ನರೇಂದ್ರ ಮೋದಿ ಸರ್ಕಾರ ತಪ್ಪು ಮಾಡಿದೆಯೇ ; ಏನಿದು ವಿವಾದ ?

By Web DeskFirst Published Jul 25, 2018, 9:54 AM IST
Highlights
  • ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿದೆ ಎಂಬುದು ಕಾಂಗ್ರೆಸ್ ಆರೋಪ
  • ಚುನಾವಣಾ ಕಾರಣ ವಿವಾದ ದೊಡ್ಡದು ಮಾಡುತ್ತಿರುವ ವಿಪಕ್ಷಗಳು - ಬಿಜೆಪಿ ಪ್ರತ್ಯಾರೋಪ   
  • ಕಾಂಗ್ರೆಸ್ ಆರೋಪ ನಿಜವೋ ಸುಳ್ಳೋ? ರಫೇಲ್ ವಿಮಾನಗಳ ವಿಶೇಷತೆಯೇನು? ಸಮಗ್ರ ಮಾಹಿತಿ ಇಲ್ಲಿದೆ

- ಕೀರ್ತಿ ತೀರ್ಥಹಳ್ಳಿ

ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಆರೋಪ ಮಾಡುತ್ತಿವೆ. ಆದರೆ ಕೇಂದ್ರ ಸರ್ಕಾರ ಆರೋಪವನ್ನು ತಳ್ಳಿ ಹಾಕುತ್ತಿದೆ. ಈ ವಿವಾದ ಮುಂಬರುವ ಲೋಕಸಭೆ ಚುನಾವಣೆಗೆ ಪ್ರಮುಖ ವಿಷಯವಾಗುವ ಸಾಧ್ಯತೆಯೂ ಇದೆ. ಈ ಹಿಂದೆ ಬೋಫೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿ ಕಳಂಕ ಅಂಟಿಸಿಕೊಂಡು ಚುನಾವಣೆಯಲ್ಲಿ ಸೋತಿದ್ದರು.

ಈಗಿನ ರಫೇಲ್ ವಿವಾದಕ್ಕೂ ಆ ಮಟ್ಟದ ಪ್ರಾಮುಖ್ಯತೆ ಇದೆಯೇ? ನಿಜಕ್ಕೂ ರಫೇಲ್ ಒಪ್ಪಂದದಲ್ಲಿ ಏನಾಗಿದೆ? ಕಾಂಗ್ರೆಸ್ ಆರೋಪ ನಿಜವೋ ಸುಳ್ಳೋ? ರಫೇಲ್ ವಿಮಾನಗಳ ವಿಶೇಷತೆಯೇನು? ಸಮಗ್ರ ಮಾಹಿತಿ ಇಲ್ಲಿದೆ.

ಚುನಾವಣಾ ವಿಷಯವಾಗಿಸಲು ಕಾಂಗ್ರೆಸ್ ಯತ್ನ
ಯುಪಿಎ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಯುದಟಛಿವಿಮಾನ ಖರೀದಿ ಒಪ್ಪಂದವು ಮೋದಿ ಪ್ರಧಾನಿಯಾದ ಬಳಿಕ 2016ರ ಪ್ರಾನ್ಸ್ ಭೇಟಿ ವೇಳೆ ಅಂತಿಮವಾಗಿತ್ತು. ಸದ್ಯ ಈ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದು, ಇತ್ತೀಚೆಗಿನ ಅವಿಶ್ವಾಸ ನಿರ್ಣಯದ ವೇಳೆಯೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದನ್ನು ಪ್ರಸ್ತಾಪಿಸಿದ್ದರು. ಈಗಲೂ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

2019ರಲ್ಲಿ ಲೋಕಸಭಾ ಚುನಾವಣೆ ಎದುರಾಗಲಿರುವುದರಿಂದ ಕಾಂಗ್ರೆಸ್ ರಫೆಲ್ ಡೀಲ್ ಪ್ರಕರಣವನ್ನು ಮೋದಿ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಯತ್ನಿಸಬಹುದು. ಹಿಂದೆ ಬೋಫೋರ್ಸ್ ಯುದಟಛಿ ಫಿರಂಗಿಗಳ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಬಂದಿತ್ತು. ನಂತರದ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸೋತಿದ್ದರು.

