Jammu and Kashmir : 2021ರಲ್ಲಿ ಒಟ್ಟು 182 ಭಯೋತ್ಪಾದಕರ ಹತ್ಯೆ!

By Suvarna NewsFirst Published Dec 31, 2021, 4:13 PM IST
Highlights

2021ರಲ್ಲಿ ಒಟ್ಟಾರೆ ನಡೆದಿದ್ದು 100 ಕಾರ್ಯಾಚರಣೆ
ಈ ವರ್ಷ ಕೇವಲ 34 ಉಗ್ರರು ಮಾತ್ರವೇ ಒಳನುಸುಳಲು ಯಶಸ್ವಿಯಾಗಿದ್ದರು
ಜಮ್ಮು ಕಾಶ್ಮೀರ ಡಿಜಿಪಿ ದಿಲ್ಭಾಗ್ ಸಿಂಗ್ ಹೇಳಿಕೆ
 

ಶ್ರೀನಗರ (ಡಿ. 31): 2021ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ನಡೆದ ವಿವಿಧ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟು 182 ಉಗ್ರರನ್ನು (Terrorists) ಹತ್ಯೆ ಮಾಡಲಾಗಿದೆ. ಇದರಲ್ಲಿ 44 ಜನ ಉಗ್ರ ಕಾರ್ಯಾಚಾರಣೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದವರಾಗಿದ್ದಾರೆ. ಒಟ್ಟಾರೆ ಈ ವರ್ಷ 100 ಇಂಥ ಕಾರ್ಯಾಚರಣೆಗಳು ನಡೆದಿವೆ ಎಂದು ಕೇಂದ್ರಾಡಳಿತ ಪ್ರದೇಶದ ಡಿಜಿಪಿ ದಿಲ್ಬಾಗ್ ಸಿಂಗ್ (DGP Dilbag Singh) ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಲಿ ವರ್ಷ ನಡೆದ ಕೆಲ ಕಾರ್ಯಾಚರಣೆಗಳು ಹಾಗೂ ಹತ್ಯೆಯಾದ ಭಯೋತ್ಪಾದಕರ ಸಂಖ್ಯೆಯನ್ನು ಬಹಿರಂಗಪಡಿಸಿದರು. ಈ ವರ್ಷ ಒಟ್ಟು 134 ಯುವಕರು ಕೇಂದ್ರಾಡಳಿತ ಪ್ರದೇಶದಲ್ಲಿಯೇ ಇರುವ ಕೆಲ ಉಗ್ರ ಸಂಘಟನೆಗಳಿಗೆ ಸೇರಿದ್ದಾರೆ. ಇವರ ಪೈಕಿ 72 ಮಂದಿಯನ್ನು ಈಗಾಗಲೇ ಹತ್ಯೆ ಮಾಡಲಾಗಿದ್ದರೆ, 22 ಜನರನ್ನು ಬಂಧಿಸಲಾಗಿದೆ ಎಂದು ವಿವರ ನೀಡಿದರು.

ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ತೀರಾ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದೆ. 2021ರಲ್ಲಿ ಕೇವಲ 34 ಉಗ್ರರು ಒಳನುಸುಳುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಪಂಥಾಚೌಕ್ ನಲ್ಲಿ (Pantha Chowk) ನಡೆದ ಪೊಲೀಸ್ ಬಸ್ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್-ಎ-ಮೊಹಮದ್ ಉಗ್ರ ಸಂಘಟನೆಯ 9 ಉಗ್ರರನ್ನು ಕಳೆದ 24 ಗಂಟೆಯಲ್ಲಿಯೇ ಹುಡುಕಿ ಹತ್ಯೆ ಮಾಡಲಾಗಿದೆ ಎಂದು ವಿವರಿಸಿದರು. ಈ ವರ್ಷ ಒಟ್ಟು 2500 ಜಮ್ಮು-ಕಾಶ್ಮೀರ ಪೊಲೀಸ್ ಸಿಬ್ಬಂದಿ ಕೋವಿಡ್-19 ಪಾಸಿಟಿವ್ ಆಗಿದ್ದರು. ಇದರಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಇನ್ನು ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 20 ಪೊಲೀಸ್ ಸಿಬ್ಬಂದಿ ಹಾಗೂ 23 ಭದ್ರತಾ ಪಡೆಗಳ ಸಿಬ್ಬಂದಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಹೈದರ್ ಪುರದಲ್ಲಿ (Hyderpora)ನಡೆದ ಎನ್ ಕೌಂಟರ್ ಪಾರದರ್ಶಕ ಎಂದು ಹೇಳಿರುವ ದಿಲ್ಬಾಗ್ ಸಿಂಗ್,  ಕುರಿತಾಗಿ ರಾಜಕೀಯ ನಾಯಕರುಗಳು ಮಾತುಗಳು ಅಚ್ಚರಿಯನ್ನು ತಂದಿದೆ ಎಂದಿದ್ದಾರೆ. ಪೊಲೀಸ್ ಪಡೆಗಳಿಗೆ ನೀಡಲಾದ ಕ್ಲೀನ್ ಚಿಟ್ ಅನ್ನು ರಾಜಕೀಯ ನಾಯಕರು ಪ್ರಶ್ನೆ ಮಾಡಿದ್ದಾರೆ. ಈ ಎನ್ ಕೌಂಟರ್ ಪಾರದರ್ಶಕವಾಗಿಲ್ಲ ಎನ್ನುವ ಕುರಿತಾಗಿ ಇವರುಗಳಲ್ಲಿ ಯಾವುದಾದರೂ ಸಾಕ್ಷಿ ಇದ್ದಲ್ಲಿ ಅದನ್ನು ತನಿಖಾ ಸಮಿತಿಯ ಮುಂದಿಡಬೇಕು ಎಂದು ಹೇಳಿದ್ದಾರೆ.
 

