ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದಿಂದ ಅರ್ಜಿ ಸಾಧ್ಯತೆ

By Internet DeskFirst Published Sep 24, 2016, 3:27 PM IST
Highlights

ಬೆಂಗಳೂರು (ಸೆ.24): ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶಗಳ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೇ ಕಾನೂನು ಸಮರದ ನಿರ್ಣಾಯಕ ಘಟ್ಟ ತಲುಪಿದೆ.  

ಸೋಮವಾರವೇ ರಾಜ್ಯವು ಸೆ.20 ರ ಆದೇಶ ಪಾಲಿಸಲಾಗದ ಅಸಹಾಯಕ ಪರಿಸ್ಥಿತಿ ಜತೆಗೆ ಶುಕ್ರವಾರ ನಡೆದ ವಿಶೇಷ ಅಧಿವೇಶನದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲು ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು ತಮಿಳುನಾಡು ಕೂಡ ರಾಜ್ಯದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಸಲ್ಲಿಸಬಹುದು.

ಕಾವೇರಿ ನ್ಯಾಯಾಧಿಕರಣದ ಅಂತಿಮ ಐ ತೀರ್ಪಿನಂತೆ ಕರ್ನಾಟಕವು ನೀರು ಹರಿಸಿಲ್ಲವೆಂದು ಆಕ್ಷೇಪಿಸಿ 50.2 ಟಿಎಂಸಿ ನೀರನ್ನು ಹರಿಸುವಂತೆ ಆದೇಶಿಸಬೇಕೆಂದು ಕೋರಿ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಪೂರ್ಣ ವಿಚಾರಣೆ ಇನ್ನೂ ಬಾಕಿ ಇದೆ.

ಈ ನಡುವೆಯೂ ಎರಡೆರಡು ಬಾರಿ ಮಧ್ಯಂತರ ಆದೇಶ ನೀಡಿರುವ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಹರಿಸುವುದನ್ನು ಸೆ.27 ರವರೆಗೂ ಮುಂದುವರೆಸುವಂತೆ ಸೂಚಿಸಿದೆ. ಆದರೆ ಶುಕ್ರವಾರ ನಡೆದ ವಿಶೇಷ ಅಧಿವೇಶನದಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ  ನೀರಿನ ಸಂಗ್ರಹವಿಲ್ಲದ ಕಾರಣಕ್ಕಾಗಿ ಈ ನೀರನ್ನು ಕುಡಿಯುವ ಉದ್ದೇಶದ ಹೊರತಾಗಿ ಬೇರಾವುದಕ್ಕೂ ನೀಡಬಾರದೆಂಬ ನಿರ್ಣಯ ಕೈಗೊಂಡಿದೆ. ಈ ನಿರ್ಣಯವನ್ನು ಪ್ರಶ್ನಿಸಿ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮುನ್ನವೇ ಸಂಕಷ್ಟ ಪರಿಸ್ಥಿತಿ ಅರುಹುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ಗೆ ರಾಜ್ಯವು ಅರ್ಜಿ ಸಲ್ಲಿಸಲು ಸಕಲ ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ.

ಮುಂದೇನು?

ಕಾವೇರಿ ನೀರಿನ ಬಿಕ್ಕಟ್ಟು ಕುರಿತಾಗಿ ಚರ್ಚಿಸಲು ಶುಕ್ರವಾರ ಕರೆಯಲಾಗಿದ್ದ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನದಲ್ಲಿ  ಕೈಗೊಂಡ ನಿರ್ಣಯದಿಂದ ಮುಂದೇನು ಎಂಬ ಪ್ರಶ್ನೆ ಕಾಡತೊಡಗಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಗಂಭೀರ ಸಮಾಲೋಚನೆಯಲ್ಲಿ ತೊಡಗಿದ್ದು ಕಾನೂನು ಹೋರಾಟ ಮುಂದುವರೆಸುವ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಸೋಮವಾರವೇ ಅರ್ಜಿ ಸಲ್ಲಿಸಿ ಸೆ.೨೭ರ ವಿಚಾರಣೆ ವೇಳೆ ಸಮರ್ಥ ವಾದ ಮಂಡಿಸುವ ಜತೆಗೆ ನೀರು ಬಿಡಲಾಗದ ಅಸಹಾಯಕ ಪರಿಸ್ಥಿತಿಯನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡಬೇಕು. ಸದನದ ನಿರ್ಣಯವನ್ನೂ ಗಮನಕ್ಕೆ ತರಬೇಕೆಂಬ ನಿರ್ಧಾರವನ್ನು ಸದ್ಯಕ್ಕೆ ರಾಜ್ಯ ಸರ್ಕಾರ ಕೈಗೊಂಡಿದೆ ಎನ್ನಲಾಗಿದೆ.

