‘ಮೂಳೆಗಳ ಹೆದ್ದಾರಿ’ಯಲ್ಲಿ ತ್ರಿವಳಿ ಕನ್ನಡಿಗರ ಬೈಕ್ ಸಾಹಸ!

By Suvarna Web DeskFirst Published Aug 7, 2017, 8:47 PM IST
Highlights

ಕೆಲವೊಮ್ಮೆ ಶೂನ್ಯಕ್ಕಿಂತ ಕೆಳಗಿನ ಕೊರೆವ ಚಳಿಯ ತಾಪಮಾನ, ಕಿಲೋಮೀಟರುಗಟ್ಟಲೆ ಜನರೇ ಇಲ್ಲದೆ ಸ್ಮಶಾನಸದೃಶ ಹಾದಿಯಲ್ಲಿ ಪಯಣ, ಹಲವೆಡೆ ರಸ್ತೆಯೇ ಇಲ್ಲದ ಹೆದ್ದಾರಿ, ಇನ್ನೇನು ಮುರಿದೇ ಬೀಳುವ ಸ್ಥಿತಿಯ ಸೇತುವೆಗಳು, ಮುಂದೆ ಏನೂ ಕಾಣದಷ್ಟು ಧೋ ಎಂದು ಸುರಿಯುವ ಮಳೆಯಲ್ಲಿ ಯಾನ, ಪ್ರವಾಹಕ್ಕೆ ರಸ್ತೆಯೇ ಕೊಚ್ಚಿ ಹೋಗಿದ್ದು, ರಭಸವಾಗಿ ಹರಿಯುವ ನೀರಲ್ಲಿ ಇಳಿದು ಆಚೆ ಬದಿ ತಲುಪುವ ರೋಚಕ ಸನ್ನಿವೇಶ, ಪ್ರಯಾಣ ಅವಧಿಯ ಲೆಕ್ಕಾಚಾರ ತಪ್ಪಿ ಎಲ್ಲೆಂದರಲ್ಲಿ ಟೆಂಟ್ ಹಾಕಿ ರಾತ್ರಿ ಕಳೆಯುವ ಸ್ಥಿತಿ, ಕರಡಿ ಸೇರಿ ಶೀತಪ್ರದೇಶಗಳ ಅಪಾಯಕಾರಿ ವನ್ಯಜೀವಿಗಳು ಎದುರಾಗುವ ಭೀತಿ... ಇನ್ನೂ ಹತ್ತು ಹಲವು ಸವಾಲುಗಳು... ಇವೆಲ್ಲವನ್ನು ಮೀರಿ ತ್ರಿವಳಿ ಕನ್ನಡಿಗರು ಭಾರತೀಯ ಬೈಕ್ ಸಾಹಸಯಾನದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ.

ಬೆಂಗಳೂರು (ಆ.07): ಕೆಲವೊಮ್ಮೆ ಶೂನ್ಯಕ್ಕಿಂತ ಕೆಳಗಿನ ಕೊರೆವ ಚಳಿಯ ತಾಪಮಾನ, ಕಿಲೋಮೀಟರುಗಟ್ಟಲೆ ಜನರೇ ಇಲ್ಲದೆ ಸ್ಮಶಾನಸದೃಶ ಹಾದಿಯಲ್ಲಿ ಪಯಣ, ಹಲವೆಡೆ ರಸ್ತೆಯೇ ಇಲ್ಲದ ಹೆದ್ದಾರಿ, ಇನ್ನೇನು ಮುರಿದೇ ಬೀಳುವ ಸ್ಥಿತಿಯ ಸೇತುವೆಗಳು, ಮುಂದೆ ಏನೂ ಕಾಣದಷ್ಟು ಧೋ ಎಂದು ಸುರಿಯುವ ಮಳೆಯಲ್ಲಿ ಯಾನ, ಪ್ರವಾಹಕ್ಕೆ ರಸ್ತೆಯೇ ಕೊಚ್ಚಿ ಹೋಗಿದ್ದು, ರಭಸವಾಗಿ ಹರಿಯುವ ನೀರಲ್ಲಿ ಇಳಿದು ಆಚೆ ಬದಿ ತಲುಪುವ ರೋಚಕ ಸನ್ನಿವೇಶ, ಪ್ರಯಾಣ ಅವಧಿಯ ಲೆಕ್ಕಾಚಾರ ತಪ್ಪಿ ಎಲ್ಲೆಂದರಲ್ಲಿ ಟೆಂಟ್ ಹಾಕಿ ರಾತ್ರಿ ಕಳೆಯುವ ಸ್ಥಿತಿ, ಕರಡಿ ಸೇರಿ ಶೀತಪ್ರದೇಶಗಳ ಅಪಾಯಕಾರಿ ವನ್ಯಜೀವಿಗಳು ಎದುರಾಗುವ ಭೀತಿ... ಇನ್ನೂ ಹತ್ತು ಹಲವು ಸವಾಲುಗಳು... ಇವೆಲ್ಲವನ್ನು ಮೀರಿ ತ್ರಿವಳಿ ಕನ್ನಡಿಗರು ಭಾರತೀಯ ಬೈಕ್ ಸಾಹಸಯಾನದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ.
 
ವಿಶ್ವದ ಅತ್ಯಂತ ಕಠಿಣ ಮಾರ್ಗಗಳಲ್ಲಿ ಒಂದು ಎಂದೇ ಖ್ಯಾತಿವೆತ್ತ ರಷ್ಯಾದ ಪೂರ್ವಭಾಗದಲ್ಲಿರುವ ಸೈಬೀರಿಯಾಕ್ಕಂತಲೂ ಪೂರ್ವ ದಿಕ್ಕಿನಲ್ಲಿರುವ ‘ಮೂಳೆಗಳ ರಸ್ತೆ’ಯಲ್ಲಿ (ರೋಡ್ ಆಫ್ ಬೋನ್ಸ್) ಸಾಗಿದ ಮೊದಲ ಭಾರತೀಯ ದ್ವಿಚಕ್ರವಾಹನ ಸವಾರರು ಎಂಬುದು ಇವರ ಅತ್ಯಂತ ಪ್ರಮುಖ ಅಗ್ಗಳಿಕೆ. ಬೈಕ್‌ನಲ್ಲಿ ಈ ಹಾದಿ ಕ್ರಮಿಸಿದ ಮೊದಲ ಸರ್ವಭಾರತೀಯ, ಅದರಲ್ಲೂ ಸರ್ವಕನ್ನಡಿಗರ ತಂಡ ಎಂಬುದು ಇನ್ನೊಂದು ಹೆಗ್ಗಳಿಕೆ. ದಕ್ಷಿಣ ಕನ್ನಡ ಮೂಲ, ಹಾಲಿ ಬೆಂಗಳೂರು ನಿವಾಸಿಗಳಾದ ದೀಪಕ್ ಕಾಮತ್, ದಿಲೀಪ್ ಕೃಷ್ಣ ಭಟ್ ಹಾಗೂ ಸುಧೀರ್ ಪ್ರಸಾದ್ ಎಂಬ ಕನ್ನಡಿಗರೇ ಈ ಸಾಹಸ ಮೆರೆದು ಕರ್ನಾಟಕಕ್ಕೂ, ದೇಶಕ್ಕೂ ಹೆಮ್ಮೆ ತಂದವರು. ಇವರು ಹೀಗೊಂದು ಸಾಹಸ ಪ್ರಯಾಣ ಮಾಡಿದ್ದು ಬಜಾಜ್‌ನ ಡಾಮಿನಾರ್ ೪೦೦ ಶ್ರೇಣಿಯ ಬೈಕ್‌ಗಳಲ್ಲಿ. ವಿಶೇಷ ಎಂದರೆ, ಯಮಹಾ, ಕವಾಸಾಕಿ, ಬಿಎಂಡಬ್ಲ್ಯುಗಳಂತಹ ವಿದೇಶಿ ಕಂಪನಿಗಳ ಬೈಕ್‌ಗಳು ಮಾತ್ರ ಸಾಗಿದ್ದ ಈ ಕಠಿಣ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಭಾರತನಿರ್ಮಿತ ಬೈಕ್‌ಗಳು ಸಾಗಿವೆ. ಹಾಗಾಗಿ, ರೋಡ್ ಆಫ್ ಬೋನ್ಸ್ ಕ್ರಮಿಸಿದ ಮೊದಲ ಭಾರತೀಯ ಬೈಕ್ ಸವಾರರು ಎಂಬ ಖ್ಯಾತಿಯ ಜೊತೆಗೆ ಮೊದಲ ಭಾರತೀಯ ಬೈಕ್ ಎಂಬ ದಾಖಲೆಯ ಹಿಗ್ಗೂ ಸೇರಿಕೊಂಡಿದೆ.