We've completed a target of 100 successful operations & 44 top terrorists have been neutralized this year: J&K DGP Dilbag Singh pic.twitter.com/kNQEAWIdJ1

— ANI (@ANI)


ಹೈದರ್ ಪುರ ಎನ್ ಕೌಂಟರ್ ಕುರಿತಾಗಿ ಪೊಲೀಸರ ವಿರುದ್ಧ ತನಿಖೆ ನಡೆಯುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಂದ ಪ್ರಶ್ನೆಗಳಿಗೆ ಮಾತನಾಡಿದ ದಿಲ್ಬಾಗ್ ಸಿಂಗ್, "ಹೈದರ್ ಪುರ ಭಯೋತ್ಪಾದಕ ಕಾರ್ಯಾಚರಣೆ ಪಾರದರ್ಶಕವಾಗಿದೆ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಪೊಲೀಸ್ ಪಡೆಗಳ ವಿರುದ್ಧ ಆರೋಪ ಮಾಡುತ್ತಿರುವ ರಾಜಕೀಯ ನಾಯಕರುಗಳಲ್ಲಿ ಈ ಕುರಿತಾಗಿ ಯಾವುದಾದರೂ ಸಾಕ್ಷ್ಯವಿದ್ದಲ್ಲಿ ಅದನ್ನು ತನಿಖಾ ಸಮಿತಿಯ ಮುಂದಿಡಬೇಕು' ಎಂದು ಹೇಳಿದರು.  ರಾಜಕೀಯ ನಾಯಕರುಗಳ ಮಾತುಗಳನ್ನು ಕಂಡು ನಮಗೆ ನೋವಾಗಿದೆ. ಅವರು ಆಡಿರುವ ಮಾತುಗಳು ಕಾನೂನು ಬಾಹಿರವಾಗಿದ್ದು, ಈ ವಿಷಯದಲ್ಲಿ ಕಾನೂನು ತನ್ನದೇ ಆದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಉನ್ನತ ಅಧಿಕಾರಿ ತಿಳಿಸಿದರು.

Srinagar Terror Attack ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ, 12 ಮಂದಿಗೆ ಗಾಯ,ಇಬ್ಬರು ಹುತಾತ್ಮ, ಮೋದಿ ಸಂತಾಪ!
ಪುಲ್ವಾಮಾ ದಾಳಿಯನ್ನು ನೆನಪಿಸುವ ರೀತಿಯಲ್ಲಿ ಶ್ರೀನಗರದ ಜೆವಾನ್(Zewan Polic camp) ಪೊಲೀಸ್ ಕ್ಯಾಂಪ್ ಬಳಿಯಲ್ಲಿ ಮತ್ತೊಂದು ಉಗ್ರರ ದಾಳಿ ನಡೆದಿತ್ತು. ಪೊಲೀಸರು ಸಾಗುತ್ತಿದ್ದ ಬಸ್(Police Bus) ಮೇಲೆ ಉಗ್ರರು ದಾಳಿ(Terror attack) ನಡೆಸಿದ್ದು ಇಬ್ಬರು ಪೊಲೀಸರು ಹುತಾತ್ಮರಾಗಿದ್ದರೆ, 11 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಇದರ ಬೆನ್ನಲ್ಲಿಯೇ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಹಾಗೂ ಒಬ್ಬ ಜೆಇಎಂ ಸಂಘಟನೆಯ ಭಯೋತ್ಪಾದಕನನ್ನು ಪೊಲೀಸರು ಹತ್ಯೆ ಮಾಡಿದ್ದರು.

 

click me!