ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆ ಸಂಪನ್ನ

Published : Nov 27, 2017, 11:20 AM ISTUpdated : Apr 11, 2018, 12:48 PM IST
ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆ ಸಂಪನ್ನ

ಸಾರಾಂಶ

ರಾಯಚೂರು, ಶ್ರವಣಬೆಳಗೊಳ, ಮಡಿಕೇರಿ, ಗಂಗಾವತಿ ಸಮ್ಮೇಳನಗಳಂತೆ ಮೈಸೂರು ಸಮ್ಮೇಳನ ಅಸಂಖ್ಯಾತ ಸಾಹಿತ್ಯಾಭಿಮಾನಿಗಳನ್ನೇನೂ ಸೆಳೆಯಲಿಲ್ಲ. ಮೂರು ದಿನಗಳ ಒಟ್ಟು ಪ್ರೇಕ್ಷಕರ ಸಂಖ್ಯೆ 2 ಲಕ್ಷದ ಸಮೀಪವಷ್ಟೇ ಇತ್ತು.

ಮೈಸೂರು(ನ.27): ಸಮ್ಮೇಳನಾಧ್ಯಕ್ಷರ ವಿರುದ್ಧ ಅವರ ಮೈಸೂರು ಮಿತ್ರರಿಂದಲೇ ಪ್ರತಿಭಟನೆ, ಸಾಹಿತ್ಯ ಸಮ್ಮೇಳನ ರಾಜಕಾರಣದ ಪ್ರಚಾರ ಕಣ ಆಯಿತು ಎಂಬ ಆರೋಪ, ತಾನು ರಾಜಕೀಯ ಮಾತಾಡಿದ್ದು ಸರಿ ಎಂದು ಸಮರ್ಥಿಸಿಕೊಂಡ ಸಮ್ಮೇಳನಾಧ್ಯಕ್ಷರು, ಮೈಸೂರಿನಲ್ಲಿ ಸಮ್ಮೇಳನ ನಡೆಯುತ್ತಿದ್ದರೂ ಉಡುಪಿಯತ್ತಲೇ ದೃಷ್ಟಿನೆಟ್ಟು ಮಾತಾಡುತ್ತಿದ್ದ ಗೋಷ್ಠಿಕಾರರು, ನೀರಸವಾಗಿದ್ದ ಕವಿಗೋಷ್ಠಿ, ಮೂರು ಕವಿಗೋಷ್ಠಿಗಳಿದ್ದರೂ ಮತ್ತೂ ಮಿಕ್ಕಿದ ಕವಿಗಳು, ಪ್ರತಿಧ್ವನಿಸಿದ ಗೌರಿ ಹತ್ಯೆ, ಸಮಕಾಲೀನ ಕತೆ, ಕವಿತೆ, ಕಾದಂಬರಿಯ ಬಗ್ಗೆ ಪ್ರಸ್ತಾಪವೇ ಇಲ್ಲದ ಮಾತುಕತೆಗಳು, ಪುಸ್ತಕ ಮಾರಾಟಗಾರರ ಹುಸಿಯಾದ ನಿರೀಕ್ಷೆ, ಒಳ್ಳೆಯ ಊಟ, ಮೈಸೂರಿನ ಮಂದಿಗೆ ವಾರಾಂತ್ಯದ ರಜೆ ಕಳೆದ ಸಂತೋಷ ಮತ್ತು ಬಹುತೇಕ ಸಾಹಿತಿಗಳಿಗೆ ಮೈಸೂರು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಸದವಕಾಶ, ಮುಂದಿನ ಸಮ್ಮೇಳನ ಧಾರವಾಡದಲ್ಲಿ ಎಂಬ ಈಡೇರುವ ನಿರ್ಧಾರ, ಮೂರು ವರದಿಗಳು ಅನುಷ್ಠಾನಕ್ಕೆ ಬರಬೇಕು ಎಂಬ ಈಡೇರದ ನಿರ್ಧಾರ- ಇವಿಷ್ಟೂ ಅಂಶಗಳನ್ನು ಮೈಗೂಡಿಸಿಕೊಂಡ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿದೆ.