 
48 ದಿನ, 6 ದೇಶ, 15,000 ಕಿಮೀ: ಅಂದ ಹಾಗೆ, ಇದು ಕೇವಲ ‘ಮೂಳೆಗಳ ರಸ್ತೆ’ಯಲ್ಲಿ ಸಾಗಿದ ಸಾಹಸವಲ್ಲ. ಸುಮಾರು ಒಂದೂವರೆ ತಿಂಗಳ ಕಾಲ 6 ದೇಶಗಳು, 15 ಸಾವಿರ ಕಿಲೋಮೀಟರ್‌ಗಳಷ್ಟು ಹಾದಿ ಸವೆಸಿ ಅವಿರತವಾಗಿ ಬೈಕ್ ಯಾನ ಮಾಡಿದ ರೋಚಕ ಕಸರತ್ತು ಇದು. ಮಧ್ಯ ಏಷ್ಯಾದ ಉಜ್ಬೇಕಿಸ್ತಾನ, ತಜಿಕಿಸ್ತಾನ, ಕಿರ್ಗಿಸ್ತಾನ, ಕಜಕ್‌ಸ್ತಾ ದೇಶಗಳ ಮೂಲಕ ಸಾಗಿ ರಷ್ಯಾದ ಮಧ್ಯಭಾಗವನ್ನು ಪ್ರವೇಶಿಸುವುದು. ತದನಂತರ ಪೂರ್ವಾಭಿಮುಖವಾಗಿ ಸಾಗಿ ಮಂಗೋಲಿಯಾ ದೇಶದಲ್ಲಿ ಪ್ರಯಾಣಿಸಿ ಮತ್ತೆ ರಷ್ಯಾದ ಸೈಬೀರಿಯಾ ಪ್ರಾಂತ್ಯ ಪ್ರವೇಶಿಸುವುದು. ಅಲ್ಲಿಂದ ‘ರೋಡ್ ಆಫ್ ಬೋನ್ಸ್’ ಮೂಲಕ ಗಮ್ಯಸ್ಥಳವಾದ ಮಗದಾನ್ ಸೇರುವುದು. ಇದಿಷ್ಟು ತ್ರಿವಳಿ ಕನ್ನಡಿಗ ಬೈಕ್ ಸವಾರರು ಈಗಷ್ಟೇ ಪೂರೈಸಿದ ಮೈನವಿರೇಳಿಸುವ ದ್ವಿಚಕ್ರವಾಹನ ಸವಾರಿಯ ತಿರುಳು.