ಏನಿದು ರಫೇಲ್ ವಿಮಾನ ಖರೀದಿ ಒಪ್ಪಂದ ?

2007ರಲ್ಲಿ ಯುಪಿಎ ಸರ್ಕಾರ ವಾಯುಪಡೆಗಾಗಿ 126 ಯುದ್ಧ ವಿಮಾನಗಳ ಖರೀದಿಗೆ ನಿರ್ಧರಿಸಿತ್ತು. ಅದಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗಿ, ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿ ಈ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿತ್ತು. ಬಳಿಕ ರಫೇಲ್ ಯುದ್ಧ ವಿಮಾನದ ತಾಂತ್ರಿಕ ಪರಿಶೀಲನೆಯನ್ನು ಭಾರತಿಯ ವಾಯುಪಡೆ ಕೈಗೊಂಡಿತ್ತು. 2011ರವರೆಗೂ ಈ ಪ್ರಕ್ರಿಯೆ ನಡೆಯಿತು. ರಫೇಲ್ ವಿಮಾನ ಭಾರತಿಯ ವಾಯುಪಡೆಗೆ ಸೇರಲು ಅರ್ಹ ಎಂದು 2012ರಲ್ಲಿ ನಿರ್ಧರಿಸಲಾಯಿತು. ಬಳಿಕ ವಿಮಾನ ಕಂಪನಿ ಜತೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿತು. ಹಲವು ತಾಂತ್ರಿಕ ಕಾರಣಗಳಿಂದಾಗಿ 2014ರವರೆಗೂ ಮಾತುಕತೆ ಮುಂದುವರಿಯಿತು. ಮೋದಿ ಪ್ರಧಾನಿಯಾದ ಬಳಿಕ 2015ರಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿ, ರಫೇಲ್ ಯುದ್ಧ ವಿಮಾನ ಖರೀದಿಗೆ ಹೊಸ ಒಪ್ಪಂದ ಮಾಡಿಕೊಂಡರು.

ಆ ಒಪ್ಪಂದವೇ ಹಾರಾಟಕ್ಕೆ ಸಿದ್ಧವಾಗಿರುವ 36 ಯುದ್ಧ ವಿಮಾನಗಳನ್ನು ಭಾರತಕ್ಕೆ ನೀಡುವುದು. ಮೋದಿ ಸರ್ಕಾರ 36 ಯುದ್ಧ ವಿಮಾನ ಖರೀದಿಗೆ ಹೊಸ
ಒಪ್ಪಂದ ಮಾಡಿಕೊಂಡ ಬಳಿಕ ಡಸಾಲ್ಟ್ ಕಂಪನಿ ಈ ಹಿಂದಿನ ಯುಪಿಎ ಸರ್ಕಾರದೊಂದಿಗಿನ ಒಪ್ಪಂದವನ್ನು 2015ರಲ್ಲಿ ರದ್ದು ಮಾಡಿತ್ತು. ನಂತರ 2016ರಲ್ಲಿ ಭಾರತ ಸರ್ಕಾರ ಡಸಾಲ್ಟ್ ಕಂಪನಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿತು. ಆ ಒಪ್ಪಂದದ ಪ್ರಕಾರ 36 ರಫೇಲ್ ಯುದ್ಧ ವಿಮಾನಗಳನ್ನು 59,000 ಕೋಟಿ ರು.ಗಳಿಗೆ ಖರೀದಿಸಲು ತೀರ್ಮಾನಿಸಲಾಗಿದೆ. 

