ಲೋಕಸಭಾ ಚುನಾವಣೆಗೆ ಬಾಲಿವುಡ್ ದಿಗ್ಗಜರಿಗೆ ಬಿಜೆಪಿ ಟಿಕೆಟ್

By Kannadaprabha NewsFirst Published Jul 16, 2018, 8:07 AM IST
Highlights

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಯಲ್ಲಿ 2014 ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ  ಬಾರಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅನುಪಮ್ ಖೇರ್ ಹಾಗೂ ನಾನಾ ಪಾಟೇಕರ್ ಸೇರಿದಂತೆ ಹಲವು ಖ್ಯಾತನಾಮರನ್ನು ಕಣಕ್ಕಿಳಿಸುವ ಗಂಭೀರ ಚಿಂತನೆಯಲ್ಲಿ ತೊಡಗಿದೆ. 

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಯಲ್ಲಿ 2014 ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ  ಬಾರಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅನುಪಮ್ ಖೇರ್ ಹಾಗೂ ನಾನಾ ಪಾಟೇಕರ್ ಸೇರಿದಂತೆ ಹಲವು ಖ್ಯಾತನಾಮರನ್ನು ಕಣಕ್ಕಿಳಿಸುವ ಗಂಭೀರ ಚಿಂತನೆಯಲ್ಲಿ ತೊಡಗಿದೆ. 

ಬಾಲಿವುಡ್ ನಟರು ಮಾತ್ರವೇ ಅಲ್ಲದೆ, ಯುವ ಉದ್ಯಮಿಗಳು, ಪದ್ಮ ಗೌರವಕ್ಕೆ ಭಾಜನರಾದವರು, ಕ್ರೀಡಾಪಟುಗಳು ಹಾಗೂ ಇನ್ನಿತರೆ ಸೆಲೆಬ್ರಿಟಿಗಳನ್ನು ಅಭ್ಯರ್ಥಿಯಾಗಿಸುವ ಆಲೋಚನೆಯಲ್ಲಿ ಮಗ್ನವಾಗಿದೆ. ಅಕ್ಷಯ್ ಕುಮಾರ್ ಅವರಿಗೆ ಪಂಜಾಬ್ ಅಥವಾ ದೆಹಲಿ, ಅನುಪಮ್ ಖೇರ್ ಅವರಿಗೆ ದೆಹಲಿ ಹಾಗೂ ನಾನಾ ಪಾಟೇಕರ್ ಅವರಿಗೆ ಮಹಾರಾಷ್ಟ್ರ ದಲ್ಲಿ ಟಿಕೆಟ್ ನೀಡಬಹುದು ಎಂದು ಹೇಳಲಾಗುತ್ತಿದೆ. ಅಕ್ಷಯ್  ಕುಮಾರ್ ಅವರು ಸದ್ಯ ಕೆನಡಾ ಪ್ರಜೆಯಾಗಿದ್ದಾರೆ. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕಾದಲ್ಲಿ ಭಾರತೀಯ ಪೌರತ್ವ  ಗೆದುಕೊಳ್ಳಬೇಕಾಗುತ್ತದೆ. 

ಸದ್ಯ ವಿದೇಶದಲ್ಲಿರುವ ಅಕ್ಷಯ್ ಕುಮಾರ್ ಅವರು ಸಂಪರ್ಕಕ್ಕೆ ಲಭಿಸಿಲ್ಲ. ಅಮೆರಿಕದಲ್ಲಿ ಕೆಲಸವೊಂದರಲ್ಲಿ ಮಗ್ನರಾಗಿರುವ ಅನುಪಮ್ ಖೇರ್ ಅವರು, ಆರು ತಿಂಗಳು ಪ್ರಯಾಣದಲ್ಲಿರುವುದಾಗಿ ತಿಳಿಸಿದ್ದಾರೆ. ಪ್ರತಿಕ್ರಿಯೆಗೆ ಪಾಟೇಕರ್ ಅವರು ನಿರಾಕರಿಸಿದ್ದಾರೆ. ದೆಹಲಿ ಹಾಗೂ ಇನ್ನಿತರೆ ರಾಜ್ಯಗಳ ಬಿಜೆಪಿ ನಾಯಕರ ಆಂತರಿಕ ಸಭೆಯಲ್ಲಿ ಪ್ರಮುಖರ ಹೆಸರುಗಳು ಚರ್ಚೆಯಾಗಿವೆ. ಮತ್ತಷ್ಟು ಮಂದಿಯನ್ನು ಕಣಕ್ಕಿಳಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.  

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಾಕಷ್ಟು ಸೆಲೆಬ್ರಿಟಿಗಳು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಸೆಲೆಬ್ರಿಟಿಗಳನ್ನು ಅಭ್ಯರ್ಥಿ ಗಳನ್ನಾಗಿಸುವ ಚಿಂತನೆ ಹಿಂದೆ ಪ್ರಮುಖವಾಗಿ ಎರಡು ಕಾರಣಗಳು ಇವೆ. 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನಗಳಲ್ಲಿ ಗೆದ್ದಿತ್ತು. ಅದು ಬಿಜೆಪಿ ತನ್ನ ಇತಿಹಾಸದಲ್ಲೇ ಗೆದ್ದ ಅತ್ಯಧಿಕ ಸ್ಥಾನಗಳಾಗಿದ್ದು ಒಂದೆಡೆಯಾದರೆ, ಲೋಕ ಸಭೆಯಲ್ಲಿ ಒಂದೇ ಪಕ್ಷಕ್ಕೆ ಬಹುಮತ ಬಂದಿದ್ದು 30 ವರ್ಷಗಳಲ್ಲೇ ಮೊದಲಾಗಿತ್ತು. 

2014ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಅಥವಾ 2014 ರಲ್ಲಿ ಗೆದ್ದಿದ್ದಷ್ಟಾದರೂ ಸ್ಥಾನ ಉಳಿಸಿಕೊಳ್ಳಬೇಕು ಎಂಬುದು ಬಿಜೆಪಿ ಚಿಂತನೆ. ಎರಡನೆಯದಾಗಿ, ದೇಶದ120 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಇವತ್ತಿಗೂ ಖಾತೆ ತೆರೆದಿಲ್ಲ. ಅಂತಹ ಕ್ಷೇತ್ರಗಳನ್ನು ಕೈವಶ ಮಾಡಿಕೊಳ್ಳಲು ಜನ  ಪ್ರಿಯ ವ್ಯಕ್ತಿಗಳನ್ನು ಕಣಕ್ಕೆ ಇಳಿಸಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

click me!