 
ಆರಂಭದಲ್ಲೇ ವಿಘ್ನ: 
ಈ ಸಾಹಸಯಾನ ಆರಂಭವಾದದ್ದು ಜೂನ್ ತಿಂಗಳಲ್ಲಿ. ಮಧ್ಯ ಏಷ್ಯಾದ ಉಜ್ಬೇಕಿಸ್ತಾನಕ್ಕೆ ಬೈಕ್‌ಗಳು ಹಾಗೂ ಸವಾರರು ವಿಮಾನ ಮೂಲಕ ತೆರಳಿ ಅಲ್ಲಿಂದ ಆರಂಭಿಸಿದ ಪ್ರಯಾಣವಿದು. ಉಜ್ಬೇಕಿಸ್ತಾನ ರಾಜಧಾನಿ ತಾಷ್ಕೆಂಟ್‌ನಲ್ಲಿ ಇಳಿಯುತ್ತಲೇ ಇವರಿಗೆ ವಿಘ್ನ ಕಾದಿತ್ತು. ಬೈಕ್‌ಗಳು ಬಂದಿದ್ದವು. ಆದರೆ, ಅವುಗಳು ಚಾಲೂ ಆಗಬೇಕಾದರೆ ಅತ್ಯಗತ್ಯವಾದ ಬ್ಯಾಟರಿಗಳೇ ಬಂದಿರಲಿಲ್ಲ!
ಭಾರತದಿಂದ ಅವುಗಳನ್ನು ತರಿಸುವಷ್ಟು ಕಾಲಾವಕಾಶ ಇಲ್ಲ. ಇನ್ನಷ್ಟು ದಿನ ಕಾಯೋಣ ಎಂದರೆ, ಆ ದೇಶದಲ್ಲಿ ಹೆಚ್ಚುವರಿ ಅವಧಿಗೆ ತಂಗುವಷ್ಟು ವೀಸಾ ಅನುಮತಿ ಇಲ್ಲ! ಹಾಗೂ ಹೀಗೂ ಇಡೀ ತಾಷ್ಕೆಂಟ್ ಸುತ್ತಾಡಿ ಚೀನಾನಿರ್ಮಿತ ಬ್ಯಾಟರಿಗಳನ್ನು ಖರೀದಿಸಿ, ಅವು ಎಲ್ಲಿ ಕೈಕೊಡುತ್ತವೆಯೋ ಎಂಬ ಅಳುಕಿನ ಜೊತೆಗೆ ಆರಂಭಿಕ ವಿಘ್ನದೊಂದಿಗೆ ಶುರುವಾದ ಸಾಹಸಯಾನವಿದು. ಜೂ.೯ಕ್ಕೆ ಹೊರಡಬೇಕಿದ್ದ ಪ್ರಯಾಣ ಎರಡು ದಿನ ತಡವಾಗಿ ಅಂದರೆ ಜೂ.೧೧ರಂದು ಆರಂಭವಾಯಿತು.
 
6 ದೇಶಗಳ ಹಾಯ್ದು ಪ್ರಯಾಣ:
ಹೀಗೆ ಆರಂಭವಾದ ಪ್ರಯಾಣ ದಕ್ಷಿಣಾಭಿಮುಖವಾಗಿ ಸಾಗಿ ತಜಿಕಿಸ್ತಾನ ರಾಜಧಾನಿ ದುಶಾನ್ಬೆ ತಲುಪಿತು. ಅಲ್ಲಿಂದ ಐತಿಹಾಸಿಕ ಪಾಮಿರ್ ಹೆದ್ದಾರಿ ಮೂಲಕ ಆಫ್ಘಾನಿಸ್ತಾನ ಗಡಿಯುದ್ದಕ್ಕೂ ಪೂರ್ವಾಭಿಮುಖವಾಗಿ ಸಾಗಿ ಭಾರತ-ಪಾಕಿಸ್ತಾನ-ಆಫ್ಘಾನಿಸ್ತಾನ-ತಜಿಕಿಸ್ತಾನ-ಚೀನಾ ಸಂಧಿಸುವ ಪ್ರದೇಶಕ್ಕೆ ಹತ್ತಿರವಿರುವ ಖೊರೊಗ್ ಎಂಬಲ್ಲಿಗೆ ಸಾಗಿತು. ಖೊರೊಗ್‌ನಿಂದ ಉತ್ತರಕ್ಕೆ ಸಾಗಿ ಕಿರ್ಗಿಸ್ತಾನದ ಹಿಮಾಚ್ಛಾದಿತ ಬೆಟ್ಟಗಳನ್ನು