ಯುಪಿಎ ಸರ್ಕಾರದ ಡೀಲ್
ಮೋದಿ ಸರ್ಕಾರದಲ್ಲಿ ಫೈನಲ್ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಪ್ರಕ್ರಿಯೆ 2007ರಲ್ಲಿಯೇ ಶುರುವಾಗಿತ್ತು. ಸುದೀರ್ಘ ಸಂಧಾನ, ಸಮಾಲೋಚನೆಗಳ ಬಳಿಕ ಅಂದಿನ ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ, ಅಂತಿಮ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಗುತ್ತಿಗೆ ಸಂಧಾನ ಸಮಿತಿಯ ಅಭಿಪ್ರಾಯ ಕೇಳಿದ್ದರು.

ಹಲವು ಸುತ್ತಿನ ಸಮಾಲೋಚನೆಗಳ ಹೊರತಾಗಿಯೂ ಯುಪಿಎ ಸರ್ಕಾರಕ್ಕೆ ರಫೆಲ್ ಖರೀದಿ ಒಪ್ಪಂದವನ್ನು ಅಖೈರುಗೊಳಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ವರ್ಷವೇ ಈ ಪ್ರಕ್ರಿಯೆಗೆ ಮರು ಚಾಲನೆ ನೀಡಲಾಗಿತ್ತು. 2016ರಲ್ಲಿ ಭಾರತ-ಫ್ರಾನ್ಸ್ ಸರ್ಕಾರಗಳ ನಡುವೆ ಒಪ್ಪಂದ ಕುದುರಿತ್ತು. ಆ ಪ್ರಕಾರವಾಗಿ 36 ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ನಡೆದಿದ್ದು, 2019ರ ವೇಳೆಗೆ ಯುದಟಛಿ ವಿಮಾನಗಳು ಭಾರತವನ್ನು ತಲುಪಬಹುದು ಎಂಬ ನಿರೀಕ್ಷೆ ಇದೆ.

ಕಾಂಗ್ರೆಸ್ ಆರೋಪ ಏನು?
ಈ ಒಪ್ಪಂದದಲ್ಲಿ ಪಾರದರ್ಶಕತೆಯಿಲ್ಲ ಎಂಬುದು ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ವಾದ. ಈ ಹಿಂದೆ 2007ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ 54,000 ಕೋಟಿಗೆ 126 ವಿಮಾನ ಖರೀದಿಸುವ ಒಪ್ಪಂದವಾಗಿತ್ತು. ಅದರಲ್ಲಿ ಡಸಾಲ್ಟ್ ಕಂಪನಿಯು ಹಾರಾಟಕ್ಕೆ ಸಿದ್ಧವಿರುವ 18 ವಿಮಾನಗಳನ್ನು ಭಾರತಕ್ಕೆ ಒದಗಿಸಿ ಉಳಿದ ಯುದ್ಧ ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಗೆ ತಾಂತ್ರಿಕ ನೆರವು ನೀಡುವುದೆಂದು ಮಾತುಕತೆಯಾಗಿತ್ತು. ಆದರೆ ಅದು ಜಾರಿಯಾಗಿರಲಿಲ್ಲ.

