
ನವದೆಹಲಿ(ಡಿ. 09): ಕಾವೇರಿ ನ್ಯಾಯಾಧಿಕರಣದ ತೀರ್ಪೇ ಅಂತಿಮ, ಸುಪ್ರೀಂಕೋರ್ಟ್ ಇದರಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ ಎಂಬ ಕೇಂದ್ರ ಸರಕಾರದ ವಾದವನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದೆ. ಕಾವೇರಿ ನ್ಯಾಯಾಧಿಕರಣದ ತಿರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಬೇಕೆಂದು ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮೂರು ರಾಜ್ಯಗಳು ಮಾಡಿಕೊಂಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಈ ಮೂಲಕ ಪುರಸ್ಕರಿಸಿದೆ. ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಕೇಂದ್ರದ ವಾದವೇನು?
ಕಾವೇರಿ ನ್ಯಾಯಾಧಿಕರಣದ ತೀರ್ಪೇ ಅಂತಿಮ. ಸುಪ್ರೀಂಕೋರ್ಟ್’ನ ಹೊಣೆಯನ್ನು ನ್ಯಾಯಾಧಿಕರಣ ಹೊತ್ತುಕೊಂಡಿರುತ್ತದೆ. ಹೀಗಾಗಿ, ನ್ಯಾಯಾಧಿಕರಣದ ತೀರ್ಪು ಸುಪ್ರೀಂಕೋರ್ಟ್’ನ ತೀರ್ಪಿಗೆ ಸಮವಾಗಿರುತ್ತದೆ. ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಸಲ್ಲಿಸುವ ಮೇಲ್ಮನವಿಯನ್ನು ಕೈಗೆತ್ತಿಕೊಂಡರೆ ಸುಪ್ರೀಂಕೋರ್ಟ್ ತನ್ನ ತೀರ್ಪಿಗೆ ವಿರುದ್ಧವಾಗಿಯೇ ನಿಂತಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಮೇಲ್ಮನವಿಗಳನ್ನು ಪರಿಗಣಿಸಬಾರದು ಎಂದು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ವಾದಿಸಿದ್ದರು. ಇದಕ್ಕೆ 1956ರ ಅಂತಾರಾಜ್ಯ ನೀರು ವಿವಾದ ಕಾಯ್ದೆಯ ಸಂಸದೀಯ ಕಾನೂನು ಹಾಗೂ ಭಾರತೀಯ ಸಂವಿಧಾನದ ಪರಿಚ್ಛೇದ 262(2) ಅನ್ನು ಕೇಂದ್ರ ಸರಕಾರ ತನ್ನ ವಾದಕ್ಕೆ ಉಲ್ಲೇಖಿಸಿತ್ತು.
ಕರ್ನಾಟಕದ ವಾದವೇನು?
ಮೇಲ್ಮನವಿ ಆಲಿಸಲು ಸುಪ್ರೀಂಕೋರ್ಟ್’ಗೆ ಸಂವಿಧಾನದತ್ತವಾದ ಅಧಿಕಾರವಿದೆ. ಸರ್ವೋಚ್ಚ ನ್ಯಾಯಾಲಯದ ಈ ಅಧಿಕಾರವನ್ನು ಸಂಸದೀಯ ಕಾನೂನು ನಿರಾಕರಿಸಲು ಆಗುವುದಿಲ್ಲ ಎಂದು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ವಾದಿಸಿದ್ದವು.
“ನ್ಯಾಯಮಂಡಳಿಯು ತಪ್ಪಾಗಿ ನ್ಯಾಯದ ತೀರ್ಪು ನೀಡಿದರೆ, ಅದೇ ಅಂತಿಮವಾಗಬೇಕಾ? ಸುಪ್ರೀಂಕೋರ್ಟ್’ಗೆ ನ್ಯಾಯಕ್ಕಾಗಿ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಸಂವಿಧಾನದಲ್ಲಿ ನೀಡಲಾಗಿದೆ. ಸುಪ್ರೀಂಕೋರ್ಟ್’ನ ಈ ಅಧಿಕಾರವನ್ನು ಸಂಸತ್ತು ಕಿತ್ತುಕೊಳ್ಳಲು ಆಗುವುದಿಲ್ಲ” ಎಂದು ಕರ್ನಾಟಕದ ವಕೀಲ ಫಾಲಿ ಎಸ್.ನಾರಿಮನ್ ವಾದಿಸಿದ್ದರು.
ಸುಪ್ರೀಂ ತೀರ್ಪಿಂದ ಕರ್ನಾಟಕಕ್ಕೆ ಲಾಭವೇ?
ಮೇಲ್ಮನವಿ ಸಲ್ಲಿಸುವ ಅಧಿಕಾರ ಇಲ್ಲವೆಂಬ ಕೇಂದ್ರದ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದು ಕರ್ನಾಟಕದ ಪಾಲಿಗೆ ಸದ್ಯ ದೊಡ್ಡ ಗಂಡಾಂತರದಿಂದ ಪಾರು ಮಾಡಿದಂತಾಗಿದೆ. ಈ ತೀರ್ಪಿನಿಂದ ರಾಜ್ಯಕ್ಕೆ ಕೂಡಲೇ ಯಾವುದೇ ಲಾಭ ಬರುವುದಿಲ್ಲವಾದರೂ, ಕಾವೇರಿ ನ್ಯಾಯ ತೀರ್ಪಿನಲ್ಲಿ ಅನ್ಯಾಯವಾದಾಗ ಕಡೇ ಪಕ್ಷ ಮೇಲ್ಮನವಿ ಸಲ್ಲಿಸುವ ಅವಕಾಶವಾದರೂ ರಾಜ್ಯಕ್ಕೆ ಇರುತ್ತದೆ ಎಂಬುದು ಸಮಾಧಾನ. ಇಲ್ಲವಾದರೆ, ಕಾವೇರಿ ನ್ಯಾಯಾಧಿಕರಣದ ತೀರ್ಪು ಯಡವಟ್ಟಾಗಿ ಬಂದರೆ ರಾಜ್ಯಕ್ಕೆ ಎಲ್ಲಾ ನ್ಯಾಯ ದಾರಿಗಳು ಮುಚ್ಚಿದಂತಾಗಿಬಿಡುವ ಅಪಾಯವಿತ್ತು.
ಇದೇ ವೇಳೆ, ಡಿ. 15ರಿಂದ ಕಾವೇರಿ ಅರ್ಜಿ ವಿಚಾರಣೆ ಆರಂಭವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.