್ಕಾರ ರಚಿಸದೆ ವಿಧೇಯಕಕ್ಕೆ ಅನುಮೋದನೆ ಪಡೆಯಬೇಕಾದಲ್ಲಿ ತಾತ್ಕಾಲಿಕವಾಗಿ ರಾಷ್ಟ್ರಪತಿ ಆಡಳಿತ ಹೇರಿದ ಬಳಿಕ ರಾಜ್ಯಪಾಲರು ವಿಧೇಯಕವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಂಸತ್ತಿನಲ್ಲಿ ಒಪ್ಪಿಗೆ ಪಡೆಯಬೇಕಾಗುತ್ತಿತ್ತು. ರಾಷ್ಟ್ರಪತಿ ಆಳ್ವಿಕೆ ಹೇರುವುದು ದೇಶಾದ್ಯಂತ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಕೆಟ್ಟಸಂದೇಶ ರವಾನಿಸಬಹುದು ಎಂಬ ಕಾರಣಕ್ಕಾಗಿ ಸರ್ಕಾರ ರಚಿಸುವುದೇ ಸೂಕ್ತ ಎಂದು ನಿರ್ಧರಿಸಲಾಯಿತು.


1. ಅತೃಪ್ತರ ರಾಜೀನಾಮೆ ಅಂಗೀಕಾರ ಬದಲು ಮೂವರನ್ನು ಸ್ಪೀಕರ್‌ ಅನರ್ಹಗೊಳಿಸಿದ ಕಾರಣ, ಸರ್ಕಾರ ರಚನೆ ವಿಳಂಬವಾದಲ್ಲಿ ಇತರನ್ನೂ ಅನರ್ಹಗೊಳಿಸುವ ಭೀತಿ

2. ಗುರುವಾರ ರಾತ್ರಿ ಕಾನೂನು ತಜ್ಞರ ಜತೆ ಅಮಿತ್‌ ಶಾ ಚರ್ಚೆ. ಅತೃಪ್ತರ ಬಗ್ಗೆ ಸ್ಪೀಕರ್‌ ನಿರ್ಧಾರ ಏನೇ ಇರಲಿ, ಸುಪ್ರೀಂಕೋರ್ಟಲ್ಲಿ ಎದುರಿಸೋಣ ಎಂಬ ಅಭಿಮತ

3. ಅಲ್ಲದೆ, ಕಲಾಪಕ್ಕೆ ಹಾಜರಾಗುವ ಬಗ್ಗೆ ಅತೃಪ್ತರಿಗೆ ಸುಪ್ರೀಂಕೋರ್ಟ್‌ ‘ವಿನಾಯ್ತಿ ನೀಡಿರುವ’ ಅವಧಿಯೊಳಗೇ ಸರ್ಕಾರ ರಚಿಸಿ ಬಹುಮತ ಸಾಬೀತು ಪಡಿಸಲು ತಂತ್ರ

4. ಇದೆಲ್ಲದರ ನಡುವೆ, ರಾಜೀನಾಮೆ ನೀಡಿರುವ ಶಾಸಕರು 3 ವಾರಗಳಿಂದ ಮುಂಬೈನಲ್ಲಿದ್ದು ಸರ್ಕಾರ ರಚನೆ ವಿಳಂಬವಾದರೆ ಅವರು ಮನಸ್ಸು ಬದಲಿಸುವ ಸಾಧ್ಯತೆ ಹಿನ್ನೆಲೆ

5. ಜೊತೆಗೆ, ಜು.31ರೊಳಗೆ ವಿತ್ತ ಮಸೂದೆ ಅಂಗೀಕಾರದ ಅನಿವಾರ‍್ಯತೆ ಇದ್ದು, ಅದಕ್ಕಾಗಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬದಲು ಸರ್ಕಾರ ರಚಿಸುವುದೇ ಸೂಕ್ತ ಎಂಬ ಅಭಿಮತ

click me!