2016ರಲ್ಲಿ ಎನ್‌ಡಿಎ ಸರ್ಕಾರ ಹಾರಾಟಕ್ಕೆ ಸಿದ್ಧವಾಗಿರುವ 36 ಯುದ್ಧ ವಿಮಾನಗಳಿಗೆ 59,000 ಕೋಟಿ ರು. ಪಾವತಿಸಲು ಒಪ್ಪಿಕೊಂಡಿದೆ. ಪ್ರತಿ ವಿಮಾನವನ್ನು 526 ಕೋಟಿ ವೆಚ್ಚದಲ್ಲಿ ಖರೀದಿಸಲು ಯುಪಿಎ ನಿರ್ಧರಿಸಿದ್ದರೆ, ಎನ್‌ಡಿಎ ಅದೇ ವಿಮಾನಕ್ಕೆ 1,555 ಕೋಟಿ ರು. ಪಾವತಿಸಲು ಮುಂದಾಗಿದೆ ಎಂಬುದು ಕಾಂಗ್ರೆಸ್ ಆರೋಪ. ಫ್ರಾನ್ಸ್ ಇದೇ ವಿಮಾನವನ್ನು ಕತಾರ್ ಮತ್ತು ಈಜಿಪ್ಟ್‌ಗೆ 694 ಕೋಟಿಗೆ ಮಾರಾಟ ಮಾಡಿದೆ ಎಂದೂ ಕಾಂಗ್ರೆಸ್ ಹೇಳುತ್ತಿದೆ. ಅಲ್ಲದೆ 36 ವಿಮಾನಗಳಿಗೆ ಎಷ್ಟು ವೆಚ್ಚ ಮಾಡಲಾಗುತ್ತದೆ ಎಂಬುದನ್ನು ಗೌಪ್ಯತೆಯ ಹೆಸರಿನಲ್ಲಿ ಮುಚ್ಚಿಡಲಾಗುತ್ತಿದೆ ಎಂದೂ ಕಾಂಗ್ರೆಸ್ ಆರೋಪಿಸುತ್ತಿದೆ.

ಬಿಜೆಪಿ ಸಮರ್ಥನೆ ಏನು?
ಫ್ರಾನ್ಸ್‌ನೊಂದಿಗಿನ ರಫೇಲ್ ಯುದಟಛಿ ವಿಮಾನಗಳ ಖರೀದಿಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಚೌಕಾಶಿಯಿಂದ ಬರೋಬ್ಬರಿ 12,600 ಕೋಟಿ ರು. ಭಾರತಕ್ಕೆ ಉಳಿತಾಯವಾಗಿದೆ ಎಂಬುದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸಮರ್ಥನೆ. ಹಿಂದಿನ ಯುಪಿಎ ಸರ್ಕಾರ ಪ್ರಸ್ತಾಪಿಸಿದ್ದಕ್ಕಿಂತಲೂ ಎನ್‌ಡಿಎ ಸರ್ಕಾರ ಸಾವಿರಾರು ಕೋಟಿ ರು. ಕಡಿಮೆ ವೆಚ್ಚದಲ್ಲಿ ಡೀಲ್ ಮುಗಿಸಿದೆ ಎಂದು ಬಿಜೆಪಿ ಹೇಳಿದೆ. ಯುಪಿಎ ಆಡಳಿತದಲ್ಲಿ ನಡೆದ ಒಪ್ಪಂದದ ಪ್ರಕಾರ, ಒಟ್ಟು 126 ವಿಮಾನಗಳ ಪೈಕಿ 18 ವಿಮಾನಗಳನ್ನು ಹಾರಾಟಕ್ಕೆ ಸಿದ್ಧವಿರುವ ಸ್ಥಿತಿಯಲ್ಲಿ ಫ್ರಾನ್ಸ್ ಭಾರತಕ್ಕೆ ಪೂರೈಸಬೇಕಿತ್ತು.

ಆದರೆ, ಎನ್‌ಡಿಎ ಸರ್ಕಾರ ಈ ಸಂಖ್ಯೆಯನ್ನು 18ರಿಂದ 36ಕ್ಕೆ ಏರಿಸಿದೆ. ಯುಪಿಎ ಸರ್ಕಾರ ಫೈಟರ್ ವಿಮಾನಗಳನ್ನು ತಲಾ ಒಂದಕ್ಕೆ 688 ಕೋಟಿ(100 ದಶಲಕ್ಷ ಡಾಲರ್) ನಂತೆ ಖರೀದಿಸಲು ಮುಂದಾಗಿತ್ತು. ಆದರೆ, ಎನ್‌ಡಿಎ ಸರ್ಕಾರ 619ಕೋಟಿ (90 ದಶಲಕ್ಷ ಡಾಲರ್)ಗೆ ಒಂದರಂತೆ ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಇದರಿಂದ ಯುಪಿಎ ಅವಧಿಗಿಂತ ಶೇ.9ರಷ್ಟು ಅಂದರೆ 12,600 ಕೋಟಿ ರು. ಭಾರತಕ್ಕೆ ಉಳಿತಾಯವಾಗಲಿದೆ ಎಂದು ಕಾಂಗ್ರೆಸ್ ಹಾಗೂ ಎಲ್ಲಾ ವಿಪಕ್ಷಗಳ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ.

