ಇದೇ ತಿಂಗಳಿನಿಂದ ಸಿದ್ದು ಕೇರ್: ಪ್ರತಿಯೊಬ್ಬರಿಗೂ ಗುಣಮಟ್ಟದ ಉಚಿತ ಚಿಕಿತ್ಸೆ

By Suvarna Web DeskFirst Published Feb 3, 2018, 7:31 AM IST
Highlights

ರಾಜ್ಯದ ಪ್ರತಿಯೊಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಉಚಿತ ಆರೋಗ್ಯ ಸೇವೆ ನೀಡುವ ‘ಯುನಿವರ್ಸಲ್ ಹೆಲ್ತ್ ಸ್ಕೀಮ್’ ಯೋಜನೆ ಈ ತಿಂಗಳ ಮೂರನೇ ವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಯೋಜನೆ 2-3 ಹಂತದಲ್ಲಿ ಜಾರಿ ಆಗಲಿದ್ದು, 2 ತಿಂಗಳಲ್ಲಿ ಸಂಪೂರ್ಣ ಅನುಷ್ಠಾನ ಆಗಲಿದೆ ಎಂದು ಆರೋಗ್ಯ ಸಚಿವ ರಮೇಶಕುಮಾರ್ ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯದ ಪ್ರತಿಯೊಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಉಚಿತ ಆರೋಗ್ಯ ಸೇವೆ ನೀಡುವ ‘ಯುನಿವರ್ಸಲ್ ಹೆಲ್ತ್ ಸ್ಕೀಮ್’ ಯೋಜನೆ ಈ ತಿಂಗಳ ಮೂರನೇ ವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಯೋಜನೆ 2-3 ಹಂತದಲ್ಲಿ ಜಾರಿ ಆಗಲಿದ್ದು, 2 ತಿಂಗಳಲ್ಲಿ ಸಂಪೂರ್ಣ ಅನುಷ್ಠಾನ ಆಗಲಿದೆ ಎಂದು ಆರೋಗ್ಯ ಸಚಿವ ರಮೇಶಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಈವರೆಗೆ ಇದ್ದ ವಿವಿಧ ಯೋಜನೆಗಳ ಬದಲಾಗಿ ಒಂದೇ ಯೋಜನೆಯಡಿ ಜಾರಿಗೆ ತರಲಾಗುವುದು.  ಯೋಜನೆಗೆ ಸುಮಾರು 1200 ಕೋಟಿ ರು. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದರು.

ಆಧಾರ್ ಕಾರ್ಡ್ ಆಧಾರದ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಂಡರೆ ಅವರಿಗೆ ಯೋಜನೆಯ ಕಾರ್ಡ್ ನೀಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದಲ್ಲಿ ಮಾತ್ರ ಸರ್ಕಾರಿ ಆಸ್ಪತ್ರೆಯ ವೈದ್ಯರ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಯಾವುದೇ ಕಾರಣಕ್ಕೂ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಅವಕಾಶ ಇರುವುದಿಲ್ಲ ಎಂದು ವಿವರಿಸಿದರು.

ಸಕಲ ಸೌಲಭ್ಯ: ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಫೆಬ್ರವರಿ ಅಂತ್ಯಕ್ಕೆ ಎಲ್ಲ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಸಿಗಲಿದೆ. ಜೊತೆಗೆ ಐಸಿಯು, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಅತ್ಯಾಧುನಿಕವಾದ ಡಿಜಿಟಲ್ ಎಕ್ಸ್‌ರೆ ಸೌಲಭ್ಯ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ ಮಾರ್ಚ್ ವೇಳೆಗೆ ಕಲ್ಪಿಸಲಾಗುವುದು. ಜೊತೆಗೆ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಯ ಉಸ್ತುವಾರಿಯಲ್ಲಿ ಹಂತ ಹಂತವಾಗಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪೂರ್ಣ ಮಂಡಿ ಚಿಪ್ಪು ಬದಲಾವಣೆ ಚಿಕಿತ್ಸಾ ಸೌಲಭ್ಯ ಸಿಗಲಿದೆ ಎಂದು ಸಚಿವರು ತಿಳಿಸಿದರು.

