ಕಾವೇರಿಗೆ ಮತ್ತೊಂದು ಅಣೆಕಟ್ಟು ಶೀಘ್ರ?

By Web DeskFirst Published Oct 6, 2018, 9:41 AM IST
Highlights

ಶೀಘ್ರದಲ್ಲೇ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವ ಸಂಭಂಧ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಇದಕ್ಕೆ ಅವರು ಯಾವುದೇ ಕ್ಷಣವೂ ಕೂಡ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 

ನವದೆಹಲಿ :  ಕೇಂದ್ರ ಸರ್ಕಾರದ ಮುಂದಿರುವ ರಾಜ್ಯ ಸರ್ಕಾರದ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಸಂಪನ್ಮೂಲ ಮತ್ತು ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಯಾವುದೇ ಕ್ಷಣದಲ್ಲಿ ತಮ್ಮ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೇಕೆದಾಟು ಯೋಜನೆಗೆ ಕೇಂದ್ರ ಸಚಿವ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಈಗಾಗಲೇ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆಯನ್ನೂ ನೀಡಿದ್ದಾರೆ. ನಾವು ಜಲಸಂಪನ್ಮೂಲ ಇಲಾಖೆಯ ಅನುಮತಿ ಸಿಕ್ಕ ಬಳಿಕವೇ ಪರಿಸರ ಸಚಿವಾಲಯದ ಅನುಮತಿ ಪಡೆಯಬೇಕಿದೆ. ಈಗಾಗಲೇ ಮೇಕೆದಾಟು ಯೋಜನೆ ಬಗ್ಗೆ ಸಾಕಷ್ಟುಕಾಲಹರಣವಾಗಿದೆ ಎಂದರು.

ಈ ಬಾರಿ ನಾವು ತಮಿಳುನಾಡಿಗೆ 346 ಟಿಎಂಸಿ ನೀರು ಹರಿಸಿದ್ದು, ಹೆಚ್ಚುವರಿ ನೀರು ವ್ಯರ್ಥವಾಗಿ ಸಮುದ್ರ ಸೇರಿದೆ. ಒಂದು ವೇಳೆ ಮೇಕೆದಾಟು ಯೋಜನೆ ಜಾರಿಯಲ್ಲಿದ್ದರೆ ಮುಂದಿನ ವರ್ಷ ಮಳೆ ಬಾರದಿದ್ದರೂ ಆ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು. ಈ ಅಂಶವನ್ನು ಗಡ್ಕರಿ ಅವರ ಗಮನಕ್ಕೂ ತಂದಿದ್ದೇವೆ. ಅವರು ಈ ಯೋಜನೆ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮಹದಾಯಿ ವಿಚಾರವೂ ಪ್ರಸ್ತಾಪ:  ಗಡ್ಕರಿ ಭೇಟಿ ವೇಳೆ ಮಹದಾಯಿ ನದಿ ವಿವಾದವನ್ನೂ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣ ಚರ್ಚಿಸಿದ್ದಾರೆ. ಆದರೆ ಮಹದಾಯಿ ನದಿ ವಿವಾದ ಮತ್ತೆ ನ್ಯಾಯಾಧಿಕರಣದ ಮುಂದೆ ಹೋಗುವ ಎಲ್ಲ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಸದ್ಯ ಈ ಬಗ್ಗೆ ತಾನು ಯಾವುದೇ ಭರವಸೆ ನೀಡಲಾರೆ ಎಂದು ಕೇಂದ್ರ ಸಚಿವ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಈ ನಡುವೆ, ಚಿಕ್ಕಮಗಳೂರು-ಬಿಳಿಕೆರೆ ಮತ್ತು ಬಾಣಾವರ-ಹುಳಿಯಾರು ರಸ್ತೆಗಳ ಮೇಲ್ದರ್ಜೆಗೆರಿಸುವ ಯೋಜನೆಗಳ ಶಂಕುಸ್ಥಾಪನೆಗೆ ಚಾಲನೆ ನೀಡಲು ಆಗಮಿಸುವಂತೆ ನಿತಿನ್‌ ಗಡ್ಕರಿ ಅವರನ್ನು ಮುಖ್ಯಮಂತ್ರಿಗಳು ಕೋರಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರೇವಣ್ಣ ಉಪಸ್ಥಿತರಿದ್ದರು.

click me!