ಈ ಒಪ್ಪಂದ ಫ್ರಾನ್ಸ್ ಮತ್ತು ಭಾರತಕ್ಕೆ ಎಷ್ಟು ಮುಖ್ಯ?
ಫ್ರಾನ್ಸ್: ರಫೇಲ್ ಜೆಟ್ ಬಳಕೆ ಮಾಡುತ್ತಿರುವ ರಾಷ್ಟ್ರಗಳು ಫ್ರಾನ್ಸ್, ಈಜಿಪ್ಟ್ ಮತ್ತು ಕತಾರ್. ಭಾರತಕ್ಕೆ ಇಷ್ಟೊಂದು ಪ್ರಮಾಣದ ಯುದ್ಧ ವಿಮಾನಗಳನ್ನು ರಫ್ತು ಮಾಡುವುದರಿಂದ ಡಸಾಲ್ಟ್ ಕಂಪನಿ ತನ್ನ ನಿರೀಕ್ಷಿತ ಆದಾಯದ ಗುರಿ ತಲುಪಲಿದೆ. ರಫೇಲ್ ಖರೀದಿಗೆ ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಏಕೈಕ ರಾಷ್ಟ್ರ ಭಾರತ. ಒಂದೊಮ್ಮೆ ಒಪ್ಪಂದದ ಪ್ರಕಾರ ಭಾರತ ಖರೀದಿಸಿದಲ್ಲಿ ಇತರ ದೇಶಗಳು ಖರೀದಿಗೆ ಮುಂದೆ ಬರುತ್ತವೆ. 

ಭಾರತ: ರಫೇಲ್ ಡೀಲ್ ಭಾರತದ ಅತಿದೊಡ್ಡ ಸೇನಾ ಒಪ್ಪಂದ. ಈ ಒಪ್ಪಂದವು ಮುಂದಿನ ಸೇನಾ ಒಪ್ಪಂದಗಳಿಗೆ ಹಾದಿ ಸುಗಮ ಮಾಡಿಕೊಡಲಿದೆ. ರಫೇಲ್ ಯುದ್ಧ ವಿಮಾನಗಳ ಸೇರ್ಪಡೆಯಿಂದ ಭಾರತದ ವಾಯು ಸೇನೆ ಮತ್ತಷ್ಟು ಬಲಗೊಳ್ಳಲಿದೆ.

