
ನವದೆಹಲಿ[ಏ.18]: 2011ರಿಂದ ಈಚೆಗೆ ನಿರುದ್ಯೋಗ ಪ್ರಮಾಣ ದ್ವಿಗುಣವಾಗಿದೆ. ಆದರೆ ಕಳೆದ 2 ವರ್ಷದ (2016-18) ಅವಧಿಯಲ್ಲಿ 50 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಬೆಂಗಳೂರು ಮೂಲದ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಹೇಳಿದೆ.
‘2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಪನಗದೀಕರಣ ಘೋಷಣೆ ಮಾಡಿದ್ದರು. ಆದರೆ ಅಪನಗದೀಕರಣಕ್ಕೂ ಈ ಅಂಕಿ-ಅಂಶಗಳಿಗೂ ಸಂಬಂಧವಿದೆ ಎಂಬ ಯಾವುದೇ ಪುರಾವೆಗಳು ಲಭ್ಯವಿಲ್ಲ. ಆದರೂ ಅಪನಗದೀಕರಣ ಎಂಬುದು ಕಳವಳಕಾರಿ. ಕೂಡಲೇ ನೀತಿಗಳಲ್ಲಿ ಬದಲಾವಣೆ ಆಗಬೇಕು’ ಎಂದೂ ವರದಿ ಹೇಳಿದೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್‌ಎಸ್‌ಎಸ್‌ಒ) ನಡೆಸಿದ ಸಮೀಕ್ಷೆಯನ್ನು ಸರ್ಕಾರ ಬಿಡುಗಡೆ ಮಾಡಲಿಲ್ಲ. ಹೀಗಾಗಿ ಸೆಂಟರ್ ಫಾರ್ ಮಾನಿಟರಿಂಗ್ ಆಫ್ ಇಂಡಿಯನ್ ಎಕಾನಮಿ ಸಂಸ್ಥೆ ನಡೆಸುವ ‘ಕನ್ಸೂಮರ್ ಪಿರಮಿಡ್ ಸರ್ವೇ’ (ಸಿಎಂಐಸಿ-ಸಿಪಿಡಿಎಕ್ಸ್) ಆಧರಿಸಿ ಅಧ್ಯಯನ ನಡೆಸಿ ಉದ್ಯೋಗ ಕುರಿತಾದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿರುವುದಾಗಿ ಪ್ರೇಮ್‌ಜಿ ವಿವಿ ಹೇಳಿದೆ.
ವರದಿಯಲ್ಲೇನಿದೆ?:
‘2011ರ ನಂತರ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಲು ಆರಂಭವಾಯಿತು. ಎನ್‌ಎಸ್‌ಎಸ್‌ಒ ಸಮೀಕ್ಷೆ ಹಾಗೂ ಸಿಎಂಐಸಿ-ಸಿಪಿಡಿಎಕ್ಸ್ ಸಮೀಕ್ಷೆಗಳೆರಡನ್ನೂ ಗಮನಿಸಿದಾಗ 2018ರಲ್ಲಿ ನಿರುದ್ಯೋಗ ಪ್ರಮಾಣ ಶೇ.6ಕ್ಕೇರಿದೆ. ಇದು 2000-2011ರ ನಡುವಿನ ನಿರುದ್ಯೋಗ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ’ ವಿವಿ ವೆಬ್‌ಸೈಟ್‌ನಲ್ಲಿ ಹಾಕಿಕೊಂಡ ವರದಿಯಲ್ಲಿ ತಿಳಿಸಲಾಗಿದೆ.
ತುಂಬಾ ಶಿಕ್ಷಣ ಪಡೆದವರು ಮತ್ತು ಯುವಕರು ಹೆಚ್ಚು ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗಕ್ಕೆ ಅರ್ಹರಾದವರ ವರ್ಗದಲ್ಲಿ ನಗರದ ಮಹಿಳೆಯರು, ಪದವೀಧರರ ಪ್ರಮಾಣ ಶೇ.10 ಇದೆ. ಈ ವರ್ಗದ ಶೇ.34 ಮಂದಿ ನಿರುದ್ಯೋಗಿಗಳಾಗಿದ್ದಾರೆ. 20-24 ವರ್ಷ ವಯಸ್ಸಿನರ ನಿರುದ್ಯೋಗ ಪ್ರಮಾಣವೂ ಜಾಸ್ತಿ ಇದೆ. ಉದ್ಯೋಗಕ್ಕೆ ಅರ್ಹರಾದ ಈ ವರ್ಗದಲ್ಲಿನ ಪುರುಷರ ಪ್ರಮಾಣ ಶೇ.13.5 ಇದೆ. ಆದರೆ ಇವರಲ್ಲಿ ಶೇ.60 ಮಂದಿ ನಿರುದ್ಯೋಗಿಗಳು.
ಸೋರಿಕೆ ಆಗಿದ್ದ ವರದಿ:
ಇತ್ತೀಚೆಗೆ ದೇಶದ ನಿರುದ್ಯೋಗ ಪ್ರಮಾಣ ಶೇ.6ಕ್ಕಿಂತ ಅಧಿಕಕ್ಕೇರಿದೆ. ಇದರಿಂದಾಗಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷದ ಗರಿಷ್ಠ ತಲುಪಿದೆ ಎಂದು ಎನ್‌ಎಸ್‌ಎಸ್‌ಒದ ಸೋರಿಕೆಯಾದ ವರದಿ ಹೇಳಿತ್ತು. ಆದರೆ ಸರ್ಕಾರವು, ‘ಇದು ಅಧಿಕೃತ ವರದಿ ಅಲ್ಲ. ಇನ್ನೂ ಅಂಕಿ-ಅಂಶ ಸಂಗ್ರಹ ನಡೆದಿದೆ’ ಎಂದು ಹೇಳಿ ‘ಡ್ಯಾಮೇಜ್ ಕಂಟ್ರೋಲ್’ಗೆ ಯತ್ನಿಸಿತ್ತು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.