ಮೈಸೂರು ಸಮ್ಮೇಳನವನ್ನು ಯಶಸ್ವಿ ಸಮ್ಮೇಳನ ಎನ್ನಲಾಗದು. ಅಯಶಸ್ವಿ ಸಮ್ಮೇಳನ ಎಂದು ಕರೆಯುವುದೂ ಕಷ್ಟ. ರಾಯಚೂರು, ಶ್ರವಣಬೆಳಗೊಳ, ಮಡಿಕೇರಿ, ಗಂಗಾವತಿ ಸಮ್ಮೇಳನಗಳಂತೆ ಮೈಸೂರು ಸಮ್ಮೇಳನ ಅಸಂಖ್ಯಾತ ಸಾಹಿತ್ಯಾಭಿಮಾನಿಗಳನ್ನೇನೂ ಸೆಳೆಯಲಿಲ್ಲ. ಮೂರು ದಿನಗಳ ಒಟ್ಟು ಪ್ರೇಕ್ಷಕರ ಸಂಖ್ಯೆ 2 ಲಕ್ಷದ ಸಮೀಪವಷ್ಟೇ ಇತ್ತು. ಇದರ ಪರಿಣಾಮವಾಗಿ ಪೊಲೀಸರು ನಿರಾಳವಾಗಿದ್ದರು. ಯಾರ ಮೇಲೂ ಲಾಠಿ ಬೀಸುವುದಕ್ಕೆ ಹೋಗಲಿಲ್ಲ. ವಾಹನಗಳ ನಿಲುಗಡೆಯ ಸಮಸ್ಯೆ ಎದುರಾಗಲಿಲ್ಲ. ಮೈಸೂರು ತನ್ನ

ಎಂದಿನ ಸಾವಧಾನದ ಸ್ಥಿತಿಯಲ್ಲೇ ಇತ್ತು. ಮೈಸೂರಿನ ವಾಹನದಟ್ಟಣೆ ಕೂಡ ಹೆಚ್ಚಲಿಲ್ಲ. ಗೋಷ್ಠಿಗಳು ಕೂಡ ಏಕಪಕ್ಷೀಯವಾಗಿದ್ದವು. ಮೈಸೂರು ಸಮ್ಮೇಳನ ಒಂದು ಕಾಲದಲ್ಲಿ ಚಂದ್ರಶೇಖರ ಪಾಟೀಲರು ಆಯೋಜಿಸಿದ್ದ ಪರ್ಯಾಯ ಸಾಹಿತ್ಯ ಸಮ್ಮೇಳನದಂತೆ, ಬಂಡಾಯ ಸಾಹಿತ್ಯ ಸಮ್ಮೇಳನದಂತೆಯೇ ಕಾಣಿಸುತ್ತಿತ್ತು.

ಸಮ್ಮೇಳನದ ಆಶಯವನ್ನು ಆಹ್ವಾನ ಪತ್ರಿಕೆ ಮೊದಲೇ ನಿರ್ಧರಿಸಿತ್ತು. ಚರ್ಚೆಗಳು ಏಕಮುಖಿಯಾಗಿದ್ದವು. ಸಂವಾದವೇ ಪ್ರಜಾಪ್ರಭುತ್ವದ ಜೀವಾಳ ಎಂಬ ಮಾತುಗಳು ಸಮ್ಮೇಳನದ ಉದ್ದಕ್ಕೂ ಕೇಳಿಬಂದರೂ ಕೂಡ ಗೋಷ್ಠಿಗಳಲ್ಲಿ ಸಂವಾದ ಇರಲಿಲ್ಲ. ಬಹುತ್ವದ ಸವಾಲುಗಳು ಗೋಷ್ಠಿಯಲ್ಲಾಗಲೀ, ಕನ್ನಡ ಸಂಶೋಧನೆ ಮತ್ತು ವಿಮರ್ಶೆ ಸಂಕಿರಣದಲ್ಲಾಗಲೀ, ದಲಿತ ಲೋಕದೃಷ್ಟಿ ವಿಚಾರಗೋಷ್ಠಿಯಲ್ಲಾಗಲೀ ಪ್ರತಿರೋಧ, ಪ್ರತಿವಾದ ಮಂಡಿಸುವವರೇ ಇರಲಿಲ್ಲ. ಒಂದೇ ಪಾಳಯದ ಮಂದಿ ಸೇರಿಕೊಂಡು ನಡೆಸಿದ ಸಮಾನಮನಸ್ಕರ ಸಮಾಗಮದಂತೆ ಸಮ್ಮೇಳನ ನಡೆಯಿತು.