ಹಾದು ಚೀನಾ ಗಡಿಯುದ್ದಕ್ಕೂ ತೆರಳಿತು ಕನ್ನಡಿಗರ ಬೈಕ್ ಸವಾರಿ. ಹಲವೆಡೆ ಹೆದ್ದಾರಿ, ಕೆಲವೆಡೆ ಕಚ್ಚಾ ರಸ್ತೆ, ಇನ್ನು ಕೆಲವೆಡೆ ರಸ್ತೆಯೇ ಇಲ್ಲದ ದಿಕ್ಕಿನಲ್ಲಿ ಬೆಟ್ಟ, ಗುಡ್ಡ, ಸ್ವರ್ಗಸದೃಶ ಇಸಿಕ್‌ಕುಲ್‌ನಂತಹ ಸರೋವರಗಳನ್ನು ದಾಟಿ ಕಜಕ್‌ಸ್ತಾನ್ ಪ್ರವೇಶಿಸಿದ ಬೈಕ್ ಸವಾರರು ಮತ್ತಷ್ಟು ಉತ್ತರಾಭಿಮುಖವಾಗಿ ತೆರಳಿ ರಷ್ಯಾ ಪ್ರವೇಶಿಸಿದರು. ಅಲ್ಲಿ ರಮಣೀಯ ಆಲ್ಟಾಯ್ ಪ್ರದೇಶದ ನಿಸರ್ಗ ಸೊಬಗಿನ ನಡುವೆ ಹಿಗ್ಗಿನ ಸವಾರಿ ಮಾಡುತ್ತಾ ವಿಶ್ವದ ಅತ್ಯಂತ ದೊಡ್ಡ ಸಿಹಿನೀರ ಸರೋವರಕ್ಕೆ ತಲುಪಿದರು.
 
ಬ್ರಿಟನ್‌ನಷ್ಟು ದೊಡ್ಡ ಸರೋವರ:
ಅದು ಲೇಕ್ ಬೈಕಲ್. ಇದಕ್ಕೆ ಒಂದು ಸುತ್ತು ಬರಲು ಸುಮಾರು 2,300 ಕಿಲೋಮೀಟರ್ ಸಾಗಬೇಕು ಅಂದರೆ ಅದರ ಗಾತ್ರ ಊಹಿಸಿ! ಈ ಸರೋವರ ಸುಮಾರು ಬ್ರಿಟನ್ ದೇಶದ ಭೂಮಿಯ ಗಾತ್ರಕ್ಕೆ ಸಮ! ಒಂದು ಕಡೆಯಂತೂ ಇದು 1.64 ಕಿಲೋಮೀಟರ್‌ನಷ್ಟು ಆಳವಿದೆ! ವಿಶ್ವದ ಒಟ್ಟಾರೆ ಸಿಹಿನೀರ ಪ್ರಮಾಣದ ಶೇ.22 ರಷ್ಟು ನೀರು ಈ ಸರೋವರವೊಂದರಲ್ಲೇ ಇದೆ!!!  ಇಂತಹ ಸಮುದ್ರಗಾತ್ರದ ಸರೋವರ ದಂಡೆಯಲ್ಲಿ ನೂರಾರು ಕಿಲೋಮೀಟರ್ ಕ್ರಮಿಸಿ ಮಂಗೋಲಿಯಾ ದೇಶಕ್ಕೆ ಪ್ರವೇಶಿಸಿತು ಕನ್ನಡಿಗರ ಸವಾರಿ. ಅಲ್ಲಿ ಅವರಿಗೆ ಭಾರತೀಯ ದೂತಾವಾಸದಿಂದ ಅದ್ಧೂರಿ ಸ್ವಾಗತ. ಸುಮಾರು 60 ಕಿ.ಮೀ. ದೂರದಿಂದಲೇ ರಾಜಧಾನಿ ಉಲಾನ್ ಬಾತರ್‌ಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ವಿಶೇಷ ಮೆರವಣಿಗೆಯ ವ್ಯವಸ್ಥೆ ಮಾಡಿದ್ದರು ಭಾರತ ಹಾಗೂ ಮಂಗೋಲಿಯನ್ ಅಧಿಕಾರಿಗಳು!