ನ್ಯಾಯಾಂಗ ನಿಂದನೆ

ಸೆ.2೦ರಿಂದ ಮುಂದಿನ 7 ದಿನಗಳ ಕಾಲ 6 ಸಾವಿರ ಕ್ಯುಸೆಕ್ ನೀರು ಹರಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಪಾಲಿಸಿಲ್ಲ. ಸೆ.2೦ರಿಂದ ನೀರು ಹರಿಸಿಲ್ಲ. ಇದು ಸುಪ್ರಿಂಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆ ಆಗಿದ್ದು ನ್ಯಾಯಾಂಗ ನಿಂದನೆಯಾಗಿದೆ ಎಂದು ಸೋಮವಾರವೇ ತಮಿಳುನಾಡು ಕೂಡ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಒಂದೊಮ್ಮೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿ ಸ್ವೀಕರಿಸಿ ಸೆ.27 ರ ವಿಚಾರಣೆ ವೇಳೆ ಕೈಗೆತ್ತಿಕೊಂಡರೆ ಕರ್ನಾಟಕ ಸೂಕ್ತ ವಾದ ಮಂಡಿಸಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಬೇಕಿದೆ. 

ನ್ಯಾಯಾಂಗ ನಿಂದನೆ ಆಗುವುದಿಲ್ಲವೆಂಬ ಅಂಶವನ್ನೂ ಸುಪ್ರೀಂಕೋರ್ಟ್ ಮುಂದೆ ಮಂಡಿಸಬೇಕೆಂಬ ಕುರಿತೂ ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯದ ವಾದವನ್ನು ಬಲವಾಗಿ ವಿರೋಧಿಸಲು ತಮಿಳುನಾಡು ಕೂಡ ಸಜ್ಜಾಗಲಿದ್ದು ನ್ಯಾಯಾಂಗ ನಿಂದನೆ ಅನ್ವಯ ಶಿಕ್ಷೆ ವಿಧಿಸುವಂತೆ ಪಟ್ಟು ಹಿಡಿಯಬಹುದಾಗಿದೆ.

ಒಂದೊಮ್ಮೆ ಸುಪ್ರೀಂಕೊರ್ಟ್ ಈ ವಾದವನ್ನು ಪರಿಗಣಿಸಿದರೆ ಮತ್ತೆ ರಾಜ್ಯದ ಪಾಲಿಗೆ ವ್ಯತಿರಿಕ್ತ ಆದೇಶ ಬರಬಹುದು. ಇಲ್ಲಾ  ಸದನದಲ್ಲಿ ಕೈಗೊಂಡ ನಿರ್ಣಯ ಪರಿಗಣಿಸದೇ ಸರ್ಕಾರಕ್ಕೆ ಛೀಮಾರಿ ಹಾಕಬಹುದು. ಆದೇಶ ಚಾಚೂ ತಪ್ಪದೇ ಪಾಲಿಸಿ ಎಂದು ತಾಕೀತು ಮಾಡಿ ಅವಕಾಶ ನೀಡಬಹುದು. ಈ ನಡುವೆ ಸಂಕಷ್ಟ ಸೂತ್ರ ಪರಿಗಣಿಸಿದರೂ ಕರ್ನಾಟಕ ಇನ್ನೂ ೨.೫೬ ಟಿಎಂಸಿ ನೀರು ನೀಡಬೇಕೆಂಬ ತಮಿಳುನಾಡು ವಾದದ ಕುರಿತು ಮಂಗಳವಾರ ಸುಪ್ರಿಂಕೋರ್ಟ್ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದು ಈ  ತೂಗುಗತ್ತಿಯೂ ರಾಜ್ಯದ ಮೇಲಿದೆ.

click me!