ರಫೇಲ್‌ಗಳ ವಿಶೇಷತೆ
ಎರಡು ಎಂಜಿನ್ ಹೊಂದಿರುವ, ಬಹುಮುಖಿ ಕಾರ್ಯಗಳನ್ನು ಮಾಡುವ ಯುದ್ಧ ವಿಮಾನ ರಫೇಲ್. ಇವುಗಳನ್ನು ತಯಾರಿಸುವುದು ಫ್ರಾನ್ಸ್ ಮೂಲದ ಡಸಾಲ್ಟ್ ಏವಿಯೇಶನ್ ಕಂಪನಿ. ಅತ್ಯಂತ ಕರಾರುವಾಕ್ಕಾಗಿ ಭೂಮಿ ಹಾಗೂ ಸಮುದ್ರದ ಮೇಲಿನ ಗುರಿಗಳ ಮೇಲೆ ಇವು ಕ್ಷಿಪಣಿ, ಬಾಂಬ್ ದಾಳಿಗಳನ್ನು ನಡೆಸಬಲ್ಲವು. ಇವು ಅಣ್ವಸ್ತ್ರ ದಾಳಿಗೂ ಜಗ್ಗದ ಶಕ್ತಿಶಾಲಿ ವಿಮಾನಗಳು. ಜಗತ್ತಿನ ಬಲಶಾಲಿ ಸೇನಾಪಡೆಗಳಲ್ಲಿ ಒಂದಾಗಿರುವ ಫ್ರಾನ್ಸ್‌ನಲ್ಲಿ 100ಕ್ಕೂ ಹೆಚ್ಚು ರಫೇಲ್ ಯುದಟಛಿವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ಜಗತ್ತಿನ ಪ್ರಸಿದ್ಧ ಯುದ್ಧ ವಿಮಾನಗಳ ಪೈಕಿ ಅತ್ಯಂತ ಆಧುನಿಕ ಹಾಗೂ ಬಹೂಪಯೋಗಿ ಯುದಟಛಿವಿಮಾನಗಳಲ್ಲಿ ರಫೇಲ್ ಕೂಡ ಒಂದೆನಿಸಿದೆ. ನೋಡಲು ಸಣ್ಣ ಗಾತ್ರದ್ದಾಗಿದ್ದರೂ ಇವುಗಳ ಸರ್ವೇಕ್ಷಣಾ ಸಾಮರ್ಥ್ಯ ಗರಿಷ್ಠ ಮಟ್ಟದ್ದಾಗಿದ್ದು, ಬರಿಗಣ್ಣಿಗೆ ಕಾಣಿಸದ ಶತ್ರುಗಳ ವಾಹನ ಹಾಗೂ ಪಡೆಗಳ ಮೇಲೆ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯಾವುದೇ ಮಾದರಿಯ ಭೂಗುಣಕ್ಕೂ ಹೊಂದಿಕೊಳ್ಳುವುದು ಈ ವಿಮಾನಗಳ ಇನ್ನೊಂದು ವಿಶೇಷತೆ.

ಆರೋಪ ಅರ್ಥಹೀನ: ಫ್ರಾನ್ಸ್
ರಫೇಲ್ ಡೀಲ್ ಬಗ್ಗೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಅರ್ಥಹೀನ. 36 ಯುದ್ಧ ವಿಮಾನಗಳ ಖರೀದಿ ಸಂಬಂಧ ಭಾರತ-ಫ್ರಾನ್ಸ್ ಮಧ್ಯೆ ರಹಸ್ಯ ಬಹುಕೋಟಿ ಒಪ್ಪಂದ ಏರ್ಪಟ್ಟಿದೆ. 2007ರಲ್ಲಿನ ರಕ್ಷಣಾ ಒಪ್ಪಂದದ ಅನ್ವಯವೇ ಈ ಮಾಹಿತಿಯನ್ನು ರಹಸ್ಯವಾಗಿಡಲು ನಿರ್ಧರಿಸಲಾಗಿದೆ. ರಹಸ್ಯ ಕಾಪಾಡಿಕೊಳ್ಳಬೇಕು ಎಂಬುದು ಮೋದಿ ಸರ್ಕಾರದ ಜೊತೆ ಮಾಡಿಕೊಂಡ ಒಪ್ಪಂದ ಅಲ್ಲ, ಅದಕ್ಕೂ ಹಿಂದೆ ಮಾಡಿಕೊಂಡ ಒಪ್ಪಂದ.

ಇದುಅತಿ ಸೂಕ್ಷ್ಮವಾಗಿದ್ದು, ಎಲ್ಲ ವಿವರಗಳನ್ನೂ ಬಹಿರಂಗಗೊಳಿಸಲಾಗದು ಎಂದು ಫ್ರಾನ್ಸ್ ಅಧ್ಯಕ್ಷ ಎಮಾನ್ಯೂಯಲ್ ಮಾಕ್ರನ್ ಹೇಳಿದ್ದಾರೆಂದು ಆ ದೇಶದ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ರಫೇಲ್ ಒಪ್ಪಂದದ ಮಾಹಿತಿಯನ್ನು ಪ್ರತಿಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು ಎಂದು ಸ್ವತಃ ಫ್ರಾನ್ಸ್ ಅಧ್ಯಕ್ಷರೇ ಹೇಳಿದ್ದಾರೆಂದು ರಾಹುಲ್ ಗಾಂಧಿ ಹೇಳಿದ್ದಕ್ಕೆ ಫ್ರಾನ್ಸ್ ಈ ಸ್ಪಷ್ಟನೆ ನೀಡಿದೆ.