 
‘ಮೂಳೆಗಳ ರಸ್ತೆ’ ಸಾಹಸ:
ಆರಂಭದ ಅಂದಾಜು ಇದ್ದದ್ದು 6 ದೇಶ, 45 ದಿನ ಹಾಗೂ 12,000 ಕಿ.ಮೀ. ದೂರದ ಪ್ರಯಾಣ. ಆದರೆ, ಕೆಲವೆಡೆ ಮಾರ್ಗ ಬದಲಾವಣೆ ಸೇರಿ ಆಗಲೇ 10 ಸಾವಿರ ಕಿ.ಮೀ. ಕ್ರಮಿಸಿದ್ದರು ಬೈಕ್ ಸವಾರರು. ಮಂಗೋಲಿಯಾದಲ್ಲಿ ರಾಷ್ಟ್ರೀಯ ದಿನಾಚರಣೆಯನ್ನು ಕಳೆದು ಅಲ್ಲಿಂದ ಮತ್ತೆ ರಷ್ಯಾದ ಸೈಬೀರಿಯಾ ಪ್ರಾಂತ್ಯಕ್ಕೆ ಪಯಣ. ಸೈಬೀರಿಯಾದಲ್ಲಿ ಸುಮಾರು 3,000 ಕಿ.ಮೀ. ಸಾಗಿದಾಗ ಸಿಗುವುದೇ ‘ರೋಡ್ ಆಫ್ ಬೋನ್ಸ್’. ಯಾಕುಟ್ಸ್ಕ್ ಎಂಬಲ್ಲಿಂದ ಆರಂಭವಾಗಿ ಅಂದಾಜು 2,000 ಕಿಲೋಮೀಟರುಗಳ ಕಠಿಣ ಹೆದ್ದಾರಿಯದು. ಕೆಲವೆಡೆ ಟಾರು, ಕೆಲವೆಡೆ ಜಲ್ಲಿಕಲ್ಲಿನ ರಸ್ತೆಯಿರುವ ಹೆದ್ದಾರಿಯಲ್ಲಿ ಸಾಗುತ್ತ ಸಂಪೂರ್ಣ ಪರಿತ್ಯಕ್ತವಾದ, ರಸ್ತೆಯೇ ಇಲ್ಲದಂತಹ ‘ಓಲ್ಡ್ ಸಮ್ಮರ್ ರೋಡ್’ನಲ್ಲೂ 300-400 ಕಿ.ಮೀ.ಗಳಷ್ಟು ಕ್ಲಿಷ್ಟ ಸವಾರಿ ನಡೆಸಿ ಕಡೆಗೂ ಜುಲೈ 28 ರಂದು ಮಗದಾನ್ ತಲುಪಿದಾಗ ಮುಗಿಯಿತು ಕನ್ನಡಿಗರ ‘ಟ್ರಾನ್ಸ್ ಸೈಬೀರಿಯನ್ ಒಡಿಸ್ಸಿ’ ಹೆಸರಿನ ದ್ವಿಚಕ್ರವಾಹನ ಸಾಹಸ!
 
ಏನಿದು ರೋಡ್ ಆಫ್ ಬೋನ್ಸ್?