ಹೀಗಾಗಿ ಹೊರಗಿನಿಂದ ಇದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗಬೇಕಾಯಿತು. ಈ ಸಮ್ಮೇಳನದಲ್ಲಿ ಅಲಕ್ಷಿತ ಸಮುದಾಯ ಅನ್ನಿಸಿಕೊಂಡವರು ಚಿತ್ರೋದ್ಯಮದ ಕಲಾವಿದರು, ಸಾಹಿತಿಗಳು, ಗೀತರಚನಕಾರರು ಮತ್ತು ಕತೆಗಾರರು. ಸಿನಿಮಾ ಕುರಿತು ಒಂದು ಗೋಷ್ಠಿಯನ್ನೂ ಆಯೋಜಿಸಿರಲಿಲ್ಲ. ಸಿನಿಮಾ ನಮ್ಮ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮ ಎಂಬ ಕಾರಣಕ್ಕೆ ಚಿತ್ರರಂಗವನ್ನು ಒಳಗೊಳ್ಳುವ ಆಲೋಚನೆ ಸಮ್ಮೇಳನದ ಕಾರ್ಯಕ್ರಮಗಳನ್ನು ಯೋಜಿಸಿದವರಿಗೆ ಬಾರದೇ ಇದ್ದದ್ದು ಆಶ್ಚರ್ಯ. ರಂಗಭೂಮಿ, ಸುಗಮ ಸಂಗೀತ, ಸಾಮಾಜಿಕ ಜಾಲತಾಣವನ್ನೂ ಸಮ್ಮೇಳನ ಕಡೆಗಣಿಸಿತು.

ಸಮ್ಮೇಳನಾಧ್ಯಕ್ಷರ ಭಾಷಣದಲ್ಲೂ ಬಂಡಾಯದ ಕಿಡಿಗಳಿರಲಿಲ್ಲ. ಬದಲಾಗಿ ಪ್ರಭುತ್ವವನ್ನು ಒಲಿಸಿಕೊಳ್ಳುವ ಧೋರಣೆಯೇ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಮತದಾರನಿಗೆ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ನೀಡಿದ ಸೂಚನೆ, ಸಂವಾದದಲ್ಲಿ ಅದನ್ನು ಸಮರ್ಥಿಸಿಕೊಂಡ ರೀತಿ, ಮತ್ತೆ ಮತ್ತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯ ಪ್ರಸ್ತಾಪ- ಇವೆಲ್ಲವೂ ಚಂದ್ರಶೇಖರ ಪಾಟೀಲರು ಸಮ್ಮೇಳನಕ್ಕೆ ಮೊದಲು ನೀಡಿದ ಸಂದರ್ಶನಗಳಲ್ಲಿ ಒಪ್ಪಿಕೊಂಡಂತೆ ಅವರ ಎಡಪಂಥೀಯ ಆಲೋಚನೆಗಳ ಸಮರ್ಥನೆಯಂತೆ ಕಂಡುಬಂದದ್ದು, ಈ ಸಮ್ಮೇಳನ ಎಲ್ಲರ ಸಮ್ಮೇಳನವೂ ಆಗುವುದಕ್ಕೆ ಅವಕಾಶ ಕೊಡಲಿಲ್ಲ. ಪುಸ್ತಕ ಮಳಿಗೆಗಳ ಮಂದಿ ಮೈಸೂರಿನ ಮೇಲಿಟ್ಟಿದ್ದ ನಿರೀಕ್ಷೆ ಸುಳ್ಳಾಯಿತು. ಇತ್ತೀಚಿನ ಸಮ್ಮೇಳನಗಳಲ್ಲಿ ಅತಿ ಕಡಿಮೆ ಸಂಖ್ಯೆಯ ಪುಸ್ತಕ ಮಾರಾಟ ಕಂಡ ಸಮ್ಮೇಳನ ಎಂಬ ಅಗೌರವವನ್ನು ಈ ಸಮ್ಮೇಳನ ಮೈಸೂರಿನ ತಲೆಗೆ ಕಟ್ಟಿಬಿಟ್ಟಿತು.

- ಜೋಗಿ, ಕನ್ನಡಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಟ್ರಂಪ್ ಮಾತ್ರವಲ್ಲ, ಕ್ಲಿಂಟನ್, ಬಿಲ್ ಗೇಟ್ಸ್ ಕೂಡ..' ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಫೋಟೋಗಳು ರಿಲೀಸ್
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!