ಭಾರಿ ಸದ್ದು ಮಾಡಿದ್ದ ಪ್ರಮುಖ ಸೇನಾ ಹಗರಣಗಳು
ಬೋಫೋರ್ಸ್ ಪಿರಂಗಿ ಹಗರಣ (1986) : ದೇಶದ ಸೇನೆಗೆ ಅತ್ಯಾಧುನಿಕ ಬಂದೂಕುಗಳನ್ನು ಒದಗಿಸಲು ಅಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಸ್ವೀಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಏರ್ಪಟ್ಟಿತ್ತು. ಅದರಲ್ಲಿ ಪ್ರಧಾನಿ ರಾಜೀವ್ ಗಾಂಧಿಗೆ ಲಂಚ ಸಂದಾಯವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ಹಗರಣದ ಬಳಿಕ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸೋತಿದ್ದರು.

ಕಾರ್ಗಿಲ್ ಶವಪೆಟ್ಟಿಗೆ ಹಗರಣ (1999)
ಕಾರ್ಗಿಲ್ ಯುದಟಛಿದಲ್ಲಿ ಮೃತಪಟ್ಟ ಸೈನಿಕರ ರವಾನೆಗಾಗಿ ಶವಪೆಟ್ಟಿಗೆಗಳನ್ನು ಖರೀದಿಸುವಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆಗಿನ ವಾಜಪೇಯಿ ಸರ್ಕಾರದಲ್ಲಿ ಜಾರ್ಜ್ ಫರ್ನಾಂಡಿಸ್ ರಕ್ಷಣಾ ಸಚಿವರಾಗಿದ್ದರು. ಅವರೇ ಹಣ ನುಂಗಿದ್ದಾರೆಂದು ಕಾಂಗ್ರೆಸ್ ಹೇಳಿತ್ತು.

ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ(2010)
2010ರಲ್ಲಿ ವಿವಿಐಪಿಗಳ ಹಾರಾಟಕ್ಕೆ ಹೆಲಿಕಾಪ್ಟರ್ ಖರೀದಿ ಮಾಡಲು ಇಟಲಿ ಮೂಲದ ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯೊಂದಿಗೆ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಅದರಲ್ಲಿ ಹಗರಣ ನಡೆದಿದ್ದು, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ನಾಯಕರಿಗೆ ಲಂಚದ ಹಣ ಸಂದಾಯವಾಗಿದೆ ಎಂಬ ಬಗ್ಗೆ ಕೆಲ ದಾಖಲೆಗಳು ಹೊರಬಂದು ವಿವಾದವಾಗಿತ್ತು.

ಆದರ್ಶ ಹೌಸಿಂಗ್ ಸೊಸೈಟಿ ಹಗರಣ (2011)
ಯುದ್ಧದಲ್ಲಿ ಮೃತಪಟ್ಟ ಭಾರತೀಯ ಸೈನಿಕರ ಕುಟುಂಬಗಳಿಗೆ ಮಹಾರಾಷ್ಟ್ರದ ಮುಂಬೈನಲ್ಲಿ ಫ್ಲಾಟ್‌ಗಳನ್ನು ಕಟ್ಟಿಸಿಕೊಡುವ ಯೋಜನೆಯಲ್ಲಿ ಹಗರಣ ನಡೆದ ಆರೋಪ ಕೇಳಿಬಂದಿತ್ತು. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ಯೋಧರಲ್ಲದವರ ಕುಟುಂಬಕ್ಕೆ ಬೇಕಾಬಿಟ್ಟಿಯಾಗಿ ಫ್ಲಾಟ್ ಕೊಡಿಸಿ, ಹಣ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿತ್ತು.
 

click me!