ಭೂಮಿಯ ಉತ್ತರ ಗೋಳದಲ್ಲಿ ಜಪಾನ್‌ಗಿಂತಲೂ ಪೂರ್ವದಿಂದ ಪಶ್ಚಿಮದಲ್ಲಿ ಯುರೋಪ್ ಖಂಡದ ಪೋಲಂಡ್‌ವರೆಗೂ ಮೈಚಾಚಿಕೊಂಡಿರುವ ಬೃಹತ್ ದೇಶ ರಷ್ಯಾ. ಇಂತಿಪ್ಪ ರಷ್ಯಾದ ಪೂರ್ವಭಾಗದಲ್ಲಿ ಸೈಬೀರಿಯಾ ಪ್ರಾಂತ್ಯವಿದೆ. ಅತ್ಯಂತ ವಿಷಮ ವಾತಾವರಣ ಹೊಂದಿರುವ ಪ್ರಾಂತ್ಯವಿದು. ಈ ಭಾಗದಿಂದಲೂ ಪೂರ್ವಕ್ಕೆ ಜನ ಸಂಚಾರ ಹಾಗೂ ಸರಕು ಸಾಗಣೆಗೆಂದು 1930ರ ದಶಕದಿಂದ 1950 ರ ದಶಕಗಳಲ್ಲಿ ಸೋವಿಯತ್ ರಷ್ಯಾದ ಅಂದಿನ ಕ್ರಾಂತಿಕಾರಿ ನಾಯಕ ಸ್ಟಾಲಿನ್ ನಿರ್ಮಿಸಿದ ರಸ್ತೆಯೇ ಕೊಲಿಮಾ ಹೆದ್ದಾರಿ. ಕೆಲವೊಮ್ಮೆ ಮೈನಸ್ 50 ಡಿಗ್ರಿಯಷ್ಟು ಹೆಪ್ಪುಗಟ್ಟುವ ತಾಪಮಾನವಿರುವ ಯಾಕುಟ್ಸ್ಕ್ ಎಂಬಲ್ಲಿಂದ ಸುಮಾರು 2000 ಕಿಲೋಮೀಟರ್ ದೂರದ ಆಗ್ನೇಯ ಕರಾವಳಿಯ ಮಗದಾನ್ ಎಂಬಲ್ಲಿವರೆಗಿನ ಈ ಹೆದ್ದಾರಿಯನ್ನು ಯುದ್ಧ ಮತ್ತಿತರ ಸಂದರ್ಭಗಳಲ್ಲಿ ಸೆರೆ ಸಿಕ್ಕ ಕೈದಿಗಳನ್ನು ಕಾರ್ಮಿಕರಂತೆ ಬಳಸಿ ನಿರ್ಮಿಸಲಾಯಿತಂತೆ. ಹವಾ ವೈಪರೀತ್ಯದಿಂದ ಸಾವನ್ನಪ್ಪಿದ, ಹೇಳಿದಷ್ಟು ಕೆಲಸ ಮಾಡದೆ ಹತ್ಯೆಗೀಡಾದವರ ಶವಗಳನ್ನು ರಸ್ತೆ ನಿರ್ಮಾಣ ವೇಳೆ ಅದರಡಿಯೇ ಹೂಳಲಾಗಿತ್ತಂತೆ. ಈ ಸಂಖ್ಯೆ ಅಂದಾಜು 5 ಲಕ್ಷ ಎಂಬ ಅನಧಿಕೃತ ಅಂದಾಜಿದೆ. ಹೀಗೆ, ಲಕ್ಷಾಂತರ ಮಾನವರ ಮೂಳೆಗಳು ಹುದುಗಿರುವ ರಸ್ತೆ ‘ರೋಡ್ ಆಫ್ ಬೋನ್ಸ್’ ಎಂದೇ ಪ್ರಸಿದ್ಧ. ಮುಕ್ಕಾಲು ಶತಮಾನ ಹಳೆಯ ಈ ಮಾರ್ಗದಲ್ಲಿ ಮೈನಸ್ 72  ಡಿಗ್ರಿವರೆಗೂ ತಾಪಮಾನ ಕುಸಿಯುವ ಟಾಮ್‌ಟರ್ ಎಂಬ ಪ್ರದೇಶವಿದೆ. ಈ ಮೂಲಕ ಸಾಗುವ ಸುಮಾರು 420 ಕಿ.