ಹೃದ್ರೋಗ, ಕ್ಯಾನ್ಸರ್, ಲಿವರ್, ಕಿಡ್ನಿ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಅತ್ಯಾಧುನಿಕವಾದ ಚಿಕಿತ್ಸೆ ನೀಡುವ ಸಾಮರ್ಥ್ಯ ಸರ್ಕಾರಕ್ಕೆ ಶೇ.30ರಷ್ಟು ಮಾತ್ರ ಇದೆ. ಉಳಿದ ಶೇ.70ರಷ್ಟು ಸೇವೆಯನ್ನು ಖಾಸಗಿ ವಲಯಗಳು ನೀಡಿವೆ. ಈ ವಲಯಗಳಲ್ಲೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವ ಜವಾಬ್ದಾರಿ ಇದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೇ. 100 ರಷ್ಟು ಸೇವೆ ಸಿಗುತ್ತಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.70 ರಷ್ಟು ಸೇವೆ ಸಿಗುತ್ತಿವೆ, ಉಳಿದ ಶೇ.30ರಷ್ಟು ಖಾಸಗಿ ವಲಯಗಳು ನೀಡುತ್ತಿವೆ ಎಂದು ಅವರು ವಿವರಿಸಿದರು.

ನಿರ್ವಹಣೆ ಹೊರಗುತ್ತಿಗೆ: ಜನರಿಗೆ ಸೌಲಭ್ಯ ನೀಡುವಲ್ಲಿ ಯಾವುದೇ ಅಡಚಣೆ ಆಗದಂತೆ ಆಸ್ಪತ್ರೆಗಳಲ್ಲಿ ಇರುವ ಎಕ್ಸ್‌ರೆ, ಸಿಟಿ ಸ್ಕ್ಯಾನ್, ಡಯಾಲೀಸಿಸ್ ಇತ್ಯಾದಿ ಯಂತ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊರಗಿನವರಿಗೆ (ಔಟ್ ಸೋರ್ಸಿಂಗ್) ನೀಡಲಾಗುವುದು. ಜಾಗತಿಕ ಟೆಂಡರ್ ಮೂಲಕ ಔಟ್ ಸೋರ್ಸಿಂಗ್ ಮಾಡಲಾಗಿದೆ. ಅವರಿಗೆ ಪ್ರತಿ ಕೇಸ್‌ಗೆ ಹಣ ನಿಗದಿ ಮಾಡಿ ನೀಡಲಾಗುವುದು, ಕಾಲ ಕ್ರಮೇಣ ಸಿಬ್ಬಂದಿಗಳಿಗೆ ತರಬೇತಿ ನೀಡಿ ನಿರ್ವಹಣಾ ಜವಾಬ್ದಾರಿ ವಹಿಸಲಾಗುವುದು ಎಂದರು.

ಖಾಸಗಿಯವರ ಜೊತೆ ಸಹಭಾಗಿತ್ವಕ್ಕೆ ಸಿದ್ಧ: ಜನರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ನೀಡಬೇಕೆಂಬುದು ಸರ್ಕಾರದ ಮೂಲತತ್ವ, ಈ ತತ್ವ ಒಪ್ಪಿಕೊಂಡು ಮುಂದೆ ಬರುವ ಖಾಸಗಿಯವರ ಜೊತೆ ಸರ್ಕಾರ ಕೈ ಜೋಡಿಸಿ ಆರೋಗ್ಯ ಸೇವೆಯನ್ನು ನೀಡಲಿದೆ. ಉಡುಪಿ ಹಾಗೂ ಕೋಲಾರದಲ್ಲಿ ಅನಿವಾಸಿ ಉದ್ಯಮಿ ಬಿ.ಆರ್. ಶೆಟ್ಟಿ ಅವರು ಈ ತತ್ವದ ಅಡಿ ಹಣ ಹೂಡಿದ್ದಾರೆ ಎಂದು ಇದೇ ವೇಳೆ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!