ಮೀ. ಹಾದಿಯ ಬಳಕೆಯನ್ನು ಈಗ ಕೈಬಿಡಲಾಗಿದೆ. ಈ ಪೈಕಿ 200 ಕಿ.ಮೀ.ಯಷ್ಟು ದೂರ ರಸ್ತೆಯೇ ಇಲ್ಲವಾಗಿದೆ. ಈ ಭಾಗಕ್ಕೆ ಪರ್ಯಾಯ ಹೆದ್ದಾರಿ ನಿರ್ಮಿಸಲಾಗಿದೆ. ಶಿಥಿಲವಾದ ಸೇತುವೆಗಳು, ಪ್ರವಾಹಕ್ಕೆ ಕೊಚ್ಚಿ ಹೋದ ಸ್ಥಿತಿಯಲ್ಲಿರುವ ಹಳೆ ರಸ್ತೆ (ಓಲ್ಡ್ ಸಮ್ಮರ್ ರೋಡ್) ಈಗ ಹೆಸರಿಗಷ್ಟೇ ಇದ್ದು, ಕಾರು-ಬೈಕು ಬಳಸುವ ಸಾಹಸಯಾನಿಗಳಿಗಷ್ಟೇ ಸೀಮಿತವಾಗಿದೆ.
 
ಭಾರತದ ಮೊದಲ ಬೈಕ್ ಸವಾರರು
ಈ ರಸ್ತೆಯಲ್ಲಿ ಬೈಕ್ ಸವಾರಿ ಮಾಡಿದ ಮೊದಲ ಭಾರತೀಯರು ಎಂಬ ಖ್ಯಾತಿ ಕರ್ನಾಟಕದವರಾದ ದೀಪಕ್ ಕಾಮತ್, ದಿಲೀಪ್ ಕೃಷ್ಣ ಭಟ್ ಹಾಗೂ ಸುಧೀರ್ ಪ್ರಸಾದ್ ಅವರದಾಗಿದೆ. ಅಲ್ಲದೆ, ಈ ರಸ್ತೆಯನ್ನು ಹಾಯ್ದ ಮೊದಲ ಭಾರತೀಯ ದ್ವಿಚಕ್ರವಾಹನ ಎಂಬ ಹೆಗ್ಗಳಿಕೆಯೂ ಬಜಾಜ್‌ನಿರ್ಮಿತ ಡಾಮಿನಾರ್ ೪೦೦ ಬೈಕ್‌ನದಾಗಿದೆ. ೪೮ ದಿನಗಳಲ್ಲಿ ೬ ದೇಶ ಹಾಯ್ದು ೧೫ ಸಾವಿರ ಕಿ.ಮೀ. ದೂರಕ್ಕೆ ೩ ಡಾಮಿನಾರ್ ೪೦೦ ಬೈಕ್‌ಗಳಲ್ಲಿ ಸಂಚರಿಸಿದ ಸಾಧನೆ ಈ ಕನ್ನಡಿಗರದು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತೀಯ ಮಹಿಳೆ ನಿಧಿ ತಿವಾರಿ ಎಂಬವರು ೨೦೧೫ರಲ್ಲಿ ಟೊಯೋಟಾ ಫಾರ್ಚೂನರ್ ಎಂಬ ೪ ಚಕ್ರದ ವಾಹನದಲ್ಲಿ ಈ ಮಾರ್ಗವನ್ನು ಕ್ರಮಿಸಿದ ಸಾಧನೆ ಮಾಡಿದ್ದು ಹೊರತುಪಡಿಸಿದರೆ, ಭಾರತೀಯರೇ ಈ ಮಾರ್ಗವನ್ನು ಕ್ರಮಿಸಿದ ದಾಖಲೆ ಲಭ್ಯವಿಲ್ಲ.
 
-ರವಿಶಂಕರ್ ಭಟ್ 

 

click me!